Latest News

ಅಧಿಕಾರ, ಹುದ್ದೆಯ ಆಸೆಗೆ ಸ್ವಾಭಿಮಾನ ಬಲಿ ಕೊಡಲಾರೆ: ಜಯಪ್ರಕಾಶ್ ಹೆಗ್ಡೆ

ಡೊನಾಲ್ಡ್ ಪಿರೇರಾ ಬೆಳ್ತಂಗಡಿ

Posted on : July 26, 2016 at 5:53 PM

Dear Readers, we are running a free media with high democratic values. Without subscriptions, advertisements & having no patrons or god fathers, we depend on your support to run this pro people, impartial, unbiased and courageous media. Kindly support us by your generous help.
Our Google Pay & Paytm Number - 8277362399

Our Bank Details:
Name: Donald Pereira
Bank: Canara Bank
A/C No: 0977101022194
Hampankatta Branch, Mangaluru 575 001
IFSC Code: CNRB0000612
MICR Code: 575015009

ಸಂದರ್ಶನ, ಚಿತ್ರಗಳು: ಡೊನಾಲ್ಡ್ ಪಿರೇರಾ, ಸಂಪಾದಕ – Budkulo.com

Budkulo_Jaya Prakash Hegde_Interview (8)ಕಳೆದೊಂದು ವರ್ಷದಲ್ಲಿ ರಾಜ್ಯದ ರಾಜಕಾರಣದಲ್ಲಿ ಅಪಾರ ಸದ್ದು ಮಾಡಿದ ರಾಜಕಾರಣಿಗಳಲ್ಲಿ ಬ್ರಹ್ಮಾವರದ ಜಯಪ್ರಕಾಶ್ ಹೆಗ್ಡೆಯವರು ಒಬ್ಬರು. ಸರಳ ವ್ಯಕ್ತಿತ್ವದ, ಜನರೊಡನೆ ಬೆರೆಯುವ ಅವರ ಗುಣ, ಕೈಯಲ್ಲಿ ಹಿಡಿದ ಕೆಲಸವನ್ನು ಹಟ ಹಿಡಿದು ಸಾಧಿಸುವ ಛಲ, ಜನಪರ ನಿಲುವಿನಿಂದಾಗಿ ಅವರಿಗೆ ಎಲ್ಲಾ ಪಕ್ಷಗಳಲ್ಲಿಯೂ ಅಭಿಮಾನಿಗಳಿದ್ದಾರೆ. ಕ್ರಿಯಾಶೀಲ ಕೆಲಸಗಾರರಾದ ಹೆಗ್ಡೆಯವರಿಗೆ ಪಕ್ಷಗಳ ಹಂಗಿಲ್ಲ. ಹಿಂದೆ ಜನತಾ ದಳದಲ್ಲಿದ್ದಾಗ ಕರಾವಳಿಯಲ್ಲಿ ಆ ಪಕ್ಷಕ್ಕೆ ನೆಲೆ ಒದಗಿಸಿದವರಲ್ಲಿ ಅವರೂ ಒಬ್ಬರು. ಸಚಿವರಾಗಿ ಅಧಿಕಾರದಲ್ಲಿದ್ದಾಗ ತುಂಬಾ ಓಡಾಡಿಕೊಂಡು ಕೆಲಸ ಮಾಡಿ ಅನುಭವ ಗಳಿಸಿದ್ದಾರೆ. ಆ ಪಕ್ಷ ವಿಭಜನೆಯಾಗಿ ಕರಾವಳಿಯಲ್ಲಿ ಅಪ್ರಸ್ತುತವಾದಾಗ ಪಕ್ಷೇತರರಾಗಿಯೇ ಚುನಾವಣೆಯನ್ನು ಗೆದ್ದು ಶಾಸಕರಾದ ಛಾತಿ ಅವರದು. ಕೊನೆಗೆ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡು ಉಡುಪಿ ಜಿಲ್ಲೆಯಲ್ಲಿ ಆ ಪಕ್ಷಕ್ಕೆ ಜೀವಕಳೆ ತಂದು ಕೊಟ್ಟರು. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದರಿಂದ ತೆರವಾಗಿದ್ದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ ಗೆದ್ದು, ರಾಜ್ಯದಲ್ಲಿ ಕಳೆಗುಂದಿದ್ದ ಕಾಂಗ್ರೆಸ್ ಪಕ್ಷಕ್ಕೆ ಟಾನಿಕ್ ನೀಡಿದರು. ಅಲ್ಲಿಂದ ರಾಜ್ಯದಲ್ಲಿ ಕಾಂಗ್ರೆಸ್ಸಿನ ವಿಜಯ ಪರ್ವ ಆರಂಭವಾಗಿ, ಸಿದ್ಧರಾಮಯ್ಯ ನೇತೃತ್ವದಲ್ಲಿ ಸರಕಾರವೂ ಆಡಳಿತಕ್ಕೆ ಬಂತು.

ಆದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ, ಅಪಾರ ಜನಪ್ರೀತಿ ಗಳಿಸಿಕೊಂಡಿದ್ದರೂ, ದೇಶಾದ್ಯಂತ ಬೀಸಿದ ನರೇಂದ್ರ ಮೋದಿಯವರ ಅಲೆ ಅಪ್ಪಳಿಸಿ ಸೋತು ಹೋದರು. ಚುನಾವಣೆಯಲ್ಲಿ ಸೋತರೂ ಗೆದ್ದರೂ ಜನರ ನಡುವೆಯೇ ಇದ್ದು ಕೆಲಸ ಮಾಡುವುದು ಅವರ ವೈಶಿಷ್ಟ್ಯತೆ. ಆದರೆ ಕಳೆದ ವರ್ಷಾಂತ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ನಡೆದ ಚುನಾವಣೆಯು ಅವರನ್ನು ಸಾಕಷ್ಟು ಅಲ್ಲಾಡಿಸಿ, ಕಂಗೆಡಿಸಿ ಬಿಟ್ಟಿತು. ಸಿದ್ಧಾಂತ, ನೀತಿ, ಪಾರದರ್ಶಕತೆಗೆ ಒಗ್ಗಿಕೊಂಡಿದ್ದ ಅವರಿಗೆ ಕಾಂಗ್ರೆಸ್ಸಿನ ಹೊಂದಾಣಿಕೆ ರಾಜಕೀಯ, ಹೈಕಮಾಂಡ್ ಸಂಸ್ಕೃತಿಗೆ ಒಗ್ಗಿಕೊಳ್ಳದೇ ಹೋದದ್ದು ದುಬಾರಿಯಾಗಿ ಪರಿಣಮಿಸಿತು. ಅವರನ್ನು ಬಲಿಪಶು ಮಾಡಲಾಯಿತು ಅಥವಾ ಸ್ವಾಭಿಮಾನಿಯಾದ ಅವರೇ ಆ ಪಕ್ಷವನ್ನು ತೊರೆದರು ಎನ್ನಬಹುದು.

ಅದೀಗ ಚರಿತ್ರೆ. ಈ ಹಿನ್ನೆಲೆ ಮತ್ತು ಅವರ ಮುಂದಿನ ನಡೆಗಳೇನು ಎನ್ನುವುದನ್ನು ತಿಳಿದುಕೊಳ್ಳಲು ಅವರೊಂದಿಗೆ ನಡೆಸಿದ ಈ ಸಂದರ್ಶನ ನಿಮಗಾಗಿ ಇಲ್ಲಿ ಕೊಡಲಾಗಿದೆ. ಇದೊಂದು ಜಟ್‍ಪಟ್ ಸಂದರ್ಶನ. ಅವರ ಬಳಿ ಚರ್ಚಿಸಲು ಇನ್ನಷ್ಟು ವಿಷಯಗಳಿದ್ದವು, ಕೇಳಲು ಬಹಳಷ್ಟು ಪ್ರಶ್ನೆಗಳಿದ್ದವು. ದೂರ ಪ್ರಯಾಣದ ಸಿದ್ಧತೆಯಲ್ಲಿದ್ದ ಹೆಗ್ಡೆಯವರು ನಮಗಾಗಿ ಸ್ವಲ್ಪ ಬಿಡುವು ಮಾಡಿಕೊಂಡು ನೀಡಿದ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದರು, ಎಂದಿನ ಸರಳತೆ, ವಿನಯತೆಯೊಂದಿಗೆ.

ಓದಿ, ಜಯಪ್ರಕಾಶ್ ಹೆಗ್ಡೆಯವರು ಏನೆನ್ನುತ್ತಾರೆ ತಿಳಿದುಕೊಳ್ಳಿ.

-ಸಂಪಾದಕ

Budkulo_Jaya Prakash Hegde_Interview (5)

ಡೊನಾಲ್ಡ್: ಜಯಪ್ರಕಾಶ್ ಹೆಗ್ಡೆಯವರೇ, ಬಹಳ ಕ್ರಿಯಾಶೀಲ ರಾಜಕಾರಣಿ, ಜನಪ್ರತಿನಿಧಿಯಾಗಿದ್ದವರು ನೀವು. ಕರಾವಳಿ ಜಿಲ್ಲೆಗಳಲ್ಲಿಯೇ ವಿಶಿಷ್ಟ ವ್ಯಕ್ತಿತ್ವ ನಿಮ್ಮದು. ಹೀಗೆ ಇದ್ದಕ್ಕಿದ್ದಂತೆ ಪ್ರಮುಖ ಪಕ್ಷದಿಂದ ಹೊರ ಬಂದು ಏನು ಮಾಡುತ್ತಿದ್ದೀರಿ? ಸದ್ಯಕ್ಕೆ ರಾಜಕೀಯದಲ್ಲಿ ನೀವು ನಿರುದ್ಯೋಗಿಯೇ?

