ಹೊರಳು ನೋಟ: ಶತಮಾನದ ಕಾಂಗ್ರೆಸ್ನ ಏಳುಬೀಳು
ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭಾ ಚುನಾವಣೆಗಳ ಭಾರೀ ಸೋಲಿನ ನಂತರ ಕಾಂಗ್ರೆಸ್ ಪಕ್ಷ ದೇಶದಲ್ಲಿ ಕೆಲವು ಪ್ರಾದೇಶಿಕ ಪಕ್ಷಗಳಿಗಿಂತ ಹೀನಾಯ ಸ್ಥಿತಿಯನ್ನು ತಲುಪಿದೆ. ಶತಮಾನಕ್ಕೂ ಮೀರಿದ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಭಾರತದ 29 ರಾಜ್ಯಗಳು ಹಾಗೂ 7 ಕೇಂದ್ರಾಡಳಿತ ಪ್ರದೇಶಗಳ ಪೈಕಿ ಅಧಿಕಾರದಲ್ಲಿರುವುದು ಕೇವಲ ಬೆರಳೆಣಿಕೆಯಷ್ಟು ರಾಜ್ಯಗಳಲ್ಲಿ ಮಾತ್ರ. ಅದೂ ಸಹ ಈಶಾನ್ಯದ ಪುಟ್ಟ ರಾಜ್ಯಗಳಾದ ಮೇಘಾಲಯ, ಅರುಣಾಚಲಪ್ರದೇಶ, ಮಿಜೋರಾಂ, ಮಣಿಪುರ, ಅಸ್ಸಾಂ, ಉತ್ತರಾಖಾಂಡ್, ಹಿಮಾಚಲಪ್ರದೇಶಗಳು. ಇವುಗಳನ್ನು ಹೊರತುಪಡಿಸಿದರೆ, ಕಾಂಗ್ರೆಸ್, ತನ್ನ ಸ್ವಂತಬಲದಿಂದ ಅಧಿಕಾರದಲ್ಲಿರುವ ಏಕೈಕ ದೊಡ್ಡ ರಾಜ್ಯವೆಂದರೆ ಅದು ಕರ್ನಾಟಕ ಮಾತ್ರ. ಇನ್ನು ಕೇರಳ, ಜಮ್ಮು ಕಾಶ್ಮೀರ ಹಾಗೂ ಜಾರ್ಖಂಡ್ಗಳಲ್ಲಿ ಮೈತ್ರಿ ಪಕ್ಷಗಳ ಬೆಂಬಲದಿಂದ ಅಧಿಕಾರ ಸೂತ್ರ ಹಿಡಿದಿದೆ. ಇಂತಹ ದಯನೀಯ ಸ್ಥಿತಿಗೆ ಕಾರಣವೇನು ಎನ್ನುವ ಆತ್ಮಾವಲೋಕನ ಕಾಂಗ್ರೆಸ್ನಲ್ಲಿ ಆರಂಭವಾಗಬೇಕಿದೆ.
ಸ್ವಾತಂತ್ರ್ಯ ಬಂದನಂತರ ಕಾಂಗ್ರೆಸ್ ದೇಶದಲ್ಲಿ ಪ್ರಶ್ನಾತೀತ ಪ್ರಭುತ್ವ ಸಾಧಿಸಿದ ಏಕೈಕ ಪಕ್ಷವಾಗಿತ್ತು. ಆದರೆ 1967ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಪ್ರಥಮ ಬಾರಿಗೆ ಕಾಂಗ್ರೆಸ್ ಮುಗ್ಗರಿಸಿತು. ಈ ಚುನಾವಣೆಯಲ್ಲಿ ಶೇ.41ರಷ್ಟು ಮತ ಗಳಿಸಿದ ಕಾಂಗ್ರೆಸ್ ಪ್ರಥಮ ಬಾರಿಗೆ ಅತಿ ಕಡಿಮೆ 283 ಲೋಕಸಭಾ ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು. ಲೋಕಸಭೆಯಲ್ಲಿ ಕೂದಲೆಳೆಯ ಬಹುಮತ ಗಳಿಸಿದ್ದ ಕಾಂಗ್ರೆಸ್ ಪ್ರಥಮ ಬಾರಿಗೆ ಪಂಜಾಬ್, ಬಿಹಾರ, ಒರಿಸ್ಸಾ, ಪಶ್ಚಿಮಬಂಗಾಳ, ಕೇರಳ ಮತ್ತು ತಮಿಳುನಾಡಿನಲ್ಲಿ ತನ್ನ ನೆಲೆ ಕಳೆದುಕೊಂಡಿತ್ತು.
