Latest News

ನಾವೆಂದಿಗೂ ಮರೆಯಲಾಗದ ಪ್ರೀತಿಯ ಕಲಾಂರನ್ನು ನೆನೆಯುತ್ತಾ…

ಡೊನಾಲ್ಡ್ ಪಿರೇರಾ ಬೆಳ್ತಂಗಡಿ

Posted on : July 27, 2016 at 12:50 PM

Dear Readers, we are running a free media with high democratic values. Without subscriptions, advertisements & having no patrons or god fathers, we depend on your support to run this pro people, impartial, unbiased and courageous media. Kindly support us by your generous help.
Our Google Pay & Paytm Number - 8277362399

Our Bank Details:
Name: Donald Pereira
Bank: Canara Bank
A/C No: 0977101022194
Hampankatta Branch, Mangaluru 575 001
IFSC Code: CNRB0000612
MICR Code: 575015009

ನಾನಾಗ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿ. ಹೊಸ ಜೀವನ, ಹೊಸ ಹುರುಪು ಮತ್ತು ನೂತನ ಗೆಳೆಯರು. ಕೆಲ ದಿನಗಳಲ್ಲಿಯೇ ಒಂದೇ ಅಭಿರುಚಿಯ ಹಳೆಯ ಹಾಗೂ ಹೊಸ ಗೆಳಯರ ಸಹವಾಸ ಗಟ್ಟಿಯಾಯಿತು. ನಮ್ಮ ಹವ್ಯಾಸಗಳು ನಮ್ಮನ್ನು ಹತ್ತಿರ ಇಟ್ಟುಕೊಳ್ಳುವ ಹೊಣೆ ವಹಿಸಿಕೊಂಡಿದ್ದವು.

ಅಂತಹ ಪ್ರಮುಖ ಹವ್ಯಾಸಗಳಲ್ಲಿ, ಪುಸ್ತಕಗಳನ್ನು ಓದುವುದು ಒಂದು. ಬೆಳಗ್ಗಿನ ಓದಿಗೆ ನಾಡಿನಲ್ಲಿ ಮುದ್ರಣವಾಗುವ ಎಲ್ಲಾ ದಿನ ಪತ್ರಿಕೆ ಮತ್ತು ನಿಯತಕಾಲಿಕೆಗಳು ನಮ್ಮ ಕಾಲೇಜಿನ ಲೈಬ್ರೆರಿಗೆ ಬರುತ್ತಿದ್ದವು. ಮಧ್ಯಾಹ್ನ ಊಟದ ನಂತರ ಲೈಬ್ರೆರಿಗೆ ಹೋಗಿ ಅಲ್ಲಿನ ಹೊಸ ಹೊಸ, ಅದ್ಭುತ ಪುಸ್ತಕಗಳನ್ನು ನೋಡುವುದೇ ವಿಸ್ಮಯದ ಅನುಭವವಾಗಿತ್ತು.

ಪತ್ರಿಕೆಗಳ ಜೊತೆಗೆ ಕಥೆ ಕಾದಂಬರಿಗಳನ್ನು ಓದುವ ಗೀಳೂ ನಮ್ಮನ್ನಂಟಿಕೊಂಡಿತ್ತು. ಈ ಗೀಳು ಎಲ್ಲಿಯವರೆಗೆಂದರೆ ನಮ್ಮ ಬೆಂಚಿನಲ್ಲಿದ್ದ ಎಲ್ಲರೂ, ಲೆಕ್ಚರರ್ ಪಾಠ ಮಾಡುತ್ತಿರಬೇಕಾದರೆ ಡೆಸ್ಕಿನಲ್ಲಿ ಕಾದಂಬರಿಗಳನ್ನು ಓದುತ್ತಿದ್ದೆವು. ಹೀಗೆ ಹುಚ್ಚು ಹಿಡಿದು ಓದಿಸುತ್ತಿದ್ದ ಪುಸ್ತಕಗಳಲ್ಲಿ ಥ್ರಿಲ್ಲರ್, ಪತ್ತೇದಾರಿ ಕಾದಂಬರಿಗಳೇ ಹೆಚ್ಚು.

