Latest News

ಹೊಡೆದರು, ಬಡಿದರು; ಮಕ್ಕಳು ಮಹಿಳೆಯರೆನ್ನದೆ ಲಾಠಿ ಬೀಸಿದರು!

ಡೊನಾಲ್ಡ್ ಪಿರೇರಾ ಬೆಳ್ತಂಗಡಿ

Posted on : July 23, 2016 at 12:46 PM

Dear Readers, we are running a free media with high democratic values. Without subscriptions, advertisements & having no patrons or god fathers, we depend on your support to run this pro people, impartial, unbiased and courageous media. Kindly support us by your generous help.
Our Google Pay Number - 8277362399

Our Bank Details:
Name: Donald Pereira
Bank: Canara Bank
A/C No: 0977101022194
Hampankatta Branch, Mangaluru 575 001
IFSC Code: CNRB0000612
MICR Code: 575015009

(ಹಿಂದಿನ ಸಂಚಿಕೆಯಿಂದ)

ಆ ಸೋಮವಾರ, 2008ರ ಸಪ್ಟೆಂಬರ್ 15ರಂದು ಕರಾವಳಿ ಕರ್ನಾಟಕ ಮಾತ್ರವಲ್ಲ, ಇಡೀ ದೇಶದ ಸಹಿತ ವಿಶ್ವದಾದ್ಯಂತ ಅಲ್ಲೋಲ ಕಲ್ಲೋಲವಾಗಿತ್ತು. ಹಿಂದಿನ ದಿನವೇ ಬೆಳಗ್ಗಿನಿಂದ ಸಂಜೆಯ ವರೆಗೆ ಘಟನೆಗಳ ಮೇಲೆ ಘಟನೆಗಳು ನಡೆದು ಮಂಗಳೂರನ್ನು ಪ್ರಕ್ಷುಬ್ದ ಪ್ರದೇಶವೆಂಬಂತೆ ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದವು.

ಅದಕ್ಕೆ ಪೂರಕವೆಂಬಂತೆ ಸೋಮವಾರದ ಘಟನೆಗಳೂ ನಡೆದವು.

ಜಿಲ್ಲೆಯಾದ್ಯಂತ ನಿಷೇಧಾಜ್ಞೆ ವಿಧಿಸಲ್ಪಟ್ಟಿದ್ದರಿಂದ ಶಾಲೆ ಕಾಲೇಜುಗಳು ಮುಚ್ಚಲ್ಪಟ್ಟಿದ್ದವು. ಕ್ರೈಸ್ತರು ಸೋಮವಾರದಂದು ಬಂದ್ ನಡೆಸಲು ತಯಾರಾಗಿದ್ದರು. ಹಾಗಾಗಿ ಬಹುತೇಕ ಜಿಲ್ಲೆ, ಪ್ರಮುಖವಾಗಿ ಮಂಗಳೂರು ನಗರ ಮತ್ತು ಸುತ್ತಮುತ್ತ ಹೆಚ್ಚಿನ ಜನರು ಮನೆಯಲ್ಲೇ ಉಳಿದು ಟಿವಿ ಚಾನೆಲ್‍ಗಳನ್ನು ತೆರೆದು ಏನಾಗುವುದೋ, ಏನೇನು ನಡೆಯಲಿಕ್ಕಿದೆಯೋ ನೋಡೋಣವೆಂದು ಕಾತರದಿಂದಿದ್ದರು.

ಅವರೆಲ್ಲರ ಉತ್ಸಾಹಕ್ಕೆ ಯಾವುದೇ ಭಂಗವಾಗಲಿಲ್ಲ. ಬದಲಾಗಿ ಅವರ ಅಪೇಕ್ಷೆಗಿಂತ ಹತ್ತು ಪಟ್ಟು ಹೆಚ್ಚು ರೋಚಕ, ರಂಜನೀಯ, ಗಂಭೀರ, ಘೋರ ಘಟನೆಗಳು ಮಂಗಳೂರಿನಲ್ಲಿ ನಡೆಯಲಾರಂಭಿಸಿದ್ದನ್ನು ಮಾಧ್ಯಮಗಳು ಪ್ರಸಾರ ಮಾಡಲಾರಂಭಿಸಿದ್ದವು.

ಹೌದು. ಆ ಸೋಮವಾರ ಕರಾವಳಿಯ ಚರಿತ್ರೆಯಲ್ಲಿ ಕಂಡು ಕೇಳರಿಯದ ದಿನವಾಗಿ ಮಾರ್ಪಟ್ಟಿತ್ತು.

