ಈ ‘ಕತ್ತಿ’ಯಂಥವರನ್ನು ಕತ್ತು ಹಿಡಿದು ಸಮುದ್ರಕ್ಕೆ ತಳ್ಳಬೇಕು

ಡೊನಾಲ್ಡ್ ಪಿರೇರಾ ಬೆಳ್ತಂಗಡಿ

Posted on : September 26, 2014 at 11:09 AM

Politics_Umesh Katti_2ನಮ್ಮ ಕೆಲ ರಾಜಕಾರಣಿಗಳ ‘ಹಡಬೆ ರಾಜಕೀಯ’ ಬುದ್ಧಿಯಿಂದ ನಾಡಿಗೆ ಕಂಟಕ ತಪ್ಪಿದ್ದಲ್ಲ. ಇವರು ಚೆನ್ನಾಗಿ ಮಾತನಾಡಿದ್ದು, ಒಳ್ಳೆಯ ಕೆಲಸ ಮಾಡಿದ್ದನ್ನು ಸೂಕ್ಷ್ಮ ದರ್ಶಕದಲ್ಲಿ ಹುಡುಕಿದರೂ ಕಾಣುವುದಿಲ್ಲ. ಮುಗ್ದ ಜನರು ಇಂತಹ ರಾಜಕೀಯ ಫುಡಾರಿಗಳನ್ನು ನಂಬಿ ದಶಕಗಳ ಅವಧಿಗೆ ಜನಪ್ರತಿನಿಧಿಗಳನ್ನಾಗಿ ಮಾಡಿಕೊಂಡಿದ್ದಕ್ಕೆ ಪ್ರತಿಫಲವಾಗಿ ತನ್ನ ಊರಿಗೆ ಕನಿಷ್ಠ ಮೂಲ ಸೌಕರ್ಯಗಳನ್ನಾದರೂ ಒದಗಿಸುವ ಕೃತಜ್ಞತೆ ಇಲ್ಲದ ಶಾಸಕರು, ಮಂತ್ರಿಗಳು ನಮ್ಮ ನಾಡಿನಲ್ಲಿ ಎಷ್ಟು ಜನರಿಲ್ಲ? ಅದು ಸಾಲದ್ದಕ್ಕೆ ಇವರ ಹೊಲಸು ನಾಲಿಗೆಯ ಚಪಲದಿಂದ ನಾಡಿನ ಜನರ ನೆಮ್ಮದಿ, ಶಾಂತಿ ಕೆಡಿಸುವ ನೀಚ, ಉಗ್ರ ಹೇಳಿಕೆಗಳು. ಇಂಥವರನ್ನು ಜನ ಹೇಗೆ ಕ್ಷಮಿಸುತ್ತಾರೆಂಬುದು ಯಕ್ಷ ಪ್ರಶ್ನೆ.

