ಕ್ರೈಸ್ತರು ಜತೆಗೂಡಿದ್ದು ಪ್ರಾರ್ಥಿಸಲು, ಸ್ವರಕ್ಷಣೆಗಾಗಿ; ಹಲ್ಲೆ ಮಾಡುವುಕ್ಕಲ್ಲ
ಈಗಲೂ ಕೂಡ ಬಹಳ ಜನರು, ಅದರಲ್ಲೂ ಬಿಜೆಪಿ ಬೆಂಬಲಿಗರು ಮತ್ತು ಮೋದಿ ಭಕ್ತರು 2008ರ ಚರ್ಚ್ ದಾಳಿ ಸಂದರ್ಭ ಮಂಗಳೂರಿನ ಕ್ರೈಸ್ತರು ಗೂಂಡಾಗಳಂತೆ ವರ್ತಿಸಿದ್ದರು, ಕಾನೂನು ಕೈಗೆ ತೆಗೆದುಕೊಂಡಿದ್ದರು, ಚರ್ಚುಗಳಲ್ಲಿ ಮಾರಕಾಸ್ತ್ರಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು ಮುಂತಾಗಿ ಆರೋಪಿಸುತ್ತಾರೆ, ದೂರುತ್ತಾರೆ. ಡಿವೈಎಸ್ಪಿ ಎಂ.ಕೆ. ಗಣಪತಿ ಸಾವಿನ ನಂತರ ಮತ್ತೆ ಕೆದಕಲ್ಪಟ್ಟ ಚರ್ಚ್ ದಾಳಿ ಪ್ರಕರಣ ಈ ಅಪಪ್ರಚಾರವನ್ನು ಮತ್ತಷ್ಟು ತಾರಕಕ್ಕೇರಿಸಿದೆ. ಕ್ರೈಸ್ತರೇ ಮೊದಲು ದುಂಡಾವರ್ತನೆ ನಡೆಸಿದ್ದರು, ಚರ್ಚುಗಳಲ್ಲಿ ಗುಂಪುಗೂಡಿ ಉಗ್ರಗಾಮಿಗಳಂತೆ ಆಕ್ರಮಣ, ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ತಮಗನಿಸಿದಂತೆ ಆರೋಪಿಸುತ್ತಿದ್ದಾರೆ.
ಹಾಗಾದರೆ, ಕ್ರೈಸ್ತರು ಹಾಗೆ ವರ್ತಿಸಿದ್ದು ನಿಜವೆ? ಯಾವತ್ತೂ ಬೀದಿಗಿಳಿಯದೆ ಶಾಂತಿಪ್ರಿಯರಾಗಿದ್ದ, ಶಿಸ್ತಿಗೆ ಹೆಸರಾಗಿದ್ದ ಕ್ರೈಸ್ತರೆಲ್ಲಾ ಒಂದುಗೂಡಿ ಅಂದು ಕಾನೂನು ಕೈಗೆ ತೆಗೆದುಕೊಂಡರೆ? ಅದು ಹೌದಾದರೆ ಯಾಕೆ ಎಂಬುದನ್ನು ಬಗೆಹರಿಸಲೇಬೇಕಾಗಿದೆ.
ಅಂದು ಅಥವಾ ಇಂದು ಈ ರೀತಿ ಆರೋಪಿಸುವವರನ್ನು ನೀವು ಹೇಳುತ್ತಿರುವುದು ತಪ್ಪು ಎಂದು ಖಡಾಖಂಡಿತ ಹೇಳುವಂತೆಯೂ ಇಲ್ಲ. ಯಾಕೆಂದರೆ, ಅವರು ಹಾಗೆ ಹೇಳುವುದಕ್ಕೆ ಅವರ ಬಳಿ ಕೆಲವು ಪುರಾವೆಗಳಿವೆ. ಮೇಲ್ನೋಟದ ಸಾಕ್ಷ್ಯಾಧಾರಗಳನ್ನು ಪರಿಗಣಿಸಿದರೆ ಅವರು ಹೇಳುವುದು ಸರಿಯಾಗಿಯೇ ಇದೆ ಎಂಬ ತೀರ್ಮಾನಕ್ಕೆ ಬರಬಹುದು ಕೂಡ.
ಏನಂತಹಾ ಪುರಾವೆ, ಆಧಾರಗಳೆನ್ನುತ್ತೀರಾ? ಸಿಂಪಲ್.
ಮಾಧ್ಯಮಗಳಲ್ಲಿ ಹರಿದಾಡಿದ ಅಂದಿನ ಘಟನೆಗಳ ಸಾವಿರಾರು ಫೊಟೊ, ವೀಡಿಯೊಗಳಲ್ಲಿ ಕೆಲ ಕ್ರೈಸ್ತ ಯುವಕರು ಪೊಲೀಸರ ವಾಹನಗಳನ್ನು ಜಖಂಗೊಳಿಸಿದ, ಕೈಗಳಲ್ಲಿ ಕಲ್ಲು ತೆಗೆದುಕೊಂಡು ನಿಂತಿರುವ ಅಥವಾ ಎಸೆಯುತ್ತಿರುವ, ರಸ್ತೆಯಲ್ಲಿ, ಚರ್ಚುಗಳ ಸುತ್ತ ಮುತ್ತ ಕಲ್ಲುಗಳ ರಾಶಿ ಕಾಣುವಂತಹ ದೃಶ್ಯಗಳೂ ಇದ್ದವು. ಭಾನುವಾರದ ಘಟನೆಯಲ್ಲಿ ಪೊಲೀಸರು ತಮ್ಮ ಪ್ರಾಣ ರಕ್ಷಣೆಗಾಗಿ ಓಡುತ್ತಿರುವ ದೃಶ್ಯಾವಳಿಗಳಂತೂ ತುಂಬಾ ಮೈಲೇಜ್ ಪಡೆದುಕೊಂಡವು.