ಕುರುಬನಿಲ್ಲದೆ ದಿಕ್ಕಾಪಾಲಾಗಿದ್ದ ಕುರಿಗಳ, ಗೋವುಗಳ ಮೇಲೆ ಹುಲಿ ತೋಳಗಳು, ರಣಹದ್ದು, ವಿಷಜಂತುಗಳು ಮುಗಿ ಬಿದ್ದಿದ್ದವು!

ಚರ್ಚ್ ದಾಳಿ ಪ್ರಕರಣವನ್ನು ತನಿಖೆ ನಡೆಸಲು ಆಗಿನ ಸರಕಾರ ನೇಮಿಸಿದ್ದ ನ್ಯಾಯಮೂರ್ತಿ ಬಿ.ಕೆ. ಸೋಮಶೇಖರ್ ನೇತೃತ್ವದ ಆಯೋಗವು ಸರಕಾರಕ್ಕೆ ಸಲ್ಲಿಸಿದ ಅಂತಿಮ ವರದಿಯಲ್ಲಿ ಇರುವ ಈ ಕೆಳಗಿನ ಅಂಶವನ್ನು ಓದಿದರೆ ಸಾಕು ನಿಮಗೆಲ್ಲವನ್ನೂ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

“It was imprudent, unreasonable and inexperienced act on the part of the Police to enter into the premises of some Churches in Dakshina Kannada without following legal requirements amounting to violation of religious interests and human rights protected under the Constitution of India”.

ಹೌದು. ಇದೇ ಆಗಿದ್ದು ಆ ದಿನ. ಕಂಡು ಕೇಳರಿಯದ ಘನ ಘೋರ ಸಂಗತಿ ಎಂದರೆ ಇದೇ.

Budkulo_Mangaluru_Church Attack_09 Budkulo_Mangaluru_Church Attack_03 Budkulo_Mangaluru_Church Attack_05

ಭಾನುವಾರದ ಘಟನೆಗಳಿಂದ ಬಹಳಷ್ಟು ಕಂಗಾಲಾಗಿದ್ದ ಕಥೊಲಿಕರು ಇನ್ನು ತಮಗ್ಯಾರೂ ಗತಿ ಇಲ್ಲ, ಏನಿದ್ದರೂ ಆ ಯೇಸು ಪ್ರಭುವೇ ತಮ್ಮನ್ನು ಕಾಪಾಡಬೇಕು, ರಕ್ಷಿಸಬೇಕೆಂದು, ಆತನೇ ತಮ್ಮ ರಕ್ಷಕ ಎಂದು ಬಂದು ಚರ್ಚುಗಳಲ್ಲಿ ಪ್ರಾರ್ಥಿಸಲು ಸಭೆ ಸೇರಿದ್ದರು. ನಗರದಾದ್ಯಂತ ಬಹಳಷ್ಟು ಚರ್ಚುಗಳಲ್ಲಿ ಭಾನುವಾರ ಸಂಜೆಯೇ ಜನರು ಸೇರಿದ್ದರು. ತಮ್ಮ ದೇವಾಲಯಗಳನ್ನು ತಾವೇ ರಕ್ಷಿಸಬೇಕೆಂಬ ಉದ್ದೇಶವಷ್ಟೇ ಅವರದ್ದಾಗಿತ್ತು. ರಕ್ಷಣೆ ನೀಡಬೇಕಾದ ಪೊಲೀಸರು, ಧೈರ್ಯ ಕೊಡಬೇಕಾದ ಸರಕಾರವೇ ತಮ್ಮನ್ನು ಮೃಗಗಳನ್ನು ಸಂಹರಿಸುವಂತಹ ಕೃತ್ಯ ನಡೆಸಲು ಹೇಸುವುದಿಲ್ಲವೆಂಬುದನ್ನು ಅವರು ಮನಗಂಡಿದ್ದರು. ಅದಕ್ಕೆ ಇಂಬು ನೀಡುವಂತಹ ಸಂಗತಿಗಳು ಆಗಲೇ ನಡೆದು ಹೋಗಿದ್ದವು.

ಹಾಗಾಗಿ ಸೋಮವಾರದ ದಿನ ಕೆಲಸ ಕಾರ್ಯಕ್ಕೆ ಹೋಗುವುದನ್ನೂ ಬಿಟ್ಟು ಕ್ರೈಸ್ತರೆಲ್ಲಾ ತಮ್ಮ ತಮ್ಮ ಚರ್ಚುಗಳಲ್ಲಿ ಸೇರಲಾರಂಭಿಸಿದ್ದರು.

