Latest News

ಎಲ್ಲೆಲ್ಲಿ ನೋಡಲಿ….. ನಿನ್ನನ್ನೇ ಕಾಣುವೆ!

ಮಿಸ್ಟರ್ ಮಕ್ಕರೇನ್ಹಸ್

Posted on : April 12, 2014 at 4:49 AM

Dear Readers, we are running a free media with high democratic values. Without subscriptions, advertisements & having no patrons or god fathers, we depend on your support to run this pro people, impartial, unbiased and courageous media. Kindly support us by your generous help.
Our Google Pay Number - 8277362399

Our Bank Details:
Name: Donald Pereira
Bank: Canara Bank
A/C No: 0977101022194
Hampankatta Branch, Mangaluru 575 001
IFSC Code: CNRB0000612
MICR Code: 575015009

ಎಲ್ಲೆಲ್ಲಿ ನೋಡಲಿ
ನಿನ್ನನ್ನೇ ಕಾಣುವೆ
ಕಣ್ಣಲ್ಲಿ ತುಂಬಿರುವೆ
ಮನದಲಿ ಮನೆ ಮಾಡಿ ಆಡುವೆ….

Makkar Matters Title ಇದೇನು ಚಲನಚಿತ್ರದ ಹಾಡು ಕೇಳಿಸುತ್ತಿದೆಯಲ್ಲಾ, ಚಿತ್ರಗೀತೆ ಸ್ಪರ್ಧೆ ಏನಾದ್ರೂ ಶುರುವಾಯ್ತಾ ಎಂದು ಕಣ್‍ಬಾಯಿ ಬಿಟ್ಟು ನೋಡುತ್ತಿದ್ದೀರೋ ಹೇಗೆ? ನಿಮ್ಮ ಊಹೆ ತಪ್ಫೋ ತಪ್ಪು.

ಮೇಲಿನ ಹಾಡಿನ ಗುನುಗುವಿಕೆ ಬೇರಿನ್ಯಾರದ್ದೂ ಅಲ್ಲ, its only from our ರಾಜಕಾರಣಿಗಳು, ಅಂದ್ರೆ politicians.

ಏನು ವಿಷ್ಯಾ ಅಂದ್ರಾ? ಅದೇ ರೀ ಅಧಿಕಾರದ ಕನಸು. ಹುದ್ದೆಯ ಅಮಲು. ಪಾಪ ಎಷ್ಟೊಂದು ವರ್ಷಗಳಿಂದ ಕಣ್ಣಿಗೆ ಎಣ್ಣೆ ಬಿಟ್ಟು ಅಧಿಕಾರ ಪಡೆಯಬೇಕೆಂದು ಅಹೋರಾತ್ರಿ ಮಾತ್ರವಲ್ಲ ದಿನವಿಡೀ ಕನಸು ಕಂಡು ತನ್ನಾಸೆ ಕೈಗೂಡದೇ ಹೋಗಿರುವ ಕೆಲ ಹಳೆ ಫುಡಾರಿಗಳು, ಮತ್ತೆ ಕೆಲ ನೂತನ ಜನನಾಯಕರು, ಇನ್ನು ಕೆಲ ಮರಿ ನಾಯಕರು ಮಾತ್ರವಲ್ಲ ಅಧಿಕಾರ ಅನುಭವಿಸಿ ರುಚಿ ಅನುಭವಿಸಿದ ಕೆಲ ಮಾಜಿಗಳು ಮತ್ತಿತರರಿಗೆಲ್ಲಾ ಹೊಸ ಜ್ವರ ಶುರುವಾಗಿದೆ.

ಹಾಗಾಗಿ ಅವರದೆಲ್ಲಾ ಈಗ ಒಂದೇ ರಾಗ, ಒಂದೇ ಹಾಡು.

