ಮತದಾರರಿಗೆ ಪ್ರಜ್ಞೆ ಬಂದಿದೆ, ರಾಜಕಾರಣಿಗಳಿಗೆ ಬರುವುದು ಯಾವಾಗ?
ಜನರಿಂದ, ಜನರಿಗಾಗಿ, ಜನರೇ ನಡೆಸುವ ಸರಕಾರವನ್ನು ಪ್ರಜಾಪ್ರಭುತ್ವವೆನ್ನುತ್ತಾರೆನ್ನುವುದು ಬರೀ ಕ್ಲೀಶೆಯೇ ಆಗಿ ಹೋಗಿದೆ. ಪಾಠ ಮಾಡಲಿಕ್ಕಷ್ಟೇ ಲಾಯಕ್ಕೆಂಬ ಹೇಳಿಕೆ ಅದು. ಭಾರತದಲ್ಲಿ ನಿಜಕ್ಕೂ ಪ್ರಜಾಪ್ರಭುತ್ವದ ನೈಜ ಆಶಯಗಳ ಪಾಲನೆಯಾಗುತ್ತಿದೆಯಾ ನೋಡಿದರೆ, ಉತ್ತರ ನಿರಾಶಾದಾಯಕ. ಇಲ್ಲಿ ರಾಜಕಾರಣಿಗಳು ಪ್ರಜಾಪ್ರಭುತ್ವವನ್ನು ಮೀರಿದ ಪ್ರಭುಗಳಾಗಿ ಹೋಗಿದ್ದಾರೆ. ಕಾರ್ಯಾಂಗವಂತೂ ರಾಜಕಾರಣಿಗಳನ್ನೂ ಮೀರಿ ವರ್ತಿಸುತ್ತಿರುವುದನ್ನೂ ನೋಡಿದ್ದೇವೆ.
ಆದರೂ ಭಾರತದಲ್ಲಿ ಪ್ರಜಾಪ್ರಭುತ್ವವೆಂಬುದು ದಿನೇ ದಿನೇ ಬಲಿಷ್ಠವಾಗುತ್ತಿರುವುದು ಉಲ್ಲೇಖನೀಯ. ಕಳೆದ ಕೆಲವು ದಶಕಗಳಲ್ಲಿನ ಚುನಾವಣೆಗಳನ್ನು ಪರಿಶೀಲಿಸಿದರೆ, ಭಾರತದ ಮತದಾರರು ಪ್ರಜ್ಞಾವಂತರೆನ್ನಲು ಯಾವುದೇ ಸಂಶಯವಿಲ್ಲ. ಅದರಲ್ಲೂ ಸಾಮಾನ್ಯ, ಬಡ ಜನರಿಗೆ ರಾಜಕೀಯ ಪ್ರಜ್ಞೆ ಅಥವಾ ತಮ್ಮ ಹಕ್ಕು ಚಲಾವಣೆ ಬಗ್ಗೆ ಸ್ಪಷ್ಟ ಅರಿವಿದೆಯೆನ್ನುವುದನ್ನು ಇದು ತೋರಿಸುತ್ತದೆ. ಈ ಮಾತು ಯಾಕೆಂದರೆ, ಸದಾ ಸಿನಿಕರಂತೆ ಹೇಳಿಕೆ ಕೊಡುವ, ಅಲವತ್ತುಕೊಳ್ಳುವ ಶಿಕ್ಷಿತ ಮತ್ತು ಶ್ರೀಮಂತ ಜನರ ವರ್ಗ ಮತದಾನದಲ್ಲಿ ಆಸಕ್ತಿ ತೋರಿಸುವಲ್ಲಿ ಬಹಳ ಹಿಂದೆ ಇದ್ದಾರೆನ್ನುವುದನ್ನು ವಾಸ್ತವ ಸಂಗತಿ.
ಈ ಬಾರಿಯ ಬಿಹಾರದ ವಿಧಾನಸಭಾ ಚುನಾವಣೆ ಇಂತಹ ಅಂಶಗಳನ್ನು ಮತ್ತಷ್ಟು ದೃಢೀಕರಿಸಿದೆ.
