ಯಕ್ಷಗಾನ, ಪತ್ರಕರ್ತರು, ‘ಚರ್ಚ್ ಹಾಲ್’, ಪ್ರೊಪಗಾಂಡಾ ಮತ್ತು ಕಾಮನ್‍ಸೆನ್ಸ್!
ಮಂಗಳೂರು: ಮೊತ್ತ ಮೊದಲಿಗೆ, ಮಂಗಳೂರಿನ ಪತ್ರಕರ್ತರಿಗೆ ಅಭಿನಂದನೆಗಳು. ಜನವರಿ 5ರಂದು ದ.ಕ. ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್ ಮತ್ತು ಪತ್ರಿಕಾ ಭವನ ಟ್ರಸ್ಟ್ ಜಂಟಿಯಾಗಿ ಆಯೋಜಿಸಿದ್ದ ಪ್ರೆಸ್ ಕ್ಲಬ್ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ವರ್ಷಂಪ್ರತಿ ನಡೆಯುವ ಒಂದು ಕಾರ್ಯಕ್ರಮದಂತೆ ನಡೆದು ಹೋಗಬೇಕಾಗಿತ್ತು. ಶಾಲಾ-ಕಾಲೇಜುಗಳಲ್ಲಿ ಸ್ಕೂಲ್ ಡೇ, ಕಾಲೇಜ್ ಡೇ ಇರುವಂತೆ ವರ್ಷವಿಡೀ ದುಡಿಯುವ ಪತ್ರಿಕಾ ವೃತ್ತಿಗಾರರಿಗೆ ಒಂದಷ್ಟು ಬಿಡುವು ದೊರಕಿಸಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ತಮ್ಮದೇ ಆದ ಒಂದು ದಿನವನ್ನು ಆಚರಿಸಲು ಈ ಸಂದರ್ಭವನ್ನು ಬಳಸಿಕೊಳ್ಳಲಾಗುತ್ತದೆ. ಇದು ನಿಜಕ್ಕೂ ಒಳ್ಳೆಯದೇ. ಬಿಡುವು, ವಿಶ್ರಾಂತಿ ಮತ್ತು ಮನರಂಜನೆ ಮನುಷ್ಯನಾದವನಿಗೆ ಅತ್ಯವಶ್ಯಕ. ಈ ಕಾರ್ಯಕ್ರಮದಲ್ಲಿ, ಕೊನೆಗೆ, ಯಕ್ಷಗಾನ ಪ್ರಸಂಗವನ್ನು ಆಡಿ ತೋರಿಸಲಾಯಿತು. ನಾನು ಅಭಿನಂದನೆ ಸಲ್ಲಿಸಿದ್ದು ಇದೇ ಕಾರಣಕ್ಕೆ – ಯಕ್ಷಗಾನ ಆಡಿ ತೋರಿಸುವ ಅವರ ಕಲಾಪ್ರೇಮ, ಬದ್ಧತೆಗಾಗಿ.
ವಿಪರ್ಯಾಸವೆಂದರೆ, ವ್ಯತಿರಿಕ್ತ ಕಾರಣ, ಉದ್ದೇಶಗಳಿಗಾಗಿ ಈ ಕಾರ್ಯಕ್ರಮದ, ನಿರ್ದಿಷ್ಟವಾಗಿ ಯಕ್ಷಗಾನದ ವಿಚಾರದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿ-ವರದಿಯಾಗುತ್ತಿದೆ. ಊರಿನಲ್ಲೆಲ್ಲಾ ನಡೆಯುವ ಸಂಗತಿಗಳನ್ನು ವರದಿ ಮಾಡುವ ಪತ್ರಕರ್ತರ ಸಂಭ್ರಮದ ಬಗ್ಗೆ ವರದಿಯಾಗುವುದರಲ್ಲಿ ತಪ್ಪೇನಿಲ್ಲ, ಖಂಡಿತಾ. ಆದರೆ ಇಲ್ಲಿ ವರದಿಯಾಗುತ್ತಿರುವುದು, ಪ್ರಚಾರ ನಡೆಯುತ್ತಿರುವುದು ಈ ಕಾರ್ಯಕ್ರಮದ ಬಗ್ಗೆ ಅಲ್ಲ, ಬದಲಾಗಿ, ಅಪಪ್ರಚಾರ ನಡೆಸಲು, ನಿರ್ದಿಷ್ಟ ಅಜೆಂಡಾವನ್ನು ಪ್ರಚುರಪಡಿಸಲು!
ಹೌದು. ಇಲ್ಲಿ ಯಕ್ಷಗಾನ ನಡೆದದ್ದು ಸುದ್ದಿಯಲ್ಲ. ಹಾಂ, ಮತ್ತೊಂದು ವಿಷಯ ಸ್ಪಷ್ಟಪಡಿಸುತ್ತಿದ್ದೇನೆ. ಈ ವಿಚಾರದಲ್ಲಿ ಭಯಂಕರ ಉತ್ಸಾಹದಿಂದ ಬೊಬ್ಬಿರಿಯುತ್ತಿರುವುದು ಪತ್ರಿಕೆಗಳಲ್ಲ ಅಥವಾ ಮಾಧ್ಯಮ ಸಮೂಹವಲ್ಲ ಅಥವಾ ಪತ್ರಕರ್ತರ ಸಂಘವಾಗಲೀ, ಪ್ರೆಸ್ ಕ್ಲಬ್ ಆಗಲೀ ಅಲ್ಲವೇ ಅಲ್ಲ. ಅದು ಕೇವಲ ಕೆಲವೇ ಬೆರಳೆಣಿಕೆಯ ಜನರ ಷಡ್ಯಂತ್ರ. ಇಂದಿನ ಯುಗದಲ್ಲಿ ಒಳ್ಳೆಯ ಸುದ್ದಿಗಿಂತ ಕೆಟ್ಟ, ಹಾನಿಕರ ಸುದ್ದಿಗಳಿಗೇ ಪ್ರಾಶಸ್ತ್ಯ! ಅವುಗಳಿಗೇ ಹೆಚ್ಚು ಬೇಡಿಕೆ. ಅದಕ್ಕೆ ಲೇಟೆಸ್ಟ್, ಜ್ವಲಂತ ಉದಾಹರಣೆ, ಮೇಲಿನ ಕಾರ್ಯಕ್ರಮದಲ್ಲಿ ನಡೆದ ಯಕ್ಷಗಾನಕ್ಕೆ ನಡೆದ ‘ಅಡಚಣೆ’ಯ ವಿವಾದ.
ನಿನ್ನೆ ಬೆಳಿಗ್ಗೆಯೇ, ಮೊಬೈಲಿನಲ್ಲಿ ಫೇಸ್‍ಬುಕ್ ನೋಡುತ್ತಿದ್ದಾಗ, ಈ ಬಗೆಗಿನ ‘ಸುದ್ದಿ’ ನೋಡಿದೆ. ಮೊದಲ ನೋಟದಲ್ಲೇ ಅದು ಉದ್ದೇಶಪೂರ್ವಕವಾಗಿ ‘ಕುಕ್’ ಮಾಡಲ್ಪಟ್ಟ ಬರಹ ಎಂದು ನನಗೆ ಗೊತ್ತಾಯಿತು. ಅಂದುಕೊಂಡಂತೆಯೇ ಅದು ಸಾಧ್ಯವಾದಷ್ಟು ಬೃಹತ್ ವರದಿಯಾಗಿ ಬೆಳೆಯಿತು. ಅದನ್ನು ಸೃಷ್ಟಿಸಿದವರೂ, ಶೇರ್ ಮಾಡಿದವರೂ, ಫಾರ್ವರ್ಡ್ ಮಾಡಿದವರದೂ ಬಹುತೇಕ ಒಂದೇ ಮನಸ್ಥಿತಿ ಎಂದರೆ ತಪ್ಪಾಗದು.