ಇತ್ತೀಚೆಗೆ ಶಾಸಕರಾದ ಉಮೇಶ್ ಕತ್ತಿ ಅವರು ಕರ್ನಾಟಕವನ್ನು ವಿಭಜಿಸಬೇಕು, ಆ ಮೂಲಕ ಮಾತ್ರ ಉತ್ತರ ಕರ್ನಾಟಕದ ಅಭಿವೃದ್ಧಿ ಸಾಧ್ಯ ಎಂಬ ಹೇಳಿಕೆ ನೀಡಿದ್ದಾರಲ್ಲಾ, ಅವರನ್ನು ಇಷ್ಟು ವರ್ಷದಿಂದ ಆಯ್ಕೆ ಮಾಡಿಕೊಂಡು ಬಂದ ಜನರು ಈ ಹೇಳಿಕೆ ಕೇಳಿ ಇನ್ನೂ ಸುಮ್ಮನಿದ್ದಾರೆ ಯಾಕೆ? ಈ ಘನ ರಾಜಕಾರಣಿ ಸಚಿವರಾಗಿದ್ದಾಗ ಉತ್ತರ ಕರ್ನಾಟಕಕ್ಕೆ ಬಿಡಿ, ತನ್ನದೇ ಕ್ಷೇತ್ರದಲ್ಲಿ ಎಂತಹ ಅಭಿವೃದ್ಧಿ ಮಾಡಿದ್ದಾರಂತೆ? ತನ್ನ ಮತ್ತು ತನ್ನ ಹಿಂಬಾಲಕರ ಹೊಟ್ಟೆ, ಆಸ್ತಿ-ಪಾಸ್ತಿಯನ್ನು ಹೆಚ್ಚಿಸಿಕೊಂಡಿದ್ದಿರಬಹುದೇ ಹೊರತು, ನಾಡಿಗಾಗಿ, ತನ್ನನ್ನು ಆಯ್ಕೆ ಮಾಡಿದ ಮತದಾರರಿಗಾಗಿ ಏನು ಒಳ್ಳೆಯದನ್ನು ಮಾಡಿದ್ದಾರಂತೆ? ಏನು ಅಭಿವೃದ್ಧಿ, ಪ್ರಗತಿ ಮಾಡಲು ಪ್ರಯತ್ನ ಪಟ್ಟಿದ್ದಾರಂತೆ?

Politics_Umesh Katti_1

ದಶಕಗಟ್ಟಲೆ ರಾಜಕಾರಣದಲ್ಲಿದ್ದು, ನಿರಂತರವಾಗಿ ಶಾಸಕರಾಗಿ, ಸಚಿವರಾಗಿ, ಕೆಲವರು ಮುಖ್ಯಮಂತ್ರಿಯೂ ಆಗಿ ಇಡೀ ರಾಜ್ಯದ ಅಭಿವೃದ್ಧಿ ಮಾಡುವುದು ಬಿಡಿ, ಸ್ವತಃ ತನ್ನನ್ನು ಆಯ್ಕೆ ಮಾಡುತ್ತ, ತನ್ನನ್ನು ನಂಬಿಕೊಂಡು ಬಂದಿರುವ ಸ್ವಕ್ಷೇತ್ರದ ಜನರಿಗೆ ಕನಿಷ್ಠ ಸೌಕರ್ಯಗಳನ್ನೂ ಒದಗಿಸಿ ಕೊಡದ ಕೃತಘ್ಞರು ಎಷ್ಟಿಲ್ಲ ಹೇಳಿ ನಮ್ಮಲ್ಲಿ? ಶಾಸಕರಾಗಿ, ಕೆಲವರು ಮಂತ್ರಿಗಳಾಗಿ, ಒಟ್ಟು ರಾಜಕೀಯ ಜೀವನದ ಅಥವಾ ಜನಪ್ರತಿನಿಧಿಯಾಗಿ, 30, 40, 50 ವರ್ಷಗಳನ್ನು ಆಚರಿಸಿದ ಬಹಳಷ್ಟು ರಾಜಕಾರಣಿಗಳ ಊರಿಗೆ, ಸ್ವಕ್ಷೇತ್ರಗಳಿಗೆ ಭೇಟಿ ಕೊಟ್ಟರೆ ಇವರು ಏನು ಸಾಧನೆ ಮಾಡಿದ್ದಾರೆನ್ನುವುದರ ದರ್ಶನವಾಗುತ್ತದೆ. ಕನಿಷ್ಠ ಒಂದು ರಸ್ತೆ ಕೂಡಾ ಸರಿಯಾಗಿಲ್ಲದ ಎಷ್ಟೋ ಊರುಗಳಿವೆ. ಉತ್ತಮ ಸ್ಥಿತಿಯಲ್ಲಿರುವ ರಸ್ತೆಗಳೇ ಕಾಣ ಸಿಗುವುದಿಲ್ಲ. ರಸ್ತೆಗಳೇ ಇಲ್ಲದ ಮೇಲೆ ವಿದ್ಯುತ್ ಸಂಪರ್ಕ, ಬೀದಿ ದೀಪಗಳಿರುವುದು ಎಲ್ಲಿಂದ? ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಆಸರೆ ನೈಸರ್ಗಿಕವಾಗಿಯೇ ದೊರಕಬೇಕು, ಕೆರೆ ಅಥವಾ ಬಾವಿಗಳು. ಮಳೆ ಸರಿಯಾಗಿಲ್ಲದಿದ್ದರೇ ಕುಡಿಯುವ ನೀರಿಗೂ ತತ್ವಾರ. ಇಂತಹ ಕನಿಷ್ಠ ಸೌಲಭ್ಯಗಳನ್ನೂ ಮಾಡಿ ಕೊಡದ ಘನ ರಾಜಕಾರಣಿಗಳು, ಫುಡಾರಿಗಳು ಬಹುತೇಕ ಎಲ್ಲಾ ಕಡೆ ಇದ್ದಾರೆ. ಇಂಥಹವರಿಂದ ಬೇರೆ ಇನ್ನೇನು ಒಳ್ಳೆಯ ಕಾರ್ಯಗಳು ಜನರಿಗೆ, ಊರಿಗೆ, ನಾಡಿಗೆ ದೊರಕಿಯಾವು? ಇವರಿಂದ ಎಂಥಹ ಪ್ರಗತಿ, ಅಭಿವೃದ್ಧಿ ಸಾಧ್ಯವಾದೀತು?

ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ, ಕನಿಷ್ಠ ಹಣದಿಂದ ಎಂತಹ ಅಭಿವೃದ್ಧಿ ಮಾಡಲು ಸಾಧ್ಯವೆಂಬುದನ್ನು ಅರಿಯಬೇಕಾದರೆ ಒಂದು ವಿಚಾರ ಗಮನಿಸಬೇಕು. ಈಗಿನ ಸಾವಿರ, ಲಕ್ಷ ರೂಪಾಯಿ ಸಂಬಳ ಪಡೆಯುವ ದಿನಗಳು ಬಿಡಿ, ಹಿಂದೆ ಪ್ರತಿ ಹಳ್ಳಿಯಿಂದ, ಊರಿನಿಂದ ತರುಣರು ನಗರಗಳಿಗೆ, ಪ್ರತ್ಯೇಕವಾಗಿ ಮುಂಬೈಗೆ ಉದ್ಯೋಗ ಅರಸಿ ಹೋಗುತ್ತಿದ್ದರು. ತದ ನಂತರ ಗಲ್ಫ್ ರಾಷ್ಟ್ರಗಳಿಗೆ ಬಹಳ ಜನ ಉದ್ಯೋಗಕ್ಕಾಗಿ ವಲಸೆ ಹೋಗಿದ್ದಾರೆ. ಮುಂಬೈನಲ್ಲಿ ಹೋಟೆಲಿನಲ್ಲಿ ಕೆಲಸ ಮಾಡಿ ಉಳಿಸಿದ ಸಂಬಳವನ್ನು ಮನೆಗೆ ಕಳಿಸಿ ಕೆಲವೇ ತಿಂಗಳು ಅಥವಾ ವರ್ಷಗಳಲ್ಲಿ ಬಡತನದಿಂದ ನರಳುತ್ತಿದ್ದ ಕುಟುಂಬಗಳನ್ನವರು ಮೇಲೆತ್ತಿದ್ದಾರೆ. ಗಲ್ಫ್‍ಗೆ ಹಾರಿದ ಯುವಕರಂತೂ ಸೋರುತ್ತಿದ್ದ ಹಂಚಿನ ಮನೆಗಳನ್ನು ಬದಲಾಯಿಸಿ ಕಾಂಕ್ರೀಟ್ ಕಟ್ಟಡಗಳನ್ನು, ಕಂಪೌಂಡ್ ಗೋಡೆ, ಮನೆಗೊಂದು ವಾಹನ, ರಸ್ತೆ, ವಿದ್ಯುತ್ ಸಂಪರ್ಕ, ಮನೆ ತುಂಬಾ ಆಧುನಿಕ ಸಾಮಾಗ್ರಿಗಳನ್ನು ಕಲ್ಪಿಸಿದ್ದಾರೆ. ಅಂದರೆ, ದೊರೆಯುವ ವೇತನ ಚಿಕ್ಕದೇ ಇರಲಿ ದೊಡ್ಡದೇ ಇರಲಿ, ತನ್ನ ಮನೆಗೆ, ತನ್ನ ಕುಟುಂಬಸ್ಥರಿಗೆ ಉತ್ತಮ ಜೀವನ ಒದಗಿಸುವ ಸಂಕಲ್ಪ ಇಲ್ಲಿ ಎದ್ದು ಕಾಣುತ್ತದೆ. ತಾನು ಕಡಿಮೆ ವಿದ್ಯಾಭ್ಯಾಸ ಮಾಡಿದರೂ, ತನ್ನ ತಮ್ಮ-ತಂಗಿಯರನ್ನು ಉನ್ನತ ವ್ಯಾಸಂಗಕ್ಕೆ ಕಳುಹಿಸಲು ಅವರ ತ್ಯಾಗ, ಪರಿಶ್ರಮ, ಒತ್ತಾಸೆ ಪ್ರಮುಖವಾಗುತ್ತದೆ. ಒಟ್ಟಾರೆ, ತನ್ನಿಂದ ಒಂದಿಡೀ ಕುಟುಂಬ ಮೇಲ್ದರ್ಜೆಗೇರಿಸುವ ಕನಸು ಕಂಡು ಅದನ್ನು ಸಾಕಾರಗೊಳಿಸುತ್ತಾನೆ ಆತ. ಇದು ಕಳೆದ ಹಲವು ದಶಕಗಳಿಂದ, ಲಕ್ಷಾಂತರ ಕುಟುಂಬಗಳಲ್ಲಿ ಕಂಡು ಬಂದ ವಾಸ್ತವ ಬೆಳವಣಿಗೆ. ಕರಾವಳಿ ಜಿಲ್ಲೆಗಳಲ್ಲಿ ಇದು ಹೇರಳವಾಗಿ ಕಂಡು ಬರುತ್ತದೆ. ಕೆಲವೇ ವರ್ಷಗಳಲ್ಲಿ ಜನರ ಜೀವನ ಮಟ್ಟ ಮಾತ್ರವಲ್ಲ ಊರಿಗೆ ಊರೇ ಅಭಿವೃದ್ಧಿ ಕಂಡಿದೆ. ಅಂದರೆ ಇದು ಒಬ್ಬೊಬ್ಬ ವ್ಯಕ್ತಿ ಮಾಡಿದ ಸಾಧನೆ. ಆತ ಪುರುಷನಾಗಿರಬಹುದು, ಸ್ತ್ರೀಯಾಗಿರಬಹುದು. ತಮ್ಮಿಂದಾಗಿ ತಮ್ಮವರ ಜೀವನದಲ್ಲಿ ಅಭಿವೃದ್ಧಿಗಾಗಿ ಅವರು ಬೆವರು ಸುರಿಸುತ್ತಾರೆ ಮತ್ತು ತಮ್ಮ ಆದಾಯದಿಂದ ತನ್ನ ಕುಟುಂಬವನ್ನು ಮ್ಯಾಜಿಕ್ ಮಾಡಿದಂತೆ ಮೇಲ್ದರ್ಜೆಗೇರಿಸುತ್ತಾರೆ.