ಮತ್ತು ಮುಖ್ಯವಾಗಿ ಮಾಧ್ಯಮಗಳೆಲ್ಲಾ ಒಮ್ಮಿಂದೊಮ್ಮೆಲೆ ಇದನ್ನೇ ಅಜೆಂಡಾವನ್ನಾಗಿಸಿದಂತೆ, ಇಂತಹ ದೃಶ್ಯ, ಚಿತ್ರಗಳನ್ನೇ ಮೇಲಿಂದ ಮೇಲೆ ಪ್ರದರ್ಶಿಸಿ ನಾಡಿನ, ಪ್ರಪಂಚದ ಜನರಿಗೆಲ್ಲಾ ತಾವು ತೋರಿಸಿದ್ದಷ್ಟೇ ನಿಜವಾಗಿ ನಡೆದಿದ್ದು, ತಾವು ಏನು ಪ್ರಸಾರ ಮಾಡುತ್ತಿದ್ದೇವೆ, ಪ್ರಚಾರ ಕೊಡುತ್ತಿದ್ದೇವೆ ಅಷ್ಟು ಮಾತ್ರವೇ ಸತ್ಯ ಎಂಬಂತೆ ಬಿಂಬಿಸಿದವು. ಕೇವಲ ಟಿವಿ ಚಾನೆಲ್‍ಗಳಷ್ಟೇ ಅಲ್ಲದೆ ಪ್ರಮುಖ ಪತ್ರಿಕೆಗಳೂ, ಅದರಲ್ಲೂ ಮಂಗಳೂರು ಆವೃತ್ತಿಗಳಲ್ಲೂ ಇದು ನಿರಂತರವಾಗಿ ನಡೆಯಿತು.
ವಾಸ್ತವವನ್ನು ಅರಿತಿದ್ದ, ಕಣ್ಣಾರೆ ಕಂಡಿದ್ದ, ನಿಜ ಸಂಗತಿ ತಿಳಿದಿದ್ದ ಕೆಲವರಿಗೆ ಬಿಟ್ಟರೆ, ಮೇಲಿಂದ ಮೇಲೆ ಈ ವರದಿ, ಪ್ರಸಾರವನ್ನೇ ನೋಡಿದ್ದ, ನಂಬಿದ ಜನರಿಗೆಲ್ಲಾ ಕ್ರೈಸ್ತರು ಬಹಳ ದೊಡ್ಡ ಅಪರಾಧ ಮಾಡಿದರು, ಪೊಲೀಸರಿಗೆ ಹೊಡೆದದ್ದು, ಕಾನೂನು ಕೈಗೆ ತೆಗೆದುಕೊಂಡಿದ್ದು, ಚರ್ಚುಗಳನ್ನು ಭಯೋತ್ಪಾದಕರಂತೆ ಅಡಗುತಾಣಗಳನ್ನಾಗಿ ಬಳಸಿದ್ದು, ಬಾಟಲಿ, ಕಲ್ಲುಗಳನ್ನು ಸಂಗ್ರಹಿಸಿಟ್ಟದ್ದು ಇತ್ಯಾದಿಯನ್ನೆಲ್ಲಾ ಅಕ್ರಮ, ಅನೈತಿಕ, ಮಹಾಪರಾಧವೆಂದು ಪರಿಗಣಿಸಿದರು. ಇಷ್ಟೆಲ್ಲಾ ಪುಂಡಾಡ, ರಾದ್ಧಾಂತ ಸೃಷ್ಟಿಸಿದ, ಗಲಭೆ ನಡೆಸಿದ ಕ್ರೈಸ್ತರನ್ನು ಪೊಲೀಸರು ಲಾಠಿ ಬೀಸಿ ಹೊಡೆದಿದ್ದರಲ್ಲಿ, ಬಂಧಿಸಿ ಜೈಲಿಗಟ್ಟಿದ್ದರಲ್ಲಿ ಯಾವುದೇ ತಪ್ಪಿಲ್ಲ, ಅಲ್ಪಸಂಖ್ಯಾತರೆಂದಾಕ್ಷಣ ಏನೇನು ಮಾಡಬಹುದೇ, ಅವರಿಗೆ ಸರಿಯಾಗಿ ಬುದ್ಧಿ ಕಲಿಸಲೇಬೇಕು ಎಂಬಂತೆ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರದೂ ತಪ್ಪಿಲ್ಲ ಬಿಡಿ. ಊರಿನ, ದೇಶದ ಜನರೆಲ್ಲಾ ಎಲ್ಲೋ ಒಂದೆಡೆ ನಡೆದ ಘಟನೆಗಳ ಸತ್ಯಾಸತ್ಯತೆ ತಿಳಿದುಕೊಳ್ಳಲು, ತನಿಖೆ ನಡೆಸಲು ಹೋಗುತ್ತಾರಾ? ಇಲ್ಲವಲ್ಲ!
ಈ ವರದಿ, ಚಿತ್ರ, ವೀಡಿಯೋಗಳನ್ನೆಲ್ಲಾ ನೋಡಿದ ಬೇರೆಯವರು ಬಿಡಿ, ಸ್ವತಃ ಬಹಳಷ್ಟು ಕ್ರೈಸ್ತರೇ, ತಮ್ಮ ಜನರು ಈ ರೀತಿ ನಡೆದುಕೊಂಡಿದ್ದು ಸರಿಯಲ್ಲ, ಆ ರೀತಿ ಪುಂಡಾಟಿಕೆ ನಡೆಸಿದ್ದು, ಹಿಂಸಾತ್ಮಕವಾಗಿ ವರ್ತಿಸಿದ್ದು ತಪ್ಪು, ಆ ರೀತಿ ಅವರು ನಡೆದುಕೊಂಡು ಕ್ರೈಸ್ತರಿಗೆ ಕೆಟ್ಟ ಹೆಸರು ತಂದುಕೊಂಡರು ಎಂದೇ ಠೀಕಿಸಲಾರಂಭಿಸಿದ್ದರು.
ದೃಶ್ಯಂ!
Visuals can be deceiving!
ಕಳೆದ ವರ್ಷ ಈ ಹೆಸರಿನ ಚಿತ್ರ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿ ಭಾರೀ ಸದ್ದು ಮಾಡಿತ್ತು. ಅತ್ಯದ್ಭುತವೆನ್ನುವ ಕಥೆ, ಚಿತ್ರಕಥೆಯನ್ನೊಳಗೊಂಡ ಈ ಚಿತ್ರ ಮಲಯಾಳಂನಲ್ಲಿ ಬಂದಿತ್ತು. ನಂತರ ಕನ್ನಡದಲ್ಲೂ ‘ದೃಶ್ಯ’ ಹೆಸರಿನಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸನ್ನು ಕಂಡಿತ್ತು. ಈ ಚಿತ್ರದ ಟೈಟಲ್ ಇಟ್ಟಿರುವ ಮರ್ಮವೇನು ಎಂದು ನನಗೆ ಚಿತ್ರ ನೋಡುತ್ತಿದ್ದಾಗ ಅನ್ನಿಸಿದ್ದಿದೆ.
ಹೌದು, ದೃಶ್ಯ. ದೃಶ್ಯಗಳು! ಅವು ಜನರ ಮನಸ್ಸನ್ನು ಆಕ್ರಮಿಸಿ ನಂಬುವಂತೆ ಮಾಡುತ್ತವೆ.
ಆ ಚಿತ್ರವನ್ನು ನೋಡಿದ್ದೀರಾದರೆ ನಿಮಗೆ ನೆನಪಿರಬಹುದು. ಚಿತ್ರದ ನಾಯಕ ತನ್ನ ಮಗಳಿಂದಾದ ಒಂದು ಅಕೃತ್ಯವನ್ನು ಮರೆ ಮಾಚಲು, ಅವಳನ್ನು ರಕ್ಷಿಸಲು ಪ್ರಯತ್ನಿಸುತ್ತಾ ಹಲವಾರು ದೃಶ್ಯಾವಳಿಗಳನ್ನು ಸೃಷ್ಟಿಸುತ್ತಾನೆ. ಪೊಲೀಸ್ ಅಧಿಕಾರಿಯಾದ, ಹಾಗೆ ಕಣ್ಮರೆಯಾದ ತನ್ನ ಮಗನನ್ನು ಹುಡುಕುವ ಮಹಿಳೆ ತನಿಖೆ, ವಿಚಾರಣೆ ನಡೆಸುತ್ತಾ ಇದನ್ನು ಕಂಡುಕೊಳ್ಳುತ್ತಾಳೆ. ಹುಡುಗಿಯ ತಂದೆ ಜನರನ್ನು ತಾನು ಪ್ರತಿಪಾದಿಸುವ ಸಂಗತಿಯನ್ನು ಮೇಲಿಂದ ಮೇಲೆ ಹೇಳಿಕೊಳ್ಳುತ್ತಾ, ಅವರು ತಾವು ನೋಡಿರದೇ ಇದ್ದ ಘಟನೆ, ಸಂಗತಿಗಳನ್ನು ತಾವೇ ಕಣ್ಣಾರೆ ನೋಡಿದಂತೆ, ಭಾಗವಹಿಸಿದಂತೆ ನಂಬುತ್ತಾರೆ, ಸಾಕ್ಷ್ಯದ ಹೇಳಿಕೆ ಕೊಡುತ್ತಾರೆ.
ಇದೇ ಲಾಜಿಕ್, ಮಂಗಳೂರಿನ ಚರ್ಚ್ ದಾಳಿ ಪ್ರಕರಣದಲ್ಲೂ ಕೆಲಸ ಮಾಡಿದೆ. ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ ಜನರಿಗೆ ಅದು ಸತ್ಯವಾಗಿ ಗೋಚರಿಸುತ್ತದೆ ಎನ್ನುತ್ತಾರಲ್ಲಾ ಹಾಗೆ. ಹೇಳಿ ಕೇಳಿ ಬಿಜೆಪಿ ಎಂಬ ಮಹಾನ್ ದೇಶ ಭಕ್ತ ಪಕ್ಷದ ಮುಖಂಡರ ಮತ್ತು ಅದರ ಅನುಯಾಯಿಗಳಿಗೆ ಈ ತತ್ವ ತುಂಬಾ ಪ್ರಿಯವಾದದ್ದು. ಯಾವುದೇ ಬಂಡವಾಳ ಇಲ್ಲದಿದ್ದರೂ ಇಂತಹ ತತ್ವದಡಿಯೇ ಅವರು ಏನೇನನ್ನೂ ಸಾಧಿಸಿ ಬಿಡುವಂತಹ ನಿಸ್ಸೀಮರು.
ಇಲ್ಲೂ ಆಗಿದ್ದು ಅದೇ. ಚರ್ಚ್ ದಾಳಿ ಪ್ರಕರಣದ ವಿಷಯ ಬರುವಾಗ, ಅದರಲ್ಲೂ ಚರ್ಚ್ ದಾಳಿ ಸಂದರ್ಭ ಕ್ರೈಸ್ತರ ಮೇಲೆ ಅಕ್ರಮ ನಡೆಸಿ ಕ್ರೈಸ್ತರಿಗೆ ಖಳನಾಯಕನಾಗಿದ್ದ, ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಅಧಿಕಾರಿ ಎಂ.ಕೆ. ಗಣಪತಿಯನ್ನು ಹೀರೋ ಮಾಡುವ ಕೈಂಕರ್ಯದಲ್ಲಿ ವ್ಯಸ್ತವಾಗಿರುವ ಒಂದು ವರ್ಗ, ಅಂದು ಕ್ರೈಸ್ತರು ಗೂಂಡಾಗಳಂತೆ ವರ್ತಿಸಿದ್ದರಿಂದಲೇ ಅಷ್ಟೆಲ್ಲಾ ನಡೆದಿದ್ದು, ತಪ್ಪೆಲ್ಲಾ ಕ್ರೈಸ್ತರದ್ದೇ ಎಂದು ವಾದಿಸುತ್ತಾರೆ. ಗಣಪತಿಯವರು ನಡೆದುಕೊಂಡ ರೀತಿ, ಕ್ರೈಸ್ತರ ಮೇಲೆ ಕೈಗೊಂಡ ಕ್ರಮ ಸರಿಯಾಗಿತ್ತು ಎಂದು ಬೊಬ್ಬಿಡುತ್ತಿದ್ದಾರೆ.