ಇದನ್ನೆಲ್ಲಾ ಅರ್ಥ ಮಾಡಿಕೊಳ್ಳಬೇಕಾದರೆ ನೀವು ಒಂದು ಪಕ್ಷ/ಸಿದ್ಧಾಂತಕ್ಕೆ ವಾಲಿಕೊಂಡಿರುವುದನ್ನು ಬಿಡಬೇಕು. ನೀವು ಕಾಂಗ್ರೆಸ್, ಬಿಜೆಪಿ ಅಥವಾ ಯಾವುದೋ ಒಂದು ಪಕ್ಷದ ಅನುಯಾಯಿ ಅಥವಾ ಅಭಿಮಾನಿಯಾಗಿ ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ.
ಭಾರತದ ಇತ್ತೀಚಿನ ಬಹಳಷ್ಟು ಚುನಾವಣೆಗಳು ಯಾವ ವಿಷಯ ಅಥವಾ ಆಧಾರದಲ್ಲಿ ಜರುಗುತ್ತಿವೆ? ಅಭಿವೃದ್ಧಿ, ಜನರ ಅವಶ್ಯಕತೆ, ಮೂಲ ಸೌಕರ್ಯಗಳ ವಿಷಯದಲ್ಲಿ ಪಕ್ಷಗಳು ಮತ್ತು ಅಭ್ಯರ್ಥಿಗಳು ಚುನಾವಣೆಯಲ್ಲಿ ಹೋರಾಡಿದ್ದುಂಟೇ? ನನಗಂತೂ ನೆನಪಿಲ್ಲ.
ತೋರಿಕೆಗೆ ಅಥವಾ ಫಾರ್ಮಾಲಿಟಿಗಾಗಿ ಚುನಾವಣಾ ಪ್ರಣಾಳಿಕೆಗಳು ಬಿಡುಗಡೆಯಾಗುತ್ತವೆ. ಆದರೆ, ಮತದಾನ ಮಾಡುವ ಜನರಿಗೆ ಅದರ ಬಗ್ಗೆ ಹೇಗೆ ತಿಳಿಯಬೇಕು? ಮತದಾನ ಮಾಡುವವರು ಶ್ರಮಿಕರು. ಅವರಿಗೆ ಈ ಪ್ರಣಾಳಿಕೆಗಳ ಪುಸ್ತಕಗಳನ್ನು ಓದಲಿಕ್ಕೆ ಸಾಧ್ಯವೂ ಇಲ್ಲ. ಅವರಿಗದರ ಬಗ್ಗೆ ತಿಳಿದೂ ಇರುವುದಿಲ್ಲ. ಹೆಚ್ಚೆಂದರೆ ಪತ್ರಿಕೆಗಳಲ್ಲಿ ಬರುವ ವರದಿಯಿಂದಷ್ಟೇ ತಿಳಿಯಬೇಕು. ಅಷ್ಟಕ್ಕೂ ಪ್ರಣಾಳಿಕೆಗಳು ಬಿಡುಗಡೆಯಾಗುವುದೇ ಕೊನೆಯ ದಿನಗಳಲ್ಲಿ, ಚುನಾವಣೆಗೆ ಕೆಲವೇ ದಿನಗಳಿರುವಾಗ.
ಮತ್ತೆ ಯಾವ ಆದ್ಯತೆಗಳು ನಮ್ಮ ಚುನಾವಣೆಗಳಲ್ಲಿ ಪ್ರಭಾವ ಬೀರುತ್ತವೆ?
ಯಾರಿಗೆ ಗೊತ್ತಿಲ್ಲ ಹೇಳಿ. ಅದೇ – ಜಾತಿ, ಧರ್ಮ, ಭಾಷೆ, ಪ್ರದೇಶ, ಜನಾಂಗ, ಪಂಗಡ, ಒಳ ಪಂಗಡ ಮುಂತಾದವೇ ನಿಜಕ್ಕೂ ಮುಖ್ಯವಾಗಿರುವುದು. ಯಾವತ್ತಾದರೂ ಅಭ್ಯರ್ಥಿಗಳನ್ನು ವ್ಯಕ್ತಿಯ ವೃತ್ತಿಪರತೆ ನೋಡಿ ಅಥವಾ ಆತನ ಸಾಧನೆ, ವಿದ್ಯೆ, ಪಾಂಡಿತ್ಯ ಪರಿಶೀಲಿಸಿ ಆಯ್ಕೆ ಮಾಡಿದ್ದುಂಟೇ?
ಬಹಳ ಕಡಿಮೆ. ಅದೆಲ್ಲಾ ಇದ್ದರೂ ಆತನಿಗೆ ‘ರಾಜಕೀಯ’ ಅರ್ಹತೆಗಳಿಲ್ಲದಿದ್ದರೆ ಆತನನ್ನು ಯಾರೂ ಹತ್ತಿರ ಸೇರಿಸುವುದಿಲ್ಲ.