Budkulo_APJ Abdul Kalam_01

ಪತ್ತೇದಾರಿ, ಗೂಢಚಾರಿ ಕಾದಂಬರಿಗಳಲ್ಲಿ ಸಾಮಾನ್ಯವಾಗಿ ಕಥಾ ನಾಯಕನನ್ನು, ಆತ ಸೀಕ್ರೆಟ್ ಸರ್ವಿಸ್ ಏಜೆಂಟ್ ಆಗಿರುತ್ತಿದ್ದ, ಆರಂಭದಲ್ಲಿ ದೇಶದ ಗೃಹ ಮಂತ್ರಿಗಳು ಕರೆದು ಗಂಭೀರ ಪರಿಸ್ಥಿತಿ ಎದುರಾಗಿರುವುದನ್ನು ವಿವರಿಸಿ, ಆತನನ್ನು ಪ್ರಧಾನ ಮಂತ್ರಿಗಳ ನಿಗೂಢ ಛೇಂಬರಿಗೆ ಕರೆದುಕೊಂಡು ಹೋಗುವ ಸನ್ನಿವೇಶ ಇರುತ್ತಿತ್ತು. ಯಾವುದೋ ಪ್ರಮುಖ ಕರ್ತವ್ಯ, ಮಿಶನ್ ಆತನಿಗೆ ಕಾದಿರುತ್ತಿತ್ತು.

ಈ ಗುಂಗಿನಲ್ಲಿದ್ದ ನಮಗೆ ನಿಜ ಜೀವನದಲ್ಲಿಯೂ ಓರ್ವ ವ್ಯಕ್ತಿಗೆ ಇಂತಹದೇ ರೀತಿಯ ಸ್ವಾಗತ ದೇಶದ ಅತ್ಯುನ್ನತ ಕಚೇರಿಗಳಲ್ಲಿ ಸಿಗುತ್ತಿತ್ತೆಂಬುದನ್ನು ಕೇಳಿ ಆ ವ್ಯಕ್ತಿ ಬಗ್ಗೆ ವಿಶೇಷ ಗೌರವ, ಅಭಿಮಾನ ಮೂಡುವಂತೆ ಮಾಡುತ್ತಿದ್ದವು. ಮಂತ್ರಿ, ಪ್ರಧಾನಿ, ರಾಷ್ಟ್ರಪತಿ ಅಥವಾ ಯಾವುದೇ ಉನ್ನತ ಹುದ್ದೆಯಲ್ಲಿರುವವರ ಕಚೇರಿಗೆ ಅಪಾಯಿಂಟ್‍ಮೆಂಟ್ ಇಲ್ಲದೆ, ಮುನ್ಸೂಚನೆ ಇಲ್ಲದೇ ಶೀದಾ ಒಳಗೆ ಹೋಗುವ ಅವಕಾಶ ದೇಶದಲ್ಲಿ ಅವರೊಬ್ಬರಿಗೆ ಮಾತ್ರ ಎಂಬುದನ್ನು ತಿಳಿದಾಗ ಸೋಜಿಗವೆನ್ನಿಸುತ್ತಿತ್ತು, ರೋಮಾಂಚನವಾಗುತ್ತಿತ್ತು.

ಅವರೇ ಎ.ಪಿ.ಜೆ. ಅಬ್ದುಲ್ ಕಲಾಮ್.

ಹೌದು. ಆಗಿನ್ನೂ ಅವರು ವಿಜ್ಞಾನಿಯಾಗಿ ಮಾತ್ರ ಹೆಸರುವಾಸಿಯಾಗಿದ್ದರು. ಇಸ್ರೋ ಸಂಸ್ಥೆಯಲ್ಲಿ ಅವರು ಸಾಕಷ್ಟು ಸಾಧನೆಗಳನ್ನು ಮಾಡಿದ್ದರು. ಆದರೂ ಬೇರೆ ಯಾವ ವಿಜ್ಞಾನಿ, ಸಾಧಕ, ರಾಜಕಾರಣಿಗೂ ಇಲ್ಲದಂತಹ ಈ ವಿಶೇಷ ಗೌರವ ಅವರನ್ನು ಹಿಂಬಾಲಿಸಿತ್ತೆನ್ನುವುದು ಕುತೂಹಲ ಮೂಡಿಸುತ್ತಿತ್ತು.