ಅವರಿಗೆ ಸತ್ಯ ಸಂಗತಿಯ ಅಗತ್ಯವೇ ಇಲ್ಲ. ಅವರಿಗೆ ತಮ್ಮ ವಾದವೇ ಸರಿ, ತಾವು ಏನು ಹೇಳುತ್ತೇವೆ ಅದೇ ಅಂತಿಮವೆಂಬ ಪೊಗರು. ಇನ್ನೊಬ್ಬರಿಗೆ ಹೇಳುವುದಕ್ಕೂ ಯಾವುದೇ ಹಕ್ಕು ಇಲ್ಲವೆಂಬಂತೆ ಅವರ ಧೋರಣೆ.
ಈಗ, ಆ ಭಾನುವಾರ ಸಂಜೆಯ ತನಕದ ಘಟನಾವಳಿಗಳನ್ನು ತಿಳಿದುಕೊಂಡ ಮೇಲೆ, ಅದರ ನಂತರ ಏನೇನಾಯಿತು ಎಂಬುದನ್ನು ತಿಳಿದುಕೊಳ್ಳೋಣ.
2008 ಸಪ್ಟೆಂಬರ್ 15ರ ಸೋಮವಾರದಂದು ಕಂಡ ಕಂಡ ಚರ್ಚುಗಳಿಗೆ ಪೊಲೀಸರು ನುಗ್ಗಿ, ಕ್ರೈಸ್ತರು ಭಯೋತ್ಪಾದಕರಂತೆ ದಾಳಿ ನಡೆಸಲು ಸಂಚು ನಡೆಸುತ್ತಿದ್ದರು, ಗುಂಪುಗೂಡಿ ಪೊಲೀಸರನ್ನು ಹೊಡೆಯಲು ಹವಣಿಸುತ್ತಿದ್ದರು ಎಂದೆಲ್ಲಾ ಹೇಳಿ ಅವರನ್ನು ಮೃಗೀಯವಾಗಿ ಹೊಡೆದಿದ್ದರಲ್ಲಾ, ಅದರ ಹಿಂದಿನ ಮರ್ಮವೇನು ಗೊತ್ತಾ?
ಅದೆಲ್ಲಾ ಕೇವಲ ಕಟ್ಟು ಕಥೆ. ತಾವು ಮಾಡಿದ ದಾಳಿಗಳನ್ನು ಮರೆ ಮಾಚಿಸಲು, ಕ್ರೈಸ್ತರೆಲ್ಲಾ ರೌಡಿಗಳೆಂಬಂತೆ ಬಿಂಬಿಸಲು ಕೆಲವರು ನಡೆಸಿದ ಸಂಚಿನ ಭಾಗ. ಬೇರೇನಲ್ಲ.
ನಿಜಕ್ಕೂ ನಡೆದದ್ದೇನೆಂದರೆ, 14ರ ಭಾನುವಾರ ಬೆಳಿಗ್ಗೆ ಎಡೋರೇಶನ್ ಮಿನಿಸ್ಟ್ರಿಯಲ್ಲಿ ನಡೆದ ಧ್ವಂಸ ಕಾರ್ಯ, ಅದನ್ನು ಖಂಡಿಸಿ ಜನರು ಮಿಲಾಗ್ರಿಸ್ ಬಳಿ ಜಮಾವಣೆಗೊಂಡಿದ್ದು, ಅಲ್ಲಿ ರಾಜಕೀಯ ಮುಖಂಡರು ಭಾಗವಹಿಸಿ ಕ್ರೈಸ್ತರ ಪ್ರತಿಭಟನೆಗೆ ರಾಜಕೀಯ ರಂಗು ಬರುವಂತೆ ಮಾಡಿದ್ದು ಮತ್ತು ಏಕಾಏಕಿ ಪೊಲೀಸರಿಂದ ಆಕ್ರಮಣ ನಡೆದದ್ದು, ಜನರು ಗಾಯಗೊಂಡಿದ್ದು – ಇವೆಲ್ಲಾ ಬೆಳವಣಿಗೆಗಳಿಂದ ಸಾಮಾನ್ಯ ಕ್ರೈಸ್ತ ಜನರೆಲ್ಲಾ ಭಯಭೀತಿಗೊಳಗಾಗಿ ಬಿಟ್ಟರು. ಸುದ್ದಿ ಮನೆ ಮನೆಗಳಿಗೆ ತಲುಪಿ ಭಕ್ತಾದಿಗಳಿಗೆ ತಮಗಿನ್ನು ಉಳಿಗಾಲವಿಲ್ಲವೆನ್ನುವ ಆತಂಕ ಮೂಡಿತು.
ಹೇಳಿ ಕೇಳಿ ಕರ್ನಾಟಕದಲ್ಲಿ ಅಧಿಕಾರಕ್ಕೇರಿದ ಬಿಜೆಪಿ ಸರಕಾರದ ಆಡಳಿತ ಆಗಷ್ಟೇ ಆರಂಭವಾಗಿತ್ತು. ಕೆಲ ಹಿಂದೂ ಸಂಘಟನೆಗಳು ನಡೆಸುತ್ತಿದ್ದ ಅನೈತಿಕ ಕೃತ್ಯ, ಗೂಂಡಾಗಿರಿಯ ವರ್ತನೆ ಮತ್ತು ದೇಶದಾದ್ಯಂತ ಅಲ್ಲಲ್ಲಿ ಚರ್ಚ್, ಪಾದ್ರಿ, ಸಿಸ್ಟರ್‍ಗಳ ಮೇಲಿನ ಹಲ್ಲೆ, ದಾಳಿಗಳನ್ನು ಕೇಳಿ, ನೋಡಿ ಚಿಂತಿತರಾಗಿದ್ದ ಕ್ರೈಸ್ತರಿಗೆ ಮಂಗಳೂರಿನಲ್ಲೂ ಈ ರೀತಿ ನಡೆದಿದೆಯೆಂಬುದನ್ನು ಅರಗಿಸಿಕೊಳ್ಳಲಾಗಲಿಲ್ಲ. ಅದಕ್ಕೆ ತಕ್ಕಂತೆ ಬಿಜೆಪಿ ಸರಕಾರ ಅಲ್ಪಸಂಖ್ಯಾತರನ್ನು ಮಟ್ಟ ಹಾಕುತ್ತದೆ, ಕ್ರೈಸ್ತರಿಗೆ ಉಳಿಗಾಲವಿಲ್ಲವೆಂಬ ಕೆಲವರ ವಾದ, ಪ್ರಚಾರದಿಂದ ಕ್ರೈಸ್ತರು ದಂಗುಬಡಿದು ಹೋಗಿದ್ದರು.