ಅಷ್ಟಕ್ಕೂ ಈ ವಿವಾದದ ಮೂಲವೇನೆಂದರೆ, ಯಕ್ಷಗಾನಕ್ಕೆ ತಡೆಯೊಡ್ಡಿದ ಪ್ರಸಂಗ. ಲೇಡಿಹಿಲ್ ಬಳಿಯಿರುವ ಪ್ರೆಸ್ ಕ್ಲಬ್ ಕಟ್ಟಡ ಮತ್ತು ಉರ್ವಾ ಚರ್ಚ್‍ನ ಹಾಲ್ ಪರಸ್ಪರ ಎದುರು-ಬದುರು ಇವೆ. ಪತ್ರಿಕೆ-ಮಾಧ್ಯಮಗಳೆಂದರೆ ಎಲ್ಲರಿಗೂ ಗೌರವ ಭಾವನೆ ಇದೆ. ಅದೇ ಕಾರಣದಿಂದಾಗಿ ಪ್ರೆಸ್ ಕ್ಲಬ್‍ನ, ಪತ್ರಕರ್ತರ ಕಾರ್ಯಕ್ರಮಕ್ಕೆ ಈ ಸಭಾಭವನದಲ್ಲಿ ಡಿಸ್ಕೌಂಟ್ ಕೊಡಲಾಗಿದೆ (ಹಾಗೆಂದು ವರದಿಯಾಗಿದೆ). ಮದುವೆಯ ಸೀಸನ್‍ನಲ್ಲಿ ಇಂತಹ ಡಿಸ್ಕೌಂಟ್ ಸಿಗುತ್ತದೆಯೆಂದರೆ ಅದಕ್ಕಿಂತ ಹೆಚ್ಚಿನ ಗೌರವ-ಮರ್ಯಾದೆ ಬೇರೇನಿದೆ? ಬೆಳಗ್ಗಿನಿಂದ ನಡೆದ ವಿವಿಧ ಕಾರ್ಯಕ್ರಮಗಳ ಮತ್ತು ಊಟದ ನಂತರ ಯಕ್ಷಗಾನ (ತಡವಾಗಿ) ಪ್ರಾರಂಭವಾಗಿದೆ. ನಿಗದಿತ ಸಮಯ ಮೀರಿದಾಗ, ಎಂದಿನಂತೆ ಗಂಟೆ ಬಾರಿಸಲಾಗಿದೆ. ನಂತರ ಹಾಲ್‍ನ ಸಿಬಂದಿ ಮೈಕ್ ಕಿತ್ತುಕೊಂಡಿದ್ದಾರೆ, ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಲಾಗಿದೆ. (ಹಲವರು ತಿಳಿದುಕೊಂಡಂತೆ ಈ ಯಕ್ಷಗಾನ ರಾತ್ರಿ ನಡೆದದ್ದಲ್ಲ, ಮಧ್ಯಾಹ್ನ ನಡೆದದ್ದು).
ನನಗೆ ಈ ಘಟನೆ ತಿಳಿದಾಗ ಮೊದಲು ನಿಜಕ್ಕೂ ಬೇಸರವಾಯಿತು. ಏನೇ ಆಗಲಿ, ಯಕ್ಷಗಾನ (ಅಥವಾ ಬೇರೆ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ) ನಡೆಯುತ್ತಿರುವಾಗ ಸ್ವಲ್ಪ ಸಂಯಮ, ವಿನಾಯಿತಿ ಪ್ರದರ್ಶಿಸುವ ಹಿರಿಮೆ ಹಾಲ್‍ನ ಸಿಬಂದಿ ಅಥವಾ ಆಡಳಿತದವರು ಪ್ರದರ್ಶಿಸಬೇಕಾಗಿತ್ತು ಎಂದು ನನಗೆ ಅನಿಸಿತು. ಆದರೆ ಈ ಘಟನೆ ನಡೆಯಲು ನಿಜಕ್ಕೂ ಯಾರು ಕಾರಣರು ಎಂದು ನಂತರ ನನಗೆ ಪ್ರಶ್ನೆ ಮೂಡಿತು.
ಮಂಗಳೂರು ನಗರ ಮಾತ್ರವಲ್ಲ, ಕರಾವಳಿಯಾದ್ಯಂತ ಎಲ್ಲಾ ಸಭಾ ಭವನಗಳಲ್ಲಿ ಹಲವು ವರ್ಷಗಳಿಂದ ಕಟ್ಟುನಿಟ್ಟಿನ ಸಮಯ ಪಾಲನೆ ಕಡ್ಡಾಯವಾಗಿದೆ. ಹಗಲು ಮತ್ತು ರಾತ್ರಿ ನಡೆಯುವ ಕಾರ್ಯಕ್ರಮಗಳಿಗೆ ನಿರ್ದಿಷ್ಟ ಸಮಯ, ಸೂಚನೆಗಳನ್ನು ವಿಧಿಸಲಾಗಿದ್ದು ಅವು ಎಲ್ಲರಿಗೂ ಅನ್ವಯವಾಗುತ್ತವೆ. ಮದುವೆಯಿರಲಿ ಇತರ ಯಾವುದೇ ಕಾರ್ಯಕ್ರಮವಿರಲಿ, ಅದು ಯಾವುದೇ ಜಾತಿ-ಧರ್ಮಗಳವರದ್ದೂ ಆಗಿರಬಹುದು, ಈ ನಿಯಮಗಳನ್ನು ನಿರ್ದಾಕ್ಷಿಣ್ಯವಾಗಿ ಪಾಲಿಸಲಾಗುತ್ತಿದೆ, ಮತ್ತದು ಅನಿವಾರ್ಯ ಕೂಡಾ. ಕ್ರಿಶ್ಚಿಯನ್ ಮದುವೆಗಳಿಗೂ ಇದು ಹೊರತಲ್ಲ. ಪಾರಂಪರಿಕ ವಿಧಿಗಳು ನಡೆದು, ಊಟದ ತರುವಾಯ ನೃತ್ಯ ಮಾಡುವುದು ಕ್ರೈಸ್ತರ ಮದುವೆಗಳಲ್ಲಿ ಸ್ವಾಭಾವಿಕ. ನೆಂಟರಿಷ್ಟರು ಮೈಮರೆತು ಕುಣಿಯುತ್ತಿರುವಾಗ ರಸಭಂಗವಾದಂತೆ, ಎಷ್ಟೋ ಸಲ ಹೀಗೆ ಸೌಂಡ್ ಸಿಸ್ಟಮ್ ನಿಲ್ಲಿಸಿದ್ದೂ, ಬೆಳಕನ್ನು ಸ್ಥಗಿತಗೊಳಿಸಿದ್ದೂ ಇದೆ. ಹಗಲಿಗೆ ಬಿಡಿ, ರಾತ್ರಿ ವೇಳೆಯೂ ಹೀಗೆ ನಡೆಯುತ್ತದೆ. ಆವೇಶಭರಿತರಾದ ಯುವಕರು ಎಷ್ಟೇ ಕಿರುಚಾಡಿದರೂ ಪ್ರಯೋಜನವಾಗುವುದಿಲ್ಲ. ಇವೆಲ್ಲಾ ಚರ್ಚ್ ಹಾಲ್‍ಗಳಲ್ಲೇ ನಡೆಯುವ ಪ್ರಸಂಗಗಳು.