ಜಯಪ್ರಕಾಶ್ ಹೆಗ್ಡೆ: ಇಲ್ಲ. ನೋಡಿ, ಕೆಲಸ ಮಾಡುವವರು ನಿರುದ್ಯೋಗಿ ಆಗ್ಲಿಕ್ಕೆ ಸಾಧ್ಯವೇ ಇಲ್ಲ. ರಾಜಕಾರಣ ಎಂಬುದು ವೃತ್ತಿಯಲ್ಲ. Politics is not a profession. By profession I am a lawyer. Politics is my passion. ಅಧಿಕಾರ ಇದ್ರೆ ಮಾತ್ರ ಉದ್ಯೋಗ ಅಂತಲ್ಲ. ಹುದ್ದೆ, ಅಧಿಕಾರದಲ್ಲಿ ಇರುವುದಕ್ಕೂ ಕೆಲಸ ಮಾಡುವುದಕ್ಕೂ ಬಹಳ ವ್ಯತ್ಯಾಸವಿದೆ. ಕೆಲವರಿಗೆ ಅಧಿಕಾರ, ಹುದ್ದೆ, ಸ್ಥಾನ ಮಾನ ಸಿಕ್ಕಿದರೂ ಕೆಲಸ ಮಾಡುವುದಕ್ಕೆ ಗೊತ್ತಿಲ್ಲ. ಅವರಿಗೆ ಅಧಿಕಾರ ಇದ್ದರೂ ಕೆಲಸ ಮಾಡ್ಲಿಕ್ಕೆ ಗೊತ್ತಿಲ್ಲ. ನನಗೆ ಅಧಿಕಾರ ಇಲ್ಲದಿದ್ದರೂ ಕೆಲಸ ಮಾಡುವ ಶಕ್ತಿ ಇದೆ. ಆ ಭಾವನೆಯಿಂದ ಕೆಲಸ ಮಾಡುತ್ತೇನೆ.

ಡೊನಾಲ್ಡ್: ಏನು ಕೆಲ್ಸ ಮಾಡ್ತೀರಿ? ಯಾವ ರೀತಿ?

ಜೆ.ಪಿ. ಹೆಗ್ಡೆ: ಜನರು ನನ್ನ ಹತ್ತಿರ ಬರುತ್ತಾರೆ. ಅವರ ಕೆಲಸಗಳನ್ನು ಮಾಡಿ ಕೊಡುತ್ತೇನೆ. ಸರಕಾರಿ ಇಲಾಖೆ, ಕಚೇರಿಗಳಲ್ಲಿ ಅವರ ಕೆಲಸಗಳನ್ನು ಮಾಡಲು ನೆರವು ನೀಡುತ್ತೇನೆ. ಸಾಮಾಜಿಕ ಕಳಕಳಿ ಇರುವವರಿಗೆ ಈ ಅಧಿಕಾರ, ಸ್ಥಾನಗಳೇ ಪ್ರಮುಖವಲ್ಲ.

ಡೊನಾಲ್ಡ್: ಸರಿ, ನೀವು ಜನರಿಗೆ ಸಹಾಯ ಮಾಡುತ್ತೀರಿ, ಅವರ ಕೆಲಸ ಮಾಡಲು ನೆರವು ನೀಡುತ್ತೀರಿ. ಒಳ್ಳೆಯದೇ. ಆದರೆ ನಾನು ಹೇಳುವುದೇನೆಂದರೆ, ಒಂದು ಹುದ್ದೆ, ಅಧಿಕಾರ ಸ್ಥಾನದಲ್ಲಿದ್ದರೆ ಅದಕ್ಕಿಂತ ಹೆಚ್ಚಿನ ಸ್ತರದ ಕೆಲಸ, ಯೋಜನೆಗಳನ್ನು ಹಮ್ಮಿಕೊಳ್ಳಲು ಸಾಧ್ಯವಿದೆಯಲ್ಲವೇ? ನೀವೀಗ ಮಾಡುವುದಕ್ಕಿಂತ ಜನಪ್ರತಿನಿಧಿ ಅಥವಾ ಪ್ರಮುಖ ಹುದ್ದೆಯಲ್ಲಿದ್ದಿದ್ದರೆ ದೊಡ್ಡ ಮಟ್ಟಿನ ಕಾರ್ಯ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿತ್ತಲ್ಲವೇ?? ಅದನ್ನು ನಾನು ಹೇಳುತ್ತಿರೋದು.

ಜೆ.ಪಿ. ಹೆಗ್ಡೆ: ಅಲ್ಲ. ತಪ್ಪು ಗ್ರಹಿಕೆ ಅದು. ಹುದ್ದೆ ಇಲ್ಲದಿದ್ದರೂ ಕೆಲಸ ಮಾಡುವ ಶಕ್ತಿಯನ್ನು ಬೆಳೆಸಿಕೊಂಡಿದ್ದೇನೆ ನಾನು. ಅದರಿಂದಾಗಿ ಕೆಲಸ ಮಾಡ್ತೇನೆ. ನನ್ನ ಹತ್ತಿರ ಜನರು ಬರ್ತಾರೆ. ಜನಪ್ರತಿನಿಧಿಗಳ ಬಳಿ ಹೋಗುವುದಕ್ಕಿಂತ ಹೆಚ್ಚಿನ ಜನರು ನನ್ನ ಬಳಿ ಬರ್ತಿದ್ದಾರೆ.