ಅದು ನಿಜವಾಗಿಯೇ ಬಿಟ್ಟಿತು ಎಂಬಂತೆ ಮಿಲಾಗ್ರಿಸ್ ಬಳಿ ಕಥೊಲಿಕರ ಪ್ರಾರ್ಥನಾ ಮಂದಿರದ ಮೇಲಿನ ದಾಳಿ ನಿರೂಪಿಸಿ ಬಿಟ್ಟಿತು.
ಕ್ರೈಸ್ತರಿಗೆ ಮರ್ಮಾಘಾತವಾಗಿದ್ದು, ತಮಗೆ ರಕ್ಷಣೆ ಕೊಡಬೇಕಾಗಿದ್ದ ಪೊಲೀಸರು, ಸಾಂತ್ವನ, ಪರಿಹಾರ ದೊರಕಿಸಬೇಕಿದ್ದ ಸರಕಾರ ಅದನ್ನೆಲ್ಲಾ ಮಾಡದೇ ತಮ್ಮ ಮೇಲೆಯೇ ಭೀಕರವಾಗಿ ಆಕ್ರಮಣ ಮಾಡಿ ದಮನಿಸಲು ಪ್ರಯತ್ನಿಸಿದ್ದು ಮತ್ತಷ್ಟು ಭೀತಿಗೊಳಪಡಿಸಿ ಬಿಟ್ಟಿತು.
ಸಂಜೆಯಾಗುವ ವೇಳೆಗೆ ಕ್ರೈಸ್ತರ ಮೊಬೈಲ್‍ಗಳಲ್ಲಿ ‘ಇದು ಸುಮ್ಮನೆ ಕೂರುವ ಸಮಯವಲ್ಲ. ನಮಗಿನ್ನು ಉಳಿಗಾಲವಿಲ್ಲ, ಬನ್ನಿ ನಮ್ಮ ರಕ್ಷಣೆ ನಾವೇ ಮಾಡೋಣ, ಚರ್ಚಿಗೆ ಬನ್ನಿ, ಪ್ರಾರ್ಥಿಸೋಣ, ದೇವರ ಕೃಪೆ ಬೇಡೋಣ, ನಮ್ಮ ದೇವಾಲಯಗಳನ್ನು ದುಷ್ಟರ ದಾಳಿಯಿಂದ ರಕ್ಷಿಸೋಣ’ ಎಂಬಂತಹ ಎಸ್ಸೆಮ್ಮೆಸ್ಸುಗಳು ಹರಿದಾಡಿದವು. ಪೊಲೀಸರೇ ತಮ್ಮ ಮೇಲೆ ರಾಕ್ಷಸರಂತೆ ಮುಗಿಬಿದ್ದ ಮೇಲೆ ಇನ್ಯಾರನ್ನು ನಂಬಬೇಕು ಎಂಬ ಅವರ ಗೊಂದಲ, ಸಂಶಯ, ಭೀತಿಯು ಒಪ್ಪಿಕೊಳ್ಳುವಂಥದ್ದೇ ಅಲ್ಲವೆ?
ಹೀಗೆ ಸಂದೇಶಗಳು ಹರಿದಾಡಿ ಕ್ರೈಸ್ತರೆಲ್ಲಾ ತಮ್ಮ ತಮ್ಮ ಚರ್ಚುಗಳಲ್ಲಿ ಒಂದುಗೂಡಲಾರಂಭಿಸಿದ್ದರು. ಕ್ರೈಸ್ತರಿಗೆ ಒಂದುಗೂಡಲು, ಸಭೆ ಸೇರಲು ಇರುವುದೇ ಚರ್ಚಿನ ಅಂಗಳ. ಬೆಳಿಗ್ಗೆ ಶಿಲುಬೆಯ ಮೇಲಿನ ಕ್ರಿಸ್ತನ (ಕ್ರುಸಿಫಿಕ್ಸ್) ಕೈ ಕಾಲು ಮುರಿದ, ಪರಮ ಪ್ರಸಾದವನ್ನು ನೆಲಕ್ಕೆ ಚೆಲ್ಲಿದ, ಆನೆಯೋ, ಘೇಂಡಾಮೃಗವೋ ದಾಳಿಗೈದು ಪುಡಿ ಮಾಡಿದಂತೆ ಮುರಿದು, ಚೆಲ್ಲಾಪಿಲ್ಲಿ ಮಾಡಲ್ಪಟ್ಟ ಪ್ರಾರ್ಥನಾ ಮಂದಿರದ ದೃಶ್ಯಾವಳಿಗಳು ಅವರ ಕಣ್ಣ ಮುಂದೆ, ಮನಸ್ಸಿನಲ್ಲಿ ಮೆರವಣಿಗೆಯಂತೆ ಹರಿದಾಡುತ್ತಿದ್ದವು. ಅದವರ ಭೀತಿಯನ್ನು ಇಮ್ಮಡಿಗೊಳಿಸುತ್ತಿತ್ತು.