ಎಲ್ಲೆಲ್ಲಿ ನೋಡಲಿ
ನಿನ್ನನ್ನೇ ಕಾಣುವೆ

ಅರೆ, ಡಾ| ರಾಜ್‍ಕುಮಾರ್ ಹಾಡಿದ ಈ ಕನ್ನಡ ಗೀತೆಯನ್ನು ಹಾಡಿದರೆ ಯಾರಿಗೇನು ನಷ್ಟವಪ್ಪಾ ಎಂದು ನೀವೆಲ್ಲಾ ಕೇಳಬಹುದು. ಹ ಹಹ್ಹ ಹಹ್ಹಹ್ಹಾ! ಗೀತೆ ಮಾತ್ರ ಅದೇ ರೀ. ಆದರೆ ವಿಷಯ ಮಾತ್ರ ಬೇರೆಯದ್ದೇ ಕಣ್ರೀ. ರಾಜಕಾರಣಿಗಳು ಹಾಡು ಹೇಳೋದುಂಟಾ ಮಾರಾಯ್ರೇ? ಅಂತಿಪ್ಪ, ವಿಷಯ ಏನೂಂದ್ರೆ ಇಲ್ಲಿ ನಮ್ಮ ಮಹಾನಾಡು ಕರ್ನಾಟಕದಲ್ಲಿ ತಥಾ ನಮ್ಮೀ ದೇಶ ಅಖಂಡ ಭಾರತದಾದ್ಯಂತ ಕೆಲ ರಾಜಕಾರಣಿಗಳಿಗೆ ಜ್ವರ ಬಂದು ಬಿಟ್ಟಿದೆ. ಚುನಾವಣೆ ಜ್ವರ ಇದ್ದದ್ದೇ. ಆದರೆ ಇದು ಕುರ್ಚಿಯ ಜ್ವರ. Now or never ಎಂಬ ಖಡಾಖಡ್ ಪಾಲಿಸಿ ಅವರಲ್ಲಿ ಕೆಲವರದ್ದು. ಹಾಗಾಗಿ ಜ್ವರ ವಿಪರೀತವಾಗಿದೆ.

Ellelli Nodali Ninnanne Kanuve

ಮೊನ್ನೆ ನೋಡಿ ಮಾನ್ಯ ವಿಪಕ್ಷ ನಾಯಕ ಸಿದ್ಧರಾಮಯ್ಯನವರು ವಿಧಾನಸಭೆಯಲ್ಲಿ ತೋಳು ತಟ್ಟಿ I want to become Chief Minister, ಸಿಎಂ ಕುರ್ಚಿ ಮೇಲ್ ನನಗೆ ಕಣ್ಣಿದೆ ಅಂತಾ ಹೇಳಿಬಿಟ್ಟರಲ್ಲಾ! ಅಷ್ಟೊಂದು ಪ್ರಾಮಾಣಿಕತೆಯಿಂದ ಹಾಗೂ ಧೈರ್ಯದಿಂದ ಹಾಗೆ ಹೇಳಿದ್ದಕ್ಕೆ ಅವರನ್ನು ಅಭಿನಂದಿಸಲೇಬೇಕು. ಅಲ್ವೇ? ಆದರೆ ಪಾಪ ಅವರನ್ನು ನೋಡಿದ್ರೆ ಅಯ್ಯೋ ಅನಿಸಲ್ವಾ? ಗೌಡ & ಸನ್ಸ್ ಪಾರ್ಟಿಯಲ್ಲಿ ಈ ಜನ್ಮದಲ್ಲಿ ತನಗೆ ಸಿಎಂ ಆಗಲು ಸಾಧ್ಯವಿಲ್ಲವೆಂಬುದು 200% ಖರೇ ಆದ ಮೇಲೆ, ಕಾಂಗ್ರೆಸ್ ಎಂಬ ಪಕ್ಷದಲ್ಲಿ ಸೇರುವುದು ತಮಗೆ ಅಂತಿಮ ಪರಿಹಾರ ಎಂಬ ಯೋಚನೆಯಿಂದ, ಬೆನ್ನುಮೂಳೆ ಇಲ್ಲದೆ ರಾಜ್ಯದಲ್ಲಿ ಸೊರಗಿ ಹೋಗುತ್ತಿರುವ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‍ಗೆ ಸೇರಿದರು. ರಾಜ್ಯದಲ್ಲಿ ಕಾಂಗ್ರೆಸ್ ಮರಗಟ್ಟಿ ಹೋಗಿದ್ದರೂ ಕೇಂದ್ರದಲ್ಲಿ ಅದು ಅಧಿಕಾರದಲ್ಲಿರುವುದರಿಂದ ಏನೋ ಆಸೆ. ಏನು ಮಾಡೋದು ಹೇಳಿ. ಅವರ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಆಗಿದೆ ಆನಂತರ.