ಬ್ರಿಟೀಷರು ಭಾರತ ಬಿಟ್ಟು ತೊಲಗಿದ ನಂತರ ಸುಮಾರು ಎರಡು ದಶಕಗಳ ಕಾಲ ಕಾಂಗ್ರೆಸ್ಸಿನಲ್ಲಿ ಸಾಮೂಹಿಕ ನಾಯಕತ್ವ ಜೀವಂತವಾಗಿತ್ತು. ಪ್ರಧಾನಿಯಾಗಿದ್ದ ಜವಹರಲಾಲ್ ನೆಹರು ಎಂದೂ ನಿರಂಕುಶಮತಿಯಾಗಿರಲಿಲ್ಲ. ಆದರೆ 1967ರ ಲೋಕಸಭಾ ಚುನಾವಣೆಯ ನಂತರ ಪ್ರಧಾನಿ ಗದ್ದುಗೆಗೇರಿದ ಇಂದಿರಾಗಾಂಧಿ ಸಾಮೂಹಿಕ ನಾಯಕತ್ವಕ್ಕೆ ತಿಲಾಂಜಲಿ ನೀಡಿದರು. ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ನಿಜಲಿಂಗಪ್ಪ, ಪ್ರಮುಖ ಪ್ರಾದೇಶಿಕ ನಾಯಕರುಗಳಾದ ಕೆ.ಕಾಮರಾಜ್, ಮೊರಾರ್ಜಿ ದೇಸಾಯಿ, ಎಸ್.ಕೆ.ಪಾಟೀಲ್, ಅತುಲ್ಯ ಘೋಷ್ ಮುಂತಾದವರು ಇಂದಿರಾ ಚಕ್ರಾಧಿಪತ್ಯದಲ್ಲಿ ಮೂಲೆಗುಂಪಾದರು. ಈ ಬೆಳವಣಿಗೆ 1969ರಲ್ಲಿ ಕಾಂಗ್ರೆಸ್ ವಿಭಜನೆಗೆ ಕಾರಣವಾಯಿತು. ತದನಂತರ ಮೂಲ ಕಾಂಗ್ರೆಸ್ಸಿನಲ್ಲಿ ಸಾಮೂಹಿಕ ನಾಯಕತ್ವ ತೆರೆಮರೆಗೆ ಸರಿದು ಇಂದಿರಾ ಸಂತತಿಯನ್ನು ಸ್ತುತಿಸುವ ಭಟ್ಟಂಗಿಗಳ ಮಹಾನ್ ಪಡೆ ಬೇರುಬಿಡಲಾರಂಭಿಸಿತು.