ನಿಮಗೆ ಇನ್ನೊಂದು ಪ್ರಮುಖ ವಿಚಾರ ಹೇಳಲೇಬೇಕು.
ಅಂದಿಗೆ ಎರಡೂ ಕಾಲು ಶತಮಾನದ ಹಿಂದೆ, 1784ರಲ್ಲಿ ಇದೇ ರೀತಿ ಕ್ರೈಸ್ತರ ದಮನ ಕಾರ್ಯ ನಡೆದಿತ್ತು. ಪರಮ ರಣಹೇಡಿ ಟಿಪ್ಪು ಸುಲ್ತಾನ್ ಎಂಬ, ಕ್ರೌರ್ಯತೆಗೆ ಪರ್ಯಾಯವೆಂಬಂತಿದ್ದ ಮೈಸೂರಿನ ದೊರೆಯೊಬ್ಬ ಕರಾವಳಿಯ ಕ್ರೈಸ್ತರನ್ನು ಮುಗಿಸಲು ಪಣ ತೊಟ್ಟು ಅವರನ್ನು ಸದೆಬಡಿಯಲು ತನ್ನ ಕ್ರೂರ ಸೈನಿಕರನ್ನು ಕಳುಹಿಸಿದ್ದ. ಅಂದೂ ಸಹ ಪ್ರಾರ್ಥನೆಗೆಂದು ಸೇರಿದ್ದ ಕ್ರೈಸ್ತರನ್ನು, ಮಹಿಳೆಯರು, ಮಕ್ಕಳು, ವೃದ್ಧರು, ಗರ್ಭಿಣಿಯರೆಂದು ಸಹ ನೋಡದೇ ಅಮಾನವೀಯವಾಗಿ ಬಂಧಿಸಿ, ಶ್ರೀಗಂಗಪಟ್ಟಣಕ್ಕೆ ಮೃಗೀಯವಾಗಿ ನಡೆಸಿಕೊಂಡು ಹೋಗುವ ಯೋಜನೆ ಜಾರಿಗೊಂಡಿತ್ತು.
(ಈ ಬಗ್ಗೆಯೂ ಒಂದು ತಪ್ಪು ಆರೋಪ ಕ್ರೈಸ್ತರ ಮೇಲಿದೆ. ಕ್ರೈಸ್ತರು ಬ್ರಿಟಿಷರನ್ನು ಬೆಂಬಲಿಸಿದ್ದರಿಂದ ಕೋಪಗೊಂಡ ಟಿಪ್ಪು ರಾಜದ್ರೋಹದ ಕೃತ್ಯಕ್ಕೆ ಕ್ರೈಸ್ತರನ್ನು ಶಿಕ್ಷಿಸಿದ್ದು ಸರಿ ಎಂದು ವಾದಿಸುವವರಿದ್ದಾರೆ. ಮೊತ್ತ ಮೊದಲು, ಆ ಆರೋಪ ಇದುವರೆಗೂ ಸಾಬೀತಾಗಿಲ್ಲ. ಕೆಲವು ಶ್ರೀಮಂತ ಕುಟುಂದವರು ಬ್ರಿಟಿಷರಿಗೆ ನೆರವಾಗಿದ್ದೇ ಹೌದಾಗಿದ್ದರೂ ಅವರನ್ನು ಹಿಡಿದು ಶಿಕ್ಷಿಸುವುದು ಬಿಟ್ಟು ನಾಡಿನಾದ್ಯಂತದ ಎಲ್ಲಾ ಕ್ರೈಸ್ತರ ಮೇಲೆ ಹಗೆ ಸಾಧಿಸಿ, ಶಿಕ್ಷಿಸಿದ್ದು ಟಿಪ್ಪು ಎಂತಹ ದುರುಳ ಮತ್ತು ವಿಕೃತ ರಣಹೇಡಿ ಎಂಬುದನ್ನಷ್ಟೇ ರುಜುವಾತುಪಡಿಸುತ್ತದೆ).
ಕೆನರಾದ ಕ್ರೈಸ್ತರ ಚರಿತ್ರೆಯ ಅತಿ ಕರಾಳ ಅಧ್ಯಾಯವದು. ರಾಕ್ಷಸೀ ಬುದ್ಧಿಯ ಟಿಪ್ಪುವಿನಿಂದಾಗಿ ಆ ದಿನ ಸಾವಿರಾರು ಕ್ರೈಸ್ತರು ಹತರಾಗಿದ್ದರು. ಸಾವಿರಗಟ್ಟಲೆ ಜನರನ್ನು ಭೀಕರ ಹಿಂಸೆ ನೀಡಿ, ಬಂಧಿಸಿ ಕೂಡಿ ಹಾಕಲಾಗಿತ್ತು. ಅದರ ಚರಿತ್ರೆ ತುಂಬಾ ದೊಡ್ಡದು. ಟಿಪ್ಪುವಿನ ಕರಾಳ ಮುಖ, ಆತ ಎಷ್ಟು ಭೀಕರ ಹಿಂಸಾಗ್ರಸ್ತ ಮನಸ್ಸಿನವನು ಎಂಬುದನ್ನು ಸಾಬೀತು ಪಡಿಸಿದ ಹಲವು ದೃಷ್ಟಾಂತಗಳಲ್ಲಿ ಇದೂ ಒಂದು.
ಆ ದುರಂತ ಅಧ್ಯಾಯದ ನೆನಪೂ ಸಹ ಮರುಕಳಿಸಿ ಕ್ರೈಸ್ತರು ಸಂಪೂರ್ಣ ನಿಸ್ತೇಜರಾಗಿ ಬಿಟ್ಟರು. ಮುಂದೇನು ನಡೆದೀತೋ ಎಂಬ ಭಯ, ಚಿಂತೆ ಅವರನ್ನು ಆವರಿಸಿ ಬಿಟ್ಟಿತು.