Politics_Umesh Katti_poor roadsPolitics_Crisis_of_drinking_water

ನಿಮಗೀಗ ನೆನಪಾಯಿತಲ್ಲ? ಹೇಗಿದೆ ನೋಡಿ. ಒಬ್ಬ ವ್ಯಕ್ತಿ ಕೇವಲ ತನ್ನ ಸಂಬಳದಿಂದ ಸ್ವತಃ ಎಷ್ಟೆಲ್ಲಾ ಪ್ರಗತಿ ಸಾಧಿಸುತ್ತಾನೆ, ಮನೆ, ಕುಟುಂಬ ಮತ್ತು ಊರನ್ನೇ ಹೇಗೆ ಮೇಲಕ್ಕೇರಿಸುತ್ತಾನೆ ನೋಡಿದ್ದೀರಲ್ಲಾ? ಹೀಗೆ ಮನೆ ರಿಪೇರಿ, ಹೊಸ ಮನೆ, ಕಂಪೌಂಡ್, ರಸ್ತೆ, ವಾಹನ ಮತ್ತು ಸಾಮಾಗ್ರಿಗಳ ಮುಖಾಂತರ ತನ್ನ ಊರಿನಲ್ಲಿ ವ್ಯಾಪಾರ, ಉದ್ಯೋಗವನ್ನೂ ಸೃಷ್ಟಿಸಿ ಎಲ್ಲರ ಅಭಿವೃದ್ಧಿಗೆ ಕಾರಣನಾಗುತ್ತಾನೆ. ಹೀಗಿರುವಾಗ ಜೀವನವಿಡೀ ಸರಕಾರದ ದುಡ್ಡಿನಲ್ಲಿ, ಅಂದರೆ ಜನರ ತೆರಿಗೆಯ ಹಣದಿಂದ, ತಿಂದು ತೇಗಿ, ಸರಕಾರಿ ವಾಹನ ಮತ್ತು ಇತರ ಎಲ್ಲಾ ಸವಲತ್ತು, ಸೌಕರ್ಯ ಬಳಸಿ, ಫಾಯಿದೆಗಳನ್ನು ಗಳಿಸಿ, ಜನರ ಅಭಿವೃದ್ಧಿಗಾಗಿಯೇ ದುಡಿಯಬೇಕಾದ ಒಬ್ಬ ಶಾಸಕ, ಮಂತ್ರಿ ಏನೆಲ್ಲಾ ಅಭಿವೃದ್ಧಿ ಮಾಡಬಹುದಿತ್ತಲ್ಲವೇ?

ಯೋಚಿಸಿ ನೋಡಿ. ಐದು ವರ್ಷದಲ್ಲಿ ಸರಕಾರದ ನಿಯಮಿತ ಯೋಜನೆಗಳಿಂದಾಗಿಯೇ ಒಬ್ಬ ಶಾಸಕ ತನ್ನ ಊರಿನಲ್ಲಿ ಏನೆಲ್ಲಾ ಅಭಿವೃದ್ಧಿ ಕೆಲಸಗಳನ್ನು ನೆರವೇರಿಸಬಹುದು. ಅಷ್ಟೇ ಅಲ್ಲದ ತನ್ನ ಶಾಸಕತ್ವದ ನಿಧಿಯಿಂದ, ಸರಕಾರ, ಮಂತ್ರಿಗಳ ಮೇಲೆ ಒತ್ತಡ ತಂದು ಇನ್ನೂ ಏನೇನೋ ವಿಶೇಷ ಯೋಜನೆಗಳನ್ನು ತರಬಹುದು. ಸರಿಯಾದ ಪ್ಲ್ಯಾನಿಂಗ್ ಮಾಡಿದರೆ ತನ್ನ ಐದು ವರ್ಷ ಅವಧಿಯಲ್ಲಿ ಊರಿನ ಎಲ್ಲಾ ಉದ್ಯೋಗಸ್ತರು ಕೈಗೊಳ್ಳುವ ಒಟ್ಟು ಕಾಮಗಾರಿಗಳ ಹತ್ತು ಪಟ್ಟು, ನೂರು ಪಟ್ಟು ಹೆಚ್ಚು ಕೆಲಸ ಕಾರ್ಯಗಳನ್ನು ಒಬ್ಬ ಶಾಸಕ ಮಾಡಿಸಬಹುದು. ಅಷ್ಟೊಂದು ದುಡ್ಡನ್ನು ಸರಕಾರ ಭರಿಸುತ್ತದೆ. ಅದು ಜನರ ದುಡ್ಡು. ಅದನ್ನು ಪಡೆಯುವುದು ಜನರ ಹಕ್ಕು ಮತ್ತು ಅಧಿಕಾರ ಸಹ. ಮುಖಂಡತ್ವ ವಹಿಸುವುದು ಮತ್ತು ಉಸ್ತುವಾರಿ ನೋಡಿಕೊಳ್ಳುವುದು ಮಾತ್ರ ಜನಪ್ರತಿನಿಧಿಯ ಕೆಲಸ.