ಮೊದಲೇ ಮುಖಂಡನಿಲ್ಲದೆ ಪರಿತಪಿಸುತ್ತಿದ್ದ ಸಮುದಾಯಕ್ಕೆ, ಸರಕಾರದ ಕಡೆಯಿಂದಲೂ ಕರುಣೆ, ದಯೆ ಮೂಡಲಿಲ್ಲ. ಸರಕಾರದ ಜೊತೆ, ಆಡಳಿತದ ಜೊತೆಗೆ ಸಂವಹನ ನಡೆಸುವವರೂ ಯಾರೂ ಇರಲಿಲ್ಲ. ರಾಜಕಾರಣಿಗಳಿಗೂ ಏನಾದರೂ ಮಾಡಬೇಕು, ಜನರ ವಿಶ್ವಾಸ ಗಳಿಸಬೇಕು, ಅಹಿತಕರ ಘಟನೆಗಳನ್ನು ನಡೆಯದಂತೆ ನೋಡಿಕೊಳ್ಳಬೇಕೆಂಬ ಇಚ್ಛೆಯೂ ಇರಲಿಲ್ಲ. ಆಡಳಿತ ಪಕ್ಷ ಬಿಜೆಪಿಯ ಸಚಿವ, ಶಾಸಕರಿಗೆ ಅದರ ಉಸಾಬರಿಯೂ ಬೇಕಿರಲಿಲ್ಲ. ವಿರೋಧ ಪಕ್ಷದ ಕೆಲ ಶಾಸಕರುಗಳಿಗೂ ತಮ್ಮಿಂದ ಮಾಡುವಂತಹದೇನೂ ಇರಲಿಲ್ಲವೆಂಬ ಸಬೂಬು.

ಬಿಜೆಪಿಯವರಿಗೆ ಕ್ರೈಸ್ತರ ವೋಟುಗಳ ಹಂಗಿರಲಿಲ್ಲ. ಕಾಂಗ್ರೆಸ್ಸಿನವರಿಗೆ ಏನೇ ಆಗಲಿ ಹೋಗಲಿ, ಕ್ರೈಸ್ತರ ವೋಟುಗಳು ತಮಗೇ ಎಂಬುದರ ಗ್ಯಾರಂಟಿ ಭಾವನೆ! ಕ್ರೈಸ್ತರ ಸಂಕಷ್ಟ, ನೋವು ಅವರಿಗ್ಯಾಕೆ ಬೇಕು?

ಅಲ್ಲಿಗೆ ಕ್ರೈಸ್ತರನ್ನು ಸದೆಬಡಿಯಬೇಕೆಂದು ಒಳಗಿಂದೊಳಗೆ ತಯಾರಿ ನಡೆದಿತ್ತು.

ಶುರುವಾಯಿತು ಬೇಟೆ. ಚರ್ಚುಗಳಲ್ಲಿ ಕ್ರೈಸ್ತರು ಅಪಾರ ಸಂಖ್ಯೆಯಲ್ಲಿ ಜಮಾವಣೆಗೊಂಡಿರುವುದನ್ನು ಭಯೋತ್ಪಾದಕರಿಗೆ ಸಮೀಕರಿಸಿಕೊಂಡ ಪೊಲೀಸರು ಅದು ಅಕ್ಷಮ್ಯ ಅಪರಾಧವೆಂಬಂತೆ ಪರಿಗಣಿಸಿ ಬಿಟ್ಟರು. ಕ್ರೈಸ್ತರೇನೂ ಗಲಭೆ ನಡೆಸಲು ಸಭೆ ಸೇರಿದ್ದಲ್ಲ ಎಂಬುದು ಅವರಿಗೆ ಬೇಕಾಗಿಯೇ ಇರಲಿಲ್ಲ. ನಿಷೇಧಾಜ್ಞೆ ಹೇರಿದ್ದರೂ ಜನರು ಗುಂಪುಗೂಡಿದ್ದರೆಂಬುದು ಅವರ ಆರೋಪ. ಆದರೆ ಕ್ರೈಸ್ತರು ನಿಷೇಧಾಜ್ಞೆಯನ್ನೇನೂ ಉಲ್ಲಂಘಿಸಿರಲಿಲ್ಲ. ಇಗರ್ಜಿಯ ಕಂಪೌಂಡಿನೊಳಗೆ ಶಾಂತವಾಗಿ ಸೇರಿದ್ದರೇ ಹೊರತು, ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಕಟ್ಟಿಕೊಂಡು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ನಿರತರಾಗಿರಲಿಲ್ಲ.