ಹೇಳಿ ಕೇಳಿ ಕ್ರೈಸ್ತರಿಗೆ ಒಬ್ಬ ನಾಯಕನೂ ಸಹ ಇರಲಿಲ್ಲ. ಆಡಳಿತ ನಡೆಸುವ ಬಿಜೆಪಿಯಲ್ಲಂತೂ ಹೇಗೂ ಕ್ರಿಶ್ಚಿಯನ್ ನಾಯಕರಿರಲಿಲ್ಲ. ತಮ್ಮದೇ ಪಕ್ಷವೆಂದು ನಂಬಿಕೊಂಡಿದ್ದ ಕಾಂಗ್ರೆಸ್ಸಿನಲ್ಲೂ ಜನನಾಯಕನೆಂಬಂತಹ ಕ್ರೈಸ್ತ ಮುಖಂಡರೂ ಇರಲಿಲ್ಲ. ಸಚಿವರಾಗಿದ್ದ ಬ್ಲೇಸಿಯಸ್ ಡಿಸೋಜ ಕಾಲವಾಗಿದ್ದರು. ಅಳಿದೂರಿಗೆ ಉಳಿದವನೇ ಗೌಡ ಎಂಬಂತೆ, ಕಾಂಗ್ರೆಸ್ ಪಕ್ಷ ಸೇರಿದ್ದ ಐವನ್ ಡಿಸೋಜರಿಗೆ ತಾನು ಮುಂದಿನ ಬಾರಿಯಾದರೂ ಎಂಎಲ್‍ಎ ಆಗಬೇಕೆಂಬ ಹಗಲುಗನಸು ಬಿಟ್ಟರೆ, ಜನರಿಗೆ ನಾಯಕತ್ವ ಕೊಡುವಂತಹ ಛಾತಿಯೂ ಇರಲಿಲ್ಲ, ಸಾಮಥ್ರ್ಯವೂ ಇರಲಿಲ್ಲ. ಅತ್ಯಂತ ಪ್ರಚಾರ ಪ್ರಿಯನೆಂದೇ ಕರೆಯಲ್ಪಡುವ ಐವನ್ ಡಿಸೋಜರಿಗೆ ತನ್ನ ನಾಯಕತ್ವ, ಜನರಿಗೆ ತನ್ನ ಯೋಗ್ಯತೆ, ಸಾಮಥ್ರ್ಯ ಸಾಬೀತು ಪಡಿಸುವ ಅವಕಾಶ ಒದಗಿ ಬಂದಿದ್ದರೂ ಅದನ್ನು ಹಾಳು ಮಾಡಿದ್ದಷ್ಟೇ ಅಲ್ಲ, ಕ್ರೈಸ್ತ ಜನಾಂಗಕ್ಕೆ ಕಪ್ಪು ಚುಕ್ಕೆಯಾಗುವಂತಹ ಅವಕಾಶಕ್ಕೆಡೆ ಮಾಡಿಕೊಟ್ಟಿದ್ದೇ ಅಂದಿನ ಅವರ ಮಹತ್ಸಾಧನೆ.
ಇದ್ದುದರಲ್ಲಿ ಅತಿರಥ ಮಹಾರಥ ಫುಡಾರಿಯೆಂದರೆ ಆಸ್ಕರ್ ಫೆರ್ನಾಂಡಿಸ್. ಹಲವು ಪ್ರಧಾನಿಗಳ ಆಪ್ತ, ಕಾಂಗ್ರೆಸ್ ಹೈಕಮಾಂಡಿನ ನಿಷ್ಠಾವಂತನಾಗಿ ಆಯಕಟ್ಟಿನ ಹುದ್ದೆ, ಅತಿ ಉನ್ನತ ಅಧಿಕಾರ ಸ್ಥಾನ, ಕೇಂದ್ರ ಸರಕಾರದಲ್ಲಿ ಸಚಿವನಾಗಿ ಕಾರ್ಯ ನಿರ್ವಹಿಸಿದ್ದ ಅವರಿಂದಾದರೂ ಆ ದಿನ ಕ್ರೈಸ್ತರಿಗೆ ಒಳಿತಾಗುವಂತಹದ್ದು ನಡೆಯಿತೆ? ಊಹೂಂ. ಏನೂ ಇಲ್ಲ!
ಹೌದು, ಜನರಿಗಲ್ಲದಿದ್ದರೂ ಮಂಗಳೂರಿನ ಪತ್ರಕರ್ತ, ಮಾಧ್ಯಮ ಪ್ರತಿನಿಧಿಗಳಿಗಂತೂ ಈಗಲೂ ನೆನಪಿದೆ. ಪತ್ರಕರ್ತರು ಚರ್ಚ್ ದಾಳಿಯ ಬಗ್ಗೆ, ಸಂಜೆ ಪೊಲೀಸರ ಅಶ್ರುವಾಯು ದಾಳಿ, ಲಾಠಿ ಚಾರ್ಜ್ ಬಗ್ಗೆ ಆಸ್ಕರ್ ಅವರನ್ನು ಕೇಳಿದರೆ ಉತ್ತರ ನೀಡಲೂ ಹಿಂಜರಿದಿದ್ದು ಅವರ ಮಹಾನ್ ನಾಯಕತ್ವ ಗುಣವನ್ನು ಸಾಬೀತುಪಡಿಸಿತು.
ಇನ್ನುಳಿದವರು ಮಾರ್ಗರೆಟ್ ಆಳ್ವ ಎಂಬ ಹೆಣ್ಣು ಮಗಳು.
ಮಹಿಳೆಯಾದ ಮಾರ್ಗರೆಟ್ ಆಳ್ವರವರು ಮಾತ್ರ ಗಂಡೆದೆಯವರಂತೆ ಆ ದಿನ ವರ್ತಿಸಿದ್ದು. ಬೇರೆಲ್ಲಾ ಕ್ರೈಸ್ತ ಫುಡಾರಿಗಳು ತಿಕ್ಕಲರಂತೆ ವರ್ತಿಸಿದರೆ, ಈ ಮಹಿಳಾ ನಾಯಕಿ ಮಾತ್ರ ದಿಟ್ಟವಾಗಿ ಚರ್ಚ್ ದಾಳಿಯನ್ನು ಖಂಡಿಸಿ ಹೇಳಿಕೆ ನೀಡಿದರು. ಮುಕ್ತವಾಗಿ, ನಿರ್ಭೀತಿಯಿಂದ ಮಾತನಾಡುವ ಮಾರ್ಗರೆಟ್ ಆಳ್ವ ಅಂದೂ ಸಹ ಬಿಜೆಪಿ ಸರಕಾರವನ್ನು ಜಾಡಿಸಿದರು.