ಆದರೆ ಒಬ್ಬನೇ ಒಬ್ಬ ರಾಜಕಾರಣಿ, ಜನಪ್ರತಿನಿಧಿ ಹೀಗೆ ಮಾಡಿದ ದಾಖಲೆ ಉಂಟೇ? ತನ್ನ ಹಿಂಬಾಲಕರನ್ನು, ಚೇಲಾಗಳನ್ನು ಬೆಳೆಸಿದ್ದೇ ಹೊರತು, ತನ್ನ ಆಸ್ತಿ-ಪಾಸ್ತಿ ಹೆಚ್ಚಿಸಿದ್ದೇ ಹೊರತು ಬಹುತೇಕರು ಏನು ಪ್ರಗತಿ ಮಾಡಿಸಿದ್ದಾರೆ? ನಮ್ಮದೇ ರಾಜ್ಯದಲ್ಲಿ ಇಂತಹ ಒಂದು ಸರ್ವೇ ಕಾರ್ಯ ನಡೆಸಿದರೆ ನಿಜವಾದ ವಸ್ತು ಸ್ತಿತಿ ಗೊತ್ತಾಗಬಹುದು. ಕರ್ನಾಟಕ ರಾಜ್ಯ ರಚನೆಯಾದ ನಂತರ, ಇದುವರೆಗೆ ಸರಕಾರದಿಂದ ಖರ್ಚಾದ ಹಣವೆಷ್ಟು, ಮತ್ತು ಅದರಲ್ಲಿ ನಿಜವಾಗಿ ಜನರಿಗಾಗಿ, ನಾಡಿಗಾಗಿ ಬಳಕೆಯಾದ ಹಣವೆಷ್ಟು? ಸತ್ಯ ಬಯಲಾದರೆ ಅದಕ್ಕಿಂತ ಆಘಾತಕರ ಮಾಹಿತಿ ಬೇರೊಂದು ಇರಲಿಕ್ಕಿಲ್ಲ.

ಒಳ್ಳೆಯ ಕೆಲಸ ಮಾಡದಿರುವುದರ ಜೊತೆಗೆ, ಆಗುತ್ತಿರುವ ಒಳ್ಳೆಯ ಕೆಲಸಗಳಿಗೆ ಕಲ್ಲು ಹಾಕುವ ಕೆಲಸ ಮಾಡುವವರೂ ಇದ್ದಾರೆ. ತನ್ನ ಕ್ಷೇತ್ರದಲ್ಲಿ ತನ್ನ ವಿರೋಧಿ (ವಿಪಕ್ಷದವನಿರಬಹುದು ಅಥವಾ ತನ್ನದೇ ಪಕ್ಷದವನಿರಬಹುದು) ಯಾವುದಾದರೂ ಒಳ್ಳೆಯ ಯೋಜನೆ, ಕಾಮಗಾರಿಯನ್ನು ನಡೆಸುತ್ತಿದ್ದಾನೆಂದರೆ, ಅದರಿಂದಾಗಿ ತನಗೆಲ್ಲಿ ಮತಗಳು ಕಡಿಮೆಯಾಗುತ್ತವೋ ಎಂಬ ಭೀತಿಯಿಂದ ಅಂತಹ ಕೆಲಸ-ಕಾರ್ಯಗಳಿಗೆ ಅಡ್ಡಿ, ವಿಘ್ನ ಉಂಟು ಮಾಡುವವರು ಇಲ್ಲವೆ?