ದೇಶ, ರಾಜ್ಯವನ್ನಾಳಬೇಕಾಗಿರುವವರ ಅರ್ಹತೆ ಎಂದರೆ ಕೇವಲ ಮತ ತಂದು ಕೊಡುವ ಹುನ್ನಾರವಷ್ಟೇ ಆಗಿದೆಯೆಂದರೆ ನಿಜಕ್ಕೂ ದುರ್ದೈವ. ಕೇವಲ ಚುನಾವಣೆ ಗೆಲ್ಲಬೇಕು, ಮತ ಗಳಿಸಬೇಕು ಎಂಬುದೇ ಆದ್ಯತೆ ಮತ್ತು ಪ್ರಾಮುಖ್ಯತೆಯಾದ ಮೇಲೆ, ನಾಡಿನ ಪ್ರಗತಿ, ಅಭಿವೃದ್ಧಿಯೆಂಬುದು ಅತ್ಯಗತ್ಯವಲ್ಲವೆಂದಾಯಿತು.
ಈ ಪರಿಪಾಠ ಮತ್ತಷ್ಟು ಹಳ್ಳ ಹಿಡಿದು, ಕೇವಲ ಕ್ಷುಲ್ಲಕ ಸಂಗತಿಗಳೇ ಚುನಾವಣೆಗಳ ಪ್ರಮುಖ ವಿಷಯಗಳಾಗುವ ಮಟ್ಟಕ್ಕೆ ಬಂದಿದೆ. ಧಾರ್ಮಿಕ ವಿಷಯಗಳ ಪ್ರಲೋಭನೆ, ಜಾತಿ-ಧರ್ಮಗಳ ನಡುವೆ ಕಿಚ್ಚೆಬ್ಬಿಸುವುದು, ಭಾವನಾತ್ಮಕ ಸಂಗತಿಗಳನ್ನು ಪ್ರಚೋದಿಸಿ ಲಾಭ ಪಡೆಯುವುದು – ಇವೇ ಮುಂತಾದ ಸಂಗತಿಗಳನ್ನು ದೊಡ್ಡದು ಮಾಡಿ, ವಿವಾದಕ್ಕೀಡಾಗಿಸಿ, ಅವುಗಳಿಂದಲೇ ಮತಗಳನ್ನು ಆಕರ್ಷಿಸುವ ಪರಿಪಾಠ ಎಷ್ಟು ವೃದ್ಧಿಯಾಗಿತ್ತೆಂಬುದಕ್ಕೆ ಮೊನ್ನೆ ನಡೆದ ಬಿಹಾರದ ಚುನಾವಣೆಯೇ ಸಾಕ್ಷಿ.
ಹಾಗಾಗಿ ಇವತ್ತು ಚುನಾವಣೆ ಬಂತೆನ್ನುವಾಗ ಮುನ್ನೆಲೆಗೆ ಬರುವ ಸಂಗತಿಗಳೆಂದರೆ ಜಾತಿ, ಧರ್ಮ, ಭಾಷೆಗಳದ್ದೇ ಆಗಿದೆ. ಅದು ಇನ್ನಷ್ಟು ಮುಂದುವರಿದು ಜನರ ಖಾಸಗಿ ಸಂಗತಿಗಳೂ ಚುನಾವಣೆಗೆ ಬಹು ದೊಡ್ಡ ಚರ್ಚಾಸ್ಪದ, ವಿವಾದಾಸ್ಪದ ವಸ್ತುಗಳು! ಯಾವ ಜಾತಿಯವರು ಏನು ತಿನ್ನುತ್ತಾರೆ, ತಿನ್ನಬಾರದು ಮುಂತಾದ ವಿಷಯಗಳೂ ದೇಶ, ರಾಜ್ಯಗಳನ್ನು ಮುನ್ನಡೆಸುವ ರಾಜಕೀಯ ಪಕ್ಷಗಳಿಗೆ ಆದ್ಯ ವಿಷಯ, ಪ್ರಮುಖ ಗುರಿ. ಯಾರೋ ಏನೋ ಹೇಳಿಕೆ ಕೊಟ್ಟರೆ, ಅದನ್ನೇ ಗಂಟಲು ಹರಿಯುವಂತೆ ಗದ್ದಲವೆಬ್ಬಿವುಸುವುದು ಇನ್ನೊಂದು ಕೆಟ್ಟ ಚಾಳಿ.