ಅಷ್ಟಕ್ಕೂ ಸಮಯ ಮತ್ತು ಇತರ ನಿಯಮಗಳ ಅರಿವು ಅವರಿಗಿರುವುದಿಲ್ಲವೆಂದಲ್ಲ. ಎಲ್ಲರಿಗೂ ತಿಳಿದೇ ಇರುತ್ತದೆ. ಆದರೆ ಕಾರ್ಯಕ್ರಮ ತಡವಾಗಿ ಆರಂಭವಾಗುವುದೂ ಸೇರಿ ಹಲವು ಕಾರಣಗಳಿಂದ ವಿಳಂಬವಾಗುವುದರಿಂದ, ಕೊನೆಗೆ ಉತ್ಸಾಹದಿಂದ ಜಗತ್ತನ್ನೇ ಮರೆತು ಕುಣಿಯುವವರಿಗೆ ಭ್ರಮನಿರಸನವಾಗುತ್ತದೆ.
ಇದಕ್ಕೆ ಕಾರಣರಾರು? ಮುಖ್ಯವಾಗಿ ಆಯಾ ಕಾರ್ಯಕ್ರಮ ಸಂಯೋಜಿಸುವವರೇ ಹೊರತು ಆಹ್ವಾನಿತರಾಗಲೀ ಸಭಿಕರಾಗಲೀ ಅಲ್ಲ. ಇಷ್ಟೇ. ಇದು ಕಾಮನ್ ಸೆನ್ಸ್. ಇದುವರೆಗೆ ಇಂತಹ ರಸಭಂಗವಾದ ಕಾರ್ಯಕ್ರಮಗಳ ಸುದ್ದಿಯಾಗಿದ್ದೂ ಇಲ್ಲ, ಗಲಾಟೆ ನಡೆದದ್ದೂ ಇಲ್ಲ.
ಈ ಹಿನ್ನೆಲೆಯಲ್ಲಿ, ಶನಿವಾರದ ಯಕ್ಷಗಾನಕ್ಕೆ ನಡೆದ ‘ಅನುಚಿತ’ ಕಾರ್ಯಕ್ರಮದ ಬಗ್ಗೆ ನಾನು ಪರಾಮರ್ಶೆ ನಡೆಸಿದೆ. ತತ್ಸಂಬಂಧಿ ಸುದ್ದಿಯಲ್ಲಿ ‘ಕತ್ತಲೆ’ಯಲ್ಲಿಯೇ ಕಲಾವಿದರು ಪ್ರದರ್ಶನ ಮುಂದುವರಿಸಬೇಕಾದ ‘ಆಘಾತಕಾರಿ’ ಅಂಶವನ್ನು ಚಾಕಚಕ್ಯತೆಯಿಂದ ಮುಂದಿಡಲಾಗಿತ್ತು. ಅದನ್ನು ಓದಿದ, ಮೆದುಳಿಗೇ ಕತ್ತಲಾವರಿಸಿಕೊಂಡಿರುವ ವ್ಯಕ್ತಿಗಳಿಗೆ, ಮಧ್ಯರಾತ್ರಿಯಲ್ಲಿ ಒಮ್ಮಿಂದೊಮ್ಮೆಲೇ, ಅಚಾನಕ್ಕಾಗಿ ಯಕ್ಷಗಾನ ಕಲಾವಿದರನ್ನು, ನಡುನೀರಿನಲ್ಲಿ ಕೈಬಿಟ್ಟಂತೆ, ಕತ್ತಲಿಗೆ ದೂಡಿದ್ದರೆಂಬ ಅನಿಸಿಕೆ ಮೂಡುವುದು ಸಹಜ. ಆದರೆ ಯಕ್ಷಗಾನ ನಡೆಯುತ್ತಿದ್ದದ್ದು ಹಗಲು ಹೊತ್ತಿನಲ್ಲಿ!
ಈ ವಿಕೃತ ಸುದ್ದಿ ಕೆಲವೇ ಕೆಲವರ ಷಡ್ಯಂತ್ರ ಮತ್ತು ಅವರ ಅಜೆಂಡಾಕ್ಕಾಗಿ ಉಂಟು ಮಾಡಿದ ವಿಕಾರ ವರದಿ ಎಂಬುದು ಬೆಳಕಿನಷ್ಟೇ ಸ್ಪಷ್ಟ. ಮೊತ್ತ ಮೊದಲು ಒಂದು ಸಭಾ ಭವನದಲ್ಲಿ ನಡೆದ ಕ್ಷುಲ್ಲಕ (ಅಥವಾ ಮಹತ್ತರವಾದದ್ದೇ ಅಂದುಕೊಳ್ಳೋಣ) ಅಹಿತಕರ ಘಟನೆಗೆ ಆಯಾ ಸಭಾ ಭವನದ ಸಿಬಂದಿಯನ್ನು ವಿಚಾರಿಸುವುದು ಬಿಟ್ಟು ಏಕಾಏಕಿ ‘ಚರ್ಚ್’ನ ಮೇಲೆ, ಬಹಿರಂಗವಾಗಿ, ಆರೋಪ ಹೊರಿಸುವ ಜರೂರತ್ತು ಏನಿತ್ತು? ಇಂತಹ ಅನಪೇಕ್ಷಿತ ಸಂಗತಿಗಳು ನಡೆದಾಗ ಯಾರಾದರೂ ನೇರವಾಗಿ ಸಂಬಂಧಪಟ್ಟವರನ್ನು ಪ್ರಶ್ನಿಸುವುದೋ ತರಾಟೆಗೆ ತೆಗೆದುಕೊಳ್ಳುವುದೋ ಸ್ವಾಭಾವಿಕ. ಆದರೆ ಇಲ್ಲಿ ಕೆಲವರು, ಹೌದು, ಕೇವಲ ಕೆಲವರು, ಹಾಲ್‍ನಲ್ಲಿ ನಡೆದ ಪ್ರಮಾದಕ್ಕಾಗಿ, ಅಕಾರಣವಾಗಿ, ಚರ್ಚ್, ಧರ್ಮಗುರುಗಳು, ಕ್ರೈಸ್ತ ಧರ್ಮವನ್ನು ತೆಗಳುವುದು, ನಿಂದಿಸುವುದು ಯಾವ ಸದುದ್ದೇಶಕ್ಕಾಗಿ?! ಏನಿದರ ನೈಜ ಮರ್ಮ?
ಇಲ್ಲಿಯೇ ಅಡಗಿದೆ ಎಲ್ಲದರ ಉತ್ತರ. ಏನೇನೂ ಗೊತ್ತಿಲ್ಲದ ಮುಗ್ಧ ಜನರ ಮನಸ್ಸಿಗೆ ‘ವಿಷಪ್ರಾಶನ’ಗೈಯುವ ಮಹಾನ್ ಅಜೆಂಡಾ ಹೊರತು ಬೇರೇನೂ ಇಲ್ಲಿಲ್ಲ ಎಂಬುದನ್ನು ಜನರು ತಿಳಿದುಕೊಳ್ಳಬೇಕಾಗಿದೆ.