ಗರೀಬಿ ಹಟಾವೋ ಘೋಷಣೆಯೊಂದಿಗೆ 1971ರಲ್ಲಿ ಅವಧಿಗೆ ಮೊದಲೇ ಚುನಾವಣೆ ನಡೆಸಿ, ಕಾಂಗ್ರೆಸ್ ಜನಪ್ರಿಯತೆಯನ್ನು ಪುನರುಜ್ಜೀವನಗೊಳಿಸುವಲ್ಲಿ ಇಂದಿರಾ ಯಶಸ್ವಿಯಾಗಿದ್ದರು. ಈ ಚುನಾವಣೆಯಲ್ಲಿ ಶೇ.44ರಷ್ಟು ಮತಗಳಿಸಿ 352 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಿತ್ತು. ತದನಂತರ ಕಾಂಗ್ರೆಸ್ಸಿಗರ ಪಾಲಿಗೆ ಇಂದಿರಾಗಾಂಧಿ ಗೆಲ್ಲುವ ಕುದುರೆಯಾಗಿದ್ದರು. ಗ್ರಾಮ ಪಂಚಾಯತಿ ಚುನಾವಣೆಯಲ್ಲಿಯೂ ಗೆಲ್ಲಲಾರದ ಮಹಾನ್ ಭಟ್ಟಂಗಿಗಳು ಕಾಂಗ್ರೆಸ್ ವರ್ಕಿಂಗ್ ಕಮಿಟಿ, ಎಐಸಿಸಿ ಅಧ್ಯಕ್ಷತೆ ಹಾಗೂ ವಿವಿಧ ರಾಜ್ಯಗಳ ಅಧ್ಯಕ್ಷ ಗಾದಿ ಮುಂತಾದ ಆಯಕಟ್ಟಿನ ಸ್ಥಾನಗಳನ್ನು ಅಲಂಕರಿಸಲಾರಂಭಿಸಿದರು. ಜನರೊಡನೆ ಗುರುತಿಸಿಕೊಂಡು ಬೇರುಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವ ಜನನಾಯಕರುಗಳಿಗೆ ಕಾಂಗ್ರೆಸ್ನಲ್ಲಿ ಸ್ಥಾನ ದೊರೆಯದಂಥ ಪರಿಸ್ಥಿತಿ ನಿರ್ಮಾಣಗೊಂಡಿತು. ನಾಯಕತ್ವದ ತಪ್ಪು ಒಪ್ಪುಗಳನ್ನು ಪ್ರಶ್ನಿಸದ ‘ಜೀ ಹುಜೂರ್’ಗಳ ಪಕ್ಷವಾಗಿ ಕಾಂಗ್ರೆಸ್ ರೂಪುಗೊಂಡಿತು.
1974ರಲ್ಲಿ ಅಲಹಾಬಾದ್ ಹೈಕೋರ್ಟ್ ಇಂದಿರಾ ಗಾಂಧಿ ಚುನಾವಣಾ ಭ್ರಷ್ಟಾಚಾರ ಎಸಗಿದ್ದಾರೆ ಎಂದು ತೀರ್ಪು ನೀಡಿ ಅವರನ್ನು ಸದಸ್ಯತ್ವದಿಂದ ಅನೂರ್ಜಿತಗೊಳಿಸಿತ್ತು. ಈ ಸಂದರ್ಭದಲ್ಲಿ ಇಂದಿರಾ ನಾಯಕತ್ವದ ವಿರುದ್ಧ ಸೊಲ್ಲೆತ್ತಿದವರನ್ನು ಕಾಂಗ್ರೆಸ್ನಿಂದ ಉಚ್ಚಾಟಿಸಲಾಯಿತು. ಪ್ರಧಾನಿ ಗದ್ದುಗೆಯಲ್ಲಿ ಉಳಿದುಕೊಳ್ಳಲು ಇಂದಿರಾ, ಜನತಂತ್ರವನ್ನೇ ಬುಡಮೇಲು ಮಾಡಿದರು. ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಹೇರಲಾಯಿತು. ತದನಂತರ 1977ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅವಮಾನಕರ ಸೋಲು ಅನುಭವಿಸಿತು. ಈ ಚುನಾವಣೆಯಲ್ಲಿ ಶೇ.35ರಷ್ಟು ಮತ ಗಳಿಸಿ 154 ಕ್ಷೇತ್ರಗಳಲ್ಲಿ ಜಯ ಗಳಿಸಿತು. ಈ ಮೂಲಕ ಪ್ರಪ್ರಥಮ ಬಾರಿಗೆ ಭಾರತದಲ್ಲಿ ಕಾಂಗ್ರೆಸ್ಸೇತರ ಸರ್ಕಾರವೊಂದು ಅಧಿಕಾರದ ಗದ್ದುಗೆಗೇರಿತು.