ಇದರ ಪರಿಣಾಮ, ಬಿಹಾರದಲ್ಲಿ ಆ ರಾಜ್ಯದ ಅಗತ್ಯಗಳೇನು, ಏನೇನು ಅಭಿವೃದ್ಧಿ ಆಗಿದೆ, ಆಗಬೇಕಿದೆ, ಯಾವುದರ ಕೊರತೆ, ಸಂಪನ್ಮೂಲ, ಸವಲತ್ತು, ಜನರ ಜೀವನ ಸುಧಾರಣೆ, ಮೂಲಭೂತ ಅವಶ್ಯಕತೆಗಳಾದ ಆಹಾರ, ನೀರು, ಮನೆ, ವಿದ್ಯುತ್, ಉದ್ಯೋಗ ಮುಂತಾದ ವಿಚಾರಗಳ ಮೇಲೆ ಚರ್ಚೆಯಾಗಲಿಲ್ಲ, ವಾದಗಳಾಗಲಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಪ್ಯಾನಲ್ ಡಿಸ್ಕಶನ್‍ಗಳೂ ಆಗಲಿಲ್ಲ. ಮಾಧ್ಯಮಗಳಿಗೂ ಅದರ ಬಗ್ಗೆ ಆಸಕ್ತಿಯೆಲ್ಲಿಂದ ಬರಬೇಕು! ಅಲ್ವೆ?
ಒಂದು ಕಡೆ ಜಾತ್ಯತೀತವೆನ್ನುವ ಪಕ್ಷಗಳ ಮೈತ್ರಿಕೂಟ, ಅದಕ್ಕೆದುರಾಗಿ ಪ್ರಧಾನಿ ನರೇಂದ್ರ ಮೋದಿಯ ನಾಯಕತ್ವದ ಬಿಜೆಪಿಯ ಕೂಟ. ಇದೊಂದು ವಿನೂತನ ಬೆಳವಣಿಗೆ. ಮತಗಳು ಹರಿದು ಹಂಚಿ ಹೋಗಿ ಯಾರ್ಯಾರಿಗೋ ಲಾಭವಾಗುವ ಸಂಭವವೇ ಇರಲಿಲ್ಲ. ನೇರ ಮುಖಾಮುಖಿ. ಹೀಗಾದಿ ಸ್ಪರ್ಧೆ ಸ್ಪಷ್ಟವಾಗಿತ್ತು, ಮತದಾರರಿಗೂ ಆಯ್ಕೆ ಸುಲಭವಾಗಿತ್ತು.
ಮಾಧ್ಯಮಗಳ ಪ್ರಭಾವ ಮತ್ತು ಮತಿಗೆಟ್ಟ ಸಮೀಕ್ಷೆಗಳಿಂದ ಮತ್ತಷ್ಟು ದಾರಿ ತಪ್ಪಿದ್ದು ರಾಜಕೀಯ ಪಕ್ಷಗಳು. ಹಾಗಾಗಿ, ಅಭಿವೃದ್ಧಿ ರಾಜಕಾರಣಕ್ಕಿಂತ ಕೋಮು ವಿಚಾರಗಳು, ಧರ್ಮಗಳ ನಡುವಿನ ತಿಕ್ಕಾಟದ ವೈಭವೀಕರಣ ನಡೆಯಿತು. ಬೆಂಕಿಗೆ ತುಪ್ಪು ಸುರಿಯುವಂತೆ ಉತ್ತರ ಪ್ರದೇಶದ ದಾದ್ರಿಯಲ್ಲಿನ ಹತ್ಯೆ, ಹರಿಯಾಣ ದಲಿತ ಮಕ್ಕಳ ಸಂಹಾರದಂತಹ ಘಟನೆಗಳು ರಾಜಕೀಯದ ಪರಿಧಿಯಿಂದ ಹೊರಗೆ ಬಂದು ದೊಡ್ಡ ಸುದ್ದಿಗೆ ಗ್ರಾಸವಾಯಿತು.