ನಾನೊಂದು ವಿಚಾರ ಹೇಳಲೇಬೇಕು. ಕ್ರೈಸ್ತರಿಗೆ ಕಲೆ, ಸಂಸ್ಕೃತಿ, ಮಾತೃಭಾಷೆ, ತಮ್ಮ ನೆಲದ, ರಾಷ್ಟ್ರದ ಬಗ್ಗೆ ಎಲ್ಲರಂತೆ ತುಂಬಾ ಪ್ರೀತಿ, ಅಭಿಮಾನ, ಗೌರವವಿದೆ. ಎಲ್ಲರಿಗೂ ಅವರವರದೇ ಧಾರ್ಮಿಕ ವ್ಯವಸ್ಥೆಗಳಿರುವಂತೆ, ಕ್ರೈಸ್ತರಿಗೂ ಹಲವು ವಿಚಾರಗಳಿದ್ದು ಅವರು ಅವುಗಳಲ್ಲಿ ತಲ್ಲೀನರಾಗಿದ್ದಾರೆ. ಸ್ಥಳೀಯ ತುಳು ಅಥವಾ ಹಿಂದೂ ಸಂಪ್ರದಾಯ, ಸಂಸ್ಕೃತಿಯ ಬಗ್ಗೆ ಯಾರಿಗಾದರೂ ತಿಳುವಳಿಕೆ ಇಲ್ಲದೇ ಇರಬಹುದೇನೋ, ಆದರೆ ಅನಾದರ ಖಂಡಿತಾ ಇಲ್ಲ. ನಾವೆಲ್ಲಾ ಕ್ರೈಸ್ತರು ಸಂಪೂರ್ಣ ಭಾರತೀಯರಾಗಿದ್ದು ಅದರಲ್ಲಿ ಹುಳುಕು ಹುಡುಕುವವರು ಕೇವಲ ದುರುಳರೂ, ಕಪಟರೂ ಮತ್ತು ವಿಕೃತರು ಮಾತ್ರ. ಅದರಲ್ಲಿ ಸಂಶಯವೇ ಇಲ್ಲ.
ಆಕಾಶವೇ ಧರೆಗೆ ಬಿದ್ದಿದೆ, ಭೂಮಿಯೇ ಬಾಯ್ದೆರೆದಿದೆ ಅಥವಾ ನಗರದಲ್ಲಿ ಅಲ್ಲೋಲಕಲ್ಲೋಲವಾಗಿದೆ ಎಂಬಂತೆ ಮೇಲಿನ ಪ್ರಸಂಗವನ್ನು ವಿಜೃಂಭಿಸಿ, ಧಾವಂತದಲ್ಲಿ, ಶರವೇಗದಲ್ಲಿ ಪ್ರಪಂಚಕ್ಕೆ ತಿಳಿಸುವ ಅಗತ್ಯವೇನೂ ಇರಲಿಲ್ಲ. ಆದರೆ ಏನು ಮಾಡೋಣ ಸ್ವಾಮಿ, ಜೀತದಾಳುಗಳಂತೆ, ಗುಲಾಮರಂತೆ ಬುದ್ಧಿ-ವ್ಯಕ್ತಿತ್ವವನ್ನು ಅಡವಿಟ್ಟುಕೊಂಡ, ತಮ್ಮನ್ನೇ ಮಾರಿಕೊಂಡ, ಪಟ್ಟಭದ್ರ ಹಿತಾಸಕ್ತಿಗಳಿಗೆ ತಮ್ಮದೆಲ್ಲವನ್ನು ಧಾರೆಯೆರೆದಿರುವವರಿಂದ ಬೇರೆ ಏನನ್ನು ನಿರೀಕ್ಷಿಸಬಹುದು ನೀವೇ ಹೇಳಿ! ಇಲ್ಲಿಯೂ ಆಗಿದ್ದು ಅದೇ, ಬೇರೇನಲ್ಲ.
ಅಷ್ಟಕ್ಕೂ ಇನ್ನೊಂದು ಪ್ರಮುಖ ವಿಚಾರವೇನು ಗೊತ್ತಾ? ಕನ್ನಡದ ಎಲ್ಲಾ ಪ್ರಮುಖ ಪತ್ರಿಕೆಗಳು ಮಂಗಳೂರಿನಲ್ಲೇ (ಉದಯವಾಣಿ ಮಾತ್ರ ಮಣಿಪಾಲದಲ್ಲಿ) ಮುದ್ರಣಗೊಳ್ಳುತ್ತವೆ; ಅಲ್ಲದೇ ಎಲ್ಲಾ ಪ್ರಮುಖ ಇಂಗ್ಲಿಷ್ ಪತ್ರಿಕೆಗಳೂ ಮಂಗಳೂರಿನಲ್ಲಿಯೇ ಮುದ್ರಣಗೊಳ್ಳುತ್ತವೆ, ಮಂಗಳೂರು ಆವೃತ್ತಿಯನ್ನು ಪ್ರಕಟಿಸುತ್ತವೆ. ಆದರೆ ಈ ಬಹುತೇಕ ಪತ್ರಿಕೆಗಳಲ್ಲಿ ಈ ಮೇಲಿನ ‘ಯಕ್ಷಗಾನ ಪ್ರಸಂಗ’ ವರದಿಯಾಗಿಲ್ಲ! ವರದಿಯಾಗಿದ್ದು ಕೇವಲ ಕೆಲವೇ ಪತ್ರಿಕೆಗಳಲ್ಲಿ ಮಾತ್ರ.
ಪುಣ್ಯಕ್ಕೆ ಬಹುತೇಕರಿಗೆ ‘ಕಾಮನ್‍ಸೆನ್ಸ್’ ಇದೆಯೆಂದು ಇದರಿಂದ ನಿರೂಪಿತವಾಗುತ್ತದೆ. ಹಾಗಾದರೆ, ಯಕ್ಷಗಾನವೊಂದನ್ನು ನಡುವಿನಲ್ಲೇ ನಿಲ್ಲಿಸಿದ್ದು, ಅಡಚಣೆಗೊಳಿಸಿದ್ದು ಸರಿಯೇ, ಅದು ಅಕ್ಷಮ್ಯವಲ್ಲವೇ ಎಂದು ಯಾರಾದರೂ ನನ್ನನ್ನು ಕೇಳಬಹುದು. ಅದಕ್ಕೆ ಇಲ್ಲಿ ಉತ್ತರಿಸುತ್ತಿದ್ದೇನೆ.
ಮೊದಲಾಗಿ, ಪ್ರೆಸ್‍ಕ್ಲಬ್ ದಿನಾಚರಣೆ (ಅದರ ಆಮಂತ್ರಣ ಪತ್ರವನ್ನಿಲ್ಲಿ ಲಗತ್ತಿಸಲಾಗಿದೆ) ಹಲವು ಕಾರ್ಯಕ್ರಮಗಳನ್ನೊಳಗೊಂಡಿತ್ತು. ಪತ್ರಿಕೆ-ಮಾಧ್ಯಮಗಳಲ್ಲಿ ದುಡಿಯುವವರಿಗೆ ಇದು ಸಂಭ್ರಮದ ದಿನ, ವಾರ್ಷಿಕ ಹಬ್ಬವಿದ್ದಂತೆ. ಇತರೆಲ್ಲಾ ಕಾರ್ಯಕ್ರಮಗಳ ತರುವಾಯ ಕಿರು ಅವಧಿಯ ಯಕ್ಷಗಾನ ಪ್ರಸಂಗವನ್ನು (ಎರಡು ಭಾಗಗಳದ್ದು) ಕೂಡ ಹಮ್ಮಿಕೊಳ್ಳಲಾಗಿತ್ತು. ಇದೇನೂ ಪ್ರಸಿದ್ಧ ವೃತ್ತಿಪರ ತಂಡಗಳಿಂದ ಏರ್ಪಡಿಸಿದ್ದಲ್ಲ. ಇದೇ ಮಾಧ್ಯಮದ ಉದ್ಯೋಗಿಗಳಲ್ಲಿ ಕೆಲವರು ಸ್ವ-ಆಸಕ್ತಿಯಿಂದ ಭಾಗವಹಿಸಿದ್ದರು. ಅದಕ್ಕಾಗಿ ಅವರು ಖಂಡಿತಾ ಶ್ಲಾಘನಾರ್ಹರು.
