Latest News

ಟಿಪ್ಪು ಜಯಂತಿ: ರಾಕ್ಷಸತ್ವದ ವೈಭವೀಕರಣವೇಕೆ ಸಿದ್ಧರಾಮಯ್ಯನವರೆ?

ಡೊನಾಲ್ಡ್ ಪಿರೇರಾ ಬೆಳ್ತಂಗಡಿ

Posted on : November 10, 2015 at 1:53 PM

Dear Readers, we are running a free media with high democratic values. Without subscriptions, advertisements & having no patrons or god fathers, we depend on your support to run this pro people, impartial, unbiased and courageous media. Kindly support us by your generous help.
Our Google Pay Number - 8277362399

Our Bank Details:
Name: Donald Pereira
Bank: Canara Bank
A/C No: 0977101022194
Hampankatta Branch, Mangaluru 575 001
IFSC Code: CNRB0000612
MICR Code: 575015009

ಕರ್ನಾಟಕದ ಮುಖ್ಯಮಂತ್ರಿಯವರಾದ ಸನ್ಮಾನ್ಯ ಸಿದ್ಧರಾಮಯ್ಯನವರಿಗೆ ನಮಸ್ಕಾರಗಳು.

Budkulo_Letter to CM Siddaramaiahನ್ಯಾಯಯುತವಾಗಿ ಸಂಪಾದಿಸಬೇಕಾಗಿದ್ದ ಮುಖ್ಯಮಂತ್ರಿ ಹುದ್ದೆಯನ್ನು ನೀವು ನಂಬಲಸಾಧ್ಯವಾದ ರೀತಿಯಲ್ಲಿಯೇ ಪಡೆದವರು. ಯಾವ ಕಾಂಗ್ರೆಸ್ ಪಕ್ಷವನ್ನು ವಿರೋಧಿಸಿಕೊಂಡು, ಯಾವ ತತ್ವ ಸಿದ್ಧಾಂತಗಳನ್ನು ಠೀಕಿಸಿ, ಧಿಕ್ಕರಿಸಿಕೊಂಡು ಬಂದಿರೋ, ಕೊನೆಗೆ ಅನೂಹ್ಯ ರೀತಿಯಲ್ಲಿ ಅವೆಲ್ಲದರ ಜೊತೆ ರಾಜಿ ಮಾಡಿಕೊಂಡಿರಿ. ಅದರಿಂದ ನಿಮಗೆ ಒಳಿತೇ ಆಯಿತು! ಮಕಾಡೆ ಮಲಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಚೈತನ್ಯ ಕೊಟ್ಟು ಅದಕ್ಕೂ ಅಧಿಕಾರ ದೊರಕಿಸಿದಿರಿ; ನಿಮ್ಮ ಕನಸೂ ಈಡೇರಿತು. ರಾಜ್ಯದ ಮುಖ್ಯಮಂತ್ರಿಯಾಗಿಯೇ ಬಿಟ್ಟಿರಿ.

ಅದನ್ನು ಸಂಭ್ರಮಿಸಿದವರಲ್ಲಿ ನಾನೂ ಒಬ್ಬ. ನಿಮ್ಮಂತಹ ಯೋಗ್ಯ, ದಕ್ಷ ಮತ್ತು ಅರ್ಹರು ರಾಜ್ಯವನ್ನಾಳುವುದು ನನಗೂ ಬೇಕಿತ್ತು.

ಆದರೆ ನಿಮ್ಮ ದೀರ್ಘಕಾಲೀನ, ಅಸಾಧ್ಯವಾಗುತ್ತಿದ್ದ ಕನಸು ನನಸಾದದ್ದೇ ತಡ, ನೀವು ಮೊದಲಿನ ಗಟ್ಟಿತನವನ್ನು ಕಳೆದುಕೊಂಡುಬಿಟ್ಟಿದ್ದು ನಿಚ್ಚಳವಾಗಿ ಕಂಡು ಬರುತ್ತಿದೆ. ಬರಬರುತ್ತಾ ರಾಯರ ಕುದುರೆ ಕತ್ತೆಯಾಯಿತೆಂಬಂತೆ ನಿಮ್ಮ ಪರಿಸ್ಥಿತಿ ಆಗಿರುವುದನ್ನು ಕಂಡಾಗ ಖೇದವೂ ಆಗುತ್ತಿದೆ.

ಅನ್ನಭಾಗ್ಯ ಯೋಜನೆಯನ್ನು ಘೋಷಿಸುವಲ್ಲಿನ ಅವಸರ, ಮತ್ತದರ ನಂತರ ಬರೀ ಭಾಗ್ಯ, ಭಾಗ್ಯಗಳೆಂಬ ಹೆಸರಿನ ಯೋಜನೆಗಳನ್ನು ಕಂಡಾಗ ನಿಮ್ಮ ಸರಕಾರಕ್ಕೆ ಏನೋ ದೌರ್ಭಾಗ್ಯ ಕಾಡುತ್ತಿದ್ದುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಕನಿಷ್ಠ ಕೆಲವು ವಿನೂತನ ಶಬ್ದಗಳನ್ನು ಬಳಸಿಕೊಳ್ಳುವ ಸಾಮರ್ಥ್ಯವಿಲ್ಲದಷ್ಟೂ ನಿಮ್ಮ ಸರಕಾರ ಬರಗೆಟ್ಟು ಹೋಗಿದೆಯೆಂದು ಜನರಿಗನಿಸಿದ್ದೂ ಸಹಜವೇ.

Budkulo_Tipu Sultan_Tappu Jayanthi

ಅಧಿಕಾರಕ್ಕಂಟಿ ಕೂತರೆ ಎಲ್ಲದರ ಜೊತೆಗೂ ರಾಜಿಯಾಗಬೇಕಾಗುವುದು ಭಾರತದ ರಾಜಕೀಯದ ಮೂಲ ತತ್ವ! ಅದು ನಿಮ್ಮಲ್ಲಿರಬಾರದೆಂದೇನೂ ಇಲ್ಲ. ಆದರೂ, ನೀವು ಸ್ವಾಭಿಮಾನಿ ವ್ಯಕ್ತಿ ಮತ್ತು ಕಳೆದ ಚುನಾವಣೆಗೆ ಮುಂಚೆ ಹಲವು ಬಾರಿ ತಾವು ಮತ್ತೊಮ್ಮೆ ಚುನಾವಣೆಗೆ ನಿಲ್ಲುವುದಿಲ್ಲವೆಂದು ಪ್ರತಿಪಾದಿಸಿಕೊಂಡವರು. ಆ ಹೇಳಿಕೆ ನಿಮ್ಮ ಮೇಲಿನ ನಂಬಿಕೆ ಹೆಚ್ಚಿಸಿತ್ತು.

