ಹೃಷಿದಾ – ಸಿನೆಮಾ ಶಾಲೆಯ ನನ್ನ ಗಾಡ್ಫಾದರ್: ಅಮಿತಾಭ್
ಹಿಂದಿ ಸಿನೆಮಾ ಮೇರು ನಟ ಅಮಿತಾಭ್ ಬಚ್ಚನ್. ಮನ್ಮೋಹನ್ ದೇಸಾಯಿ ಮತ್ತು ಪ್ರಕಾಶ್ ಮೆಹ್ರಾ ಚಿತ್ರಗಳಲ್ಲಿ ನಟಿಸಿ ಸೂಪರ್ಸ್ಟಾರ್ ಪಟ್ಟ ಪಡೆಯುವುದಕ್ಕಿಂತ ಮೊದಲೇ ತನ್ನ ಚಿತ್ರಗಳಲ್ಲಿ ಅವಕಾಶ ಕೊಟ್ಟು ಅಮಿತಾಭ್ನ ಒಳಗಿದ್ದ ನಟನನ್ನು ಹೊರ ತಂದದ್ದು ಹೃಷಿಕೇಶ್ ಮುಖರ್ಜಿಯವರು. ಹೃಷಿದಾ (ಸಪ್ಟೆಂಬರ್ 30, 1922 – ಆಗಸ್ಟ್ 27, 2006) ಹಿಂದಿ ಚಿತ್ರರಂಗದ ಶ್ರೇಷ್ಠ ನಿರ್ದೇಶಕರಲ್ಲೊಬ್ಬರು.
ಆನಂದ್ ಚಿತ್ರದ no-nonsense ಡೊಕ್ಟರ್ ಇರಲಿ, ಚುಪ್ಕೆ ಚುಪ್ಕೆಯ witty ವಿದ್ವಾಂಸ, ಮಿಲಿಯ ಸಂಕೀರ್ಣ ವ್ಯಕ್ತಿತ್ವದ ಅಂತರ್ಮುಖಿಯಾಗಿರಲಿ ಅಥವ ಅಭಿಮಾನ್ ಚಿತ್ರದ ಅಹಂ ಉಳ್ಳ ಅಸುರಕ್ಷತಾ ಮನೋಭಾವದ ಗಂಡನಾಗಿರಲಿ, ಅಮಿತಾಭ್ಗೆ ನೈಜತೆ ತುಂಬಿದ ಸಹಜ ಪಾತ್ರಗಳ ಗುಚ್ಛವನ್ನೇ ಹೃಷಿದಾ ನೀಡಿದ್ದರು. ಮುಂದೆ ಬಾಲಿವುಡ್ ಅಮಿತಾಭ್ ಅವರ `ಆ್ಯಂಗ್ರಿ ಯಂಗ್ಮ್ಯಾನ್’ ಇಮೇಜ್ ಬಳಸಿ ಅವರನ್ನು ಆ್ಯಕ್ಷನ್ ಹೀರೊ ಪಾತ್ರಗಳಿಗಾಗಿಯೇ ಆರಿಸಲು ಶುರು ಮಾಡಿದಾಗ, `ಅಮಿತಾಭ್ನನ್ನು ಸ್ಟಂಟ್ಮ್ಯಾನ್ ಪಾತ್ರಕ್ಕೆ ಇಳಿಸಿದ್ದಾರೆ’ ಎಂದು 1998ರಲ್ಲಿ ಫಿಲ್ಮ್ಫೇರ್ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.
ಇಂದು (ಅಕ್ಟೋಬರ್ 11) ಅಮಿತಾಭ್ಗೆ ಭರ್ತಿ 72 ವರ್ಷ ತುಂಬುತ್ತದೆ. ಹೃಷಿದಾ ಅವರೊಡನೆ ಕೆಲಸ ಮಾಡುತ್ತಿದ್ದಾಗ ಅನುಭವಿಸಿದ ಅವಿಸ್ಮರಣೀಯ ಕ್ಷಣಗಳನ್ನು, ಕೆಲವು ವರ್ಷಗಳ ಹಿಂದೆ rediff.com ಗೆ ಕೊಟ್ಟಿದ್ದ ಸಂದರ್ಶನದಲ್ಲಿ ಅಮಿತಾಭ್ ಹಂಚಿಕೊಡಿದ್ದರು. ಅದರ ಕನ್ನಡ ಅವತರಣಿಕೆಯನ್ನು ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಇಲ್ಲಿ ಪ್ರಕಟಿಸಲಾಗಿದೆ.