ಮನುಷ್ಯನಿಗೆ ಆಸೆ ಇರುವುದು ಸಹಜವೇ. ಇರಲಿ ಬಿಡಿ. ಆದರೆ ಈ ಕಾಂಗ್ರೆಸ್‍ನಲ್ಲಿ? ಕರ್ನಾಟಕದಲ್ಲಿ ಕಾಂಗ್ರೆಸ್ ಫುಡಾರಿಗಳು ಬೇಕಾದಷ್ಟಿದ್ದಾರೆ. ಆದರೆ ಪಕ್ಷ? ಕಾಂಗ್ರೆಸ್ ಪಕ್ಷವೆಂಬುದು ಕರ್ನಾಟಕ ದಲ್ಲಿ ಮೂಲೆ ಮೂಲೆ ತಡಕಾಡಿದರೂ ಕಂಡುಬರುತ್ತಿಲ್ಲವೇ? ಅದರಲ್ಲೂ ಆ ಯಡಿಯೂರಪ್ಪ ಮಹಾತ್ಮೆಯಿಂದ ಪ್ರಸ್ತುತ ವಿಧಾನಸಭೆ ಹಾಗೂ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಡೆದ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಿ ಕಾಣೆಯಾಗಿ ಹೋಯಿತು ಎಂಬುದು ಅದರ ವಿರೋಧಿಗಳಿಗೂ ಆಶ್ಚರ್ಯ ಮೂಡಿಸಿದೆ. ಅಂತಿರುವಾಗ ಈ ಸಿದ್ಧರಾಮಯ್ಯನವರ ಆಸೆಗೆ ಹೀಗೂ ಹೊರ ಬರುವಾಸೆಯೇ? ಅಯ್ಯಾ, ಸಿದ್ಧರಾಮಯ್ಯಜೀ, ನಿಮ್ಮ ಆಸೆಯನ್ನು ಹೀಗೆ ಬಹಿರಂಗವಾಗಿ ಹೇಳಿದ ಮೇಲೆ ನಿಮ್ಮ ಕಥೆಯನ್ನು ಮುಗಿಸಲು ಕಾಂಗ್ರೆಸ್ ಪಕ್ಷದ ನಿಮ್ಮ ಸಹವರ್ತಿಗಳಿಗೆ ವೀಳ್ಯದೆಲೆ ಕೊಟ್ಟು ಆಹ್ವಾನಿಸಿದಂತೆ ಆಗಲಿಲ್ಲವೆ?

ರಾಜ್ಯ ಕಾಂಗ್ರೆಸ್ ಎಂದರೆ ಮೊದಲೇ ಪರಸ್ಪರ ಕಾಲೆಳೆದುಕೊಳ್ಳುವ, ಇನ್ನೊಬ್ಬರ ಏಳಿಗೆ ಸಹಿಸದ, ಪಕ್ಷ ಸೋತರೂ ಪರವಾಗಿಲ್ಲ, ತನ್ನ ವಿರೋಧಿ ಮಾತ್ರ ಉದ್ಧಾರ ಆಗಬಾರದು ಎಂದು ಕಾಯಾ, ವಾಚಾ, ಮನಸಾ ನಂಬಿ ಅದನ್ನೇ ಮಾಡಿಕೊಂಡು ಬಂದಿರುವ ಪಕ್ಷವಿದು. ಹೀಗಿರುವಾಗ ನೀವು ಇಷ್ಟು ಧೈರ್ಯದಿಂದ ‘ನನಗೆ ಮುಖ್ಯಮಂತ್ರಿಯಾಗಬೇಕು’ ಎಂಬ ಆಸೆಯ ಉತ್ಸಾಹವನ್ನು ಹೊರಗೆಡವಿದಿರಲ್ಲ…. ಇನ್ನು ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ವಿರೋಧಿಗಳು ದುಡಿಯಬೇಕಾ? ಛೆ! ನಿಮ್ಗೆ ಅಷ್ಟೂ ತಿಳಿಯುವುದಿಲ್ಲವೆಂದಾದರೆ ನಿಮ್ಮ ರಾಜಕಾರಣದ ಅನುಭವವೆಲ್ಲಾ ಎಲ್ಲಿ ಹೋಯಿತು ಸಿದ್ದುಜೀ?