ಗೋವನ್ನು ರಾಜಕೀಯಕ್ಕೆ ಎಳೆದು ತಂದು, ಬೀಫ್ ತಿನ್ನುವ ವಿಚಾರದಲ್ಲಿ ಗಲಾಟೆ, ರಾಜಕೀಯ, ಅಲ್ಪಸಂಖ್ಯಾತರ, ದಲಿತರ ಮೇಲೆ ಹಲ್ಲೆ, ಹತ್ಯೆ ಮುಂತಾದ ವಿಚಾರಗಳಿಂದ ಸಹಿಷ್ಣುತೆಯಿಲ್ಲದ ವಾತಾವರಣದ ಸೃಷ್ಟಿಯಾಯಿತು. ಸಾಕಷ್ಟು ಸಾಹಿತಿಗಳು ಇದನ್ನೇ ದೊಡ್ಡ ವಿಚಾರ ಮಾಡಲು ನೇರವಾಗಿ ಕಾರಣರಾದರು, ಪ್ರಶಸ್ತಿಗಳನ್ನು ವಾಪಾಸ್ ಮಾಡುವ ಆಂದೋಲನದ ಮೂಲಕ. ಒಟ್ಟಾರೆ ಪ್ರಮುಖ ಚುನಾವಣೆಯೊಂದು ರಾಜಕೀಯ ಪಕ್ಷಗಳಿಗೆ ಮಾತ್ರ ಪ್ರತಿಷ್ಠೆಯ ವಿಷಯವಾಗುಳಿಯದೆ, ದೇಶದಾದ್ಯಂತ ವಾತಾವರಣವನ್ನು ಬಿಸಿಗೇರಿಸಿತು.
ಆದರೆ ಬಿಹಾರದ ಹೊರಗಿನವರಿಗೆ, ಮಾಧ್ಯಮಗಳನ್ನು ಬಿಟ್ಟರೆ, ಅಲ್ಲಿನ ವಸ್ತುಸ್ಥಿತಿ ತಿಳಿಯುವ ಸಂಭವವಿರಲಿಲ್ಲ. ಸಮೀಕ್ಷೆಗಳಂತೂ ಎರಡೂ ಪಕ್ಷಗಳಿಗೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಡುವ ಭವಿಷ್ಯ ನುಡಿದವು. ಹಾಗಾಗಿ ಪ್ರಚಾರ ತಾರಕಕ್ಕೇರಿತು. ಕೊನೆಯ ಹಂತದ ಮತದಾನ ನಡೆದು ಗಂಟೆಗಳು ಕಳೆಯುವುದೊಳಗೆ ಪ್ರಕಟವಾದ ಮತದಾನೋತ್ತರ ಸಮೀಕ್ಷೆಗಳೂ ಅದೇ ರಾಗವನ್ನು ಪುನರುಚ್ಚರಿಸಿದವು. ಅಂದರೆ ಮಹಾಮೈತ್ರಿಕೂಟ ಮತ್ತು ಎನ್‍ಡಿಎಗೆ ಜಿದ್ದಾಜಿದ್ದಿನ ಕಾಳಗ ಏರ್ಪಟ್ಟು ಲಘು ಅಂತರದಲ್ಲಿ ಫಲಿತಾಂಶ ತೀರ್ಮಾನವಾಗುವುದೆಂದೇ ಎಲ್ಲರೂ ನಂಬಿಬಿಟ್ಟರು.
ಆದರೆ ಇವರೆಲ್ಲರಿಗೂ ಮತದಾರರ ಅಂತರಾಳವನ್ನು ಅರಿಯಲು ಸಾಧ್ಯವಾಗಲೇ ಇಲ್ಲ. ಮಾಧ್ಯಮಗಳು ಮತ್ತು ಸಮೀಕ್ಷೆ ನಡೆಸುವವರು ನೈಜ ಮತದಾನಕ್ಕಿಂತ ತಾವು ಕೊಡುವ ಲೆಕ್ಕಾಚಾರಗಳ ತೀರ್ಪುಗಳೇ ಹೆಚ್ಚೆಂಬ ಭ್ರಮೆ, ಅಹಂಕಾರದಿಂದ ವರ್ತಿಸಿದವು.