ಡೊನಾಲ್ಡ್: ಅಂದ್ರೆ ನೀವು ಜನರ ಸಂಪರ್ಕದಲ್ಲಿಯೇ ಇದ್ದೀರಿ. ಅವರ ಕೆಲಸ ಕಾರ್ಯಗಳನ್ನು ಮಾಡಿ ಕೊಡ್ತೀರಿ?

ಜೆ.ಪಿ. ಹೆಗ್ಡೆ: ಹೌದು. ಜನರ ನಡುವೆಯೇ ನಾನಿದ್ದೇನೆ.

ಡೊನಾಲ್ಡ್: ಮುಂದೇನು?

ಜೆ.ಪಿ. ಹೆಗ್ಡೆ: ಮುಂದಿನ ಬಗ್ಗೆ ತೀರ್ಮಾನ ಇನ್ನೂ ಕೈಗೊಂಡಿಲ್ಲ. ನನ್ನ ಸ್ನೇಹಿತರ ಜೊತೆ ಚರ್ಚೆ ಮಾಡುತ್ತಿದ್ದೇನೆ. ಯಾಕೆಂದರೆ, ನಾನು ನನ್ನ ತೀರ್ಮಾನವನ್ನು ನನ್ನವರ ಮೇಲೆ ಹೇರುವುದಿಲ್ಲ. ಅವರೆಲ್ಲರ ಅಭಿಪ್ರಾಯಕ್ಕೆ ಮನ್ನಣೆ ಕೊಟ್ಟು ನಾನು ತೀರ್ಮಾನ ತೆಗೆದುಕೊಳ್ಳುತ್ತೇನೆ.

Budkulo_Jaya Prakash Hegde_Interview (7) Budkulo_Jaya Prakash Hegde_Interview (4)

ಡೊನಾಲ್ಡ್: ಕಳೆದ ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ನೀವು ದುಡುಕಿನ ತೀರ್ಮಾನ ತೆಗೆದುಕೊಂಡಿರಿ ಅಲ್ವೇ?

ಜೆ.ಪಿ. ಹೆಗ್ಡೆ: ಇಲ್ಲ. ದುಡುಕಿದೆ ಅಂಥ ನಾನು ಭಾವಿಸುವುದಿಲ್ಲ. ಯಾಕೆಂದರೆ, ತಪ್ಪನ್ನು ತಪ್ಪೆಂದು ನಾನು ಹೇಳಿದ್ದೇನೆ. ತಪ್ಪನ್ನು ತಪ್ಪೆಂದು ಹೇಳುವುದೇ ತಪ್ಪಾದರೆ, ನಿರಂತರವಾಗಿ ತಪ್ಪನ್ನು ಮಾಡುತ್ತೇನೆ ನಾನು. ಬಹುಶಃ ಎಲ್ಲರೂ ಆಲೋಚಿಸುವಂತೆ ನೀವು ಕೂಡಾ ಆಲೋಚಿಸುತ್ತೀರಿ ಅನ್ನಿಸುತ್ತದೆ. ಏನೆಂದರೆ ನಾನು ಹಾಗೆ ದುಡುಕದೇ ಇದ್ದಿದ್ದರೆ ಕಾಂಗ್ರೆಸ್ಸಿನಲ್ಲಿ ನನಗೆ ಏನಾದರೂ ಸ್ಥಾನವನ್ನು ಕೊಡುತ್ತಿದ್ದರು ಅಂತ. ಇಲ್ಲ, ನಾನು ಯಾವುದೇ ಸ್ಥಾನ, ಹುದ್ದೆಯ ಆಲೋಚನೆಯೇ ಮಾಡಿದವನಲ್ಲ.

ನಾನು ಆಲೋಚಿಸಿದ್ದು ಏನೆಂದರೆ, ಮೇಲ್ಮನೆಯೆಂಬುದು ಒಂದು ಗಂಜಿ ಕೇಂದ್ರ ಆಗಬಾರದು ಎಂದು. ಅದು ರಿಹ್ಯಾಬಿಲಿಟೇಶನ್ ಸೆಂಟರ್ ಆಗಬಾರದು. ಯಾರು ಕ್ರಿಯಾಶೀಲರಾಗಿ, ಚರ್ಚೆಯಲ್ಲಿ ಭಾಗವಹಿಸಿ, ಪಕ್ಷಕ್ಕೆ ಮತ್ತು ಜನರಿಗೆ ಅನುಕೂಲಕರವಾಗಿರುತ್ತಾರೆ ಅಂಥವರಿಗೆ ಆ ಸ್ಥಾನ ಕೊಡಬೇಕೇ ಹೊರತು ಹಲವು ಬಾರಿ ಮೇಲ್ಮನೆ ಸದಸ್ಯನಾಗಿಯೂ ಯಾವುದೇ ಕೆಲಸ ಕಾರ್ಯ ಮಾಡದವರಿಗೆ ಅಲ್ಲಿ ಸ್ಥಾನ ನೀಡಬಾರದೆಂಬುದು ನನ್ನ ನಿಲುವಾಗಿತ್ತು.