ಪಾಪ, ಸಿದ್ಧರಾಮಯ್ಯನವರೇನೋ ಬಹಿರಂಗವಾಗಿ ಹೇಳಿಕೊಂಡು ಬಿಟ್ಟರು. ಅವರಂತೆಯೇ ಮುಖ್ಯಮಂತ್ರಿ ಕುರ್ಚಿ ಏರಬೇಕೆಂದು ವರ್ಷಗಳಿಂದ ವೃತ ನಡೆಸುತ್ತಿರುವ ಅದೆಷ್ಟೋ ನಾಯಕರಿಲ್ಲವೇ ಕನ್ನಡ ರಾಜ್ಯದಲ್ಲಿ. ಕಾಂಗ್ರೆಸ್‍ನಲ್ಲಿ ಕನಿಷ್ಠ ಒಂದು ಡಜನ್ ನಾಯಕರು ತಾನು ಮುಖ್ಯಮಂತ್ರಿಯಾಗಬೇಕೆಂದು ಕನಸು ಕಟ್ಟುತ್ತಿದ್ದರೆ, ಬಿಜೆಪಿಯಲ್ಲೂ ಸಿಎಂ ಹುದ್ದೆಗಾಗಿ ಹೊಂಚು ಹಾಕಿ ಕುಳಿತಿರುವ ರಾಜ್ಯ, ರಾಷ್ಟ್ರೀಯ ನಾಯಕರಿಗೆ ಬರವೆ? ಇನ್ನು ಅಧಿಕಾರ ಸಿಕ್ಕಾಗಲೆಲ್ಲಾ ಅದನ್ನು ಸರಿಯಾಗಿ ಉಣ್ಣಲು ಯೋಜನೆ ಹಾಕುತ್ತಿರುವಾಗಲೇ ಅಧಿಕಾರ ಕಳೆದುಕೊಂಡ Father & Son’s ಪಕ್ಷದ ದೇವೇಗೌಡರ ತಥಾ ಅವರ ಪುತ್ರರ ನಡುವೆಯೇ ಡಿಶುಂ ಡಿಶುಂ. ಯಾಕೆ? ಮುಖ್ಯಮಂತ್ರಿ ಕುರ್ಚಿಗಾಗಿ. ಆ ಪಕ್ಷದಲ್ಲಿರುವ ಬೇರೆ ಯಾರೂ ಕೂಡಾ ಉನ್ನತ ಹುದ್ದೆಯ ಮೇಲೆ ಆಸೆ ಪಡುವುದು ಮೂರ್ಖತನವೇ. ಅಂತಹ ಆಸೆ ಬಿಟ್ಟೇ ಅವರು ಜೆಡಿಎಸ್ ಸೇರಬೇಕೆಂಬುದು ಅಲಿಖಿತ ನಿಯಮವಂತೆ!

ಅಂತೂ ಇಂತೂ ಈ ಎಲ್ಲಾ ರಾಜಕೀಯ ಮುಖಂಡರ ಬಾಯಿಯಲ್ಲಿ ಒಂದೇ ಹಾಡು ಗುನುಗುತ್ತಿರುತ್ತದೆ. ಮುಖ್ಯಮಂತ್ರಿ ಕುರ್ಚಿಯೇ ನೀನೇ ಕಾಣುತ್ತಿರುವೆ ಎಲ್ಲೆಲ್ಲಾ.
ಮುಖ್ಯಮಂತ್ರಿ ಹುದ್ದೆಯ ಮೇಲೆ ಆಸೆ. ತಾಳಲಾರದ ಆಸೆ, ಹಸಿವು. ಅತೃಪ್ತ ಬಯಕೆ. ಹಾಗಾಗಿ ಅದೇ ರಾಗ, ಅದೇ ಹಾಡು….

ಎಲ್ಲೆಲ್ಲಿ ನೋಡಲಿ
ನಿನ್ನನ್ನೇ ಕಾಣುವೆ…..

ನಮ್ಮ ರಾಜ್ಯದಲ್ಲಿ ಈ ಅವಸ್ಥೆಯಾದರೆ ಕೇಂದ್ರದಲ್ಲಿ ಅಂತಹದೇ ಹಗಲು ಕನಸುಳ್ಳವರ ಪಡೆ ಬಹಳ ದೊಡ್ಡದಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ, 2009ರಲ್ಲಿ, ಚುನಾವಣೆಗೂ ಮೊದಲು ಇಂತಹ ಅತೃಪ್ತ, ಸ್ವಾರ್ಥಿ ರಾಜಕಾರಣಿಗಳ ಲೆಕ್ಕಾಚಾರಗಳೇನು, ತಂತ್ರಗಾರಿಕೆಗಳೇನು ನಡೆದವೋ… ಮತದಾರರು ಅವನ್ನೆಲ್ಲಾ ನೋಡಿದ್ದೇ ನೋಡಿದ್ದು. ಕೊನೆಗೆ ಅವರನ್ನೆಲ್ಲಾ ತಿಪ್ಪೆಗೆಸೆದು ಬಿಟ್ಟ ಭಾರತದ ಮತದಾರ. ಆದರೂ ಆಸೆ, ಅತಿ ಆಸೆ, ದುರಾಸೆಯೆಂಬುದು ನಮ್ಮ ರಾಜಕಾರಣಿಗಳಿಗೆ ಅಂಟಿದ ಜಾಢ್ಯ ಅಲ್ವೇ? ಹಾಗಾಗಿ ಅವರ ಪ್ರಯತ್ನ ನಿರಂತರ, ಸತತವಾಗಿ ಜಾರಿಯಲ್ಲಿರುತ್ತದೆ.