ಉರ್ವ ಚರ್ಚ್‍ನ ಸುಪರ್ದಿಯಲ್ಲಿರುವ, ಪ್ರೆಸ್ ಕ್ಲಬ್‍ನ ಪಕ್ಕದಲ್ಲೇ ಇರುವ ಇರುವ ಸಭಾ ಭವನದಲ್ಲಿ ಪ್ರೆಸ್ ಕ್ಲಬ್ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ನಿಬಿಡ ಕಾರ್ಯಕ್ರಮಗಳು, ಸಭಾ ಕಾರ್ಯಕ್ರಮ ಮತ್ತು ಮುಖ್ಯ ಅತಿಥಿಗಳು ತಡವಾಗಿ ಬಂದ ಕಾರಣಗಳಿಂದ ಕಾರ್ಯಕ್ರಮ ವಿಳಂಬವಾಗಿದೆ. ನಿಗದಿತ ಸಮಯಕ್ಕಿಂತ ತಡವಾಗಿ ಯಕ್ಷಗಾನ ಪ್ರಾರಂಭವಾಗಿದೆ. ಅದೇ ಕಾರಣದಿಂದಾಗಿ ಹಾಲ್‍ನ ಮುಕ್ತಾಯದ ಸಮಯ ಮೀರಿ ಕಾರ್ಯಕ್ರಮ ಮುಂದುವರಿದುದರಿಂದ, ಎಂದಿನಂತೆ ತನ್ನ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬಂದಿ, ಬೆಲ್ ಬಾರಿಸಿ ಎಚ್ಚರಿಸಿದ್ದಾರೆ. ಮತ್ತೂ ಮುಂದುವರಿದಾಗ ವೇದಿಕೆಯಿಂದ ಮೈಕ್ ಹಿಂಪಡೆದಿದ್ದಾರೆ (ಬಲಾತ್ಕಾರದಿಂದ ಕಿತ್ತುಕೊಂಡಿದ್ದಲ್ಲ). ಮದುವೆಯ ಸೀಸನ್ ಇದು. ದಿನಕ್ಕೆರಡು ಬಾರಿ ಕಾರ್ಯಕ್ರಮಗಳು ನಡೆಯುವ ಸಭಾ ಭವನದಲ್ಲಿ ಶಿಸ್ತನ್ನು ಪಾಲಿಸದಿದ್ದರೆ ಸಿಬಂದಿಗೇ ಕಷ್ಟ-ತಾಪತ್ರೆ ತಪ್ಪಿದ್ದಲ್ಲ. ಅವರು ಎಂದಿನಂತೆ ತಮ್ಮ ಕರ್ತವ್ಯದ ಪಾಲನೆ ಮಾಡಿದ್ದಾರೆ. ನಂತರದ ಕಾರ್ಯಕ್ರಮಕ್ಕೆ ಭವನವನ್ನು ಸಿದ್ಧಪಡಿಸುವ, ಬಿಟ್ಟು ಕೊಡುವ ಹೊಣೆಗಾರಿಕೆಯೂ ಅವರ ಮೇಲಿರುತ್ತದೆ.
ಹಾಗಂತ ಇದು ಮೊದಲೇ ಗೊತ್ತಿರಲಿಲ್ಲವೇ. ಗೊತ್ತಿತ್ತು ಸ್ವಾಮಿ, ಗೊತ್ತಿತ್ತು. ಪತ್ರಕರ್ತರೇನು ಇದುವರೆಗೆ ಯಾವುದೇ ಚರ್ಚ್ ಹಾಲ್‍ಗಳಿಗೆ, ಕ್ರೈಸ್ತರ ಮದುವೆ ಮತ್ತಿತರ ಸಂಭ್ರಮಗಳಿಗೆ ಹಾಜರಾಗಿಯೇ ಇಲ್ಲವೇ? ನಾನೂ ಪತ್ರಿಕೆಗಳಲ್ಲಿದ್ದವನು, ಮಂಗಳೂರಿನಲ್ಲಿಯೇ ಡಜನ್‍ಗಟ್ಟಲೆ ಕ್ರೈಸ್ತ ಪತ್ರಿಕಾ ಸಿಬಂದಿಗಳ ಮದುವೆಗೆ ಕ್ರೈಸ್ತೇತರ ಸಹೋದ್ಯೋಗಿಗಳ ಜೊತೆ ಹಾಜರಾಗಿದ್ದೇನೆ. ಬೇರೆ ಸಾಕ್ಷಿ ಯಾಕೆ ಬೇಕು! ಅಲ್ಲವೇ? (ಬಹುತೇಕ ಎಲ್ಲಾ ಪತ್ರಿಕೆಗಳ ಸುದ್ದಿಮನೆ, ಮುದ್ರಣಾಲಯ ಹಾಗೂ ಟಿ.ವಿ. ಚಾನೆಲ್‍ಗಳಲ್ಲಿ ನನ್ನ ಹಿಂದಿನ ಸಹೋದ್ಯೋಗಿಗಳೂ, ನಂತರದ ಮಿತ್ರರೂ ಇದ್ದಾರೆ, ಹೆಚ್ಚಿನವರು ಸಂಪರ್ಕದಲ್ಲಿದ್ದಾರೆ).
ಇನ್ನೊಂದು ಗಮನಾರ್ಹ ಸಂಗತಿಯೇನೆಂದರೆ, ಹೀಗೆ ಹಾಲ್‍ಗಳಲ್ಲಿ ನಿರ್ದಿಷ್ಟ ಸಮಯ ಪಾಲನೆ, ಇನ್ನಿತರ ನಿಯಮಗಳನ್ನು ಯಾರೂ ಸ್ವಯಂಕೃತವಾಗಿ ಅಳವಡಿಸಿದ್ದಲ್ಲ. ಅದನ್ನು ಎಲ್ಲೆಡೆ ಇರುವಂತೆ ಕರಾವಳಿಯಾದ್ಯಂತದ ಎಲ್ಲಾ ಹಾಲ್‍ಗಳಿಗೆ ನಿರ್ದೇಶಿಸಲಾಗಿದೆ. ಪ್ರಪಂಚದ ಸಂಗತಿಗಳನ್ನೆಲ್ಲಾ ವರದಿ ಮಾಡುವ ಪತ್ರಕರ್ತರಿಗೆ ಇದೆಲ್ಲಾ ತಿಳಿದಿಲ್ಲವೇ? ತಿಳಿದಿದೆ. ಆದರೇನು ಮಾಡೋಣ, ಮಲಿನಗೊಂಡ ಮನಸ್ಸಿನವರಿಗೆ ಯಾವುದರಲ್ಲೂ ಹುಳುಕು ಹುಡುಕುವ, ಸಿಕ್ಕ ಅವಕಾಶಗಳನ್ನೆಲ್ಲಾ ತಮ್ಮ ದುರ್ಬುದ್ಧಿಗಾಗಿ ಬಳಸುವ ತೆವಲು, ಹಪಾಹಪಿಯಿರುವವರನ್ನು ತಡೆಯುವವರಾರು?