ಡೊನಾಲ್ಡ್: ಒಪ್ಪುತ್ತೇನೆ. ಆ ಸಂದರ್ಭ ಮತ್ತು ನಿಮ್ಮನ್ನು ನಡೆಸಿಕೊಂಡ ರೀತಿಗೆ ನಿಮ್ಮ ನಿರ್ಧಾರ ಒಪ್ಪುವಂಥದ್ದು. ಆದರೆ, ಜನರ ಅಭಿಪ್ರಾಯವೇನೆಂದರೆ, ಒಂದು ವೇಳೆ ನೀವು ಸ್ವಲ್ಪ ಹೊಂದಾಣಿಕೆ ಮಾಡಿಕೊಂಡಿದ್ದಿದ್ದರೆ, ಪ್ರಮುಖ ಪಕ್ಷದಲ್ಲಿ ಮುಂದೆ ಸೂಕ್ತ ಸ್ಥಾನ ದೊರಕಿ ಜನರಿಗೆ ಹೆಚ್ಚಿನ ಒಳಿತನ್ನು ಮಾಡಲು ಸಾಧ್ಯವಾಗುತ್ತಿತ್ತಲ್ಲವೆ? ಸಾಮಾನ್ಯವಾಗಿ ಹೈಕಮಾಂಡಿಗೆ ನಿಷ್ಠೆಯಿಂದಿದ್ದವರಿಗೆ ಮುಂದೆ ಒಳಿತಾಗುತ್ತದೆ…

ಜೆ.ಪಿ. ಹೆಗ್ಡೆ: ಅದು ಯಾಕೆ ಅಂದರೆ ಮುಂದೆ ತಮಗೆ ಯಾವುದಾದರೂ ಸ್ಥಾನ, ಹುದ್ದೆ ದೊರಕೀತು ಎಂಬ ಭಾವನೆಯಿಂದ. ಆದರೆ ನಾನು ಹಾಗೆ ಅಲ್ಲ. ನನ್ನಂತಹ, ನೇರವಾಗಿ ಮಾತನಾಡುವವನಿಗೆ ಅಂತಹ ಸ್ಥಾನ ಸಿಗುವುದಿಲ್ಲ. ನನಗೆ ಅದರ ಅಗತ್ಯವೂ ಇಲ್ಲ. ಹಿಂದೆ ನಾನು ಜನತಾ ದಳದಲ್ಲಿದ್ದೆ. ಅಲ್ಲಿ ನಾಯಕರುಗಳ ಹೆಸರು ಹೇಳಿಕೊಂಡು (ಅವರನ್ನು ಹೊಗಳಿ) ಭಾಷಣ ಮಾಡುವ ಅಭ್ಯಾಸ ನನಗಿರಲಿಲ್ಲ. ನಂತರ ನಾನು ಪಕ್ಷೇತರನಾಗಿದ್ದೆ. ಆಗ ನನಗೆ ನಾಯಕರು ಯಾರೂ ಇರಲಿಲ್ಲ. ನನಗೇನು ಸರಿಯೆಂದು ತೋಚುತ್ತಿತ್ತೋ ಹಾಗೆ ಹೇಳಿಕೆ ಕೊಡುತ್ತಿದ್ದೆ, ಕೆಲಸ ಮಾಡಿಕೊಂಡಿದ್ದೆ.

ಡೊನಾಲ್ಡ್: ಆದ್ರೂ ಸ್ವಲ್ಪ ಹೊಂದಾಣಿಕೆ ಮಾಡಿಕೊಂಡಿದ್ದಿದ್ರೆ ಮುಂದೆ ನಿಮಗೆ ಸೂಕ್ತ ಸ್ಥಾನಮಾನ ದೊರಕುತ್ತಿತ್ತೇನೋ…?

ಜೆ.ಪಿ. ಹೆಗ್ಡೆ: ಅದೇ, ಅಂತಹ ಸ್ಥಾನವೇ ಬೇಕಾಗಿಲ್ಲ. ವಿಧಾನ ಪರಿಷತ್ ಚುನಾವಣೆಗೆ ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಿ ಎಂದು ನಾನು ಕೇಳಿರಲಿಲ್ಲ. ನನ್ನ ನಿಲುವೇನಾಗಿತ್ತೆಂದರೆ, ಯಾರು ಬೇಡ ಎಂದು ಹೇಳಿದ್ದರೋ, ಪುನಃ ಅವರನ್ನೇ ಯಾಕೆ ಮತ್ತೆ ತಂದು ಕೂರಿಸುತ್ತೀರೆಂದು. ಮಾನ್ಯ ಆಸ್ಕರ್ ಫೆರ್ನಾಂಡಿಸ್ ಅವರು ನನ್ನಲ್ಲಿ, ವೇಕೆನ್ಸಿ ಎಲ್ಲಿದೆ ಎಂದು ಕೇಳಿದ್ರು. ನಾನು, ಮಾನ್ಯ ಪ್ರತಾಪ್‍ಚಂದ್ರ ಶೆಟ್ಟಿಯವರು ನಿಲ್ಲುವುದಿಲ್ಲ ಎನ್ನುವಾಗ ವೇಕೆನ್ಸಿ ಕ್ರಿಯೇಟ್ ಆಯ್ತಲ್ವೆ ಎಂದೆ. ಯಾರಿಗೆ ಖುದ್ದು ಆಸಕ್ತಿ ಇರಲಿಲ್ಲವೋ ಅವರನ್ನೇ ಮತ್ತೆ ತಂದು ಕೂರಿಸುವ ಅವಶ್ಯಕತೆ ಏನಿದೆ ಎಂದಷ್ಟೇ ನಾನು ಕೇಳಿದ್ದು.