*** *** *** *** ***
ನಾನು ಯಾವತ್ತೂ ಇಮೇಜಿಗಾಗಿ ಕೆಲಸ ಮಾಡಿದವನಲ್ಲ.
ನಾನು ನಿಮಗೆ ಬಹಿರಂಗವಾಗಿ ಹೇಳುವುದಾದರೆ ಜಂಝೀರ್ (1973) ತೆರೆಗೆ ಬಂದು ನನ್ನ ತಥಾಕಥಿತ ಇಮೇಜ್ ರೂಪುಗೊಳ್ಳುವುದಕ್ಕಿಂತ ಮುಂಚೆಯೇ ನಾನು ಹೃಷಿಕೇಶ್ ಮುಖರ್ಜಿಯವರ ಚಿತ್ರಗಳಲ್ಲಿ ನಟಿಸಿದ್ದೆ.
ಪ್ರಕಾಶ್ ಮೆಹ್ರಾ, ಮನ್ಮೋಹನ್ ದೇಸಾಯಿ ಹಾಗೂ ಸಲೀಮ್-ಜಾವೇದ್ ಅವರ ಜತೆ ಕೆಲಸ ಮಾಡುವುದರ ಜತೆಗೆ ಹೃಷಿದಾ ಚಿತ್ರಗಳಲ್ಲಿ ನಟಿಸುವುದನ್ನು ಮುಂದುವರಿಸಿದ್ದೆ.
ನನಗೆ ಮತ್ತು ಜಯಾಗೆ (ಬಚ್ಚನ್) ಹೃಷಿದಾ ಅವರು ಗಾಡ್ಫಾದರ್ನಂತಿದ್ದರು. ಅವರೊಡನೆ ಕೆಲಸ ಮಾಡುವುದೆಂದರೆ ಅದೊಂದು ಅದ್ಭುತವಾದ ಅನುಭವ.
ಸಿನೆಮಾ ತಯಾರಿಕೆಯಲ್ಲಿ ಅವರದೇ ಆದ ಒಂದು ಸಾಟಿಯಿಲ್ಲದ ಶೈಲಿ ಇತ್ತು. ಅವರೆಂದೂ ಗುಣಮಟ್ಟ ಅಥವ ಕಥೆಯ ವಿಷಯದಲ್ಲಿ ರಾಜಿಯಾಗುತ್ತಿರಲಿಲ್ಲ. ಅವರು ಆರ್ಟ್ ಅಥವ ಕಮರ್ಷಿಯಲ್ ಎಂಬ ವಿಭಾಗ ಮಾಡಿ ಚಿತ್ರ ರಚಿಸುತ್ತಿರಲಿಲ್ಲ; ಅತಿ ಕಲಾತ್ಮಕವೂ, ವಾಣಿಜ್ಯಾತ್ಮಕವೂ ಅಲ್ಲದ, ತನ್ನದೇ ಆದ ರೀತಿಯಲ್ಲಿ ಚಿತ್ರ ನಿರ್ಮಿಸುತ್ತಿದ್ದರು.
ನನ್ನ ಸಿನೆಮಾ ಜೀವನದಲ್ಲಿ ನನಗೆ ಸಿಕ್ಕ ಅತ್ಯುತ್ತಮ ಪಾತ್ರಗಳು ಹೃಷಿದಾ ಚಿತ್ರಗಳಲ್ಲಿ. ಅದು ಆನಂದ್ ಇರಲಿ, ಮಿಲಿ, ಚುಪ್ಕೆ ಚುಪ್ಕೆ, ಬೇಮಿಸಾಲ್, ನಮಕ್ ಹರಾಮ್ ಅಥವ ಜುರ್ಮಾನಾ ಇರಲಿ – ಎಲ್ಲಾ ಪಾತ್ರಗಳೂ ಸುಂದರವಾಗಿ ಕೆತ್ತಿದಂಥವು. ನನಗೆ ಅವರು ನನ್ನ ಅಭಿನಯ ಸಾಮಥ್ರ್ಯ ತೋರ್ಪಡಿಸುವುದಕ್ಕೆ ಬಹು ದೊಡ್ಡ ಅವಕಾಶಗಳನ್ನು ನೀಡಿದರು.