ಆದರೆ ವಾಸ್ತವವು ಬೇರೆಯದೇ ಆಗಿತ್ತು. ನಿಜಕ್ಕೂ ಬಿಹಾರದಲ್ಲಿ ಏನು ನಡೆಯುತ್ತಿದೆಯೆನ್ನವುದನ್ನು ಬಿಹಾರದ ಜನರು ಮಾತ್ರ ತಿಳಿದುಕೊಂಡಿದ್ದರು. ಮಾಧ್ಯಮಗಳ ಭರಾಟೆ ವಾಸ್ತವಾಂಶವನ್ನು ತೋರಿಸಿಕೊಡದಿರಲು ಕಾರಣವಾಯಿತು. ಬಿಹಾರದ ಜನರು ತಮ್ಮ ಆಯ್ಕೆಯನ್ನು ಪ್ರಜ್ಞಾಪೂರ್ವಕವಾಗಿ, ಮೊದಲೇ ಮಾಡಿದ್ದರೆಂಬುದು ಫಲಿತಾಂಶ ಬಂದ ನಂತರವೇ ಪ್ರಕಟವಾಯಿತು.
ಹಾಗಾದರೆ ದೇಶವೇ ಅಲ್ಲಾಡಿ ಹೋಗುವಂತಹ ವಿವಾದಗಳು, ವಾದಗಳು, ಆರೋಪಗಳು ಅಲ್ಲಿನ ಮತದಾರರ ಮೇಲೆ ಪ್ರಭಾವ ಬೀರಿಲ್ಲವೆ?
ಇಲ್ಲ. ಅದು ಕೇವಲ ರಾಜಕೀಯ ಮುಖಂಡರ, ಮಾಧ್ಯಮಗಳ ಹಗಲುಗನಸಾಗಿತ್ತೇ ಹೊರತು, ಅದರ ನೈಜ ಮಹತ್ವ ಜನರಿಗೆ ಅರಿವಾಗಿತ್ತು. ಹಾಗಾಗಿ ಈ ಯಾವುದೇ ಪ್ರಲೋಭನೆಗಳಿಗೆ, ಪ್ರಚಾರ ಅಪಪ್ರಚಾರಗಳಿಗೆ ಅಲ್ಲಿನ ಮತದಾರರು ಬಲಿಯಾಗಲಿಲ್ಲ.
ಆಘಾತಕಾರಿ ಫಲಿತಾಂಶದಿಂದ ತತ್ತರಿಸಿ ಹೋದ ಬಿಜೆಪಿ ಮುಖಂಡರ ಹೇಳಿಕೆಯಿಂದ ಸ್ಪಷ್ಟವಾಗುವುದೇನೆಂದರೆ, ಬಿಹಾರದಲ್ಲಿ ನಿತೀಶ್ ಕುಮಾರ್ ಅವರು ಸಮರ್ಥ ನಾಯಕತ್ವ ನೀಡಿದ್ದರು ಮತ್ತು ಅಭಿವೃದ್ಧಿ, ಕಲ್ಯಾಣ ಕಾರ್ಯಗಳನ್ನು ಕೈಗೊಂಡಿದ್ದರೆಂಬುದು. ಹಾಗಾದರೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಅವರಿಗಿದು ತಿಳಿದಿರಲಿಲ್ಲವೆ?
ತಿಳಿದಿತ್ತು. ಆದರೆ ಹಳೆಯ ಚಾಳಿ ಎಲ್ಲಿ ಬಿಟ್ಟು ಹೋಗುತ್ತದೆ? ಬಿಜೆಪಿಯೆಂಬ ಪಕ್ಷ ಯಾವತ್ತು ನೆಗೆಟಿವ್ ರಾಜಕಾರಣವನ್ನೇ ಆಯ್ಕೆ ಮಾಡುವ ಪಕ್ಷ. ಕೊನೆಯ ಗಳಿಗೆಯಲ್ಲಿ ಜನರ ಗಮನವನ್ನು ನೈಜ ವಿಷಯಗಳಿಂದ ಸೂಕ್ಷ, ಭಾವನಾತ್ಮಕ ವಿಚಾರಗಳತ್ತ ಹೊರಳಿಸಿ ಅದರ ಮೂಲಕವೇ ಮತ ಗೆಲ್ಲುವ ತಂತ್ರ ಕಳೆದೆರಡು ದಶಕಗಳಿಂದ ಅದಕ್ಕೆ ಕರಗತವಾಗಿತ್ತು. ಅಷ್ಟಕ್ಕೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದಿದ್ದು ಇದೇ ತಂತ್ರದಿಂದಾಗಿ. ಅದಕ್ಕೆ ಮುಕ್ತವಾಗಿ ಸಹಕರಿಸಿದ್ದು ಕಾಂಗ್ರೆಸ್ ಪಕ್ಷ, ತನ್ನ ಷಂಡತನದಿಂದಾಗಿ.