ಡೊನಾಲ್ಡ್: ಹಾಗಂತ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬದಲಾವಣೆ ಆಗಿಲ್ಲ, ಆಗುವುದೂ ಇಲ್ಲವೇನೋ!

ಜೆ.ಪಿ. ಹೆಗ್ಡೆ: ಅದು ಆಗುವುದೂ ಇಲ್ಲ. ಎಲ್ಲಿಯವರೆಗೆ ಈ ವ್ಯವಸ್ಥೆ ಮುಂದುವರಿಸಿಕೊಂಡು ಹೋಗುತ್ತದೆಯೋ ಅಲ್ಲಿಯವರೆಗೆ ಬದಲಾವಣೆ ಉಂಟಾಗ್ಲಿಕ್ಕೆ ಸಾಧ್ಯವಾಗುವುದಿಲ್ಲ.

ಡೊನಾಲ್ಡ್: ಕಾಂಗ್ರೆಸ್ ಪಕ್ಷದಲ್ಲಿ ಆಳುಗಳಂತೆ, ಗುಲಾಮರಂತೆ ಇದ್ರೆ ಮಾತ್ರ ಬದುಕು ಸಾಧ್ಯ?!?

ಜೆ.ಪಿ. ಹೆಗ್ಡೆ: ಹಾಗೆ ನಾನು ಹೇಳುವುದಿಲ್ಲ. ಆದರೆ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲಿಕ್ಕೆ ಅವಕಾಶ ಇಲ್ಲ.

Budkulo_Jaya Prakash Hegde_Interview (3) Budkulo_Jaya Prakash Hegde_Interview (1)

ಡೊನಾಲ್ಡ್: ಯಾರು ಏನೇ ಹೇಳ್ಲಿ, ಆಸ್ಕರ್ ಫೆರ್ನಾಂಡಿಸ್ ಅವರು ಇಲ್ಲಿ ಕಾಂಗ್ರೆಸ್ಸಿನ ಅನಭಿಷಿಕ್ತ ದೊರೆ ಇದ್ದಂತೆ. ಹೈಕಮಾಂಡಿನಲ್ಲಿ ಯಾರೇ ಬರಲಿ ಹೋಗಲಿ, ಅವರು ಮಾತ್ರ ಹೈಕಮಾಂಡಿನ ಖಾಯಂ ಪರಮಾಪ್ತರು. ಅವರನ್ನು ಎದುರು ಹಾಕಿಕೊಂಡು ಕಾಂಗ್ರೆಸ್ಸಿನಲ್ಲಿ ಬಾಳುವುದು ಕಷ್ಟ. ವಿಚಿತ್ರವೆಂದರೆ, ಮೊನ್ನೆ ರಾಜ್ಯ ಸರಕಾರದ ಸಚಿವ ಸಂಪುಟ ಬದಲಾವಣೆಗೆ ಕೆಲ ದಿನ ಮೊದಲು ಒಂದು ಸಮಾರಂಭದಲ್ಲಿ ಸಚಿವ ವಿನಯ ಕುಮಾರ್ ಸೊರಕೆಯವರು ಆಸ್ಕರ್‍ರನ್ನು ಬಾಯಿ ತುಂಬಾ ಹೊಗಳಿದ್ದೇ ಹೊಗಳಿದ್ದು. ಆದರೂ ಅವರ ಸಚಿವ ಸ್ಥಾನ ಹೋಯಿತಲ್ಲಾ!

ಜೆ.ಪಿ. ಹೆಗ್ಡೆ: ಈ ವಿಷಯದಲ್ಲಿ ನನ್ನ ಬಗ್ಗೆ ಹೇಳುವುದಾದರೆ, ನಾನು ಭಾಷಣ ಮಾಡುವಾಗ ನಾಯಕರನ್ನು ಹೊಗಳುವುದಿಲ್ಲವೆಂಬ ಕಾರಣಕ್ಕೆ ನನ್ನನ್ನು ದೂರುವುದನ್ನು ಕೇಳಿದ್ದೇನೆ. ಅದಕ್ಕೆ ನಾನು ಹೇಳಿದ್ದೇನೆಂದರೆ, ಜನತಾ ದಳದಲ್ಲಿದ್ದಾಗ ನನಗೆ ಆ ಅಭ್ಯಾಸ ಇರಲಿಲ್ಲ, ಪಕ್ಷೇತರನಾಗಿದ್ದಾಗ ಅದರ ಅಗತ್ಯವೇ ಇರಲಿಲ್ಲ. ಹಾಗಾಗಿ ನನಗೆ ಆ ಅಭ್ಯಾಸವಿಲ್ಲ. ಅದನ್ನು ನಾನು ಇನ್ನು ಕಲ್ಟಿವೇಟ್ ಮಾಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದೆ.