ಮುಂದಿನ ಲೋಕಸಭಾ ಚುನಾವಣೆ 2014ರಲ್ಲಿ ನಡೆಯ ಬೇಕಿದ್ದರೂ ವಿವಿಧ ರಾಜಕೀಯ ಪಕ್ಷಗಳು ಮೂರು ವರ್ಷ ಮೊದಲೇ ತಯಾರಿ ಶುರುವಿಟ್ಟುಕೊಂಡಿವೆ. ಪ್ರಮುಖ ವಿರೋಧ ಪಕ್ಷ ಬಿಜೆಪಿ ಕಳೆದ ಒಂದು ವರ್ಷದಲ್ಲಿ ಹಲವು ಸಂದರ್ಭಗಳನ್ನು ಉಪಯೋಗಿಸಿ ಮುಂದಿನ ಚುನಾವಣೆಗೆ ಸಕಲ ಅವಕಾಶ ಗಳನ್ನು ಬಳಸಿ, ಭರ್ಜರಿ ಪ್ರಚಾರದೊಂದಿಗೆ ಕ್ಯಾಂಪೇನ್ ಆರಂಭಿಸಿದೆ. ತಾವೇನೂ ಕಮ್ಮಿ ಇಲ್ಲವೆಂಬಂತೆ ಇತರ ಪ್ರಾದೇಶಿಕ, ಸ್ಥಳೀಯ ಪಕ್ಷಗಳೂ ಈಗಿನಿಂದಲೇ ತಯಾರಿ ನಡೆಸುವ ಉಸಾಬರಿಯಲ್ಲಿವೆ.

ಅವರಿಗೆಲ್ಲಾ ಕೇಂದ್ರದಲ್ಲಿ ಮುಂದಿನ ಸರ್ಕಾರ ತಾವೇ ರಚಿಸಬೇಕೆಂಬ ಹಂಬಲ. ಪ್ರಧಾನಿ ಗಾದಿಯನ್ನು ಪಡೆಯಲು ಉತ್ಕಟ ಅಭಿಲಾಷೆ. ಯಾರು ಎಷ್ಟೇ ಬಡಕೊಂಡರೂ ಯಾವುದೇ ಒಂದು ಪಕ್ಷಕ್ಕೆ ಪೂರ್ಣ ಬಹುಮತದೊಂದಿಗೆ ಆಡಳಿತದ ಗಾದಿ ಹಿಡಿಯಲು ಸದ್ಯದ ಮಟ್ಟಿಗೆ ಅಸಾಧ್ಯವೆಂದೇ ಹೇಳಬಹುದು. ಕಳೆದ ಬಾರಿ ಕಾಂಗ್ರೆಸ್ ಪಕ್ಷ ತನ್ನ ಸ್ಥಾನಗಳ ಸಂಖ್ಯೆ ತನಗೇ ಅಚ್ಚರಿಯಾಗುವಷ್ಟು ಹೆಚ್ಚಿಸಿಕೊಂಡಿತೇ ಹೊರತು ಇತರ ಪಕ್ಷಗಳನ್ನು ಹೊಂದಿಸಿಕೊಂಡು ಆಡಳಿತ ನಡೆಸುವ ಅನಿವಾರ್ಯತೆಯಿಂದ ಹೊರ ಬರಲಾಗಲಿಲ್ಲ. ಆ ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಯಲ್ಲಿಯೂ ಇದೇ ಮುನ್ನಡೆ ಕಾಯ್ದುಕೊಳ್ಳುತ್ತಾ ಎಂಬುದು ಯಕ್ಷ ಪ್ರಶ್ನೆ. ಇನ್ನುಳಿದಿರುವುದು ಬಿಜೆಪಿ. ಅದೂ ಸಹ ಬಹುಮತ ಪಡೆಯಲು ತಾನು ಯೋಗ್ಯನಿಲ್ಲವೆಂಬ ವಾಸ್ತವತೆಯನ್ನು ಎಂದೋ ಗಳಿಸಿಕೊಂಡು, ಅಧಿಕಾರಕ್ಕೆ ಹತ್ತಿರವಾಗುವುದಕ್ಕಾಗಿ ಮಿತ್ರ ಪಕ್ಷಗಳ ಸಂಖ್ಯೆಯನ್ನು ಹೆಚ್ಚಿಸುವುದರತ್ತ ವ್ಯಸ್ತವಾಗಿದೆ.