ಲೋಕಸಭಾ ಚುನಾವಣೆಯ ಹ್ಯಾಂಗೋವರ್‍ನಿಂದ ಇನ್ನೂ ಹೊರ ಬರದ ಮೋದಿ ಮತ್ತು ಬಿಜೆಪಿ, ಬಿಹಾರ ಚುನಾವಣೆಯನ್ನು ಲಘುವಾಗಿ ಪರಿಗಣಿಸಿದ್ದು, ಜನರು ತನಗೇ ಇನ್ನೂ ಮರುಳಾಗಿದ್ದಾರೆಯೆಂಬ ಭ್ರಮೆ ಮತ್ತು ಅಹಂಭಾವ, ಉಡಾಫೆ ವರ್ತನೆ ಅದಕ್ಕೆ ತುಂಬಾ ದುಬಾರಿಯಾಗಿ ಪರಿಣಮಿಸಿತು. ಚುನಾಯಿಸಲು ಎರಡೇ ಆಯ್ಕೆಗಳು ತನ್ನ ಮುಂದಿದ್ದಾಗ, ಮತದಾರರಿಗೆ ನಿರ್ಣಯ ಕೈಗೊಳ್ಳಲು ಸಾಕಷ್ಟು ಸುಲಭವಾಗಿತ್ತು.
ಮಾಧ್ಯಮಗಳಲ್ಲಿ ಮತ್ತು ಪ್ರಚಾರ ಭಾಷಣಗಳಲ್ಲಿನ ಮಾತುಗಳನ್ನು ಜನರು ಪರಿಗಣಿಸಲೇ ಇಲ್ಲ. ಲೋಕಸಭಾ ಚುನಾವಣೆಗೂ ವಿಧಾನಸಭಾ ಚುನಾವಣೆಗೂ ಇರುವ ವ್ಯತ್ಯಾಸ ರಾಜಕೀಯ ಪಕ್ಷಗಳಿಗಿಂತ ಜನರಿಗೇ ಹೆಚ್ಚು ಮನವರಿಕೆಯಾಗಿತ್ತು. ನೇರ ಸ್ಪರ್ಧೆಯಿಂದಾಗಿ ಅವರಿಗೆ ನಿರ್ಧಾರ ಕೈಗೊಳ್ಳಲು ಶ್ರಮಪಡಬೇಕಾದ ಅಗತ್ಯವೂ ಇರಲಿಲ್ಲ.
ಹಾಗಾಗಿ ಇಂತಹ ಫಲಿತಾಂಶ ಬಂದಿತು. ರಾಜ್ಯದ ಹೊರಗೆ ಏನೇ ಸುದ್ದಿ, ಪ್ರಚಾರವಿದ್ದರೂ, ಬಿಹಾರದಲ್ಲಿ ಮಾತ್ರ ಆಯ್ಕೆ ಮುಕ್ತವಾಗಿ ನಡೆದು ಬಿಟ್ಟಿತ್ತು. ಫಲಿತಾಂಶವೇ ಇದೆಲ್ಲವನ್ನೂ ಸಾಬೀತುಪಡಿಸುತ್ತದೆ.
ವೃತ್ತಿಪರ ರಾಜಕಾರಣಿಗಳಿಗಿಂತ ಮಾಧ್ಯಮಗಳು ಮತ್ತು ಸಾಹಿತಿಗಳೂ ಜಿದ್ದಿಗೆ ಬಿದ್ದವರಂತೆ ಓಲೈಕೆ, ವಿರೋಧ, ಪ್ರಚಾರ, ಪ್ರತಿಭಟನೆಗಿಳಿದಾಗ, ಇದೆಲ್ಲವನ್ನೂ ಮತದಾರರು ಸೂಕ್ಷ್ಮವಾಗಿ ಪರಿಶೀಲಿಸಿದ್ದಾರೆ. ಅದೆಲ್ಲವನ್ನೂ ಅವರು ಹೇಳಿಕೊಳ್ಳದಿರಬಹುದು. ಆದರೆ ಅವರಿಗಿರುವ ಯೋಚನಾ ಶಕ್ತಿ, ನಿರ್ಧಾರ ತೆಗೆದುಕೊಳ್ಳುವ ಸಾಮಥ್ರ್ಯವನ್ನು ಯಾರೂ ಅರ್ಥ ಮಾಡಿಕೊಳ್ಳಲೇ ಇಲ್ಲ. ಜನರ ನಿರ್ಣಯಗಳನ್ನು ತಾವೇ ನಿರ್ದೇಶಿಸುತ್ತೇವೆ ಎಂಬ ಅಹಂಕಾರ, ದರ್ಪ ಎದ್ದು ಕಾಣುತ್ತಿತ್ತು. ಜನರಿಗೋಸ್ಕರ ಚಿಂತಿಸಬೇಕಾದ ಸಾಹಿತಿಗಳೂ ರಾಜಕೀಯಕ್ಕಿಳಿದದ್ದು ಮತ್ತೊಂದು ಪ್ರಮಾದ.