ಪ್ರಧಾನ ಮಂತ್ರಿಯವರ ಕಚೇರಿಗೆ ಶೀದಾ ನುಗ್ಗಲು ಅವರಿಗೆ ಅನುಮತಿ ಇತ್ತೋ ಇಲ್ಲವೋ ಎಂಬುದು ಅಪ್ರಸ್ತುತ. ಆದರೆ ಅಂತಹ ಗೌರವ, ಅವಕಾಶವನ್ನು, ಯೋಗ್ಯತೆಯನ್ನು ಅವರಂತೂ ಪಡೆದುಕೊಂಡಿದ್ದರೆಂಬುದು ವಾಸ್ತವ. ದೇಶದ ರಕ್ಷಣಾ ವ್ಯವಸ್ಥೆಯ ತಾಂತ್ರಿಕ ಕ್ರಾಂತಿಯಲ್ಲಿ, ಕ್ಷಿಪಣಿಗಳ ನಿರ್ಮಾಣದಲ್ಲಿ ಅವರ ಕೊಡುಗೆ ಬಹಳಷ್ಟಿತ್ತು ಎಂಬುದು ಈ ನಿಟ್ಟಿನಲ್ಲಿ ಕಾರಣವಾಗಿತ್ತೆಂಬುದನ್ನು ಮನಗಾಣಬಹುದು.

ನಿವೃತ್ತಿಯ ನಂತರ ವಿಶೇಷವಾಗಿ ಪ್ರಚಲಿತದಲ್ಲಿ, ಸುದ್ದಿಯಲ್ಲಿರದಿದ್ದ ಅಬ್ದುಲ್ ಕಲಾಮ್ ಏಕಾಏಕಿ ರಾಷ್ಟ್ರದಾದ್ಯಂತ ಪ್ರಚಾರ ಪಡೆದದ್ದು, ಸಂಚಲನ ಮೂಡಿಸಿದ್ದು ಅವರನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿದಾಗ.

Budkulo_APJ Abdul Kalam_03

ಆಗ ವಾಜಪೇಯಿಯವರ ಎನ್‍ಡಿಎ ಸರಕಾರ ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಗಳನ್ನು ಹುಡುಕುತ್ತಿದ್ದಾಗ ಮೊದಲಿಗರಾಗಿ ಕಲಾಂ ಅವರು ಪರಿಗಣಿಸಲ್ಪಟ್ಟವರಲ್ಲ. ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಪಿ.ಸಿ. ಅಲೆಕ್ಸಾಂಡರ್ ಅವರ ಹೆಸರು ಮೊದಲಿಗೆ ಚಾಲ್ತಿಗೆ ಬಂದಿತ್ತು. ಆದರೆ ಅಲೆಕ್ಸಾಂಡರ್ ಅವರನ್ನು ರಾಷ್ಟ್ರಪತಿಯಾಗಿಸಲು ಕಾಂಗ್ರೆಸ್ ಪಕ್ಷದ, ಅದರಲ್ಲೂ ಅದರ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಸಹಕಾರ ಸಿಗಲಿಲ್ಲ. ಹಾಗಾಗಿ ಬೇರೆ ಅಭ್ಯರ್ಥಿಯನ್ನು ಹುಡುಕುವುದು ಅನಿವಾರ್ಯವಾಗಿತ್ತು.

ಸಮ್ಮಿಶ್ರ ಸರಕಾರ ನಡೆಸುತ್ತಿದ್ದ ಬಿಜೆಪಿಗೆ ತನ್ನದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸಲು ಬೇಕಾದ ಸಂಖ್ಯಾ ಬಲವಿರಲಿಲ್ಲ. ಹಾಗಾಗಿ ಸರ್ವಾನುಮತದ ಅಭ್ಯರ್ಥಿಯನ್ನು, ವಿರೋಧ ಪಕ್ಷಗಳ ಸಹಕಾರದೊಂದಿಗೆ ಆಯ್ಕೆ ಮಾಡುವುದು ಅನಿವಾರ್ಯವಾಗಿತ್ತು.

ಹಾಗೆ ಅಚಾನಕ್ಕಾಗಿ ಅಬ್ದುಲ್ ಕಲಾಂ ಅವರು ರಾಷ್ಟ್ರಪತಿ ಚುನಾವಣಾ ಕಣಕ್ಕೆ ಬಂದಿಳಿದರು. ಅವರನ್ನು ವಿರೋಧಿಸುವುದು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಿರಲಿಲ್ಲ. ಹೀಗಿ ಒಮ್ಮಿಂದೊಮ್ಮೆಗೆ ಜನರ್ಯಾರೂ ಊಹಿಸದ ವ್ಯಕ್ತಿಯೊಬ್ಬರು ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಯಾದರು.