ಕ್ರೈಸ್ತರ ಈ ಒಗ್ಗಟ್ಟು ಕೆಲ ಹಿಂದೂ ಸಂಘಟನೆಗಳಿಗೆ ಸಹಿಸಲಾಗಲಿಲ್ಲ. ಅವರಿದನ್ನು ನಿರೀಕ್ಷಿಸಿಯೂ ಇರಲಿಲ್ಲ. ಆಗಿನ ಜಿಲ್ಲಾಡಳಿತ, ಪೊಲೀಸರು ಸೇರಿದಂತೆ ಎಲ್ಲರೊಡೆನೆಯೂ ಸಂಘ ಪರಿವಾರ ಮತ್ತು ಅದರ ಸಂಘಟನೆಗಳಿಗೆ ಒಳ್ಳೆಯ ಸಂಬಂಧವಿತ್ತು. ಸರಕಾರವೇ ಬಿಜೆಪಿಯದ್ದು ಎಂದ ಮೇಲೆ ಅದನ್ನು ಹೇಳಿಕೊಳ್ಳಬೇಕಾದ ಅವಶ್ಯಕತೆಯೂ ಇಲ್ಲ, ಅಲ್ಲವೆ?

ಮೊನ್ನೆ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಅಧಿಕಾರಿ ಆಗ ಕದ್ರಿಯಲ್ಲಿ ಕರ್ತವ್ಯದಲ್ಲಿದ್ದರು. ಅವರು ಹೇಳಿ ಕೇಳಿ ಹಿಂದೂ ಸಂಘಟನೆಗಳೊಂದಿಗೆ ಆಪ್ತವಾದ ಒಡನಾಟವಿಟ್ಟುಕೊಂಡವರು. ಇಡೀ ದಿನದ ಬೆಳವಣಿಗೆಗಳಿಗೆ ಅವರ ವಿಶೇಷ ಕೊಡುಗೆಯಿತ್ತು.

ಕುಲಶೇಖರದ ಕೊರ್ಡೆಲ್ ಚರ್ಚ್!

ಮಹತ್ತರ ಘಟನೆಗಳಿಗೆ ಮುಹೂರ್ತ ಶುರುವಾಗಿದ್ದು ಅಲ್ಲಿಂದಲೇ. ಅಲ್ಲಿ ಬೆಳಗ್ಗಿನಿಂದಲೇ ಕ್ರೈಸ್ತರ ಜನಸಂದಣಿ ಸೇರಿತ್ತು. ಅದನ್ನು ಕಂಡು ವಿಪರೀತ ಕರುಬಿದ ಕೆಲ ಮೂಲಭೂತವಾದಿ ಹಿಂದೂ ‘ಹುಡುಗರು’ ತಮ್ಮ ಕಾರ್ಯವನ್ನಾರಂಭಿಸಿದ್ದರು. ಇನ್ಸ್‍ಪೆಕ್ಟರ್ ಗಣಪತಿಯವರೂ ಅವರಿಗೆ ಆಸರೆಯಾಗಿದ್ದರೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಏಕಾಏಕಿ, ಇದ್ದಕ್ಕಿದ್ದಂತೆ ಕಲ್ಲುಗಳನ್ನು ಆ ಹುಡುಗರು ತೂರಲಾರಂಭಿಸಿದರು. ಕ್ರೈಸ್ತರಿಗೆ ಇದು ಅನಪೇಕ್ಷಿತವಾಗಿದ್ದರೂ ಆಘಾತವಾಗುವಂತಹದೇನೂ ಆಗಿರಲಿಲ್ಲ. ಶತ್ರು ಪಾಳಯದಿಂದ ಹೀಗೆ ಶುರುವಾದ ಕಲ್ಲು ತೂರಾಟಕ್ಕೆ ಎಲ್ಲರೂ ಒಮ್ಮೆ ಭಯಭೀತರಾದರೂ, ಅಲ್ಲಿ ಸೇರಿದ್ದ ಯುವಕರು ಧೃತೆಗೆಡಲಿಲ್ಲ. ಅವರಿಗೆ ಇದನ್ನೆಲ್ಲಾ ನೋಡಿ ನೋಡಿ ಸಾಕಾಗಿತ್ತು. ಅವರೂ ಬಿಸಿ ರಕ್ತದವರೇ. ಅನ್ಯಾಯವನ್ನು ಎಷ್ಟೆಂದು ಸಹಿಸಲಾದೀತು?