ಅದರ ಪರಿಣಾಮವೇ ಈ ಮೇಲಿನ ಆರೋಪ.
ಈ ಅನುಚಿತ ಪ್ರಸಂಗದ ಬಗ್ಗೆ ಪ್ರೆಸ್ ಕ್ಲಬ್‍ನವರಿಗಾಗಲೀ, ಕಾರ್ಯನಿರತ ಪತ್ರಕರ್ತರ ಸಂಘಕ್ಕಾಗಲೀ ಯಾವುದೇ ತಕರಾರಿಲ್ಲ! ಹಾಲ್ ಬುಕ್ ಮಾಡುವಾಗಲೇ ತಾವು ನಿಯಮ ಪಾಲಿಸುವುದಾಗಿ ಸಹಿ ಮಾಡಿದ ನಂತರ ಮಾತನಾಡಲಿಕ್ಕೇನಿದೆ? ಅದೂ ತಾವಾಗಿಯೇ ಕಾರ್ಯಕ್ರಮವನ್ನು ತಡ ಮಾಡಿದ್ದರಿಂದ ಉಂಟಾದ ವಿಳಂಬಕ್ಕಾಗಿ ಇತರರನ್ನು ಹೊಣೆಗಾರರನ್ನಾಗಿಸಲು ಸಾಧ್ಯವೇ?
ಹಾಗಂತ ಇದೇನೂ, ಯಾರೋ ಕೈಗೊಂಡ ವೃತ ಅಥವಾ ಹರಕೆಗಾಗಿ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮವೇನೂ ಅಲ್ಲ. ಅದೊಂದು ಸಂಭ್ರಮವಾಗಿತ್ತಷ್ಟೇ. ಬೇರೆಲ್ಲಾ ಚಟುವಟಿಕೆಗಳಂತೆ, ಯಕ್ಷಗಾನ ಪ್ರಸಂಗವೂ ಇವರ ಆಸಕ್ತಿ-ಪ್ರೀತಿಯುತ ಚಟುವಟಿಕೆಯಾಗಿತ್ತು. ವೃತ್ತಿಪರ ತಂಡದಿಂದ ನಡೆದದ್ದಲ್ಲ.
ಹಾಗಂತ ಈ ಅಧಿಕಪ್ರಸಂಗವನ್ನು (ಅಡಚಣೆ) ಖಂಡಿತಾ ತಪ್ಪಿಸಬಹುದಿತ್ತು. ಸಮಯ ಮೀರುತ್ತಿದೆ ಎಂಬುದು ಗೊತ್ತಾದ ಮೇಲೆ ಯಾರಾದರೂ ಹಾಲ್‍ನ ಆಡಳಿತದವರನ್ನು ಸಂಪರ್ಕಿಸಿ ಕೆಲ ಸಮಯದ ವಿನಾಯಿತಿ ನೀಡಲು ಕೇಳಬಹುದಿತ್ತು. ಆಡಳಿತದವರು ಖಂಡಿತಾ ಅದಕ್ಕೆ ಆಸ್ಪದ ಕೊಡುತ್ತಿದ್ದರು. ಪತ್ರಿಕೆ-ಮಾಧ್ಯಮದವರಿಗೂ ಚರ್ಚ್ ಸಂಸ್ಥೆಗಳಿಗೂ ಅವಿನಾಭಾವ ಸಂಬಂಧವಿದೆ. ಪತ್ರಕರ್ತರಿಗೆ, ಅದರಲ್ಲೂ ಹಾಲ್‍ನಲ್ಲಿ ಹಾಜರಿದ್ದವರಿಗೆ ಇದೆಲ್ಲಾ ತಿಳಿದಿದೆ. ನನ್ನಲ್ಲಿ ಮಾತನಾಡಿದ ಕೆಲ ಪತ್ರಕರ್ತರು ಈಗಿನ ಬಿಷಪರ ಬಗ್ಗೆ ತುಂಬಾ ಒಳ್ಳೆಯ ಭಾವನೆ ವ್ಯಕ್ತಪಡಿಸಿ, ಪತ್ರಿಕಾ ಸಮೂಹದವರಿಗೆ ಅವರು ತೋರಿಸುವ ಕಾಳಜಿ, ಸ್ನೇಹ ತುಂಬಾ ಶ್ಲಾಘನೀಯವೆಂದರು. ಹಾಲ್‍ನ ಪಕ್ಕದಲ್ಲೇ ಇರುವ ಚರ್ಚಿನ ಕಚೇರಿಗೆ ಹೋಗಿ ಹೇಳಿಕೊಂಡಿದ್ದರೆ ಅವರು ಸಹಕರಿಸುತ್ತಿದ್ದರು. ಒಂದಷ್ಟು ಸಮಯಪ್ರಜ್ಞೆ, ಮುಂಜಾಗ್ರತೆ ವಹಿಸಿದ್ದಲ್ಲಿ ಉಂಟಾಗಬಹುದಾಗಿದ್ದ ಅನಪೇಕ್ಷಿತ ಘಟನೆ ತಪ್ಪಿಸಬಹುದಿತ್ತು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಬಳಿ ನಾನು ಮಾತನಾಡಿದಾಗ, ಪ್ರಸ್ತುತ ಘಟನೆಯ ಬಗ್ಗೆ ಯಾರಿಗೂ ಆಕ್ಷೇಪಣೆ ಅಥವಾ ತಕರಾರು ಮೂಡಿಲ್ಲವೆಂದರು. ಕೇವಲ ಕೆಲವೇ ಪತ್ರಕರ್ತರು ಇದನ್ನು ವಿವಾದಕ್ಕೆಡೆ ಮಾಡಿದ್ದು, ಅದು ಅವರ ವೈಯಕ್ತಿಕ ಕೃತ್ಯವೇ ಹೊರತು ಪತ್ರಕರ್ತರ ಸಂಘಕ್ಕೆ ಅದು ಸಂಬಂಧಿಸಿಲ್ಲವೆಂದು ಸ್ಪಷ್ಟಪಡಿಸಿದರು. ಈಗಾಗಲೇ ಉರ್ವಾ ಚರ್ಚ್ ಆಡಳಿತ ಮಂಡಳಿ ಜೊತೆ ಚರ್ಚಿಸಿ ಈ ಬಗ್ಗೆ ಉಂಟಾದ ತಪ್ಪು ತಿಳುವಳಿಕೆಯನ್ನು ಸರಿಪಡಿಸಲಾಗಿದೆ ಎಂದು ಶ್ರೀನಿವಾಸ್ ಸ್ಪಷ್ಟಪಡಿಸಿದ್ದಾರೆ.