ಹಾಗೆ ನೋಡಿದರೆ ರಕ್ಷಣಾ ವಿಭಾಗದಲ್ಲಿ ಕೆಲಸ ಮಾಡಿದ್ದ ವಿಜ್ಞಾನಿ ಕಲಾಂರನ್ನು ರಾಷ್ಟ್ರಪತಿಯಾಗಿ ಕಾಣಲು ಬಹಳ ಜನರು ವಿರೋಧಿಸಿದ್ದರು. ಕೇವಲ ಓರ್ವ ವಿಜ್ಞಾನಿಯಾಗಿದ್ದವರು ದೇಶದ ರಾಷ್ಟ್ರಪತಿಯಾಗುವುದೆಂದರೇನು ಎಂದು ಹುಬ್ಬೇರಿಸಿದವರು ಬಹಳ. ಜನರಿಗೂ ಯಾಕೋ ಅವರನ್ನು ರಾಷ್ಟ್ರಪತಿಯಾಗಿ ನೋಡಲು ಅಷ್ಟೊಂದು ಮನಸ್ಸಿರಲಿಲ್ಲ. ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷಗಳು ಮಾತ್ರ ಕಲಾಂ ಆಯ್ಕೆಯನ್ನು ವಿರೋಧಿಸಿ ನೇತಾಜಿ ಸುಭಾಸ್‍ಚಂದ್ರ ಬೋಸ್ ಅವರ ಸಹವರ್ತಿಯಾಗಿದ್ದ ಕ್ಯಾಪ್ಟನ್ ಲಕ್ಷೀ ಸೆಹಗಲ್ ಅವರನ್ನು ಕಣಕ್ಕಿಳಿಸಿದರೂ ಇತರೆಲ್ಲಾ ಪಕ್ಷಗಳು ಜಂಟಿಯಾಗಿ ಕಲಾಂ ಅವರನ್ನು ಬೆಂಬಲಿಸಿ ಗೆಲ್ಲಿಸಿದರು.

ದೇಶ ವಿದೇಶದ ಮಾಧ್ಯಮಗಳೂ ‘ಮಿಸೈಲ್ ಮ್ಯಾನ್ ಬಿಕಮ್ಸ್ ಪ್ರೆಸಿಡೆಂಟ್ ಆಫ್ ಇಂಡಿಯ’ ಎಂದೇ ಬಣ್ಣಿಸಿದವು.

ನಂತರ ಹೊಸದೊಂದು ಇತಿಹಾಸವೇ ನಿರ್ಮಾಣವಾಯಿತು.

ಅದುವರೆಗೂ ರಾಜಕಾರಣಿಗಳನ್ನೇ ರಾಷ್ಟ್ರಪತಿ ಹುದ್ದೆಯಲ್ಲಿ ಕಂಡಿದ್ದ ದೇಶದ ಜನರಿಗೆ ಈ ವಿಚಿತ್ರ ತಲೆಕೂದಲಿನ ವ್ಯಕ್ತಿಯನ್ನು ಅರಗಿಸಿಕೊಳ್ಳಲು ಕೆಲ ದಿನಗಳೇ ಬೇಕಾಯಿತು. ಆದರೆ ಈ ಕಲಾಂ ಎಂಬ ವ್ಯಕ್ತಿಯೊಳಗಿರುವ ಶಕ್ತಿ ದಿನಗಳೆದಂತೆ ಅನಾವರಣಗೊಳ್ಳುತ್ತಾ ಹೋಯಿತಲ್ಲಾ ಆಗ ನಿಬ್ಬೆರಗಾಗುವ ಸರದಿ ಜನರದ್ದಾಗಿತ್ತು.