ಕ್ರಮೇಣ, ಮುಖ್ಯಮಂತ್ರಿ ಸ್ಥಾನಕ್ಕೆ ಅಂಟಿಕೊಂಡ ನಂತರ ನೀವು ಬಹಳ ಬದಲಾಗಿದ್ದೀರಿ ಸಿದ್ಧರಾಮಯ್ಯನವರೇ! ಮತ್ತೆ ಚುನಾವಣೆಗೆ ನಿಲ್ಲುತ್ತೇನೆ, ಮತ್ತೆ ಅಧಿಕಾರಕ್ಕೆ ಬರುತ್ತೇನೆ ಎಂದಾಗ ನೀವು ಅಧಿಕಾರದ ರುಚಿಯನ್ನು ಕಂಡು, ಅದನ್ನು ಕಳೆದುಕೊಳ್ಳಲು ಬಯುಸುತ್ತಿಲ್ಲವೆಂಬುದನ್ನು ತೋರಿಸಿತು. ಪ್ರತಿದಿನವೆಂಬಂತೆ ಹಾವು ಮುಂಗುಸಿಯಂತಾಡುತ್ತಿದ್ದ ನೀವು ಮತ್ತು ಮಾಜಿ ಪ್ರಧಾನಿ ದೇವೇಗೌಡರೂ ರಾತ್ರಿ ಹಗಲಾಗುವುದರೊಳಗೆ ಆಪ್ತ ಮಿತ್ರರಾಗಿದ್ದೂ ಸಹ ಇದರ ಮುಂದುವರಿದ ಭಾಗವೇ ಎಂದು ನನಗನಿಸಿದೆ.

ಈಗ ನನಗೆ ನಿಜಕ್ಕೂ ನೀವು ಕಾಂಗ್ರೆಸ್ ಮುಖ್ಯಮಂತ್ರಿಯೋ, ಜೆಡಿಎಸ್ ಮುಖ್ಯಮಂತ್ರಿಯೋ ಎಂಬ ಸಂಶಯ ನನಗೆ ಕಾಡುತ್ತಿದೆ ಸಿದ್ಧರಾಮಯ್ಯನವರೇ. ಹಿಂದೆ ಹೇಗೆ ನೀವು ಕಾಂಗ್ರೆಸ್ ವಿರುದ್ಧ ತೊಡೆ ತಟ್ಟುತ್ತಿದ್ದಿರಿ ಮತ್ತು ಕಾಂಗ್ರೆಸ್ಸನ್ನು ಸೋಲಿಸಲು ಶ್ರಮಿಸುತ್ತಿದ್ದಿರೋ ಅದನ್ನೇ ಈಗ ನೀವು ಕಾಂಗ್ರೆಸ್ಸಿನಲ್ಲಿದ್ದುಕೊಂಡೇ ಸದ್ದಿಲ್ಲದೆ ಮಾಡುತ್ತಿದ್ದೀರೇನೋ ಎಂದೆನಿಸುತ್ತಿದೆ.

ಅದಕ್ಕೆ ಬಹಳ ನಿದರ್ಶನಗಳನ್ನು ನಾನು ಕೊಡಬಲ್ಲೆ. ಆದರೆ ಈಗ ನಿರ್ದಿಷ್ಠವಾದ ಒಂದು ಸಂಗತಿಯನ್ನು ಮಾತ್ರ ಪ್ರಸ್ತಾಪಿಸುತ್ತಿದ್ದೇನೆ. ಅದೇ ಟಿಪ್ಪು ಜಯಂತಿ.

ಜಯಂತಿ (ಜನುಮದಿನ) ಆಚರಣೆಗೆ ಆಯಾ ವ್ಯಕ್ತಿಗಳ ಹುಟ್ಟಿದ ದಿನವನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಟಿಪ್ಪು ಸುಲ್ತಾನ್ ಹುಟ್ಟಿದ ದಿನಾಂಕ ನವೆಂಬರ್ 20. ನವೆಂಬರ್ 10ನ್ನು ಯಾಕೆ ಆಯ್ಕೆ ಮಾಡಲಾಗಿದೆಯೋ, ಅದು ಇನ್ನೊಂದು ವಿಚಿತ್ರ.

ಅದಿರಲಿ ಈ ಟಿಪ್ಪು ಸುಲ್ತಾನ್ ಕಾಂಗ್ರೆಸ್‍ನವರಿಗೆ (ಮತ್ತು ಜೆಡಿಎಸ್‍ಗೂ ಸಹ) ಪ್ರೀತಿಪಾತ್ರನಾದುದರಲ್ಲಿ ನನಗೇನೂ ಆಶ್ಚರ್ಯ ಕಾಡುತ್ತಿಲ್ಲ. ಎಂತಹ ಖದೀಮನೇ ಇರಲಿ ಆತ ಕೇವಲ ಮುಸ್ಲಿಮನಾಗಿದ್ದಾನೆಂಬ ಒಂದೇ ಕಾರಣಕ್ಕೆ (ಮುಸ್ಲಿಮರೇ ಆತನನ್ನು ಹೀಗಳೆದರೂ ಕೂಡ) ಆತನನ್ನು ತಲೆ ಮೇಲೆ ಹೊತ್ತುಕೊಳ್ಳುವುದು, ಆತನ ಮನೆಗೆ ದೌಡಾಯಿಸುವುದು, ಆತ ಸತ್ತರೆ ಹತ್ತು ಪಟ್ಟು ಹೆಚ್ಚು ಪರಿಹಾರ ಒದಗಿಸುವುದು – ಇದೆಲ್ಲಾ ಕಾಂಗ್ರೆಸ್ (ಮತ್ತು ಜಾತ್ಯತೀತವೆನಿಸಿಕೊಂಡ ಎಲ್ಲಾ ಸೋ ಕಾಲ್ಡ್ ಪಕ್ಷಗಳು) ಅನುಸರಿಸಿಕೊಂಡು ಬಂದ ನೀತಿ. ಕಳೆದ ಬಾರಿಯೇ ರೆಹಮಾನ್ ಖಾನ್ ಸಾಹೇಬರು (ಕೇಂದ್ರದಲ್ಲಿ ಸಹಾಯಕ ಸಚಿವರಾಗಿದ್ದುಕೊಂಡು ದೇಶಕ್ಕೆ ಏನು ಕೊಟ್ಟರೋ ಗೊತ್ತಿಲ್ಲ) ಟಿಪ್ಪು ಸುಲ್ತಾನ್ ಹೆಸರಿನಲ್ಲಿ ವಿಶ್ವವಿದ್ಯಾನಿಲಯವನ್ನು ನಿರ್ಮಿಸಲಿಕ್ಕೆ ಹೊರಟಿದ್ದರು. ಅದರ ಕಥೆ ಏನಾಯಿತೋ ಗೊತ್ತಿಲ್ಲ.