ತಡ ಮಾಡದೆ, ತಮ್ಮೆಡೆಗೆ ಎಸೆಯಲಾದ ಕಲ್ಲುಗಳನ್ನೇ ಆರಿಸಿ ಹಿಂದೆಸೆದರು ನೋಡಿ, ಅಲ್ಲಿಗೆ ಶುರುವಾಯಿತು ಪರಸ್ಪರ ಯುದ್ಧ. ಶಾಂತವಾಗಿದ್ದ ಚರ್ಚ್ ಸುತ್ತಲಿನ ಪ್ರದೇಶ ರಣರಂಗವಾಯಿತು.

ಇದನ್ನೇ ನಿರೀಕ್ಷಿಸುತ್ತಿದ್ದ ಗಣಪತಿ ನೇತೃತ್ವದ ಪೊಲೀಸ್ ಪಡೆ ನುಗ್ಗಿಯೇ ಬಿಟ್ಟಿತು ಚರ್ಚ್ ಕಂಪೌಂಡ್‍ನೊಳಗೆ. ಆದರೆ ಪೊಲೀಸ್ ಸಮವಸ್ತ್ರದಲ್ಲಿ ಒಳ ನುಗ್ಗಿದ ಎಲ್ಲರೂ ಪೊಲೀಸರಾಗಿರಲಿಲ್ಲ!

ಕೊಡೆಯಿಂದ ಶಾಲಾ ಮಕ್ಕಳ ಬ್ಯಾಗ್, ಪುಸ್ತಕದಿಂದ ಹಿಡಿದು ಪ್ರತಿಯೊಬ್ಬರಿಗೂ ಬೇಕಾದ ಎಲ್ಲಾ ಸಾಮಗ್ರಿಗಳು ದೊರೆಯುವ, ಮಿಲಾಗ್ರಿಸ್‍ನಲ್ಲಿದ್ದ ಪ್ರಖ್ಯಾತ ಮಳಿಗೆಯೊಂದರಿಂದ ಪೊಲೀಸ್ ಸಮವಸ್ತ್ರಗಳನ್ನು ತಂದು ಧರಿಸಿಕೊಂಡಿದ್ದ ಈ ‘ಹುಡುಗರು’ ಕೈಯಲ್ಲಿ ಲಾಠಿಗಳನ್ನು ಹಿಡಿದುಕೊಂಡು ಪೊಲೀಸರ ಜೊತೆಗೇ ಚರ್ಚಿನೊಳಗೆ ಹೊಕ್ಕಿದ್ದರು! ಗಣಪತಿಯವರಿಗೆ ಅದು ಗೊತ್ತಿಲ್ಲದ್ದೇನೂ ಆಗಿರಲಿಲ್ಲ. ಅದೆಲ್ಲಾ ಮೊದಲೇ ತಯಾರಿ ನಡೆಸಲಾಗಿದ್ದ ಯೋಜನೆಯಾಗಿತ್ತೆಂಬುದರಲ್ಲಿ ಸಂಶಯವೇ ಇಲ್ಲ.

ಹೀಗೆ ಚರ್ಚ್ ದಾಳಿ ಪ್ರಕರಣ ಮತ್ತೊಂದು ತಿರುವನ್ನು ತೆಗೆದುಕೊಂಡಿತು.

ರಣೋತ್ಸಾಹದಲ್ಲಿ ಒಳ ನುಗ್ಗಿದ ಪೊಲೀಸರು ಮತ್ತು ಅವರ ಜೊತೆಗೆ ಪೊಲೀಸರಂತಿದ್ದ ಶತ್ರುಗಳು ಕಂಡ ಕಂಡ, ಸಿಕ್ಕವರನ್ನು ಹೊಡೆಯಲಾರಂಭಿಸಿದರು. ಪ್ರಾರ್ಥನೆಗೆ ಸೇರಿದವರಲ್ಲಿ ಬಹುತೇಕ ಮಹಿಳೆಯರು, ಮಕ್ಕಳು ಮತ್ತು ಧರ್ಮಭಗಿನಿಯರೇ ಇದ್ದರು. ಆದರೆ ಪೊಲೀಸರಿಗಾಗಲೀ, ಅವರೊಡನಿದ್ದವರಿಗಾಗಲೀ ಮೈಮೇಲೆ ಭೂತ ಹೊಕ್ಕಂತಾಗಿದ್ದರಿಂದ ಇದೆಲ್ಲಾ ಕಣ್ಣಿಗೇ ಕಾಣಿಸಲಿಲ್ಲ. ಸಿಕ್ಕ ಸಿಕ್ಕವರನ್ನು ತಲೆ, ಮೈ ಮೇಲೆಲೆಲ್ಲಾ ಲಾಠಿ ಬೀಸುತ್ತಾ ರುದ್ರಾವತಾರ ನಡೆಸುತ್ತಿದ್ದರು.