ನಾವು ಸ್ಕ್ರಿಪ್ಟ್ ಆಲಿಸದೇ, ಕಥೆ ಕೇಳದೆ ಸೀದಾ ಸೆಟ್ಗೆ ಹೋಗುತ್ತಿದ್ದೆವು.
`ಇಲ್ಲಿ ನಿಲ್ಲು’, `ಹೀಗೆ ನಡಿ’, `ಇದನ್ನು ಹೀಗೆ ಹೇಳು’… ಇಷ್ಟೇ ಅವರು ಹೇಳುತ್ತಿದ್ದರು ಮತ್ತು ನಾವು ಹಾಗೆಯೇ ಮಾಡುತ್ತಿದ್ದೆವು.
ಅದು ಅವರು ಕೆಲಸ ಮಾಡುವ ರೀತಿಯಾಗಿತ್ತು. ಹಾಗೆ ಅವರು ನಮ್ಮನ್ನು ನಿರ್ದೇಶಿಸುತ್ತಿದ್ದರು. ಅದರಲ್ಲಿ ನಮ್ಮ ಕೊಡುಗೆ ಏನೂ ಇರುತ್ತಿರಲಿಲ್ಲ.
ಒಂದು ವೇಳೆ ಮಾಡಬೇಕಾದ ಪಾತ್ರ ಮಿಲಿ ಚಿತ್ರದಲ್ಲಿದ್ದಂಥ ಸಂಕೀರ್ಣ ಪಾತ್ರವಾದರೆ ನಾವು ಜತೆಯಲ್ಲಿ ಕುಳಿತುಕೊಳ್ಳುತ್ತಿದ್ದೆವು; ಅವರು ಒಂದು ಸಾಲಿನ ವಿವರಣೆ ನೀಡುತ್ತಿದ್ದರು ಮತ್ತು ಆಯಾ ದೃಶ್ಯಗಳ ಪ್ರಕಾರ ನಮ್ಮನ್ನು ನಿರ್ದೇಶಿಸುತ್ತಿದ್ದರು. ಆಗ ನಮ್ಮ ಕಣ್ಣ ಮುಂದೆಯೇ ಆ ಪಾತ್ರಗಳು ಬಂದು ನಿಂತಂತೆ ಭಾಸವಾಗುತ್ತಿತ್ತು.
ನಾವು ಒಬ್ಬ ಗುರುವಿನ ಕೈಯಲ್ಲಿ ಪಳಗುತ್ತಿದ್ದೇವೆ ಎಂಬ ಸುರಕ್ಷೆಯ ಭಾವ ನಮ್ಮನ್ನು ಆವರಿಸುತ್ತಿತ್ತು. ಅವರು ನಮಗೆ ರೂಪ ಕೊಡುತ್ತಿದ್ದರು. ಹಾಗಾಗಿ ನಾವು ಯಾವ ಬಗ್ಗೆಯೂ ಚಿಂತೆ ಮಾಡಬೇಕಾಗಿರಲಿಲ್ಲ.
ಅವರು ನಮಗೆ ಸವಾಲುಗಳನ್ನು ನೀಡುತ್ತಿದ್ದರು. ಅದರ ಜತೆಗೇ ಮಾರ್ಗದರ್ಶನ ನೀಡುತ್ತಿದ್ದರು. ನಾವು ಅವರನ್ನು ಅನುಸರಿಸುತ್ತಿದ್ದೆವಷ್ಟೆ.