ಡೊನಾಲ್ಡ್: ಅಲ್ಲ, ನಿಮಗೆ ಕಾಂಗ್ರೆಸ್ ಪಕ್ಷವನ್ನು ಸೇರುವ ಮೊದಲು ಇದೆಲ್ಲಾ ತಿಳಿದಿರಲಿಲ್ಲವೆ? ಆಸ್ಕರ್ ಬಗ್ಗೆ ನಿಮಗೆ ಗೊತ್ತಿರಲಿಲ್ಲವೆ?

ಜೆ.ಪಿ. ಹೆಗ್ಡೆ: ಅಲ್ಲಿನ ಆಂತರಿಕ ವ್ಯವಸ್ಥೆಯನ್ನು ನಾನು ಅರ್ಥ ಮಾಡಿಕೊಂಡಿರಲಿಲ್ಲ. ಪ್ರತಿಯೊಬ್ಬರು ತಪ್ಪು ಮಾಡ್ತಾರೆ, ನಾನೂ ತಪ್ಪು ಮಾಡಿರಬಹುದು. ಆ ತಪ್ಪನ್ನು ತಿದ್ದಿಕೊಳ್ಳುವ ಪ್ರಯತ್ನವನ್ನೀಗ ಮಾಡ್ತಾ ಇದ್ದೇನೆ.

ಡೊನಾಲ್ಡ್: ಕಾಂಗ್ರೆಸ್ಸಿನ ಕೆಲ ಮುಖಂಡರು ನನ್ನ ಬಳಿ ಹೇಳಿದ್ದಿದೆ, ಹೆಗ್ಡೆಯವರಿಗೆ ಎಷ್ಟು ಸಲ ಅವಕಾಶ ಕೊಡುವುದು, ಸೋತವರಿಗೆ ಎಷ್ಟೆಂದು ಚಾನ್ಸ್ ಕೊಡುವುದು ಎಂದು ಅವರು ಹೇಳುತ್ತಾರೆ…

ಜೆ.ಪಿ. ಹೆಗ್ಡೆ: ಅವರಿಗೆ ನಾನು ಹೇಳುವುದೆಂದರೆ, ನಾನು ಟಿಕೆಟ್ ಕೇಳಿದವನಲ್ಲ. ಮೊದಲಿಗೆ ವಿಧಾನಸಭೆಗೆ ನನ್ನದಲ್ಲದ ಕ್ಷೇತ್ರಕ್ಕೆ ನಿಲ್ಲಲು ಒತ್ತಾಯಪಡಿಸಿದ್ದರಿಂದ ನಿಂತೆ, ಅಲ್ಲಿ ಸೋತೆ. ಆಗ ಪರಿಸ್ಥಿತಿ ಹೇಗಿತ್ತೆಂದರೆ, ನಾನು ನಿಲ್ಲುವುದರಿಂದ ಕಾಂಗ್ರೆಸ್ ಗೆಲ್ಲುತ್ತದೆ ಎಂಬುದಲ್ಲ, ನಾನು ನಿಲ್ಲದೇ ಇದ್ದರೆ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಉಳಿಯುವುದಿಲ್ಲ, ಪಕ್ಷವನ್ನು ಉಳಿಸುವುದಕ್ಕೋಸ್ಕರ ನಾನು ನಿಲ್ಲುವುದು ಅಗತ್ಯವೆಂದು ಅವರು ಹೇಳಿದ್ದರು…

ಡೊನಾಲ್ಡ್: ಅಂದ್ರೆ ಪಕ್ಷ ಉಳಿಸುವುದಕ್ಕೋಸ್ಕರ ಅವರು ನಿಮ್ಮನ್ನು ಚುನಾವಣೆಗೆ ನಿಲ್ಲಿಸಿದರು..?

ಜೆ.ಪಿ. ಹೆಗ್ಡೆ: ನನಗೆ ಆಸಕ್ತಿ ಇರಲಿಲ್ಲ. ಪಾರ್ಲಿಮೆಂಟ್ ಚುನಾವಣೆಗೆ ನಿಲ್ಲುವುದಕ್ಕೂ ನನಗೆ ಆಸಕ್ತಿ ಇರಲಿಲ್ಲ. ಬಿ.ಎಲ್. ಶಂಕರ್ ಅವರು ನಿಲ್ಲುವುದಾದರೆ ನನಗೆ ಸಂತೋಷವೇ ಆಗುತ್ತಿತ್ತು. ನಾನು ಚುನಾವಣೆ ಗೆದ್ದರೂ ಸೋತರೂ ಜನರಿಗಾಗಿ ಓಡಾಡಿ ಅವರ ಕೆಲಸ ಮಾಡುವವನು. ಕಳೆದ ಚುನಾವಣೆಯಲ್ಲಿ ಮೊದಲು ವಾತಾವರಣ ನಮಗೆ ಪರವಾಗಿಯೇ ಇತ್ತು. ಆದರೆ ನಂತರ ಮೋದಿ ಅಲೆ ಹೇಗಿತ್ತೆಂದರೆ, ಸ್ವತಃ ಮೋದಿಯವರೇ ಕಾಂಗ್ರೆಸ್ಸಿನಲ್ಲಿ ಚುನಾವಣೆಗೆ ನಿಂತಿದ್ದರೆ ಸೋಲುತ್ತಿದ್ದರು ಎಂದು ಸಂಜಯ್ ನಿರುಪಮ್ ಹೇಳಿದಂತಹ ಪರಿಸ್ಥಿತಿ ಇತ್ತು.