ಅಲ್ಲಿಯವರೆಗೆ, ರಾಷ್ಟ್ರಪತಿ ಎಂಬುದು ಗಂಜಿ ಕೇಂದ್ರ, ಆಡಳಿತ ಪಕ್ಷಗಳ ನಿವೃತ್ತ ನಾಯಕರನ್ನು ತಂದು ಕೂರಿಸಲಿಕ್ಕಿರುವ ನಿರಾಶ್ರಿತ ತಾಣ, ರಬ್ಬರ್ ಸ್ಟ್ಯಾಂಪ್ ಹುದ್ದೆ, ಸರಕಾರ ಹೇಳಿದಂತೆ ಕಡತಗಳಿಗೆ ಸಹಿ ಹಾಕುವ ಕೆಲಸ ಮಾಡಲಿಕ್ಕಷ್ಟೇ ಲಾಯಕ್ಕೆಂಬ ಗ್ರಹಿಕೆ, ಅನುಭವಕ್ಕೆ ತಕ್ಕಂತೆ ಹಿಂದಿನ ರಾಷ್ಟ್ರಪತಿಗಳು ಕಾರ್ಯ ನಿರ್ವಹಿಸಿದ್ದರು.

Budkulo_APJ Abdul Kalam_02

ಆದರೆ ಅಬ್ದುಲ್ ಕಲಾಂ ಅವರು ಆ ಅಭಿಪ್ರಾಯ, ನಂಬಿಕೆಗಳನ್ನೆಲ್ಲಾ ತೊಳೆದು ಹಾಕುವಂತೆ ಕೆಲಸ ಮಾಡಿದರು. ದೇಶದ ಜನರು ಅವರನ್ನು ಪ್ರೀತಿಸಲಾರಂಭಿಸಿದರು. ಅದರಲ್ಲೂ ವಿದ್ಯಾರ್ಥಿಗಳು ಮತ್ತು ಯುವಜನರು ಅವರನ್ನು ಆರಾಧಿಸಲಾರಂಭಿಸಿದರು. ದೇಶದ ಯುವ ಸಮುದಾಯವು ನೆಚ್ಚಿಕೊಳ್ಳುವಂತಹ, ಮಾದರಿಯಾಗಿ ನೋಡುವಂತಹ, ಜನಸಮೂಹವು ಪ್ರೀತಿ, ವಿಶ್ವಾಸದಿಂದ ಕಾಣುವಂತಹ ನಾಯಕನೊಬ್ಬನ ಕೊರತೆಯಿಂದ ಬಳಲಿದ್ದವರಂತೆ, ಅದನ್ನೆಲ್ಲಾ ಕಲಾಂ ಅವರಲ್ಲಿ ಕಂಡುಕೊಂಡರು.

ಅಂತಹ ಪ್ರೇರಣೆ, ಸ್ಫೂರ್ತಿ, ಭರವಸೆಯನ್ನು ಕಲಾಂ ಅವರು ಜನರಲ್ಲಿ ತುಂಬಿದರು. ಅವರ ಒಂದೊಂದು ಕಾರ್ಯ, ಮಾತು, ನಡೆ ನುಡಿ ಅವರನ್ನು ದಿನೇ ದಿನೇ ಎತ್ತರಕ್ಕೇರಿಸುವುದರ ಜೊತೆಗೆ ದೇಶದ ಜನರೆಲ್ಲರ ಮನ ಮನೆಗಳಲ್ಲಿ ಅವರಿಗೊಂದು ಆಪ್ತ ಸ್ಥಾನವನ್ನು ದೊರಕಿಸಿತು.

ಕಲಾಂ ಅವರು ರಾಷ್ಟ್ರಪತಿ ಹುದ್ದೆಯನ್ನು ತೆರವುಗೊಳಿಸಿ ರಾಷ್ಟ್ರಪತಿ ಭವನದಿಂದ ನಿರ್ಗಮಿಸುವಾಗ ಅವರು ತನ್ನೊಡನೆ ತೆಗೆದುಕೊಂಡು ಹೋಗಿದ್ದು ಕೇವಲ ತಾನು ಆಗಮಿಸುವಾಗ ತಂದಿದ್ದ ಕೆಲ ಬಟ್ಟೆ ಬರೆ ಮತ್ತು ಪುಸ್ತಕಗಳನ್ನು ಹೊಂದಿದ್ದ ಸೂಟ್‍ಕೇಸ್‍ಗಳನ್ನು ಮಾತ್ರ ಎಂಬುದು ಬಹು ದೊಡ್ಡ ಸುದ್ದಿಯಾಗಿತ್ತು, ಜನರು ಅವರನ್ನು ಇನ್ನಷ್ಟು ಕೊಂಡಾಡಲು ಕಾರಣವಾಗಿತ್ತು.