ಮೊತ್ತ ಮೊದಲ ಬಾರಿಗೆ ಚರ್ಚಿನೊಳಗೆ ಪ್ರಾರ್ಥನಾ ನಿರತರಾಗಿದ್ದ ಭಕ್ತಾದಿಗಳ ಮೇಲೆ ಹುಲಿ, ಸಿಂಹ, ತೋಳಗಳಂತೆ ನುಗ್ಗಿದ ಕಾನೂನು ರಕ್ಷಕರು ಶತ್ರು ದಮನ ಕಾರ್ಯಕ್ಕಿಳಿದಂತೆ ವರ್ತಿಸಿದರು. ಮಹಿಳೆಯರು, ಮಕ್ಕಳು, ವೃದ್ಧರ ಮೇಲೆಯೇ ಅಷ್ಟೊಂದು ಕ್ರೂರವಾಗಿ ವರ್ತಿಸಿದವರು ಪುರುಷರನ್ನು ಬಿಡುತ್ತಾರೆಯೆ?

ಪೂರ್ವ ಜನ್ಮದ ವೈರಿಗಳನ್ನು ಸದೆಬಡಿಯುವಂತೆ ಕಂಡ ಕಂಡ ಯುವಕ, ಪುರುಷರನ್ನು ಟಾರ್ಗೆಟ್ ಮಾಡಿ ಹೊಡೆಯಲಾಯಿತು. ಉಗ್ರಗಾಮಿಗಳ ಅಡಗುದಾಣಕ್ಕೆ ನುಗ್ಗಿದಂತೆ ಚರ್ಚಿನೊಳಗೆ ನುಗ್ಗಿ ಸಿಕ್ಕ ಸಿಕ್ಕವರನ್ನು ಹೊಡೆದುರುಳಿಸಲಾಯಿತು. ಲಾಠಿ ಚಾರ್ಜ್ ಮಾಡುವುದಕ್ಕೂ ನಿಯಮಗಳಿವೆ, ರೀತಿಯಿದೆ. ಕಾಲಿನ ಹಿಂಭಾಗದಲ್ಲಿ, ಮೊಣಗಂಟಿನ ಕೆಳಭಾಗಕ್ಕೆ ಮಾತ್ರ ಲಾಠಿ ಬೀಸಬಹುದು. ಆದರೆ ಅಲ್ಲಿ ಲಾಠಿ ಹಿಡಿದುಕೊಂಡವರ ಮೈ ಮನಸ್ಸಿನಲ್ಲಿ ರಾಕ್ಷಸೀ ಗುಣ ಮೈದಳೆದಿತ್ತು. ಹಾಗಾಗಿ ಮನ ಬಂದಂತೆ ಅವರು ಲಾಠಿ ಬೀಸಿದರು.

ಅದರ ಪರಿಣಾಮ ಕೇವಲ ಪುರುಷರಲ್ಲ, ಹೆಣ್ಣು ಗಂಡೆಂಬ ಭೇದ ಇಲ್ಲದೆ, ಮಕ್ಕಳು, ಯುವಕ ಯುವತಿಯರು, ಮಹಿಳೆಯರು, ವೃದ್ಧರೆಲ್ಲಾ ಭೀಕರವಾಗಿ ಪೆಟ್ಟು ತಿಂದು, ಗಾಯಗಳಾಗಿ ಜರ್ಜರಿತರಾಗಿ, ಆಘಾತದಿಂದ ಕುಸಿದಿದ್ದರು.

ಇದನ್ನೇ ಈ ಪ್ರಕರಣದ ತನಿಖೆ ನಡೆಸಿದ ನ್ಯಾಯಮೂರ್ತಿ ಸೋಮಶೇಖರ್ ಅವರು ತಮ್ಮ ವರದಿಯಲ್ಲಿ ಎತ್ತಿ ತೋರಿಸಿದ್ದು. ಬಿಜೆಪಿ ಸರಕಾರದಿಂದ ವರದಿಯನ್ನು ಎಷ್ಟೇ ತಿರುಚಿಸಲಾಯಿತಾದರೂ ಈ ಅಂಶಗಳನ್ನು ಬಿಟ್ಟು ಹಾಕಲು ಅವರಿಗೆ ಸಾಧ್ಯವಾಗಲಿಲ್ಲ.