Tipu Sultan 2

ಅಂತೂ ಜೀವಂತವಿದ್ದಾಗ ಲಕ್ಷ ಲಕ್ಷ ಜನರನ್ನು ಹಿಂಸಿಸಿ, ಕೊಂದು, ಬಲಾತ್ಕಾರವಾಗಿ ತನ್ನ ಧರ್ಮಕ್ಕೆ ಮತಾಂತರ ಮಾಡಿ, ನಾಡಿನಾದ್ಯಂತ ಭೀತಿಯೆಬ್ಬಿಸಿ, ಯಾರ ಜೊತೆಯೂ ಒಳ್ಳೆಯ ಸಂಬಂಧವಿರಿಸಿಕೊಳ್ಳದೆ, ಕೊನೆಗೆ ಹೇಡಿಯಂತೆ ಅಸಹಾಯಕನಾಗಿ ಮರಣವನ್ನಪ್ಪಿದ ಒಬ್ಬ ಭಂಡ ರಾಜನಾಗಿದ್ದ ಟಿಪ್ಪು ಸುಲ್ತಾನ್‍ನನ್ನು ಮತ್ತೆ ಜೀವಂತಗೊಳಿಸಿ, ನಾಡಿನಲ್ಲಿ ಅಶಾಂತಿ ಗರಿಗೆದರುವಂತೆ ಮಾಡಿದ ಕೀರ್ತಿ ಕಾಂಗ್ರೆಸ್ ಪಕ್ಷದ್ದು. ಇದೀಗ ನೀವು ಅದಕ್ಕೆ ತುಪ್ಪ ಸುರಿದಿದ್ದೀರಿ ಸಿಎಂ ಸಾಹೇಬರೇ.

ಯಾಕೆ ಇದೆಲ್ಲಾ ಬೇಕಿತ್ತು?

ನಿಮಗೆ ನೆನಪಿರಲೇಬೇಕಲ್ವೆ ಸಿದ್ಧರಾಮಯ್ಯನವರೇ, ನರೇಂದ್ರ ಮೋದಿಯನ್ನು ನರಹಂತಕ, ನರರಾಕ್ಷಸ ಎಂದೇ ನೀವು ಕರೆದಿದ್ದು? ಎಲ್ಲ ಅಡೆತಡೆಗಳನ್ನು ಮೀರಿ, ನೀವು (ಕಾಂಗ್ರೆಸ್ ಪಕ್ಷದವರು) ಎಷ್ಟೇ ಊಳಿಟ್ಟರೂ, ನಿಮ್ಮದೇ ಕೊಡುಗೆಗಳಿಂದ ಅದೇ ನರೇಂದ್ರ ಮೋದಿಯವರು ಭರ್ಜರಿಯಾಗಿ ಪ್ರಧಾನ ಮಂತ್ರಿ ಗದ್ದುಗೆಗೇರಿಯೇ ಬಿಟ್ಟರು. ಕೊನೆಗೆ ನೀವು ಅವರನ್ನು ಪ್ರಧಾನಿಯಾಗಿ ಒಪ್ಪಲೇಬೇಕಾಯಿತು.

ಆದರೂ ನೀವು ಅವರನ್ನು ನರಹಂತಕನೆಂದೇ ಭಾವಿಸಿದ್ದೀರಿ.

ಅದಕ್ಕಿರುವ ಕಾರಣವೂ ಒಪ್ಪತಕ್ಕದ್ದೇ ಸರ್. ಅದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಪಕ್ಷದಲ್ಲೆಲ್ಲೋ ಸೇವೆ ಮಾಡುತ್ತಿದ್ದ ನರೇಂದ್ರ ಮೋದಿಯವರನ್ನು ಗುಜರಾತಿನಲ್ಲಿ ಒಮ್ಮಿಂದೊಮ್ಮೆಲೇ ಮುಖ್ಯಮಂತ್ರಿಯಾಗಿ ನೇಮಿಸಿದರು. ಆ ನಂತರ ಅಲ್ಲಿ ಕೋಮು ಗಲಭೆ ಭುಗಿಲೆದ್ದಿತು. ಸರಣಿ ಘಟನೆಗಳಲ್ಲಿ ಸಾವಿರಾರು ಅಮಾಯಕ ಜನರು ಹತ್ಯೆಗೀಡಾದರು.

ಅದೆಲ್ಲಾ ನರೇಂದ್ರ ಮೋದಿಯವರು ಅಧಿಕಾರ ಪಡೆದ ನಂತರ ನಡೆದದ್ದು. ಆತ ಮುಖ್ಯಮಂತ್ರಿಯಾಗಿರುವಾಗ ಅದು ನಡೆದು ಹೋಯಿತು. ನೀವೆಲ್ಲಾ ಅದನ್ನು ಆತನೇ ನಡೆಸಿದ್ದು ಎಂಬಂತೆ ಹೇಳಿಕೊಂಡು ಬಂದಿರಿ.

ನಿಮ್ಮ ವಾದವನ್ನು ಒಪ್ಪತಕ್ಕದ್ದೇ. ರಾಜ್ಯದ ಮುಖ್ಯಮಂತ್ರಿಯಾಗಿದ್ದುಕೊಂಡು ಕಣ್ಣೆದುರು ರಾಕ್ಷಸೀತನ ವಿಜೃಂಭಿಸುತ್ತಿರುವುದನ್ನು ನೋಡಿಕೊಂಡು ಸುಮ್ಮನಿರುವುದೆಂದರೆ ಅಕ್ಷಮ್ಯ ಅಪರಾಧವೇ. ಹಿಂಸೆ, ಗಲಭೆಯನ್ನು ನಿಯಂತ್ರಿಸಬೇಕಾಗಿದ್ದು, ಶಾಂತಿ ನೆಲೆಗೊಳಿಸುವಂತೆ ಮಾಡಬೇಕಾಗಿದ್ದು ಅವರ ಕರ್ತವ್ಯವಾಗಿತ್ತು.

ಅದಕ್ಕೇ ಅಲ್ಲವೇ ದೇಶದಾದ್ಯಂತ ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿರೋಧಿಗಳೂ ಮೋದಿ, ಬಿಜೆಪಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದು? ಮುಖ್ಯಮಂತ್ರಿಯಾಗಿದ್ದುಕೊಂಡು ತನ್ನ ಮೂಗಿನ ನೇರಕ್ಕೆ ನಡೆಯುತ್ತಿದ್ದ ಹತ್ಯೆಗಳನ್ನು ನಿಲ್ಲಿಸದೇ ಹೋಗಿದ್ದು, ನರೇಂದ್ರ ಮೋದಿಯವರೇ ಅದನ್ನು ಸ್ವತಃ ಮಾಡಿಸಿದ್ದು ಎಂಬ ನಿಮ್ಮೆಲ್ಲರ ಆಪಾದನೆಗೆ, ಆರೋಪಕ್ಕೆ ಬಲವಾದ ಸಾಕ್ಷ್ಯಾಧಾರವೆಂಬಂತಿತ್ತು. ಹಾಗಾಗಿ ಆ ಕಳಂಕವನ್ನು ಬಹಳಷ್ಟು ವರ್ಷ ಮೋದಿಯವರು ಹೊತ್ತುಕೊಳ್ಳಬೇಕಾಯಿತು.

ನೀವದನ್ನು ಈಗಲೂ ಹೇಳಿಕೊಂಡು ತಿರುಗಾಡುತ್ತಿದ್ದೀರಿ. ನೀವು ಅದಕ್ಕೆ ಬದ್ಧರಾಗಿದ್ದೀರಿ ಅಲ್ಲವೆ?