ಅದು ಅವರ ವ್ಯಕ್ತಿತ್ವ, ಜೀವನವನ್ನು ಪ್ರತಿನಿಧಿಸುವ, ನಿರೂಪಿಸುವ ಅಪ್ರತಿಮ ದೃಷ್ಟಾಂತವಾಗಿತ್ತು. ಅವನು ಹಾಗೆಯೇ ಬಾಳಿದವರು. ಸರಳತೆ, ವಿನಯತೆಯನ್ನು ಯಾವ ಹುದ್ದೆಗೇರಿದ್ದಾಗಲೂ ಅವರು ಬಿಟ್ಟಿರಲಿಲ್ಲ. ರಾಷ್ಟ್ರಪತಿಯಾಗಿ ದೇಶಕ್ಕೆ, ಜನರಿಗೆ ಅದರಲ್ಲೂ ಯುವಜನಾಂಗಕ್ಕೆ ಹೋದಲ್ಲೆಲ್ಲಾ ಪ್ರೇರಣೆ ನೀಡಿ, ಮಾರ್ಗದರ್ಶನ ಮಾಡುತ್ತಾ ಸಮಯವನ್ನು ಸದುಪಯೋಗಿಸಕೊಂಡರು. ರಾಷ್ಟ್ರಪತಿ ಭವನವು ಜನರಿಗೇ ಸೇರಿದ್ದೆಂಬುದನ್ನು ನಿರೂಪಿಸಿದರು. ಅಧಿಕಾರ, ಹುದ್ದೆಯನ್ನು ಸ್ವಾರ್ಥಕ್ಕಾಗಿ, ತನ್ನ ಖಾಸಗಿ ಲಾಭಕ್ಕಾಗಿ ಎಂದೂ ಬಳಸಲೇ ಇಲ್ಲ.

‘ವಿಶನ್ 2020’ ಎಂಬುದು ಅವರ ಕನಸಾಗಿತ್ತು. ಹೋದಲ್ಲಿ ಬಂದಲ್ಲೆಲ್ಲಾ ಅದನ್ನೇ ಪ್ರತಿಪಾದಿಸುತ್ತಿದ್ದರು. ಕರ್ನಾಟಕಕ್ಕೂ ಬಂದು ರಾಜ್ಯ ಸರಕಾರಕ್ಕೂ ಈ ಬಗ್ಗೆ ಕ್ಲಾಸ್ ತೆಗೆದುಕೊಂಡಿದ್ದರು.

ಹಾಗೆ ನೋಡಿದರೆ ಕಲಾಂ ಅವರು ರಾಷ್ಟ್ರಪತಿ ಸ್ಥಾನದಿಂದ ಕೆಳಗಿಳಿದ ಮೇಲೂ ಜನರಿಗೆ ಮತ್ತು ಅವರಿಗೆ ಇರುವ ಸಂಬಂಧ ಹೆಚ್ಚಾಯಿತೇ ವಿನಃ ಕಡಿಮೆಯಾಗಲಿಲ್ಲ. ಅವರು ಮಾಜಿ ರಾಷ್ಟ್ರಪತಿಯಾಗಿದ್ದು, ರಾಷ್ಟ್ರಪತಿಯಾಗಿ ಅವರು ಕಾರ್ಯನಿರ್ವಹಿಸಿದ ರೀತಿ, ವರ್ತಿಸಿದ, ಜೀವಿಸಿದ ವಿಧಾನವನ್ನು ಮತ್ತಷ್ಟು ಮೆಚ್ಚುವಂತೆ ಮಾಡಿತು. ಯಾಕೆಂದರೆ, ನಂತರ ರಾಷ್ಟ್ರಪತಿಯಾದ ಪ್ರತಿಭಾ ಪಾಟೀಲ್ ಅವರು ಹೇಗೆ ತಮ್ಮ ಅಧಿಕಾರವನ್ನು ತನ್ನ ವೈಯಕ್ತಿಕ, ಕುಟುಂಬದ ಏಳಿಗೆಗಾಗಿ ದುರುಪಯೋಗಿಸಿ ಕೊಂಡರು ಮತ್ತು ಸ್ವಾರ್ಥಪರವಾಗಿ ನಡೆದುಕೊಂಡರೆಂಬುದುನ್ನು ತಿಳಿದ ಮೇಲೆ ಅಬ್ದುಲ್ ಕಲಾಂ ಅವರ ಮೇಲಿನ ಜನರ ಅಭಿಮಾನ, ಪ್ರೀತಿ ಮತ್ತಷ್ಟು ಜಾಸ್ತಿಯಾಯಿತು. ಆ ವ್ಯತ್ಯಾಸವನ್ನು ಅವರು ತಮ್ಮ ನಡವಳಿಕೆಯಿಂದ ದೇಶಕ್ಕೇ ತೋರಿಸಿದ್ದರು.