ವಿವಿಧ ಸಿದ್ಧಾಂತಗಳ ಮಿಶ್ರಣವಾಗಿ ಮೊರಾರ್ಜಿ ದೇಸಾಯಿಯವರ ನೇತೃತ್ವದಲ್ಲಿ ಕೇಂದ್ರದಲ್ಲಿ ಅಧಿಕಾರದ ಗದ್ದುಗೇರಿದ ಜನತಾ ಪಕ್ಷದಲ್ಲಿ ಸೃಷ್ಟಿಯಾದ ಸೈದ್ಧಾಂತಿಕ ಸಂಘರ್ಷದ ಪರಿಣಾಮ ಕೇವಲ ಮೂರು ವರ್ಷಗಳಲ್ಲಿ ಅಧಿಕಾರ ಕಳೆದುಕೊಂಡಿತು. There is no alternative ಎನ್ನುವ ಪರಿಸ್ಥಿತಿಯಲ್ಲಿ ನೆಗೆಟಿವ್ ಮತದಾನದ ಲಾಭ ಪಡೆದ ಕಾಂಗ್ರೆಸ್ 1980ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಶೇ.43ರಷ್ಟು ಮತಗಳಿಸಿ 353 ಕ್ಷೇತ್ರಗಳಲ್ಲಿ ಜಯ ಗಳಿಸಿತು. ಇಂದಿರಾ ಅಮಾನುಷ ಹತ್ಯೆಯ ಹಿನ್ನೆಲೆಯಲ್ಲಿ 1984ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅನುಕಂಪದ ಅಲೆಯ ಲಾಭ ಪಡೆದು ಕಾಂಗ್ರೆಸ್ ಶೇ.48ರಷ್ಟು ಮತಗಳಿಸಿ 415 ಲೋಕಸಭಾ ಕ್ಷೇತ್ರಗಳಲ್ಲಿ ಜಯ ಗಳಿಸಿತು.
1977ರ ಲೋಕಸಭಾ ಚುನಾವಣೆಯಲ್ಲಿ ಘಟಿಸಿದ ಅವಮಾನಕರ ಸೋಲಿನಿಂದ ಕಾಂಗ್ರೆಸ್ ಪಾಠ ಕಲಿಯಲಿಲ್ಲ. ಗರ್ಭಗುಡಿ ಸಂಸ್ಕೃತಿಯ ಆರಾಧಕರು, ಪಂಚಾಯ್ತಿ ಚುನಾವಣೆಯನ್ನೂ ಗೆಲ್ಲಲಾಗದ, ಬೆನ್ನುಮೂಳೆ ಇಲ್ಲದ ಇಂದಿರಾ ಸಂತತಿಯ ‘ಜೀ ಹುಜೂರ್’ಗಳು ವಿವಿಧ ರಾಜ್ಯಗಳ ಕಾಂಗ್ರೆಸ್ ನಾಯಕತ್ವಕ್ಕೆ ನಿರ್ದೇಶನ ನೀಡಲಾರಂಭಿಸಿದರು. ಪ್ರಬಲ ಪ್ರಾದೇಶಿಕ ನಾಯಕರುಗಳು ಬೆಳೆದರೆ, ತಮ್ಮ ಕುರ್ಚಿಗೆಲ್ಲಿ ಸಂಚಕಾರ ಬರುತ್ತದೋ ಎಂದು ‘ಮಾಸ್ಬೇಸ್’ ಇರುವ ಕಾಂಗ್ರೆಸ್ ನಾಯಕರನ್ನು ಮೂಲೆಗುಂಪು ಮಾಡಲಾರಂಭಿಸಿದರು. ಎಪ್ಪತ್ತರ ದಶಕದಿಂದ ಕರ್ನಾಟಕದಲ್ಲಿ ದೇವರಾಜ ಅರಸು, ಆಂಧ್ರಪ್ರದೇಶದಲ್ಲಿ ಬ್ರಹ್ಮಾನಂದ ರೆಡ್ಡಿ, ತಮಿಳುನಾಡಿನಲ್ಲಿ ಕರುಪ್ಪಯ್ಯ ಮೂಪನಾರ್, ಮಹಾರಾಷ್ಟ್ರದಲ್ಲಿ ಶರದ್ ಪವಾರ್, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ಮಿಜೋರಾಂನಲ್ಲಿ ಪಿ.