ಅವರ ಚಿತ್ರಗಳು ಪ್ರೇಕ್ಷಕರಿಗೆ ಬಹಳ ಆಪ್ತವೆನಿಸುತ್ತಿದ್ದವು. ಇದಕ್ಕೆ ಕಾರಣ – ಅವರ ಪಾತ್ರಗಳು ನೈಜತೆಗೆ ಬಹಳ ಹತ್ತಿರವಾಗಿರುತ್ತಿದ್ದುದು. ನಮ್ಮ ಭಾವನೆಯನ್ನು ಸಹಜವಾಗಿ ತೋರಿಸಲು ಅವರು ನೈಜವಾದ, ವಾಸ್ತವಕ್ಕೆ ಹತ್ತಿರವಾಗಿರುವಂಥ ಸನ್ನಿವೇಶಗಳನ್ನು ರಚಿಸಿ ಕೊಡುತ್ತಿದ್ದರು.
ಅವರ ಚಿತ್ರಗಳಲ್ಲಿ ಆಳವಾಗಿ ಕಾಣುವುದು ಅವರ ಪ್ರಯತ್ನಗಳು, ಅವರ ರಚನಾತ್ಮಕತೆ. ಸಿನೆಮಾ ರಚನೆಯಲ್ಲಿ ಅವರಿಗಿದ್ದ ಜ್ಞಾನ ಅದ್ಭುತವಾದುದು.
ಅವರೊಬ್ಬ ಮಾಸ್ಟರ್ ಎಡಿಟರ್ ಆಗಿದ್ದರು. ಅವರೊಂದು ದೃಶ್ಯ ಶೂಟ್ ಮಾಡುತ್ತಿದ್ದರೆ ಅದು ಮುಗಿದು, ಅದನ್ನು ನೋಡುವ ತನಕ ಏನೂ ತಿಳಿಯುತ್ತಿರಲಿಲ್ಲ. ಆದರೆ ನೋಡಿದ ನಂತರ ಅವರು ತಮ್ಮ ಪರಿಕಲ್ಪನೆಯನ್ನು ದೃಶ್ಯಕ್ಕಿಳಿಸಿದ ರೀತಿ, ಅವರ ಏಕಾಗ್ರತೆ ನಮ್ಮನ್ನು ದಂಗುಬಡಿಸುತ್ತಿತ್ತು.
ಅವರು ಕೊನೆಯ ದೃಶ್ಯವನ್ನು ಮೊದಲು ಶೂಟ್ ಮಾಡುತ್ತಿದ್ದರು, ನಂತರದ ದಿನಗಳಲ್ಲಿ ಬೇರೆ ಯಾವುದೋ ಮತ್ತು ಕೊನೆಯಲ್ಲಿ ಮತ್ತಾವುದೋ; ಆದರೂ ಎಲ್ಲಾ ದೃಶ್ಯಗಳು ಒಂದಕ್ಕೊಂದು ಸಮರ್ಪಕವಾಗಿ ಹೊಂದಿಕೊಳ್ಳುತ್ತಿದ್ದವು. ಇಂಥ ಒಂದು ಅಸಾಧಾರಣ ಪ್ರತಿಭೆಯೊಡನೆ ಕೆಲಸ ಮಾಡುವುದೆಂದರೆ ಅದೊಂದು ಅಪೂರ್ವವಾದ ಅನುಭವವಾಗಿತ್ತು.
ಇಂದು ಅವರು ಮಾಡಿದ ಚಿತ್ರಗಳನ್ನು ಅತ್ಯುತ್ತಮವಾದುವೆಂದು ಪರಿಗಣಿಸುತ್ತಾರೆ.
ಹೃಷಿದಾ ಚಿತ್ರಗಳಲ್ಲಿ ನಾನು ಮಾಡಿದ ಪಾತ್ರಗಳ ಪೈಕಿ ಸ್ಮರಣಾರ್ಹವಾದುದು ಯಾವುದೆಂದು ಕೇಳಿದರೆ ಉತ್ತರಿಸುವುದು ಕಷ್ಟ. ಆನಂದ್ ಇದೆ, ಅಭಿಮಾನ್, ಮಿಲಿ ಇದೆ… ಎಲ್ಲವೂ ಮರೆಯಲಾಗದಂಥ ಕ್ಷಣಗಳು.