ಖಂಡಿತ ಒಪ್ಪೋಣ. ತನ್ನ ರಾಜ್ಯದಲ್ಲಿ ನಡೆಯುತ್ತಿದ್ದ ಗಲಭೆಗೆ, ದಂಗೆಗೆ ಓರ್ವ ಮುಖ್ಯಮಂತ್ರಿ ಜವಾಬ್ದಾರನೆಂಬ ನಿಮ್ಮ ಮಾತು ನಿಜವೇ.

ಅದಕ್ಕೇ ಅಲ್ಲವೇ ನೀವು ಮೋದಿಯನ್ನು ನರಹಂತಕನೆನ್ನುವುದು?

ಹಾಗಾದರೆ ನಿಮ್ಮ ಧೋರಣೆ ಹಿಂಸೆಗೆ, ಅಮಾನವೀಯತೆಗೆ ವಿರುದ್ಧ. ಮೆಚ್ಚಬೇಕಾದ್ದೇ. ಕಟುಕರನ್ನು, ಹಿಂಸೆ ನಡೆಸುವವರನ್ನು ಯಾರೂ ಮೆಚ್ಚಲಾರರು. ಅವರನ್ನು ವಿರೋಧಿಸಬೇಕು, ಮಟ್ಟ ಹಾಕಲೇಬೇಕು. ಇದೇ ನಿಮ್ಮ ಧೋರಣೆ, ನನ್ನದೂ ಕೂಡ.

ಆದರೆ ಈಗೇನು ಮಾಡುತ್ತಿದ್ದೀರಿ ನೀವು ಸಿದ್ಧರಾಮಯ್ಯನವೇ? ಕೇವಲ ತನ್ನ ಆಡಳಿತದಡಿಯಲ್ಲಿ ನಡೆದ ಹತ್ಯೆಗಳಿಗೆ ಮೋದಿಯವರನ್ನು ಅಜೀವ ನಿಷೇಧಕ್ಕೊಳಪಡಿಸಬೇಕೆಂಬಂತೆ ಗರ್ಜಿಸುವ ನೀವು ಸ್ವತಃ ತನ್ನ ಕೈಯಾರೆ ಸಾವಿರಾರು, ಲಕ್ಷಾಂತರ ಜನರ ಜೀವಹರಣ ನಡೆಸಿದವನನ್ನು ಇಂದು ಅಭಿನಂದಿಸುತ್ತೀರಿ, ಮೆರೆಸುತ್ತಿದ್ದೀರಿ. ಏನಾಗಿದೆ ನಿಮಗೆ ಸಿಎಂ ಸಾಹೇಬರೆ? ಏನಾಯಿತು ನಿಮ್ಮ ಧೋರಣೆ? ಎಲ್ಲಿ ಹೋಯಿತು ನಿಮ್ಮ ಸಿದ್ಧಾಂತ?

ನೀವು ಮತ್ತು ಇತರರು ಏನೇ ಹೇಳಲಿ, ಪ್ರತಿಪಾದಿಸಲಿ. ಟಿಪ್ಪು ಸುಲ್ತಾನನು ಲಕ್ಷಾಂತರ ಜನರನ್ನು ಹತ್ಯೆ ಮಾಡಿದ್ದು, ಮತಾಂತರಕ್ಕೊಳಪಡಿಸಿದ್ದು ನಿಜ. ಟಿಪ್ಪುವಿನ ಪರ ಮತ್ತು ವಿರೋಧವಿರುವ ಪ್ರತಿ ಚರಿತ್ರೆಕಾರನೂ ಇದನ್ನು ಒಪ್ಪುತ್ತಾನೆ. ಆತನನ್ನು ಸಮರ್ಥಿಸುವವರು ಟಿಪ್ಪು ಮಾಡಿದ್ದಕ್ಕೆ ಕಾರಣ, ನೆಪಗಳನ್ನು ಕೊಟ್ಟು ಬೆಂಬಲಿಸುತ್ತಾರೆ. ವಿರೋಧಿಸುವವರು ಹೇಗೂ ವಿರೋಧಿಸುತ್ತಾರೆ. ಆದರೆ ಸತ್ಯವೆಂಬುದು ಸತ್ಯವೇ. ಟಿಪ್ಪು ನರಹಂತಕನಷ್ಟೇ ಅಲ್ಲ, ಮಾನವ ಚರಿತ್ರೆಯಲ್ಲಿ ಬಂದು ಹೋದ ಅತ್ಯಂತ ಕ್ರೂರ, ಪೈಶಾಚಿಕ ಮನುಷ್ಯ.

ಇಂತಹ ರಾಕ್ಷಸನನ್ನು ನೀವಿಂದು ಸರಕಾರದ ವೆಚ್ಚದಲ್ಲಿ ಅಭಿನಂದಿಸಿ, ಸನ್ಮಾನಿಸಿ, ಹಾಡಿ ಹೊಗಳಿ ವೈಭವೀಕರಿಸುತ್ತಿದ್ದೀರಲ್ಲವೇ? ಹೇಳಿ ನಿಮಗೇನಾಗಿದೆ? ನೀವು ಸ್ಥಿಮಿತ ಕಳೆದುಕೊಂಡಿದ್ದೀರಾ ಸರ್?