ಎ. ಸಂಗ್ಮಾ, ಹರಿಯಾಣದಲ್ಲಿ ಬನ್ಸಿಲಾಲ್, ಭಜನ್ಲಾಲ್ರಂತಹ ಮಾಸ್ ಲೀಡರ್ಗಳನ್ನು ಮೂಲೆಗುಂಪು ಮಾಡುವ ಪ್ರಯತ್ನ ನಡೆಯಿತು. ಶರದ್ ಪವಾರ್ ಮತ್ತು ಮಮತಾ ಬ್ಯಾನರ್ಜಿಯವರಂತಹ ಬಂಡಾಯ ಕಾಂಗ್ರೆಸ್ಸಿಗರು ಪ್ರಾದೇಶಿಕ ಪಕ್ಷ ಕಟ್ಟಿ ಕಾಂಗ್ರೆಸ್ ನಾಯಕತ್ವಕ್ಕೆ ಸಡ್ಡು ಹೊಡೆದರು. ಕಾಂಗ್ರೆಸ್ನ ಪ್ರಬಲ ಪ್ರಾದೇಶಿಕ ನಾಯಕತ್ವ ವಿರೋಧಿ ನೀತಿಯ ಲಾಭ ಪಡೆದು ಉತ್ತರ ಪ್ರದೇಶ, ಬಿಹಾರದಂತಹ ಅತಿದೊಡ್ಡ ರಾಜ್ಯಗಳಲ್ಲಿ ಕಾಂಗ್ರೆಸ್ಸೇತರ ಪ್ರಾದೇಶಿಕ ಪಕ್ಷಗಳು ವಿಜೃಂಭಿಸಲಾರಂಭಿಸಿದವು.
ಕಾಂಗ್ರೆಸ್ ಹೈಕಮಾಂಡ್ನಲ್ಲಿ ದಶಕ ದಶಕಗಳಿಂದ ಠಿಕಾಣಿ ಹೂಡಿರುವ ಗರ್ಭಗುಡಿಯ ಜೀ ಹುಜೂರ್ಗಳು ಪ್ರತಿಯೊಂದು ರಾಜ್ಯಗಳಲ್ಲಿ ಮೂರು ನಾಲ್ಕು ಗುಂಪುಗಳನ್ನು ಸೃಷ್ಟಿಸಿ ಈ ಗುಂಪಿನ ನಾಯಕರು ಪರಸ್ಪರ ಕಚ್ಚಾಡುವಂತಹ ಪರಿಸ್ಥಿತಿ ಸೃಷ್ಟಿಸಿದರು. ಕೆಲವು ರಾಜ್ಯಗಳಲ್ಲಿ ಚುನಾವಣೆ ಗೆಲ್ಲುವ ಕಾಂಗ್ರೆಸ್ ನಾಯಕತ್ವದ ಕೊರತೆ ಎದುರಾದಾಗ ಬೇರೆ ಪಕ್ಷಗಳಲ್ಲಿ ಬಲಾಢ್ಯವಾಗಿ ಬೆಳೆದ ಮಾಸ್ ಲೀಡರ್ಗಳನ್ನು ಕಾಂಗ್ರೆಸ್ಗೆ ಆಮದು ಮಾಡಿಕೊಳ್ಳಲಾಯಿತು. ಗುಜರಾತ್ನಲ್ಲಿ ಆರ್.ಎಸ್.ಎಸ್. ಪ್ರಚಾರಕರಾಗಿದ್ದ ಶಂಕರ್ ಸಿಂಗ್ ವಘೇಲ ಕಾಂಗ್ರೆಸ್ಗೆ ಆಶ್ರಯ ನೀಡಬೇಕಾಯಿತು. ಕರ್ನಾಟಕದಲ್ಲಿ ನಡೆದ 1978ರ ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಯಲ್ಲಿ ಇಂದಿರಾ ವಿರುದ್ಧ ಸ್ಪರ್ಧಿಸಿದ್ದ ಸಂಸ್ಥಾ ಕಾಂಗ್ರೆಸ್ ಮೂಲದ ವೀರೇಂದ್ರ ಪಾಟೀಲ್ 1989ರ ವಿಧಾನಸಭಾ ಚುನಾವಣೆಯಲ್ಲಿ; 1978ರಲ್ಲಿ ಇಂದಿರಾ ವಿರುದ್ಧ ಬಂಡೆದ್ದು ರೆಡ್ಡಿ ಕಾಂಗ್ರೆಸ್ ಸೇರಿದ್ದ ಎಸ್.