ಒಂದು ವಿಷಯ ನಿಮಗೆ ತಿಳಿದಿರಲಿಕ್ಕಿಲ್ಲ. ನಾನು ಅತಿ ಹೆಚ್ಚು ಚಿತ್ರಗಳನ್ನು ಮಾಡಿದ್ದು ಹೃಷಿದಾ ಅವರೊಡನೆ; ಪ್ರಕಾಶ್ ಮೆಹ್ರಾ ಮತ್ತು ಮನ್ಮೋಹನ್ ದೇಸಾಯಿಯವರೊಡನೆ ಅಲ್ಲ.
ಹೃಷಿದಾ ಅಂಥ ನಿರ್ದೇಶಕರಿಗೆ ಯಾರೂ ಸಾಟಿಯಿಲ್ಲ.
*** *** *** *** ***
ಅಮಿತಾಭ್ ಎಂಬ ನಟನನ್ನು ರೂಪಿಸಿದವರು
ಪ್ರಕಾಶ್ ಮೆಹ್ರಾ, ಮನ್ಮೋಹನ್ ದೇಸಾಯಿ, ಯಶ್ ಚೋಪ್ರಾ ಮತ್ತು ರಾಮ್ ಗೋಪಾಲ್ ವರ್ಮ – ಈ ನಿರ್ದೇಶಕರು ಅಮಿತಾಭ್ನ ಒಳಗಿರುವ ನಟನನ್ನು ರೂಪಿಸುವಲ್ಲಿ ಹೃಷಿದಾ ಅವರಂತೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ ನಿರ್ದೇಶಕರು.
ಪ್ರಕಾಶ್ ಮೆಹ್ರಾ : ಈ ನಿರ್ದೇಶಕನಿಂದಾಗಿ ಮತ್ತು ಅವರ ಚಿತ್ರ ಜಂಝೀರ್ನಿಂದಾಗಿ ಅಮಿತಾಭ್ ಮನೆಮಾತಾದರು. ಈ ಚಿತ್ರದಲ್ಲಿ ಮೊದಲ ಬಾರಿಗೆ ಅಮಿತಾಭ್ ಓರ್ವ ಖಡಕ್ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿ ನಟಿಸಿದರು. ಈ ಚಿತ್ರ ಅವರಿಗೆ ಒಂದು ಹೊಸ ಇಮೇಜನ್ನು ಕೊಟ್ಟಿತು ಹಾಗೂ ಮುಂದೆ ಹಲವಾರು ಚಿತ್ರಗಳಲ್ಲಿ ಕ್ರಿಮಿನಲ್ಗಳನ್ನು ನಿರ್ದಾಕ್ಷಿಣ್ಯವಾಗಿ ದಂಡಿಸುವ ಪೊಲೀಸ್ ಪಾತ್ರ ದೊರಕಿಸಿಕೊಟ್ಟವು.
ನಮಕ್ ಹಲಾಲ್, ಲಾವಾರಿಸ್, ಮುಖದ್ದರ್ ಕಾ ಸಿಕಂದರ್ ಹಾಗೂ ಶರಾಬಿ ಈ ಚಿತ್ರಗಳೂ ಸಹ ಅಮಿತಾಭ್ ಪ್ರೇಕ್ಷಕರ ಮೆಚ್ಚಿನ ನಟರಾಗಲು ಕಾರಣವಾದವು.