ಟಿಪ್ಪು ಸುಲ್ತಾನ್ ಒಬ್ಬ ದೊರೆಯಾಗಿದ್ದ ಎಂಬುದು ಬಿಟ್ಟರೆ ಬೇರೆ ಏನೂ ಆತ ಸಾಧಿಸಿದ್ದು ಇಲ್ಲವೇ ಇಲ್ಲ. ಚರಿತ್ರೆಯಲ್ಲಿ ಅವನಿಗೆ ಒಂದು ಹೆಸರು, ಸ್ಥಾನವೇನಾದರೂ ದಕ್ಕಿದ್ದಿದ್ದರೆ ಅದು ಆತನಿಂದಲ್ಲ, ಬದಲಾಗಿ ಅವನ ತಂದೆ ಹೈದರಾಲಿಯ ಕೊಡುಗೆಯೇ ಹೆಚ್ಚು. ಹೈದರಾಲಿ ಅವಿದ್ಯಾವಂತನಾಗಿದ್ದರೂ ಕೆಚ್ಚೆದೆಯ ಸೇನಾನಿಯಾಗಿದ್ದ. ಸ್ವಂತ ಪರಾಕ್ರಮದಿಂದ ಮತ್ತು ಮೈಸೂರು ಅರಸರ ಅನಿಶ್ಚಿತತೆ, ಅರಾಜಕತೆಯಿಂದಾಗಿ ಮೈಸೂರು ರಾಜ್ಯದ ಆಡಳಿತವನ್ನು ತನ್ನ ಸುಪರ್ದಿಗೆ ಹೈದರಾಲಿ ತೆಗೆದುಕೊಂಡ ನಂತರ ಕೆಲವು ವಿಶಿಷ್ಟ ಬೆಳವಣಿಗೆಗಳಾದವು. ಹೈದರಾಲಿಯು ವಿದೇಶಿ ಶತ್ರುಗಳಾಗಿದ್ದ ಫ್ರೆಂಚರು ಮತ್ತು ಬ್ರಿಟಿಷರ ನಡುವಿನ ಕಾಳಗವನ್ನು ಪರಿಗಣಿಸಿ, ಮತ್ತವರ ಇಲ್ಲಿನ ನೆಲೆಗಟ್ಟನ್ನು ಪರಿಶೀಲಿಸಿ ಫ್ರೆಂಚರೊಂದಿಗೆ ಸ್ನೇಹ ಬೆಳೆಸಿದ. ಟಿಪ್ಪುವಿನ ಪ್ರಚಾರಕರು ಮತ್ತು ಹೊಗಳುಭಟರು ಏನೆಲ್ಲಾ ಹೇಳುತ್ತಿದ್ದಾರೆ ನೋಡಿ, ಅದಕ್ಕೆಲ್ಲಾ ಇದೇ ಕಾರಣ – ಫ್ರೆಂಚರೊಂದಿಗೆ ಕೈ ಜೋಡಿಸಿದ್ದು. ಅದರ ನಂತರವೇ ಫ್ರೆಂಚರ ನೆರವಿನಿಂದ ಸೈನ್ಯ ಮತ್ತು ಆಡಳಿತದಲ್ಲಿ ಯೂರೋಪಿನ ತಾಂತ್ರಿಕತೆಯ ಅಳವಡಿಕೆಯಾಗಿದ್ದು. ಹಾಗಾಗಿಯೇ ಹೈದರಾಲಿ ಮತ್ತು ಟಿಪ್ಪುವಿಗೆ ಬಹಳಷ್ಟು ಲಾಭವಾಗಿದ್ದು, ಶ್ರೇಯಸ್ಸು ಲಭಿಸಿದ್ದು. ಭಟ್ಟಂಗಿಗಳು ಹೇಳುವಂತೆ ಅದೆಲ್ಲಾ ಟಿಪ್ಪುವಿನ ಸಂಶೋಧನೆಯಲ್ಲ. ಹೈದರಾಲಿ ತನ್ನ ಸಾಮ್ರಾಜ್ಯವನ್ನು ಸುವ್ಯವಸ್ಥಿತವಾಗಿ, ಬಲಿಷ್ಠವಾಗಿ ಕಟ್ಟಲು ಫ್ರೆಂಚರು ಕೈಜೋಡಿಸಿದರು. ಅವರಿಗೆ ಬ್ರಿಟಿಷರು ಶತ್ರುಗಳಾಗಿದ್ದರಿಂದ ಈ ಸಹಾಯ ಮಾಡಿದ್ದರು.

ಹೀಗೆ ಟಿಪ್ಪು ತಂದೆಯ ಸಮರ್ಥ, ಭದ್ರ ಬೆಂಗಾವಲಿನಲ್ಲಿ ಬೆಳೆದಿದ್ದರಿಂದಾಗಿ ಮತ್ತು ಹೈದರಾಲಿ ಎಲ್ಲವನ್ನು ಆಗಲೇ ನಿರ್ಮಿಸಿದ್ದರಿಂದಾಗಿ ಬೆಳೆದು ನಿಂತ ಟಿಪ್ಪುವಿಗೆ ಸುಲಭವಾಗಿ ಆಡಳಿತ ನಡೆಸಲು ಸಹಕಾರಿಯಾಗಿತ್ತು. ತಂದೆ ನೆಟ್ಟ ಮರದಿಂದ ಹಣ್ಣು ಕಿತ್ತು ತಿಂದಿದ್ದಷ್ಟೇ ಟಿಪ್ಪು ಮಾಡಿದ ಘನಂದಾರಿ ಕಾರ್ಯ. ತಂದೆಯ ಶ್ರಮದ ಫಲದಿಂದ ಟಿಪ್ಪುಗೆ ಕೀರ್ತಿ ಲಭಿಸಿದ್ದೇ ಹೊರತು, ಸ್ವತಃ ಟಿಪ್ಪು ಸಾಧಿಸಿದ್ದು ಏನೇನಿಲ್ಲ. ಯುದ್ಧ ಕೌಶಲ್ಯ, ಫಿರಂಗಿ, ಬಂದೂಕು ಮುಂತಾದವೆಲ್ಲಾ ಫ್ರೆಂಚರ ಕೊಡುಗೆಯೇ ಹೊರತು, ಟಿಪ್ಪುವಿನ ಸಂಶೋಧನೆಯಲ್ಲ.

ಇಷ್ಟಿದ್ದರೂ ಟಿಪ್ಪು ಓರ್ವ ಸಮರ್ಥ, ಉತ್ತಮ ಆಡಳಿಗಾರನಾಗಲೇ ಇಲ್ಲ. ಆತ ನಿಜಕ್ಕೂ ಯೋಗ್ಯನಾಗಿದ್ದಿದ್ದರೆ, ಅಷ್ಟೊಂದು ದಕ್ಷ ರಾಜ್ಯವನ್ನು ಇನ್ನಷ್ಟು ಬೆಳೆಸಿ ಭಾರತದಾದ್ಯಂತ, ಕನಿಷ್ಠ ದಕ್ಷಿಣ ಭಾರತದ ಚಕ್ರವರ್ತಿಯಾಗಿ ಮೆರೆದಿರುತ್ತಿದ್ದ. ಅದೆಲ್ಲಾ ಸಾಧ್ಯವಾಗಲೇ ಇಲ್ಲ.

ಯಾಕೆ ಗೊತ್ತೆ?

ಕಾರಣ, ಟಿಪ್ಪು ಓರ್ವ ಅಸಮರ್ಥನೂ, ಮೂರ್ಖನೂ, ಅಹಂಕಾರಿಯೂ ಆಗಿದ್ದ. ವಿವೇಚನೆಯೆಂಬುದು ಅವನಲ್ಲಿರಲಿಲ್ಲ. ಹಾಗಾಗಿಯೇ ಹೈದರಾಲಿ ಸತ್ತ ನಂತರ ಸ್ವತಃ ಆಡಳಿತ ನಡೆಸಲಾರಂಭಿಸಿದ ಆತನ ರಾಜ್ಯ ನಿಯಂತ್ರಣ ಕಳೆದುಕೊಂಡು ಬಿಟ್ಟಿತ್ತು. ಮದಭರಿತನಾಗಿ ಕೇವಲ ಕಂಡ ಕಂಡವರನ್ನು ಕೊಚ್ಚುವುದು, ಕೊಲ್ಲುವುದು, ನಾಶಗೊಳಿಸುವುದು, ಧ್ವಂಸಗೊಳಿಸುವುದು ಇದೇ ಅವನ ಕಾಯಕವಾಗಿತ್ತು. ಅತೀವ ಮತಾಂಧನಾಗಿ ಎಲ್ಲರೂ ತನ್ನ ಧರ್ಮಕ್ಕೆ ಸೇರಬೇಕೆಂದು ಹಂಬಲಿಸಿ ಮುಸಲ್ಮಾನರಲ್ಲದವರನ್ನೆಲ್ಲಾ ಬಲಾತ್ಕಾರವಾಗಿ, ಹಿಂಸೆ ನೀಡಿ ಮತಾಂತರಿಸಲು ಪ್ರಯತ್ನಿಸಿದ. ಸೋತವರರಿಂದ ಕೊಳ್ಳೆ ಹೊಡೆಯುತ್ತಿದ್ದದ್ದು ಆಗೆಲ್ಲಾ ಇದ್ದಿದ್ದೇ. ಆದರೆ ಟಿಪ್ಪು ಗೆದ್ದ ನಂತರ ಕಂಡ ಕಂಡ ಗುಡಿ ಗೋಪುರ, ಚರ್ಚು, ದೇವಸ್ಥಾನಗಳನ್ನೂ ನೆಲಸಮಗೊಳಿಸಿದ.