ಎಂ. ಕೃಷ್ಣ 1999ರಲ್ಲಿ; ಕಾಂಗ್ರೆಸ್ ಸರ್ವಾಧಿಕಾರಿ ಧೋರಣೆಯ ವಿರುದ್ಧ ನಿರಂತರ ಹೋರಾಟ ನಡೆಸಿಕೊಂಡು ಬಂದ, ಜನತಾ ಪರಿವಾರ ಮೂಲದ ಸಿದ್ದರಾಮಯ್ಯ 2013ರ ವಿಧಾನಸಭಾ ಚುನಾವಣೆಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲುವಿನ ದಡ ತಲುಪಿಸಬೇಕಾಯಿತು.
ಇನ್ನು ಕಾಂಗ್ರೆಸ್ ವರ್ಕಿಂಗ್ ಕಮಿಟಿಯಲ್ಲಿರುವ 14 ಕಾಯಂ ಸದಸ್ಯರೂ ಸೇರಿದಂತೆ 41 ಸದಸ್ಯರಲ್ಲಿ 15 ರಾಜ್ಯಸಭಾ ಸದಸ್ಯರಿದ್ದರೆ, ಜನರಿಂದ ಆಯ್ಕೆಗೊಂಡ ಲೋಕಸಭಾ ಸದಸ್ಯರು ಕೇವಲ ಮೂರು ಮಂದಿ, ಆ ಪೈಕಿ ಸೋನಿಯಾ ಹಾಗೂ ರಾಹುಲ್ ಇಬ್ಬರು ಎನ್ನುವುದು ವಿಶೇಷ. ಮತದಾರರ ನಡುವಿನಿಂದ ಆಯ್ಕೆಗೊಂಡ ಮಾಸ್ ಲೀಡರ್ಗಳಿಲ್ಲದೆ ಹಿಂಬಾಗಿಲಿನಿಂದ ರಾಜ್ಯಸಭೆ ಪ್ರವೇಶಿಸಿರುವ ನಾಯಕರಿಂದ ತುಂಬಿರುವ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಭಟ್ಟಂಗಿಗಳ ಬೀಡಾಗಿದೆ. ಹೊಸ ತಲೆಮಾರಿನ ಸಮುದಾಯದ ಆಶೋತ್ತರಗಳಿಗೆ ಸ್ಪಂದಿಸಲಾಗದ ಈ ಸಮಿತಿ ವೃದ್ಧ ಕಾಂಗ್ರೆಸಿಗರ ಪುನರ್ವಸತಿ ಕೇಂದ್ರವಾಗಿದೆ. ಸದ್ಯ ಕಾಂಗ್ರೆಸ್ ವರ್ಕಿಂಗ್ ಕಮಿಟಿಯಲ್ಲಿರುವವರ ಸರಾಸರಿ ವಯಸ್ಸು 68. ಅರಳೋ ಮರಳೊ ಅನ್ನುವ ಸ್ಥಿತಿಯ ಈ ವೃದ್ಧರ ಕೂಟದ ಕಪಿಮುಷ್ಟಿಯಲ್ಲಿರುವ ಕಾಂಗ್ರೆಸ್ ಅನ್ನು ರಾಹುಲ್-ಪ್ರಿಯಾಂಕ ಅಷ್ಟೇ ಅಲ್ಲ ಯಾರೇ ಬಂದರೂ ಪುನಶ್ಚೇತನಗೊಳಿಸಲು ಸಾಧ್ಯವಿಲ್ಲವಿಲ್ಲವೇನೋ.