ಈ ಎರಡು ದೊಡ್ಡ ಪಕ್ಷಗಳನ್ನು ಬಿಟ್ಟರೆ ಉಳಿದವೆಲ್ಲಾ ಪ್ರಾದೇಶಿಕ ಪಕ್ಷಗಳು. ಆದರೆ ಸಮ್ಮಿಶ್ರ ಸರ್ಕಾರಗಳ ಯುಗದಲ್ಲಿ ತಮಗೆ ಹೆಚ್ಚು ಸ್ಥಾನ ಬಂದಷ್ಟು bargaining ಮಾಡಲು ಹೆಚ್ಚಿನ ಬಲ ಬರುತ್ತದೆ ಎಂಬುದರ ರುಚಿ ಅನುಭವದಿಂದ ಪಡೆದುಕೊಂಡಿವೆಯಲ್ವಾ? ಏಕ ಪಕ್ಷಕ್ಕೆ ಬಹುಮತವೆಂಬುದು ಕೇಂದ್ರದ ಮಟ್ಟಿಗೆ ಸದ್ಯಕ್ಕೆ ಅಸಂಭವೆಂಬುದರ ಪರಿಪೂರ್ಣ ತಿಳುವಳಿಕೆ ಎಲ್ಲರಿಗೂ ಇದ್ದರೂ, ಎಲ್ಲರಿಗೂ ತಾವೇ ಆಡಳಿತದ ಚುಕ್ಕಾಣಿ ಹಿಡಿಯಬೇಕೆಂಬ ಹಂಬಲ, ಕಾತರ. ಪ್ರಧಾನ ಮಂತ್ರಿ ಸ್ಥಾನ ತನಗೇ ಸಿಗಬೇಕು, ಆ ಕುರ್ಚಿಯಲ್ಲಿ ತಾನು ಕುಳಿತು ರಾಜ್ಯಭಾರ ನಡೆಸಬೇಕೆಂಬ ಅತೀವ ಆಸೆ ಅಥವಾ ಸ್ವಾರ್ಥ ಎಲ್ಲರಲ್ಲಿ ತುಂಬಿ ತುಳುಕುತ್ತಿದೆ. ಅವರದೆಲ್ಲಾ ಒಂದೇ ರಾಗ – ಕಂಡಲ್ಲೆಲ್ಲಾ ಅವರಿಗೆ ಪ್ರಧಾನ ಮಂತ್ರಿ ಕುರ್ಚಿಯೇ ದರ್ಶನವಾಗುತ್ತದೆ. ಹಾಗಾಗಿ….

ಎಲ್ಲೆಲ್ಲಿ ನೋಡಲಿ
ನಿನ್ನನ್ನೇ ಕಾಣುವೆ…..

ಕಾಂಗ್ರೆಸ್‍ನ ಯುವರಾಜ ರಾಹುಲ್ ಗಾಂಧಿಯನ್ನು ಹೇಗಾದರೂ ಮಾಡಿ ಮುಂದಿನ ಪ್ರಧಾನ ಮಂತ್ರಿಯಾಗಿ ಪಟ್ಟಾಭಿಷೇಕ ಮಾಡಬೇಕೆಂದು ಕಾಂಗ್ರೆಸ್ ವಂಧಿಮಾಗದರು ಪೂರ್ಣ ಮಟ್ಟದಲ್ಲಿ ತಲ್ಲೀನರಾಗಿದ್ದಾರೆ. ಪಾಪ, ಇತರ ಕಾಂಗ್ರೆಸಿಗರಿಗೆ ಪ್ರಧಾನ ಮಂತ್ರಿ ಹುದ್ದೆಯ ಕನಸು ಕಾಣುವುದೂ ಸಾಧ್ಯವಾಗುತ್ತಿಲ್ಲ, ಎಷ್ಟೇ ಆಸೆ ಮನಸ್ಸಿನಲ್ಲಿದ್ದರೂ. ಯಾಕೆಂದರೆ, ಕಾಂಗ್ರೆಸ್‍ನಲ್ಲಿ ಅಂತಹ ದೊಡ್ಡ ಹುದ್ದೆಗಳೆಲ್ಲಾ ನೆಹರೂ-ಇಂದಿರಾ ಕುಟುಂಬಕ್ಕೇ ಮೀಸಲಲ್ಲವೇ? ಹಾಗಾಗಿ ಉಳಿದ ಕಾಂಗ್ರೆಸಿಗರು ತುಂಬಾ ತ್ಯಾಗಿಗಳು ಆ ವಿಷಯದಲ್ಲಿ. ಅವರ ತ್ಯಾಗಕ್ಕೆ ಸಾಟಿಯಾದದ್ದು ಯಾವುದಿದೆ? ಅಲ್ವೇ?