ಮನ್ಮೋಹನ್ ದೇಸಾಯಿ: ಹೃಷಿದಾ ಅವರ ನಂತರ ಅಮಿತಾಭ್ ಮೇಲೆ ಬಹಳ ಪರಿಣಾಮ ಬೀರಿದ ನಿರ್ದೇಶಕ ಇದ್ದರೆ ಅದು ಮನ್ಮೋಹನ್ ದೇಸಾಯಿ. ಅಮಿತಾಭ್ ವೃತ್ತಿ ಜೀವನದ ಮೇಲೆ ಅವರ ಪ್ರಭಾವ ಎಷ್ಟಿತ್ತೆಂದರೆ ಈ ನಟ ಬಾಕ್ಸ್ ಆಫೀಸ್ ಡಾರ್ಲಿಂಗ್ ಮತ್ತು ಮಸಾಲಾ ಮನರಂಜನೆಯ ಕಿಂಗ್ ಆದರು. ಹೃಷಿದಾ ಅವರಂತೆ ಮನ್ಮೋಹನ್ ಅವರಿಗೂ ಅಮಿತಾಭ್ನಿಂದ ಉತ್ತಮ ನಟನೆಯನ್ನು ಹೊರ ತೆಗೆಸುವ ಚಾತುರ್ಯ ಇತ್ತು ಮತ್ತು ಇದಕ್ಕೆ ಅಮಿತಾಭ್ ಹೃದಯವಂತ ಪುಂಡ ಆ್ಯಂಟನಿಯಾಗಿ ನಟಿಸಿದ ಅಮರ್-ಅಕ್ಬರ್-ಆ್ಯಂಟನಿಯಂಥ ಚಿತ್ರವೇ ಸಾಕ್ಷಿ. ಪರ್ವರಿಶ್, ಸುಹಾಗ್, ನಸೀಬ್, ದೇಶ್ಪ್ರೇಮಿ, ಕೂಲಿ ಮತ್ತು ಮರ್ದ್ – ತಟ್ಟನೆ ಮನಸ್ಸಿಗೆ ಬರುವ ಈ ಜೋಡಿಯ ಈ ಹಿಟ್ ಚಿತ್ರಗಳು ಪ್ರೇಕ್ಷರರನ್ನು ಭರಪೂರ ರಂಜಿಸುವಲ್ಲಿ ಯಶಸ್ವಿಯಾಗಿದ್ದವು ಹಾಗೂ ಬಾಲಿವುಡ್ ಮಸಾಲಾ ಚಿತ್ರಗಳಿಗೆ ಸ್ಪೂರ್ತಿಯಾಗಿದ್ದವು.
ಯಶ್ ಚೋಪ್ರಾ: ಅಮಿತಾಭ್ ಅವರ ಶುರುವಾತಿನ ಚಿತ್ರಗಳಲ್ಲಿ ಅವರಿಗೆ ಬಹುತೇಕವಾಗಿ ಒಂದೇ ತೆರನಾದ ಪಾತ್ರಗಳೇ (ಉದಾಹರಣೆಗೆ ರೋಮ್ಯಾಂಟಿಕ್ ಅಥವ ಖಡಕ್ ಪೋಲಿಸ್ ಆಫಿಸರ್) ಸಿಗುತ್ತಿದ್ದವು. ಆದರೆ ಯಶ್ ಚೋಪ್ರಾ ಅಮಿತಾಭ್ ನಟನಾ ಸಾಮಥ್ರ್ಯದ ಮತ್ತೊಂದು ಮಜಲನ್ನು ಪ್ರೇಕ್ಷರೆದುರು ತೆರೆದಿಟ್ಟರು. ದೀವಾರ್ ಮತ್ತು ಇತರ ಚಿತ್ರಗಳ ಮೂಲಕ ಅಮಿತಾಭ್ಗೆ ಸಂಕೀರ್ಣ ಪಾತ್ರ ಕೊಟ್ಟು ಬಾಕ್ಸ್ ಆಫಿಸನ್ನು ಗೆಲ್ಲುವಲ್ಲಿ ಯಶಸ್ವಿಯಾದರು.
`ಮೇರಾ ಬಾಪ್ ಚೋರ್ ಹೆ’ ಎಂಬ ಸಮಾಜ ಮಾಡಿದ ಅಳಿಸಲಾಗದಂಥ ಗಾಯದಿಂದ ಹೊರ ಬರಲಾರದೆ ತೊಳಲುವ, ತನ್ನ ತಾಯಿಯನ್ನು ಬಿಟ್ಟು ಸಮಾಜವನ್ನು ಕ್ಯಾರೇ ಮಾಡದ, ಮದುವೆಯ ಮುಂಚೆಯೇ ತನ್ನ ಪ್ರೇಯಸಿಯೊಡನೆ ಮಲಗುವ ಗ್ಯಾಂಗ್ಸ್ಟರ್ ಪಾತ್ರ, `ಮೇರೆ ಪಾಸ್ ಮಾಂ ಹೆ’ದಂಥ ಅದ್ಭುತ ಸಂಭಾಷಣೆಗಳು, ಪೋಷಕ ಪಾತ್ರಗಳ ಮನಮುಟ್ಟುವ ಅಭಿನಯ ಇಂದಿಗೂ ದೀವಾರ್ ಚಿತ್ರವನ್ನು ಮರೆಯದಂತೆ ಮಾಡಿವೆ.