ಆದರೆ ಮತದಾರು ಸ್ಪಷ್ಟವಾಗಿ ತಮ್ಮ ಮತ್ತು ಚುನಾವಣೆಗಳ ಆದ್ಯತೆಯನ್ನು ಪ್ರಕಟಿಸಿಬಿಟ್ಟರು, ತುಂಬಾ ಸ್ಪಷ್ಟವಾಗಿ ಮತ್ತು ಎತ್ತರದ ದನಿಯಿಂದ. ಬದಲಾದ ರಾಜಕೀಯ ಸಮೀಕರಣಗಳು, ಮೈತ್ರಿ ಜನರಿಗೆ ಈ ನಿಟ್ಟಿನಲ್ಲಿ ತುಂಬಾ ಸಹಕಾರಿಯಾಗಿದ್ದನ್ನು ಮರೆಯುವಂತಿಲ್ಲ. (ಬಿಜೆಪಿಗೆ ಸ್ಥಳೀಯ ನಾಯಕರಿಲ್ಲದೇ ಹೋಗಿದ್ದು, ಕೇವಲ ಪ್ರಧಾನಿ ಮೋದಿಯ ಮೇಲೆ ಅವಲಂಬಿತವಾಗಿದ್ದು ಮತ್ತು ಮಹಾಮೈತ್ರಿಯ ಒಗ್ಗಟ್ಟು, ಸ್ಪಷ್ಟತೆ, ಹಿಂದಿನ ಸಾಧನೆ – ಇವರಡರ ಮುಖಾಮುಖಿಯಲ್ಲಿ ಜನರ ಆಯ್ಕೆಗೆ ಹೆಚ್ಚಿನ ಚಿಂತನೆಯ ಅವಶ್ಯಕತೆಯೇ ಬೇಕಿರಲಿಲ್ಲ).
ಇದರ ಸಂದೇಶ ದೇಶಕ್ಕೇ ತಟ್ಟಿದೆ. ಮತ ಗಳಿಸುವುದಕ್ಕಾಗಿ ನೈಜ ವಿಷಯಗಳನ್ನು ಮರೆಮಾಚುವ ಪಕ್ಷಗಳಿಗೆ, ರಾಜಕಾರಣಿಗಳಿಗೆ ಎಚ್ಚರಿಕೆ ಈ ಸಂದೇಶದಲ್ಲಿದೆ. ಸಂಬಂಧಪಟ್ಟವರು ಇನ್ನು ಅರ್ಥಮಾಡಿಕೊಂಡರೆ ನಾಡಿಗೆ, ದೇಶಕ್ಕೆ ತುಂಬಾ ಒಳ್ಳೆಯದು.
ಭಾರತದ ಜನರು ಪ್ರಜಾಪ್ರಭುತ್ವವನ್ನು, ಮುಖ್ಯವಾಗಿ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿದ್ದಾರೆಂಬುದು ನಿಜಕ್ಕೂ ಆಶಾದಾಯಕ ಬೆಳವಣಿಗೆ. ಇದು ಇನ್ನಷ್ಟು ಮುಂದುವರಿದು, ರಾಜಕಾರಣಿಗಳು ಮತ್ತು ಪಕ್ಷಗಳು ಜನರಿಗಾಗಿ, ಜನರ ಸೇವೆಗಾಗಿ ಇರುವುದೇ ಹೊರತು, ಜನರು ಅವರಿಗೋಸ್ಕರ ಇರುವುದಲ್ಲವೆಂಬುದನ್ನು ಪ್ರತಿಯೊಬ್ಬರಿಗೆ ಮನದಟ್ಟು ಮಾಡುವಲ್ಲಿ ಸಫಲವಾದಲ್ಲಿ, ಭಾರತ ನಿಜಕ್ಕೂ ಆರೋಗ್ಯಕರ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತದೆ.
Feedback: budkuloepaper@gmail.com