ಇನ್ನು ಬಿಜೆಪಿಯಲ್ಲಿ? ಅಯ್ಯೋ. ಅದೊಂದು ದೊಡ್ಡ ರಾಮಾಯಣ, ಮಹಾಭಾರತವೇ ಸರಿ. ಹೇಳಿಕೊಳ್ಳಲು ಲಾಲ್‍ಕೃಷ್ಣ ಆಡ್ವಾಣಿಯವರನ್ನು ಮುಂಚೂಣಿಯಲ್ಲಿಟ್ಟರೂ ಖಚಿತವಾಗಿ, ವಾಸ್ತವವಾಗಿ ಮುಂದಿನ ಚುನಾವಣೆ ಸಂದರ್ಭದಲ್ಲಿ ಪಕ್ಷದಲ್ಲಿ ಅವರ ಸ್ಥಾನ ಎಂತಹದು ಎಂಬುದನ್ನು ಹೇಳುವುದು ಕಷ್ಟ. ಇನ್ನೊಂದು ಪಡೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಮುಂದಕ್ಕೆ ತಳ್ಳುತ್ತಿದೆಯಾದರೂ, ತಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಒಳಗಿಂದೊಳಗೆ ಪ್ರಧಾನ ಮಂತ್ರಿ ಹುದ್ದೆಗೆ ಆಕಾಂಕ್ಷೆ ಪಟ್ಟು, ಕಣ್ಣಿಗೆ ಎಣ್ಣೆ ಬಿಟ್ಟು ಕಾದು ನಿಂತವರೇನು ಕಡಿಮೆ ಜನರೇ? ಸುಶ್ಮಾ ಸ್ವರಾಜ್, ಅರುಣ್ ಜೇಟ್ಲಿ, ನಿತಿನ್ ಗಡ್ಕರಿ, ರಾಜ್‍ನಾಥ್ ಸಿಂಗ್, ವೆಂಕಯ್ಯ ನಾಯ್ಡು ಮುಂತಾದವರು ಈ ಪಟ್ಟಿಯಲ್ಲಿ ಮೊದಲನೆ ಪಂಕ್ತಿಯಲ್ಲಿದ್ದಾರೆ.

ಇನ್ನು ಪ್ರಾದೇಶಿಕ ಪಕ್ಷಗಳಲ್ಲಿ ಈ ಆಸೆ ಮೈ ಮನದಲ್ಲೆಲ್ಲಾ ತುಂಬಿಕೊಂಡಿರುವವರ ಪೈಕಿ ಬಿಎಸ್ಪಿಯ ಮಾಯಾವತಿ ಪ್ರಮುಖರು. ತಾನು ಒಂದಲ್ಲಾ ಒಂದು ದಿನ ಪ್ರಧಾನ ಮಂತ್ರಿಯಾಗಿಯೇ ತೀರುವೆನೆಂಬ ಅತ್ಯಾಕಾಂಕ್ಷೆ ಆಕೆಗಿದೆ. ಉಳಿದಂತೆ ಎಸ್‍ಪಿಯ ಮುಲಾಯಂ ಸಿಂಗ್, ಆರ್‍ಜೆಡಿಯ ಲಾಲೂ ಪ್ರಸಾದ್ ಯಾದವ್, ಟಿಎಂಸಿಯ ಮಮತಾ ಬ್ಯಾನರ್ಜಿ, ತಮಿಳ್ನಾಡಿನ ಜಯಲಲಿತ, ಆಂಧ್ರದ ಚಂದ್ರಬಾಬು ನಾಯ್ಡು ತಮಗೊಂದಲ್ಲಾ ಒಂದು ಬಾರಿ ಈ ಅವಕಾಶ ಸಿಗುತ್ತದೆ, ಸಿಗಲೇಬೇಕೆಂಬ ಆಸೆ, ನಿರೀಕ್ಷೆಯಿರುವವರು. ಎನ್‍ಸಿಪಿಯ ಶರದ್ ಪವಾರ್, ಕಾಂಗ್ರೆಸ್‍ನಲ್ಲಿ ಸೋನಿಯಾ ಪ್ರವೇಶವಾದಾಗ ತನಗಿನ್ನು ಇಲ್ಲಿ ಉನ್ನತ ಹುದ್ದೆ ಸಿಗುವುದು ತಿರುಕನ ಕನಸೆಂಬ ವಾಸ್ತವ ಅರಿವಾಗಿ ಹೊಸ ಪಕ್ಷ ಆರಂಭಿಸಿದರೂ ಕೇವಲ ಬೆರಳೆಣಿಕೆಯ ಸ್ಥಾನಗಳನ್ನು ಪಡೆದು ಕೊನೆಗೆ ಮಂತ್ರಿಯಾಗುವು ದಕ್ಕೋಸ್ಕರ ಅದೇ ಸೋನಿಯಾ ಗಾಂಧಿಗೆ ನಮಸ್ಕರಿಸಿದ ಮಹಾನ್ ಅವಕಾಶವಾದಿ. ಈತನೊಂದಿಗೆ ಸೋನಿಯಾ ಗಾಂಧಿಯನ್ನು ತೀವ್ರವಾಗಿ ಠೀಕಿಸಿದ ಈತನ ಸಂಗಾತಿ ಮಾಜಿ ಸ್ಪೀಕರ್ ಪಿ.ಎ. ಸಂಗ್ಮಾ ಸಹ ಕಳೆದ ಬಾರಿ ತನ್ನ ಮಗಳಿಗೆ ಸಚಿವೆಯನ್ನಾಗಿ ಮಾಡಿಸಲು ಸೋನಿಯಾರ ಮುಂದೆ ಮಂಡಿಯೂರಿಸಿದ ಇನ್ನೊಬ್ಬ ‘ಸ್ವಾಭಿಮಾನಿ’ ರಾಜಕಾರಣಿ. ಇವರೆಲ್ಲರ ಸ್ವಾಭಿಮಾನ ನಮಗೆಲ್ಲಾ ಮಾದರಿ ಅಲ್ವೇ?