ಮುಂದೆ, ತ್ರಿಶೂಲ್, ಕಾಲಾ ಪತ್ಥರ್, ಕಭೀ ಕಭೀ, ಸಿಲ್ಸಿಲಾ ಇಂಥ ಅಪೂರ್ವ ಚಿತ್ರಗಳ ಮೂಲಕ, ತನ್ನ ಕಾಲಕ್ಕಿಂತ ಮುಂದೆ ಇರುವಂಥ ಈ ಚಿತ್ರಗಳ ಕತೆಗಳ ಮೂಲಕ ಯಶ್-ಅಮಿತಾಭ್ ಜೋಡಿ ಹಿಂದಿ ಸಿನೆಮಾ ರಂಗದಲ್ಲಿ ಹೊಸ ಗಾಳಿ ಬೀಸುವಂತೆ ಮಾಡಿದರು.
ರಾಮ್ ಗೋಪಾಲ್ ವರ್ಮ: ಈಗ ಫ್ಲಾಪ್ ಡೈರೆಕ್ಟರ್ ಎನಿಸಿಕೊಂಡಿರುವ, ಹಿಂದೆ ಅಸಾಂಪ್ರದಾಯಿಕ ನೈಜತೆಯುಳ್ಳ ಚಿತ್ರಗಳನ್ನು ತಯಾರಿಸುವಲ್ಲಿ ಪ್ರಸಿದ್ಧರಾಗಿದ್ದ ಸ್ವತಂತ್ರ ಆಲೋಚನೆಯ ರಾಮ್ ಗೋಪಾಲ್ ವರ್ಮ ಕೂಡಾ ಸರ್ಕಾರ್ ಮತ್ತು ಸರ್ಕಾರ್ ರಾಜ್ ಚಿತ್ರಗಳ ಮೂಲಕ ಅಮಿತಾಭ್ ಅವರ versatalityಯನ್ನು ತೋರಿಸುವಲ್ಲಿ ಯಶಸ್ವಿಯಾಗಿದ್ದರು. ಈ ಚಿತ್ರಗಳು ಗಾಡ್ಫಾದರ್ ಸಿನೆಮಾದ ಪ್ರೇರಣೆಯಿಂದ ತಯಾರಾದ ಉತ್ತಮ ಚಿತ್ರಗಳೆನ್ನಬಹುದು. ನಿಶ್ಶಬ್ದ್ ಚಿತ್ರದಲ್ಲಿ, ತನ್ನ ವಯಸ್ಸಿಗಿಂತ ಅರ್ಧದಷ್ಟು ಚಿಕ್ಕವಳಾಗಿರುವ ಹುಡುಗಿಯ ಪ್ರೇಮಕ್ಕೆ ಹಾತೊರೆಯುವ ಪ್ರಾಯದ ವ್ಯಕ್ತಿಯ ಪಾತ್ರ ಅಮಿತಾಭ್ ಅವರ ಉತ್ತಮ ಪಾತ್ರಗಳಲ್ಲೊಂದು. ಇಂಥ ಕೊಡುಗೆಗಾಗಿ, ರಾಮ್ ಗೋಪಾಲ್ ವರ್ಮಾ ಕೀ ಆಗ್ನಂಥ ಕೆಟ್ಟ ಚಿತ್ರವನ್ನು ಅಮಿತಾಭ್ಗೆ ಕೊಟ್ಟ ವರ್ಮಾರನ್ನು ಮನಸಾರೆ ಕ್ಷಮಿಸಬಹುದೇನೊ.
ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ನಮಗೆ ಕಳುಹಿಸಿ: budkuloepaper@gmail.com