ಆತ ಬೇರೆ ಧರ್ಮದವರನ್ನು ಹಿಂಸಿಸಿದ, ಸಾಯಿಸಿದ ರೀತಿಯೇ ಅಕ್ಷಮ್ಯ. ಅದರಲ್ಲೂ ಹೆಣ್ಣು ಮಕ್ಕಳನ್ನು, ಮುದುಕರನ್ನು ಮತ್ತು ಮಕ್ಕಳನ್ನೂ ಭೀಕರ ಹಿಂಸೆ ನೀಡಿದ್ದು ಆತ ಎಂತಹ ಪೈಶಾಚಿಕ, ವಿಕೃತ ಮನಸ್ಸಿನವನೆಂಬುದನ್ನು ಸಾಬೀತುಪಡಿಸುತ್ತದೆ.

ಟಿಪ್ಪು ಹಿಂದೂಗಳನ್ನು ಮಾತ್ರ ಕೊಲ್ಲಲಿಲ್ಲ. ಕೊಡಗು ಮತ್ತು ಮಲಬಾರಿನಲ್ಲಿ ಆತ ಭೀಭತ್ಸಕರ ಹಿಂಸಾಕಾಂಡಗಳನ್ನು ನಡೆಸಿ ಲಕ್ಷ ಲಕ್ಷ ಜನರ ಹತ್ಯೆ ನಡೆಸಿದ್ದಾನೆ.

ಕರಾವಳಿಯ ಕ್ರೈಸ್ತರನ್ನು ಕೊಂದದ್ದು ಟಿಪ್ಪುವಿನ ಮತ್ತೊಂದು ಬೃಹತ್ ಸಾಧನೆ. ಇದಕ್ಕೆ ಅಷ್ಟೊಂದು ಪ್ರಚಾರ ಸಿಕ್ಕಿಲ್ಲ. ಸುಮಾರು 80 ಸಾವಿರ ಕ್ರೈಸ್ತರನ್ನು ಬಂಧಿಸಿ ಆತ ಶ್ರೀರಂಗಪಟ್ಟಣಕ್ಕೆ ಅಮಾನವೀಯವಾಗಿ ಸಾಗಿಸಿ ಬಂಧನದಲ್ಲಿಟ್ಟದ್ದು ಟಿಪ್ಪು ಎಂತಹ ಮತಾಂಧ ಮತ್ತು ಹಿಂಸಾಪ್ರೇಮಿ ಎಂಬುದನ್ನು ನಿರೂಪಿಸಿದೆ. ಕರಾವಳಿಯಾದ್ಯಂತ 1784ರ ಫೆಬ್ರವರಿ 25ರಂದು ಒಂದೇ ದಿನ, ಬಹಳ ವ್ಯವಸ್ಥಿತವಾದ ಯೋಜನೆಯ ಮೂಲಕ, ಹಿರಿಯರು, ಮಕ್ಕಳು, ಗರ್ಭಿಣಿಯರು, ತರುಣರೆಲ್ಲರನ್ನು ಕ್ರೂರವಾಗಿ, ಪೈಶಾಚಿಕವಾಗಿ ನಡೆಸಿಕೊಂಡು ಶ್ರೀರಂಗಪಟ್ಟಣಕ್ಕೆ ಎಳೆದು ತಂದು ಬಂಧಿಸಲು ಟಿಪ್ಪು ಅಪ್ಪಣೆ ಕೊಡಿಸಿದ್ದ. ಈ ಹಾದಿಯಲ್ಲಿ ಬಹಳ ಜನರು ಸಾವನ್ನಪ್ಪಿದ್ದರು. ಇನ್ನು ಕೆಲವರು ಹಿಂಸೆ ತಾಳದೆ ಮತಾಂತರಗೊಂಡಿದ್ದರು. ಪ್ರತಿಭಟಿಸಿದವರನ್ನು ಭೀಭತ್ಸಕರ ಶಿಕ್ಷೆಗೊಳಪಡಿಸಲಾಗಿತ್ತು. 1799ರಲ್ಲಿ ಟಿಪ್ಪು ಸಾಯದಿರುತ್ತಿದ್ದರೆ ಇಂದು ಕರಾವಳಿಯಲ್ಲಿ ಕ್ರೈಸ್ತರೇ ಇರುತ್ತಿರಲಿಲ್ಲ!

ಇಷ್ಟಕ್ಕೂ ಟಿಪ್ಪು ಇದ್ದದ್ದು 18ನೇ ಶತಮಾನದಲ್ಲಿ. ಪ್ರಜಾಪ್ರಭುತ್ವ, ನ್ಯಾಯಾಂಗ ವ್ಯವಸ್ಥೆ ಆಗಲೇ ಅಲ್ಲಲ್ಲಿ ಬೇರು ಬಿಟ್ಟಿತ್ತು. ಸಹಸ್ರ ವರ್ಷಗಳ ಹಿಂದೆ, ಪುರಾಣಗಳಲ್ಲಿಯೂ ಸಹ ನ್ಯಾಯ ವ್ಯವಸ್ಥೆ ಇದ್ದಿತ್ತು. ಯುದ್ಧ ಮಾಡುವುದಕ್ಕೂ ರೀತಿ ನೀತಿ ನಿಯಮಗಳಿದ್ದವು. ಆದರೆ 18ನೆ ಶತಮಾನದ ಉತ್ತರಾರ್ಧದಲ್ಲಿ ಆಡಳಿತ ನಡೆಸುತ್ತಿದ್ದ ಟಿಪ್ಪು ಸುಲ್ತಾನ್ ಇವೆಲ್ಲದಕ್ಕೆ ಮನ್ನಣೆಯನ್ನೇ ಕೊಟ್ಟಿರಲಿಲ್ಲ. ಎಲ್ಲವನ್ನು ಮೃಗೀಯವಾಗಿ ನಡೆಸಿದವನಾತ. ತನಗಾಗದವರನ್ನು (ಯುದ್ಧಾಪರಾಧಿಗಳಲ್ಲದವರನ್ನೂ) ಆತ ಹೇಗೆ ಹಿಂಸಿಸುತ್ತಿದ್ದ, ಶಿಕ್ಷಿಸುತ್ತಿದ್ದನೆಂಬುದನ್ನು ತಿಳಿದಾಗ ಆತತನ್ನು ಯಾರೂ ಕ್ಷಮಿಸಲಾರರು. ಅಂತಹ ಪರಮ ಕ್ರೂರ, ಪೈಶಾಚಿಕನಾಗಿದ್ದ ಟಿಪ್ಪು.