ನಾಯಿಯು ಬಾಲವನ್ನು ಅಲ್ಲಾಡಿಸಬೇಕೇ ಹೊರತು ಬಾಲವು ನಾಯಿಯನ್ನು ಅಲ್ಲಾಡಿಸಲು ಆಗದು. ಆದರೆ ಅದನ್ನು ತಾವು ಮಾಡುತ್ತೇವೆ ಎಂಬ ಭ್ರಮೆಯಲ್ಲಿದ್ದು, ಜನರಿಂದ ತಿರಸ್ಕರಿಸಲ್ಪಟ್ಟರೂ ನಾಚಿಕೆಯಿಲ್ಲದ ಕಮ್ಯುನಿಸ್ಟ್ ಪಕ್ಷಗಳಲ್ಲಿ ಸಿಪಿಎಂನ ಮುಖಂಡರಾದ ಪ್ರಕಾಶ್ ಕಾರಟ್ ಸಹ ಪ್ರಧಾನಿ ಹುದ್ದೆ ತನಗೆ ಸಿಕ್ಕಿದರೆ ಸಂತೋಷಪಡುವ ಅಸಾಮಿ. ಈಯೆಲ್ಲರಿಗೂ ನಿದ್ದೆಯಿಂದ ಓಡಿಸುವವರಂತೆ ನಮ್ಮ ದೇವೇಗೌಡರು ಇನ್ನೊಂದು ಸಾರಿ ತಾನು ಪ್ರಧಾನಿಯಾಗುವುದು ನಿಶ್ಚಿತವೆಂಬಂತೆ ಆಗಾಗ ಕನವರಿಸುತ್ತಿರುತ್ತಾರೆ. ಉಳಿದವರೂ ಅನೇಕರಿದ್ದಾರೆ. ಪಾಪ, ಅವರೆಲ್ಲರಿಗೂ ಪ್ರಧಾನಿ ಹುದ್ದೆಯ ಗುಂಗು. ಹಾಗಾಗಿ ಇವರೆಲ್ಲಾ ತಮ್ಮಷ್ಟಕ್ಕೇ, ಏಕಕಾಲದಲ್ಲಿ ಗುನುಗುತ್ತಿರುವ ಮಾತೆಂದರೆ… ಇದೇ…. ಹಾಡು (ದೇವೇಗೌಡರ ಹಾಡುಗಳು ಬೇರೆಯವೇ ಇರಬಹುದು! ಬಹುಶಃ ‘ಕನಸಲೂ ನೀನೆ, ಮನಸಲೂ ನೀನೆ’ ಅದರಲ್ಲಿ ಒಂದಾಗಿರಬಹುದೇನೋ). ಹೀಗೆ ಇವರೆಲ್ಲರ ಮೆಚ್ಚಿನ, ನೆಚ್ಚಿನ ಗೀತೆ….

ಎಲ್ಲೆಲ್ಲಿ ನೋಡಲಿ
ನಿನ್ನನ್ನೇ ಕಾಣುವೆ
ಕಣ್ಣಲ್ಲಿ ತುಂಬಿರುವೆ
ಮನದಲಿ ಮನೆ ಮಾಡಿ ಆಡುವೆ…..

(Originally published on February 19, 2012)

2 comments

Leave a comment

Your email address will not be published. Required fields are marked *

Latest News