ಸಾಮಾನ್ಯವಾಗಿ ಭಾರತದಲ್ಲಿ ಪ್ರತಿಯೊಬ್ಬರೂ, ತಾನು ಎಷ್ಟೇ ಜಾತ್ಯತೀತನೆನಿಸಿಕೊಂಡವರೂ ಒಂದಲ್ಲಾ ಒಂದು ಸಂದರ್ಭದಲ್ಲಿ ತಮ್ಮ ಧರ್ಮ, ಜಾತಿಯ ಹೆಸರಿನಲ್ಲಿ ಬೇಳೆ ಬೇಯಿಸಿಕೊಂಡವರೇ. ಅದು ರಾಜಕಾರಣಿಯಾಗಿರಬಹುದು, ಕ್ರೀಡಾಳು, ನಟ ಮತ್ಯಾರೇ ಆಗಿರಬಹುದು, ಯಾವುದೂ ನಡೆಯದಿದ್ದರೆ ಅಥವಾ ತಮಗೆ ಅಗತ್ಯವಾದಾಗ, ಅನುಕೂಲಕರವಾಗಿದ್ದಾಗ ಜಾತಿ, ಧರ್ಮದ ಟ್ರಂಪ್ ಕಾರ್ಡ್ ಬಳಸಿದ್ದನ್ನು ನಾವು ನೋಡಿದ್ದೇವೆ.

ಆದರೆ, ನಾನು ನೋಡಿದಂತೆ ಎ.ಪಿ.ಜೆ. ಅಬ್ದುಲ್ ಕಲಾಂ ಅವರೊಬ್ಬರೇ ಅವೆಲ್ಲವನ್ನು ಮೀರಿ ಬಾಳಿದ, ಬದುಕಿದ ಮಹಾನ್ ವ್ಯಕ್ತಿ. ಮಾತು ಮಾತಿಗೆ, ಸಾಮಾನ್ಯ ಜನರೂ ಸಹ ಧರ್ಮ, ಜಾತಿಗೆ ಅಂಟಿಕೊಂಡಂತಹ ವಾತಾವರಣದಲ್ಲಿ, ಅಬ್ದುಲ್ ಕಲಾಂ ಅವರನ್ನು ಓರ್ವ ಮನುಷ್ಯನನ್ನಾಗಿ ಜನರು ಪರಿಗಣಿಸಿದರೇ ಹೊರತು ಅವರ ಜಾತಿ ಯಾವುದು ಧರ್ಮ ಯಾವುದೆಂಬುದರ ಗೋಜಿಗೇ ಹೋಗಲಿಲ್ಲ. ಅಂತಹ ವ್ಯಕ್ತಿತ್ವ ಕಲಾಂ ಅವರದು.

ಅವರೂ ಅಷ್ಟೆ, ಮತ ಧರ್ಮಗಳಿಗಿಂತ ಮಾನವೀಯತೆಯೇ ಶ್ರೇಷ್ಠ, ಅಂತಿಮವೆಂಬುದನ್ನು ಪ್ರತಿಪಾದಿಸಿ, ಹಾಗೆಯೇ ಜೀವಿಸಿದವರು. ಅದರಿಂದಾಗಿ ಜನಮಾನಸದಲ್ಲಿ ಶಾಶ್ವತವಾಗಿ ಗೌರವಯುತ, ಪೂಜನೀಯ ಸ್ಥಾನವನ್ನು ಗಳಿಸಿಕೊಂಡರು.