ಅಂತಹವನು ನಿಮಗೆ ನರಹಂತಕನಾಗಿ ಕಾಣುವುದಿಲ್ಲವೆಂದರೆ, ಸಿದ್ಧರಾಮಯ್ಯನವರೇ ನಿಮ್ಮನ್ನು ಏನೆನ್ನಬೇಕೋ ತಿಳಿಯುತ್ತಿಲ್ಲ. ಬಿಡಿ, ಆತ ಮುಸ್ಲಿಮನಾಗಿದ್ದರಿಂದ ಆತ ಮಾಡಿದ್ದೆಲ್ಲಾ ನಿಮಗೆ ಸರಿ ಕಾಣುತ್ತಿರಬಹುದು. ಅದು ನಿಮಗೆ ರಾಜಕೀಯ ಅಗತ್ಯವಾಗಿರಲೂಬಹುದು. ಆದರೆ ಸರಕಾರದಿಂದ ಆತತನ್ನು ಮಾನವೀಯತೆಯ ಚಾಂಪಿಯನ್ ಎಂಬಂತೆ ಬಿಂಬಿಸುವ ಅಗತ್ಯವೇನಿತ್ತು ಸರ್? ನಿಮಗೆ ಯಾರು ಒತ್ತಾಯ ಮಾಡಿದ್ದಾರೆ ಹೀಗೆ ಮಾಡಲು?

ಇನ್ನೊಂದು ತಮಾಷೆ ಏನೆಂದರೆ, ಟಿಪ್ಪುವನ್ನು ಮೊದಲ ಸ್ವಾತಂತ್ರ್ಯ ಹೋರಾಟಗಾರನೆನ್ನುವುದು! ಇದಕ್ಕಿಂತ ಫಟಿಂಗತನ ಬೇರೆ ಇಲ್ಲ. ಬ್ರಿಟಿಷರನ್ನು ವಿರೋಧಿಸಿದವರನ್ನು ಭಾರತದ ರಾಷ್ಟ್ರಪ್ರೇಮಿಗಳೆನ್ನುವುದಾದರೆ, ಪಾಕಿಸ್ತಾನದ ಜನಕ ಜಿನ್ನ ಕೂಡ ಭಾರತದ ಪ್ರೇಮಿಯೇ ಅಲ್ಲವೆ? ಟಿಪ್ಪು ಜನ್ಮ ತಾಳುವುದಕ್ಕೆ ಮುಂಚೆಯೇ ಬ್ರಿಟಿಷರೊಂದಿಗೆ ಹೋರಾಡಿ ಸತ್ತವರಿದ್ದಾರೆ. ಅವರೆಲ್ಲಾ ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲವೆ? ಟಿಪ್ಪುಗಿಂತ ಎಷ್ಟೋ ಮೊದಲು ಪ್ಲಾಸಿ ಕದನದಲ್ಲಿ ಬ್ರಿಟಿಷರೊಂದಿಗೆ ಬಂಗಾಲದ ನವಾಬ ಸಿರಾಜ್ ಉದ್ ದೌಲ್ ಹೋರಾಡಿಲ್ಲವೆ? ಆತನ್ಯಾಕೆ ಸ್ವಾತಂತ್ರ್ಯ ಹೋರಾಟಗಾರನಲ್ಲ?

ಒಬ್ಬನನ್ನು ಹೊಗಳುವುದಕ್ಕೂ ಮಿತಿ ಇರಬೇಕಲ್ಲವೆ? ಟಿಪ್ಪುವನ್ನು ಹೊಗಳಿ, ಬೇಡವೆನ್ನುವವರಾರು? ಆದರೆ ಆತನ ಯೋಗ್ಯತೆಗೆ ಹತ್ತು, ನೂರು ಪಟ್ಟು ಸಾಮರ್ಥ್ಯವನ್ನು, ಸುಳ್ಳು ಸಾಧನೆಗಳನ್ನು ಅವನ ತಲೆಗೆ ಕಟ್ಟಬೇಡಿ. ಅತ್ಯಂತ ಮತಾಂಧ, ದುರಹಂಕಾರಿ, ಭಂಡ, ಕ್ರೂರನಾಗಿದ್ದವನು ಏನೇ, ಎಷ್ಟೇ ಒಳ್ಳೆಯ ಕಾರ್ಯಗಳನ್ನು ನಡೆಸಿದ್ದರೂ ಅದಕ್ಕೆ ಬೆಲೆಯಿಲ್ಲ. ತನ್ನ ಆಡಳಿತದಲ್ಲಿ ಕೊಲೆಗಳಾದವೆಂಬುದಕ್ಕೆ ಹೇಗೆ ನೀವು ನರೇಂದ್ರ ಮೋದಿಯನ್ನು ತಪ್ಪಿತಸ್ಥನೆನ್ನುತ್ತೀರೋ, ಅಪರಾಧಿಯೆನ್ನುತ್ತೀರೋ, ಅದಕ್ಕಿಂತ ಸಾವಿರ ಪಟ್ಟು ಭಯಂಕರ ಕುಕೃತ್ಯಗಳನ್ನು, ಪಾತಕಗಳನ್ನು, ಮಾರಣಹೋಮಗಳನ್ನು ನಡೆಸಿದ ಟಿಪ್ಪು ಸುಲ್ತಾನನನ್ನು ಮಾನವ ಕುಲವನ್ನು ಉದ್ಧಾರಗೊಳಿಸಲು ಅವತಾರವೆತ್ತ ಸಂತನೆಂಬಂತೆ ನೀವು ಹೊಗಳುವುದು ನೋಡಿದರೆ ನಿಜಕ್ಕೂ ಖೇದವೆನಿಸುತ್ತಿದೆ!

ಮುಖ್ಯಮಂತ್ರಿಯವರೇ, ದಯವಿಟ್ಟು ನಿಮ್ಮ ರಾಜಕೀಯವನ್ನು ರಾಜಕೀಯಕ್ಕೇ ಸೀಮಿತಗೊಳಿಸಿ. ಮೌಢ್ಯವನ್ನು ನಿಷೇಧಿಸಬೇಕೆನ್ನುವ ನೀವು ನಡೆದುಕೊಳ್ಳುತ್ತಿರುವ ರೀತಿ ನಿಮ್ಮ ಬಗೆಗೆ ಜಿಗುಪ್ಸೆ ತರಿಸುತ್ತಿದೆ. ಮೌಢ್ಯ ವಿರೋಧಿ ಕಾಯಿದೆ ತರಲು ಹೊರಟಿರುವ ನೀವು, ಇತ್ತೀಚೆಗೆ ಜಂಬೂ ಸವಾರಿ ದಿನವನ್ನು ಬದಲಾಯಿಸಿದ್ದು ಅದೇ ಜ್ಯೋತಿಷಿಗಳ ಸಲಹೆಯಿಂದ! ಈಗ ಮಾನವ ಕುಲದ ಅತ್ಯಂತ ಕರಾಳ ಅಧ್ಯಾಯದ ರೂವಾರಿಯಾದ ಪರಮ ಕ್ರೂರಿಯ ಜಯಂತಿಯನ್ನು ಸರಕಾರದಿಂದ ಆಚರಿಸುತ್ತೀರಿ.