ಯಾಕೆಂದರೆ ಹಾಗೆ ನಡೆದಿದ್ದು ಬೆಳಕಿನಷ್ಟೇ ಶುಭ್ರವಾಗಿತ್ತು. ಅದನ್ನು ಅಲ್ಲಗಳೆಯಲು ಸಾಧ್ಯವೇ ಇರಲಿಲ್ಲ. ಪ್ರತಿಯೊಂದು ಕ್ಯಾಮೆರಾ, ವರದಿಗಾರನ ಕಣ್ಣುಗಳು ಅವನ್ನೆಲ್ಲಾ ಸ್ಥಿರವಾಗಿಸಿದ್ದವು. ಹೀಗಾಗಿ ಸತ್ಯವು ನಗ್ನವಾಗಿ ಪ್ರಪಂಚದ ಮುಂದೆ ತೆರೆದುಕೊಂಡಿತ್ತು.

ಆಗಬಾರದ ಅನಾಹುತ ನಡೆದೇ ಹೋಗಿತ್ತು. ಪ್ರಾರ್ಥನೆಗಾಗಿ ಚರ್ಚಿನಲ್ಲಿ ಸೇರಿದ್ದ ಒಂದೇ ಕಾರಣಕ್ಕೆ ಹಲವರು ಮಾರಣಾಂತಿಕ ಪೆಟ್ಟು ತಿಂದು ನರಳಿದರೆ, ಬಹಳಷ್ಟು ಯುವಕರನ್ನು ಭೀಕರವಾಗಿ ಹೊಡೆದು, ಬಂಧಿಸಿ ಜೈಲಿಗಟ್ಟಲಾಯಿತು.

ಕುಲಶೇಖರದಲ್ಲಿನ ಘಟನೆಯ ಸುದ್ದಿ ಎಲ್ಲೆಡೆ ವ್ಯಾಪಿಸಿತು. ಕ್ರೈಸ್ತರಿಗೆಲ್ಲಾ ಆಗಲೇ ತಿಳಿದು ಹೋಗಿತ್ತು ತಮ್ಮನ್ನು ಬೇಕೆಂತಲೇ ಇನ್‍ಸ್ಟಿಗೇಟ್ ಮಾಡುವ ಮೂಲಕ ಕಾಲು ಕೆರೆದು ಜಗಳಕ್ಕೆ ಇಳಿಸಲು, ತಮ್ಮಿಂದ ತಪ್ಪಾಗುವಂತೆ ಪ್ರಚೋದಿಸಲು ಹಿಂದೂ ‘ಹುಡುಗರು’ ಪ್ರಯತ್ನಿಸುತ್ತಿದ್ದಾರೆಂದು. ಅವರಿಗೆ ಪೊಲೀಸರ ಸಂಪೂರ್ಣ ಸಹಕಾರ, ಸಮ್ಮತಿ ಇದೆಯೆನ್ನುವುದೂ ಅವರಿಗೆ ತಿಳಿದು ಹೋಗಿತ್ತು.

ಇದರಿಂದಾಗಿ ಕ್ರೈಸ್ತರೆಲ್ಲಾ ದಂಗು ಬಡಿದು, ಬಸವಳಿದು ಹೋದರೂ, ತಾವು ಚರ್ಚಿನ ಅಂಗಣದೊಳಗೆ ಇರುವುದರಿಂದಾಗಿ ಕ್ಷೇಮ ಭಾವನೆಯಿಂದಿದ್ದರು. ಆದರೂ ಪುಂಡರು ತಮ್ಮನ್ನೆಲ್ಲಿ ರೊಚ್ಚಿಗೆಬ್ಬಿಸುತ್ತಾರೋ ಎಂದು ಆತಂಕದಲ್ಲಿದ್ದರು. ಕುಲಶೇಖರದಲ್ಲಿ ನಡೆದುದನ್ನು ಕೇಳಿದ ಮೇಲಂತೂ ಯುವಕರು ತಮ್ಮ ರಟ್ಟೆಗಳನ್ನು ಬಿಗಿಗೊಳಿಸಲಾರಂಭಿಸಿದ್ದರು. ಅವರನ್ನೆಲ್ಲಾ ಸಂಭಾಳಿಸುವುದು ಹಿರಿಯರಿಗೆ ಆದ್ಯತೆಯಾಗಿ ಪರಿಣಮಿಸಿತು. ಯಾರೂ ಸಹನೆ ಮೀರದಂತೆ, ಸಂಯಮ ಕಳೆದುಕೊಳ್ಳದಂತೆ ಮೇಲಿಂದ ಮೇಲೆ ವಿನಂತಿಸಲಾಗುತ್ತಿತ್ತು.