ಒಂದು ವರ್ಷದ ಹಿಂದೆ ಎಂದಿನಂತೆ ಲವಲವಿಕೆಯಿಂದಲೇ ಪಾಠ ಮಾಡುತ್ತಿದ್ದಾಗ, ಕ್ರಿಯಾಶೀಲರಾಗಿ, ಚಟುವಟಿಕೆಯಿಂದ ಇರುವಾಗ ನಮ್ಮೆಲ್ಲರ ಪ್ರೀತಿಯ ಕಲಾಂ ಸರ್ ಅವರು ಕುಸಿದು ಬಿದ್ದರು, ಈ ಲೋಕವನ್ನು ತೊರೆದರು. ದೇಶಕ್ಕೆ ದೇಶವೇ ಕಂಬನಿಗರೆಯಿತು. ಅಂತಹ ಭಾಗ್ಯಶಾಲಿ ಮರಣ ಅವರದು. ಜನರು ಸ್ವಯಂಪ್ರೇರಣೆಯಿಂದ ತಮ್ಮ ನಾಯಕನೊಬ್ಬನ ಅಗಲುವಿಕೆಗೆ ಮರುಗಿದ್ದು ಬಹುಶಃ ಮೊತ್ತ ಮೊದಲ ಬಾರಿಗೆ ಇರಬೇಕು.

ಕೆಲವರು ಸತ್ತ ನಂತರ ಮರೆತು ಹೋಗುತ್ತಾರೆ. ಆದರೆ ನಮ್ಮ ಕಲಾಂ ಸರ್ ಅವರು ಎಂದಿಗೂ ಅಮರರು. ಅವರು ದೇಶಕ್ಕೆ, ಜನರಿಗೆ ಬಿಟ್ಟು ಹೋಗಿದ್ದನ್ನು ಮರೆಯುವುದುಂಟೇ.

ಯಾವುದೇ ಕಚೇರಿಗೆ, ಯಾರದೇ ಬಳಿಗೆ ಹೋಗಲು ಅಪ್ಪಣೆ, ಅನುಮತಿ ಅಬ್ದುಲ್ ಕಲಾಂರಿಗೆ ಹೇಗೆ ಅಗತ್ಯವಿರಲಿಲ್ಲವೋ, ಹಾಗೆಯೇ ಅವರನ್ನು ಪ್ರೀತಿಸಲು, ಅಭಿಮಾನ ಪಡಲು ನಾಡಿನ, ದೇಶದ ಜನರಿಗೂ ಯಾರ ಸೂಚನೆ, ಅನುಮತಿಯೂ ಅಗತ್ಯವಾಗಲಿಲ್ಲ. ಅವರೆಲ್ಲಾ ಕಲಾಂರನ್ನು ತಾವೇ ಪ್ರೀತಿಸಿದವರು.

ಇಂತಹ ಸೌಭಾಗ್ಯ ದೊರಕಲು ಕಲಾಂರಂತಹವರಿಗೆ ಮಾತ್ರ ಸಾಧ್ಯ.

ಕೋಟ್ಯಂತರ ಹೃದಯಗಳಿಗೆ, ಮನಸ್ಸುಗಳಿಗೆ ಸ್ಫೂರ್ತಿ ತುಂಬಿದ, ಪ್ರೇರಣೆ, ಮಾರ್ಗದರ್ಶನ ನೀಡಿದ, ದಾರಿ ತೋರಿಸಿದ, ಬದುಕಲು ಕಲಿಸಿದ ಎ.ಪಿ.ಜೆ. ಅಬ್ದುಲ್ ಕಲಾಂರಿಗೆ ಹೃದಯದುಂಬಿದ, ಕೃತಜ್ಞತಾಪೂರ್ವಕ ನುಡಿನಮನಗಳು.

ನೀವೆಂದಿಗೂ ನಮಗೆ ಜೀವಂತವಾಗಿಯೇ ಉಳಿಯುವಿರಿ ಕಲಾಂ ಸರ್. ನಮಸ್ಕಾರಗಳು.

ನಮ್ಮ ಕನ್ನಡ ವಾಟ್ಸಪ್ ಗ್ರೂಪ್‍ಗೆ ಭರ್ತಿಯಾಗಿ: https://chat.whatsapp.com/DoN1Pahf2ytDCOBrTrd5CH

Send your Feedback to: budkuloepaper@gmail.com

Like us at: www.facebook.com/budkulo.epaper

Subscribe our YouTube Channel

Leave a comment

Your email address will not be published. Required fields are marked *

Latest News