ನಾನು ಹಲವು ಪತ್ರಕರ್ತರು ಮತ್ತು ಮಾಧ್ಯಮ ಮಿತ್ರರಿಗೆ ಫೋನ್ ಮಾಡಿ ಈ ಘಟನೆಯ ಹಲವು ಆಯಾಮಗಳ ಬಗ್ಗೆ ಕೇಳಿದಾಗ, ಸಮಯದ ಬಗ್ಗೆ ಎಲ್ಲರಿಗೂ ಸ್ಪಷ್ಟ ಅರಿವಿದ್ದು, ಕಾರ್ಯಕ್ರಮ ವಿಳಂಬವಾಗಿದ್ದರಿಂದ ಯಕ್ಷಗಾನವೂ ತಡವಾಗಿದೆ; ಕೆಲವರು, ಯಕ್ಷಗಾನದ ಬಗ್ಗೆ ತುಂಬಾ ಭಾವನಾತ್ಮಕ ಗೌರವವಿರುವವರು, ಸಿಬಂದಿ ನಿರ್ದಾಕ್ಷಿಣ್ಯವಾಗಿ ವರ್ತಿಸುವ ಬದಲು, ಸ್ವಲ್ಪ ಸಹನೆ ಪ್ರದರ್ಶಿಸಿದ್ದರೆ ಆಕಾಶವೇನೂ ಕಳಚಿ ಬೀಳುತ್ತಿರಲಿಲ್ಲವಲ್ಲ ಎಂದರು. ಆದರೆ, ಪ್ರಮಾದ ಪತ್ರಕರ್ತರ ಕಡೆಯಿಂದಲೇ ಆಗಿದೆಯೆಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ ಮತ್ತು ಇಷ್ಟೊಂದು ದೊಡ್ಡ ವಿವಾದ ಮಾಡುವುದು, ಆಧಾರ ರಹಿತ ಆರೋಪ ಹೊರಿಸುವುದು ಅಕ್ಷಮ್ಯವೆನ್ನುತ್ತಾರೆ.
ಪವಿತ್ರ ಯಕ್ಷಗಾನಕ್ಕೆ ಮಾಂಸಾಹಾರಿ ಊಟದ ಟಾನಿಕ್!?
ಇದು ಓರ್ವ ಪತ್ರಕರ್ತರೇ ನನ್ನಲ್ಲಿ ಹೇಳಿದ ಸಂಗತಿ. ಕ್ಷುಲ್ಲಕ ಘಟನೆಯನ್ನು ತಮ್ಮ ಕೊಳಕು ಚಿಂತನೆಗಳ ಬಲದಿಂದ ನಿರ್ದಿಷ್ಟ ಧರ್ಮ ಮತ್ತದರ ಜನರ ವಿರುದ್ಧ ಕೀಳು ಅಭಿಪ್ರಾಯ ಮೂಡಿಸಲು ಕೆಲವರು ಸರ್ವ ಪ್ರಯತ್ನ ಮಾಡಿದುದರಿಂದ ನೊಂದ ಈ ಪತ್ರಕರ್ತ ಹೇಳಿದ್ದು ಹೀಗೆ: “ಇತರರನ್ನು ಸಂದರ್ಭ ಸಿಕ್ಕಿದಾಗಲೆಲ್ಲಾ ಹೀಯಾಳಿಸಲು, ನಿಂದಿಸಲು ಮುನ್ನುಗ್ಗುವ ಈ ಕೆಲ ‘ಸಂಭಾವಿತ’ರು ಪವಿತ್ರ ಯಕ್ಷಗಾನ ಪ್ರಸಂಗವನ್ನು ಹಮ್ಮಿಕೊಂಡಾಗ ಮಾಂಸಾಹಾರಿ ಭೋಜನದ ವ್ಯವಸ್ಥೆ ಮಾಡಿದ್ದು ಎಷ್ಟು ಸರಿ? ದೇವಸ್ಥಾನಗಳಿಗೆ ಹೋಗುವಾಗ ಮಾಂಸಾಹಾರ ಸೇವಿಸಿದರೆಂದು ಆಕಾಶ ಬಿರಿಯುವಂತೆ ಬೊಬ್ಬಿರಿಯುವವರು ಇದಕ್ಕೇನನ್ನುತ್ತಾರೆ?”
ಹೌದು. ಪತ್ರಕರ್ತರಿಗೆ ಇದೊಂದು ವಾರ್ಷಿಕ ಹಬ್ಬದ ದಿನವಾಗಿತ್ತು. ಹಾಗಾಗಿ ಭರ್ಜರಿ ಭೋಜನ ವ್ಯವಸ್ಥೆಯೂ ಇತ್ತು. ಅದರಲ್ಲಿ ನಾನ್ ವೆಜ್ ಆಹಾರವೂ ಇತ್ತು. ಆಹಾರ ಅವರವರ ಆಯ್ಕೆಯೆಂಬುದೇನೋ ನಿಜ. ಆದರೆ ಸದಾ ಇತರರ ಆಹಾರ ಸೇವನೆಯ ಬಗ್ಗೆ ವಿವಾದವೆಬ್ಬಿಸಿ ಜನರನ್ನು ರೊಚ್ಚಿಗೆಬ್ಬಿಸುವವರು, ಪವಿತ್ರ ಮತ್ತು ಶ್ರೇಷ್ಠವಾದ ಯಕ್ಷಗಾನ ಕಲಾಪ್ರದರ್ಶನ ನಡೆಸುವ ಸ್ಥಳದಲ್ಲಿಯೇ ಮಾಂಸಾಹಾರ ಸೇವನೆಗೆ ಅವಕಾಶ ಕಲ್ಪಿಸಿದ್ದು ಎಷ್ಟು ಸರಿ ಎಂದು ಈ ಅನುಭವಿ ಪತ್ರಕರ್ತರು ಪ್ರಶ್ನಿಸಿದ್ದಾರೆ. ಅವರ ಲಾಜಿಕ್ ನಿಜಕ್ಕೂ ಚಿಂತನಾರ್ಹವಾಗಿದೆ.
ಇಷ್ಟಕ್ಕೂ ಈ ವಿವಾದದ ಹಿಂದೆ ಇರುವ ಷಡ್ಯಂತ್ರವೇನು ಗೊತ್ತಾ? ಸಭಾ ಭವನವೊಂದರಲ್ಲಿ ನಡೆದ ಅಚಾತುರ್ಯ, ಅದೂ ಸ್ವಯಂಕೃತಾಪರಾಧದಿಂದ ಉಂಟಾಗಿದ್ದು, ಇಷ್ಟೊಂದು ರಾದ್ಧಾಂತವನ್ನೇರ್ಪಡಿಸಿದ್ದು ಹೇಗೆ? ಇದರ ಹಿಂದೆ, ಸದಾ ತನ್ನ ‘ಮಾರ್ಗದರ್ಶಕ’ರ ಹಿಡನ್ ಅಜೆಂಡಾವನ್ನು ತುದಿಗಾಲಲ್ಲಿ ನಿಂತು ಜಾರಿಗೊಳಿಸಲು ಹೆಣಗಾಡುವ ಪತ್ರಕರ್ತನಿದ್ದಾನೆ. ಎಲ್ಲರೂ ತಮ್ಮಷ್ಟಕ್ಕೆ ವಾರ್ಷಿಕೋತ್ಸವದ ಸವಿನೆನಪುಗಳನ್ನು ಮೆಲುಕು ಹಾಕುತ್ತಾ ಮನೆಗೆ ತೆರಳಿದರೆ, ಈತನ ಒಳಗೆ ತಳಮಳಿಸುತ್ತಿದ್ದ ದುರುಳ ಕಲ್ಪನೆಗಳು, ಮಾರ್ದನಿಸುತ್ತಿದ್ದ ವಿಕೃತ ಚಿಂತನೆಗಳು ಸಿಕ್ಕ ಸುವರ್ಣಾವಕಾಶವನ್ನು ಎನ್‍ಕ್ಯಾಶ್ ಮಾಡಲು ರೆಕ್ಕೆ ಬಿಚ್ಚುತ್ತಿದ್ದವು. ತಕ್ಷಣ ಕಾರ್ಯತತ್ಪರನಾದ ಆತ, ಕ್ರೈಸ್ತರ ಮೇಲೆ, ಚರ್ಚ್ ಮತ್ತು ಧರ್ಮಗುರುಗಳ ಮೇಲೆ ಮಿಥ್ಯಾರೋಪ ಮಾಡಲು ರಣೋತ್ಸಾಹದಿಂದ ಠೇಂಕರಿಸುತ್ತಾ ಶಸ್ತ್ರಸಜ್ಜಿತನಾಗಿ ಮುನ್ನುಗ್ಗಿದ!