ಕುಲಶೇಖರದ ಬಳಿ ಮುಖ್ಯ ರಸ್ತೆಯಲ್ಲಿ ಜೀಪೊಂದರಲ್ಲಿ ಸಂಚರಿಸುತ್ತಿದ್ದ ಪಾದರಿಯೊಬ್ಬರ ವಾಹನವನ್ನು ಅಡ್ಡಗಟ್ಟಿ ಪುಂಡರು ಅನಾಗರಿಕ ವರ್ತನೆ ತೋರಿಸಲಾರಂಭಿಸಿದ್ದರು. ಆದರೆ ಆ ಪಾದ್ರಿಯವರು ಗಟ್ಟಿ ವ್ಯಕ್ತಿ, ಅಂತಹದಕ್ಕೆಲ್ಲಾ ಹೆದರುವವರೂ ಅಲ್ಲ, ಕೇರ್ ಮಾಡುವವರೂ ಅಲ್ಲ. ಅವರು ಶೀದಾ ಹೋಗಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದರು.

ಕುಲಶೇಖರದ ಬಳಿಕ ವಾಮಂಜೂರಿನ ಚರ್ಚಿನಲ್ಲಿಯೂ ಹಾಗೆಯೇ ನಡೆಯಿತು. ಅಲ್ಲಿಯೂ ಅನಾಗರಿಕ ವರ್ತನೆ, ಕಾನೂನು ಬಾಹಿರ ಕೃತ್ಯಗಳು ಕಾನೂನು ರಕ್ಷಕರಿಂದ ಮತ್ತು ಅವರ ಬೆಂಬಲದಲ್ಲಿದ್ದ ‘ಹುಡುಗ’ರಿಂದ ನಡೆಯಿತು. ಮುಂದೆ ಪೊಲೀಸರ ವಾಹನಗಳ ಮೆರವಣಿಗೆ ಪೆರ್ಮನ್ನೂರಿಗೆ ತೆರಳಿತು.

ಅಲ್ಲಿ ಮತ್ತಷ್ಟು ಅಧ್ವಾನ್ನ ನಡೆದೇ ಹೋಯಿತು.

(ಪೆರ್ಮನ್ನೂರಿನಲ್ಲಿ ನಡೆದ ರಾದ್ಧಾಂತ, ಪಾದ್ರಿಯನ್ನು ಅವಾಚ್ಯವಾಗಿ ನಿಂದಿಸಿ ಘಟನೆಯನ್ನು ನಾಳೆ ಓದಿ).

ಇನ್ಸ್‍ಪೆಕ್ಟರ್ ಎಂ.ಕೆ. ಗಣಪತಿ ಕ್ರೈಸ್ತರನ್ನು ಅಮಾನುಷವಾಗಿ ನಡೆಸಿಕೊಂಡಿದ್ದಕ್ಕೆ ಪುರಾವೆ, mangalorean.com ವರದಿ ಓದಿ
ಭಾಗ 1: ಚರ್ಚ್ ಎಟ್ಯಾಕ್: ಆ ದಿನ ಮಂಗಳೂರಿನ ಕ್ರೈಸ್ತರು ರೌಡಿಗಳಂತೆ ವರ್ತಿಸಿದ್ದರೇ?
ಭಾಗ 2: ಮೌನ ರೋದನಗೈಯುತ್ತಿದ್ದ ಕ್ರೈಸ್ತರನ್ನು ರೊಚ್ಚಿಗೆಬ್ಬಿಸಿದ್ದು ಯಾರು?
ಭಾಗ 3: ಮತಾಂತರವೆಂಬ ಮಿಥ್ಯಾರೋಪ ಮತ್ತು ಲೆಕ್ಕ ತಪ್ಪಿದ ಚರ್ಚ್ ದಾಳಿ
ಭಾಗ 4: ಕ್ರೈಸ್ತರು ಜತೆಗೂಡಿದ್ದು ಪ್ರಾರ್ಥಿಸಲು, ಸ್ವರಕ್ಷಣೆಗಾಗಿ; ಹಲ್ಲೆ ಮಾಡುವುಕ್ಕಲ್ಲ

ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ನಮಗೆ ಕಳುಹಿಸಿ: budkuloepaper@gmail.com

Leave a comment

Your email address will not be published. Required fields are marked *

Latest News