ಇದರ ಪರಿಣಾಮವಾಗಿ 1989ರಿಂದ ಕಾಂಗ್ರೆಸ್ ಜನಪ್ರಿಯತೆಯ ಗ್ರಾಫ್ ಕುಸಿಯಲಾರಂಭಿಸಿದೆ. 1989ರಲ್ಲಿ 197 (ಶೇ.40), 1991ರಲ್ಲಿ 232 (ಶೇ.37), 1996ರಲ್ಲಿ 140 (ಶೇ.28), 1998ರಲ್ಲಿ 141 (ಶೇ.25), 1999ರಲ್ಲಿ 114 (ಶೇ.28), 2004ರಲ್ಲಿ 145 (ಶೇ.26), 2009ರಲ್ಲಿ 206 (ಶೇ.29) ಕ್ಷೇತ್ರಗಳಲ್ಲಿ ಗೆದ್ದು ಕಾಂಗ್ರೆಸ್ ಅವನತಿಯ ಹಾದಿ ಹಿಡಿಯಿತು. 2014ರ ಚುನಾವಣೆ ಕಾಂಗ್ರೆಸ್ಗೆ ಮರ್ಮಾಘಾತ ನೀಡಿದ ಚುನಾವಣೆ. ಈ ಚುನಾವಣೆಯಲ್ಲಿ ಕೇವಲ 19.4ರಷ್ಟು ಮತ ಗಳಿಸಿ 44 ಕ್ಷೇತ್ರಗಳಲ್ಲಿ ಜಯ ಸಾಧಿಸಿತು. 44 ಕ್ಷೇತ್ರಗಳಲ್ಲಿ 10 ಸಾವಿರಕ್ಕೂ ಕಡಿಮೆ ಮತಗಳ ಅಂತರದಿಂದ ಗೆದ್ದವರು 11 ಮಂದಿ.
ಪ್ರಾದೇಶಿಕ ನಾಯಕತ್ವದ ಕೊರತೆಯಿಂದ ಬಳಲುತ್ತಿರುವ ಕಾಂಗ್ರೆಸ್ ತನ್ನ ಗರ್ಭಗುಡಿಯಲ್ಲಿರುವ ‘ಜೀ ಹುಜೂರ್’ಗಳ ಹಟಾವೋ ಕಾರ್ಯಾಚರಣೆಗೆ ಚಾಲನೆ ನೀಡಿ, ಹೊಸ ತಲೆಮಾರಿನ ಆಶೋತ್ತರಗಳಿಗೆ ಸ್ಪಂದಿಸುವ ಯುವ ನಾಯಕತ್ವದ ಪಡೆಯೊಡನೆ ಪಕ್ಷ ಪುನರ್ ಸಂಘಟಿಸುವ ಬಗೆಗೆ ಚಿಂತಿಸಲು ಈಗ ಕಾಲ ಪರಿಪಕ್ವಗೊಂಡಿದೆ.
ಕೃಪೆ: ವಿಜಯ ಕರ್ನಾಟಕ, ದಿನಾಂಕ 22-10-2014, ಬುಧವಾರ.
www.