ಹೀಗೇ ಆದರೆ ನಾಳೆ ನೀವು ಅಜ್ಮಲ್ ಕಸಬ್, ಅಫ್ಜಲ್ ಗುರು, ಸದ್ದಾಂ ಹುಸೇನ್ ಮುಂತಾದವರ ಜಯಂತಿಯನ್ನೂ ಆಚರಿಸುವುದಿಲ್ಲವೆನ್ನುವ ಖಾತರಿಯೇನು? ಅವರೆಲ್ಲಾ ತಮ್ಮ ಜೀವವನ್ನೇ ಅರ್ಪಿಸಿದವರಲ್ಲವೆ ಸರ್? ಅಷ್ಟೇ ಏಕೆ, ಇತ್ತೀಚೆಗೆ ಮಂಗಳೂರಿನ ಜೈಲಿನಲ್ಲಿ ಸತ್ತ ಕುಖ್ಯಾತ ರೌಡಿ ಮಾಡೂರು ಇಸುಬು ಕೂಡಾ ಹುತಾತ್ಮನೆಂದು ಆತನಿಗೂ ಸಂತ ಪಟ್ಟ ಕಟ್ಟಿದರೂ ಆಶ್ಚರ್ಯವಿಲ್ಲ! ದಾವೂದ್ ಇಬ್ರಾಹಿಂ ಕೂಡ ನಿಮಗೆ ಪ್ರಿಯನಾಗುವ ದಿನಗಳು ದೂರವಿಲ್ಲ! ಅಲ್ಲವೆ?

ಸಿದ್ಧರಾಮಯ್ಯನವರೆ, ಹೇಗೂ ಮುಖ್ಯಮಂತ್ರಿಯಾದಿರಿ. ಮಾಜಿಯಾಗುವ ಮುನ್ನ ನಾಡಿನ ಎಲ್ಲಾ ಜನರಿಗೆ ಒಳಿತು ಮಾಡುವ ಕಾರ್ಯ ಮಾಡಿ. ಅದು ಬಿಟ್ಟು ರಾಜ್ಯದಲ್ಲಿ ಅಶಾಂತಿ, ವೈಮನಸ್ಸು ಮೂಡಿಸುವ ಇಂತಹ ಕೆಲಸಗಳನ್ನು ದಯವಿಟ್ಟು ನಿಲ್ಲಿಸಿ. ಖಾಸಗಿಯಾಗಿ ನೀವು ಏನೇ ಮಾಡಿ. ಆದರೆ ನೀವೀಗ ಒಂದು ಸರಕಾರದ ಮುಖ್ಯಸ್ಥ. ಎಲ್ಲರಿಗೂ ನೀವು ಮುಖ್ಯಮಂತ್ರಿ.

ಇಂದೇನೋ ನೀವು ಟಿಪ್ಪುವಿನ ಹೆಸರಿನಲ್ಲಿ ತಪ್ಪಾಗಿ ಜಯಂತಿ ಆಚರಿಸಿದ್ದೀರಿ. ನಿಮಗೆ ಸಂತೋಷವಾಗಿರಬಹುದು. ಇಂದಿಗೇ ಅದನ್ನು ನಿಲ್ಲಿಸಿ. ನಿಮ್ಮ ಹೆಸರು ಅಜರಾಮರವಾಗುಳಿಯಲು ಕೈಗೊಳ್ಳಬಹುದಾದ ಕಾರ್ಯಕ್ರಮಗಳಿಗೆ ನಿಮಗೆ ಸಾಕಷ್ಟು ಸಮಯವಿದೆ. ಇಂತಹ ನೀಚ ಕೃತ್ಯಗಳಿಗೆ ನೀವು ಕಾರಣರಾಗಿದ್ದೀರೆಂಬ ಕಳಂಕ ಹೊತ್ತುಕೊಳ್ಳಬೇಡಿ. ನಿಮ್ಮ ಒಳಿತಿಗೇ ಹೇಳುತ್ತಿದ್ದೇನೆ.

ಸಿದ್ಧರಾಮಯ್ಯನವರೇ, ನೀವು ಬೇಕಾದರೆ ಕಾಂಗ್ರೆಸ್ಸನ್ನು ಮುಗಿಸಿಬಿಡಿ. ಆದರೆ ಕನ್ನಡ ನಾಡಿನ ಸೌಹಾರ್ದತೆ, ಶಾಂತಿಯನ್ನು ಕದಡಿಸಿ ಸುಖಪಡುವ ವಿಕೃತತೆಯನ್ನು ಮಾಡಬೇಡಿ. ಕೋಮು ವಿಚಾರಗಳನ್ನೇ ಕೆರಳಿಸಿ ರಾಜಕೀಯ ಲಾಭ ಪಡೆಯುವ ಬಿಜೆಪಿಗೂ ನಿಮಗೂ ವ್ಯತ್ಯಾಸವಿಲ್ಲವೆ? ಇದೀಗಷ್ಟೇ ಬಿಹಾರದ ಮತದಾರರು ಇವೆಲ್ಲದಕ್ಕೂ ಅಂಜಿಕೆಯಿಲ್ಲದೆ ಒದೆ ಕೊಟ್ಟದ್ದು ನಿಮ್ಮ ಕಣ್ಣ ಮುಂದೆ ಇದೆ. ಜನರಿಗೆ ಅಗತ್ಯವಾದ ಬಹಳಷ್ಟು ಸಂಗತಿಗಳಿವೆ. ಅವುಗಳನ್ನು ನೋಡಿಕೊಳ್ಳಿ. ಇಂತಹ ಅಪದ್ಧಗಳನ್ನು ದಯವಿಟ್ಟು ಕೈಬಿಡಿ.

ನಾಡಿಗೆ ಒಳ್ಳೆಯದನ್ನಷ್ಟೇ ಮಾಡುವ ಮನಸ್ಸು ನಿಮ್ಮದಾಗಲಿ ಎಂದು ಬಯಸುತ್ತೇನೆ.

ಧನ್ಯವಾದಗಳು.

ವಂದನೆಗಳೊಂದಿಗೆ,

ಡೊನಾಲ್ಡ್ ಪಿರೇರಾ
ಸಂಪಾದಕ – ಬುಡ್ಕುಲೊ ಇ-ಮ್ಯಾಗಜಿನ್

Feedback: budkuloepaper@gmail.com

Like our Facebook Page: www.facebook.com/budkulo.epaper

3 comments

Leave a comment

Your email address will not be published. Required fields are marked *

Latest News