ಆಸ್ಕರ್ ಫೆರ್ನಾಂಡಿಸ್ ಅವರಿಗೆ ತಾನು ಹೇಳಿಕೆ ನೀಡಿದರೆ ಎಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಜೊತೆಗಿನ ತನ್ನ ಸ್ನೇಹಕ್ಕೆ ತೊಂದರೆ ಆದೀತೆಂಬ ಅಳುಕಿತ್ತೇನೋ!
ಒಟ್ಟಾರೆಯಾಗಿ, ಕುರುಬನಿಲ್ಲದ ಕುರಿಮಂದೆಯಂತಾಗಿತ್ತು ದಕ್ಷಿಣ ಕನ್ನಡದ ಕಥೊಲಿಕ್ ಕ್ರೈಸ್ತರ ಪರಿಸ್ಥಿತಿ. ಅವರಿಗೆ ಕೊನೆಯ ಆಶ್ರಯವಾಗಿದ್ದು ಎಲ್ಲರೂ ಜೊತೆಗೂಡಿ ದೇವರನ್ನು ಪ್ರಾರ್ಥಿಸುವುದಷ್ಟೇ.
ಹಾಗಾಗಿ ಬಹಳಷ್ಟು ಕಥೊಲಿಕರು ಆ ಸಂಜೆ ತಮ್ಮ ಚರ್ಚ್‍ಗಳಲ್ಲಿ ನೆರೆದರು, ಪರಸ್ಪರ ಸಂತೈಸಿದರು ಮತ್ತು ದೇವರೇ ತಮ್ಮನ್ನು ಕಾಪಾಡಲಿ ಎಂದು ಪ್ರಾರ್ಥಿಸಲು, ಚರ್ಚಿಸಲು ಕುಳಿತರು.
ಆಗಿದ್ದು ಅಷ್ಟೆ. ಸರಕಾರದ ಆಡಳಿತದೊಂದಿಗೆ ಸಮನ್ವಯ ಸಾಧಿಸಲು ಕ್ರೈಸ್ತರಿಗೆ ಪ್ರಭಾವಶಾಲಿ ಪ್ರತಿನಿಧಿಗಳೂ ಇರಲಿಲ್ಲ. ಕ್ರೈಸ್ತರ ನೋವನ್ನು ಅರ್ಥ ಮಾಡಿಕೊಳ್ಳುವ ಸಹನೆ, ಮುತುವರ್ಜಿ ವಹಿಸುವ ರಾಜಕೀಯ ನಾಯಕ ಆಡಳಿತ ಪಕ್ಷದಲ್ಲೂ ಇರಲಿಲ್ಲ. ಜಿಲ್ಲಾಡಳಿತಕ್ಕೂ ಅದರ ಉಮೇದಿರಲಿಲ್ಲ. ಪೊಲೀಸರಿಗಂತು, ಮೊತ್ತ ಮೊದಲ ಬಾರಿಗೆ ತಮ್ಮನ್ನು ಹಿಮ್ಮೆಟ್ಟಿದ ಕ್ರೈಸ್ತರನ್ನು ಮಾಡು ಇಲ್ಲವೇ ಮಡಿ ಎಂಬಂತೆ ಹೆಡೆಮುರಿ ಕಟ್ಟಬೇಕು ಎಂಬ ಒಂದೇ ಗುರಿ.
ಸೆಕ್ಷನ್ 144 ಜಾರಿಯಾಗಿಯೇ ಬಿಟ್ಟಿತು. ಜಿಲ್ಲೆಯಲ್ಲಿ ನಿಷೇಧಾಜ್ಞೆ ವಿಧಿಸಿ ಆಜ್ಞೆ ಹೊರಡಿಸಲಾಯಿತು.
ಮರುದಿನ ಮತ್ತೊಂದು ಭೀಕರ ಅಧ್ಯಾಯ ನಡೆಯುವುದನ್ನು ನೋಡಲು ಸಮುದ್ರದಲ್ಲಿ ಮುಳುಗಿದ್ದ ಸೂರ್ಯ ವೇಗವಾಗಿ ಉದಯವಾಗುದಕ್ಕೋಸ್ಕರ ಚಡಪಡಿಸುತ್ತಿದ್ದ.
ಸೋಮವಾರ ನಡೆದೇ ಬಿಟ್ಟಿತು ಯಾರೂ ಕಂಡು ಕೇಳರಿಯದ ಘನ ಘೋರ ಘಟನೆ!
(ಅದು ಏನು, ಎಲ್ಲಿ, ಹೇಗೆ, ಯಾರಿಂದ ಎಂಬುದನ್ನು ನಾಳೆ ಓದಿ).
ಭಾಗ 1: ಚರ್ಚ್ ಎಟ್ಯಾಕ್: ಆ ದಿನ ಮಂಗಳೂರಿನ ಕ್ರೈಸ್ತರು ರೌಡಿಗಳಂತೆ ವರ್ತಿಸಿದ್ದರೇ?
ಭಾಗ 2: ಮೌನ ರೋದನಗೈಯುತ್ತಿದ್ದ ಕ್ರೈಸ್ತರನ್ನು ರೊಚ್ಚಿಗೆಬ್ಬಿಸಿದ್ದು ಯಾರು?
ಭಾಗ 3: ಮತಾಂತರವೆಂಬ ಮಿಥ್ಯಾರೋಪ ಮತ್ತು ಲೆಕ್ಕ ತಪ್ಪಿದ ಚರ್ಚ್ ದಾಳಿ
ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ನಮಗೆ ಕಳುಹಿಸಿ: budkuloepaper@gmail.com