ಅದರ ಪರಿಣಾಮವೇ ತನ್ನಂತಹ ಇತರ ಕೆಲವರನ್ನು ಒಟ್ಟುಗೂಡಿಸಿದ ಆತ, ತನ್ನೊಳಗಡಗಿದ್ದ ವಿಷವನ್ನು ಕಾರಿಕೊಳ್ಳಲು ಶುರುವಿಟ್ಟುಕೊಂಡ (ಅದರ ವಿರಾಟ್‍ರೂಪ ಆತ ಒಂದು ಮಾಧ್ಯಮಕ್ಕೆ ನೀಡಿದ ಬೈಟ್‍ನಲ್ಲಿದೆ). ಸಿಬಂದಿಯ ಜೊತೆಗೆ ಕನಿಷ್ಠ ಸೌಜನ್ಯದಿಂದ ವರ್ತಿಸಲು ಕೇಳಿ, ಕಾರ್ಯಕ್ರಮ ಮುಂದುವರಿಸಲು ಸಹಕರಿಸುವಂತೆ ವಿನಂತಿ ಮಾಡುವ ವ್ಯವಧಾನವಾಗಲೀ ಪ್ರಜ್ಞೆಯಾಗಲೀ ಇರದಿದ್ದ ಈತ, ಸಿಬಂದಿಯ ಕ್ಷುಲ್ಲಕತನವನ್ನೇ ಮಹಾಪರಾಧದಂತೆ, ಉದ್ದೇಶಪೂರ್ವಕವೆಂಬಂತೆ, ಇಡೀ ಚರ್ಚ್, ಧರ್ಮಗುರುಗಳು ಮತ್ತು ಕ್ರೈಸ್ತ ಜನರು ಯಕ್ಷಗಾನವನ್ನು, ಹಿಂದೂ ಜನರನ್ನು ಅವಮಾನಿಸಲು, ತುಳಿಯಲು ಹೂಡಿದ ಬೃಹತ್ ಸಂಚೆಂಬಂತೆ ಊಳಿಟ್ಟುಕೊಂಡಿದ್ದಾನೆ.
ದುರಾದೃಷ್ಟದ ಮತ್ತು ಅಪಾಯಕಾರಿ ಸಂಗತಿಯೆಂದರೆ, ಈತನ ಈ ಸುಳ್ಳು, ಅಪಪ್ರಚಾರವನ್ನು ನಂಬಿದವರ ಸಂಖ್ಯೆ ದೊಡ್ಡದಿದೆ. ಸೋಶಿಯಲ್ ಮೀಡಿಯಾಕ್ಕೆ ಕಡಿವಾಣ ಕಷ್ಟ, ಅದರ ರೀಚ್ ತುಂಬಾ ವಿಸ್ತಾರವಾಗಿರುವುದರಿಂದ ಇಂತಹ ವಿಕಾರ ಮನಸ್ಸಿನವರು ಹರಡುವ ಸುಳ್ಳುಗಳು, ವಿಕೃತ ಸಂಗತಿಗಳು ಮಿಂಚಿನ ವೇಗದಲ್ಲಿ ಸಂಚರಿಸುತ್ತವೆ (ಈ ವ್ಯಕ್ತಿಯ ದುರುದ್ದೇಶವೇನೆಂಬುದನ್ನು ಇಲ್ಲಿ ಲಗತ್ತಿಸಲಾದ ಮಾಧ್ಯಮವೊಂದರ ಸ್ಕ್ರೀನ್‍ಶಾಟ್ ನೋಡಿ, ವಿವರ ಅದರಡಿ ನೀಡಲಾಗಿದೆ).
ಪತ್ರಕರ್ತರು, ಸಂಪಾದಕರು ಮತ್ತು ಪತ್ರಿಕೆ-ಮಾಧ್ಯಮಗಳು ಭ್ರಷ್ಟರಾದರೆ, ಪಕ್ಷಪಾತಿಗಳಾದರೆ, ಪೂರ್ವಗ್ರಹ ಪೀಡಿತರಾದರೆ ಸಮಾಜಕ್ಕೆ, ನಾಡಿಗೆ ಏನೆಲ್ಲಾ ಅಪಾಯವಿದೆ, ಯಾವುದೆಲ್ಲಾ ಅಪಚಾರ ಸಂಭವಿಸುತ್ತದೆ ಎಂಬುದಕ್ಕೆ ಇದು ಅತ್ಯುತ್ತಮ ನಿದರ್ಶನ. ಆಘಾತಕಾರಿ ಬೆಳವಣಿಗೆಯೆಂದರೆ, ಇಂದು ನಮ್ಮ ನಡುವೆ ಇರುವ ಬಹುತೇಕ ಪತ್ರಕರ್ತರು, ಅಂಕಣಕಾರರು ಮತ್ತು ಸಂಪಾದಕರೂ ಸಹ ನಿರ್ದಿಷ್ಟ ಪಕ್ಷದ ಅನುಯಾಯಿಗಳೂ, ಬೆಂಬಲಿಗರೂ, ಸಮರ್ಥಕರೂ, ಕಾರ್ಯಕರ್ತರೂ ಮತ್ತು ವಕ್ತಾರರೂ ಆಗಿ ಹೋಗಿದ್ದಾರೆ. ಕೆಲವರಂತೂ, ಮೇಲಿನ ಪತ್ರಕರ್ತರಂತೆ, ತಮ್ಮ ಧಣಿಗಳ ತುತ್ತೂರಿ ಊದುವುದಷ್ಟೇ ಅಲ್ಲದೆ ಅವರ ಸೂಚನೆಯಂತೆ ಸಮಾಜದಲ್ಲಿ ವಿಷಬೀಜ ಬಿತ್ತುವುದಕ್ಕೂ ಹೇಸುವುದಿಲ್ಲ. ಪ್ರಜಾಪ್ರಭುತ್ವವೆಂದರೆ ಇದೇ ಏನು?
ಇದೇನಾ ಪ್ರಜಾಪ್ರಭುತ್ವದ ನಾಲ್ಕನೇ ಅಂಗದ ಸ್ಥಿತಿಗತಿ?
Urva residents can give correct answer. Priest or church authority is responsible for permission for any activities in church hall. It is not public place where you can do as you like. If any proud person who is spreading the unnecessary news, should be caught, ask him what exactly the matter, then if it is false, give him better treatment with danda or lathis. In future no body will dare to speak unnecessary like that against church. Some persons who have personal difference or revenge attitude towards church can keep away from church or
do some social service at any place. Don’t show your resentment to all.