ಈ ಹಿನ್ನೆಲೆಯಲ್ಲಿ ಸನ್ಮಾನ್ಯ ಕತ್ತಿಯಂಥವರ ಹೇಳಿಕೆಗಳನ್ನು ಗಮನಿಸಬೇಕಿದೆ. ಇದೇ ಕತ್ತಿಯವರು ಮೊದಲು, ತಾನು ಎಷ್ಟು ವರ್ಷ ಶಾಸಕ, ಮಂತ್ರಿಯಾಗಿದ್ದನ್ನು ಮತ್ತು ತಾನು ಕೈಗೊಂಡ, ನೆರವೇರಿಸಿದ ಒಳ್ಳೆಯ ಕೆಲಸ, ಅಭಿವೃದ್ಧಿ ಕಾರ್ಯಗಳನ್ನು ಬಹಿರಂಗ ಮಾಡಲಿ. ಇವರು ತನ್ನ ಊರಿಗೆ ಏನು ಒಳ್ಳೆಯದನ್ನು ಮಾಡಿದ್ದಾರೆ, ಅದಕ್ಕಾಗಿ ಎಷ್ಟು ಪ್ರಯತ್ನ ಪಟ್ಟಿದ್ದಾರೆನ್ನುವುದನ್ನು ಸಾಬೀತು ಪಡಿಸಲಿ. ತನ್ನ ದುರಾಸೆಗೆ, ಸ್ವಾರ್ಥಕ್ಕಾಗಿ ನಾಡಿಗೆ ಕೊಳ್ಳಿ ಇಡುವಂಥ ಹೇಳಿಕೆಗಳನ್ನು ಹೊರಡಿಸುವ ಮೊದಲು ತಾನು ಕೈಗೊಂಡ, ಸಾಧಿಸಿದ ಘನ ಕಾರ್ಯಗಳ ವಿವರವನ್ನು ಇಂಥವರು ನಾಡಿನ ಮುಂದಿಡಬೇಕು. ಇವರನ್ನು ಆರಿಸಿದ ಜನರು ಈ ಕೆಲಸವನ್ನು ಮೊದಲು ಮಾಡಬೇಕು. ಮಾಹಿತಿ ಹಕ್ಕಿನ ಬಲವಿರುವುದರಿಂದ ಮತ್ತು ಆಧುನಿಕ ತಾಂತ್ರಿಕ ಪ್ರಗತಿಯಿಂದ ತನ್ನ ಸೇವಕರಾದ, ತಾವೇ ಆರಿಸಿದ ಜನಪ್ರತಿನಿಧಿಗಳನ್ನು ಜನರು ಪ್ರಶ್ನಿಸುವ, ಕ್ಲಾಸ್ ತೆಗೆದುಕೊಳ್ಳುವ ಕೆಲಸ ಮಾಡಬೇಕು. ಅದಕ್ಕವರು ಬಗ್ಗದಿದ್ದರೆ, ನಿಯತ್ತಿಲ್ಲದ ಅಂತಹ ರಾಜಕಾರಣಿಗಳನ್ನು ಸೀದಾ ಅರಬ್ಬಿ ಸಮುದ್ರಕ್ಕೆ ತಳ್ಳಬೇಕು.

Leave a comment

Your email address will not be published. Required fields are marked *