ಡೊನಾಲ್ಡ್: ಅದಕ್ಕೂ ಮೊದಲು ಉಪ ಚುನಾವಣೆಯಲ್ಲಿ ನೀವು ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಗೆದ್ದಿರಿ. ಅದರ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್‍ಗೆ ಅನುಕೂಲಕರ ವಾತಾವರಣ ನಿರ್ಮಾಣಗೊಂಡಿತು…

ಜೆ.ಪಿ. ಹೆಗ್ಡೆ: ಅಲ್ಲಿಂದ ಕಾಂಗ್ರೆಸ್ ಪಕ್ಷ ಗೆಲ್ಲಲಿಕ್ಕೆ ಪ್ರಾರಂಭವಾಯಿತು. ನಾನು ಸೋತ ನಂತರ ಸೋಲಲಿಕ್ಕೆ ಪ್ರಾರಂಭವಾಗಿದೆ! (ನಗು). ಅದು ನನ್ನಿಂದ ಅಂಥ ಹೇಳುವುದಲ್ಲ ನಾನು. ವಾತಾವರಣ ಹಾಗಿದೆ ಎನ್ನುವುದನ್ನಷ್ಟೇ ನಾನು ಹೇಳುತ್ತಿದ್ದೇನೆ.

ಡೊನಾಲ್ಡ್: ಸಂಸತ್ ಸದಸ್ಯನಾಗಿ ಎರಡು ವರ್ಷದ ಕಡಿಮೆ ಅವಧಿಯಲ್ಲಿಯೂ ನೀವು ಸಾಕಷ್ಟು ಕೆಲಸ ಮಾಡಿದ್ದೀರಿ, ದೆಹಲಿಯಲ್ಲಿಯೂ ತುಂಬಾ ಹೆಸರು ಗಳಿಸಿದ್ದೀರಿ. ತುಂಬಾ ಕಡಿಮೆ ಅವಧಿಯಲ್ಲಿ ನೀವು ಬಹಳ ಪರಿಶ್ರಮಿ, ಕೆಲಸ ಮಾಡಿಸಿಕೊಳ್ಳುವ ಸಾಮರ್ಥ್ಯ, ದಕ್ಷತೆ ಇರುವವರೆಂದು ದೆಹಲಿಯ ಅಧಿಕಾರ ಕೇಂದ್ರಗಳಲ್ಲಿ ಹೊಗಳಿಕೆ ಪಡೆದುಕೊಂಡಿದ್ದೀರೆಂಬುದು ನಿಮ್ಮ ಹೆಗ್ಗಳಿಕೆ. ಅಂತಹ ಸಾಮರ್ಥ್ಯ ಇರುವ ನಿಮ್ಮನ್ನು ಕಾಂಗ್ರೆಸ್ ಪಕ್ಷವೇಕೆ ಕಡೆಗಣಿಸಿತು?

ಜೆ.ಪಿ. ಹೆಗ್ಡೆ: ಆ ಪ್ರಶ್ನೆಯನ್ನು ಅವರಿಗೇ ಕೇಳಬೇಕಾಗುತ್ತದೆ!

ಡೊನಾಲ್ಡ್: ನಿರ್ದಿಷ್ಟವಾಗಿ ಹೇಳುವುದಾದರೆ, ಆಸ್ಕರ್ ಫೆರ್ನಾಂಡಿಸ್ ಅವರು ನಿಮ್ಮನ್ನು ಟಾರ್ಗೆಟ್ ಮಾಡಿದ್ರಾ? ನಿಮ್ಮಂತಹ ಜನಪ್ರಿಯ, ಕೆಲಸ ಮಾಡುವ ನಾಯಕ ತಮಗೆ ಪರ್ಯಾಯವಾಗಿ ಬಿಟ್ಟಾರು ಎಂಬ ಮುಂದಾಲೋಚನೆಯಿಂದ ಏನಾದ್ರೂ ನಿಮ್ಮನ್ನು ಕಡೆಗಣಿಸಲಾಯಿತೆ?

ಜೆ.ಪಿ. ಹೆಗ್ಡೆ: ನಾನು ಆ ರೀತಿ ಆಲೋಚನೆ ಮಾಡುವುದಿಲ್ಲ. ಆದುದರಿಂದ ಬೇರೆಯವರು ಹಾಗೆ ಮಾಡುತ್ತಾರೆಂದು ನಾನು ಭಾವಿಸುವುದಿಲ್ಲ. ನನ್ನ ಭಾವನೆ ಏನೆಂದರೆ, ರಾಜಕೀಯದಲ್ಲಿ ಒಳ್ಳೆಯವನೊಬ್ಬ, ನನಗಿಂತ ಕೇಪೆಬಲ್ ಒಬ್ಬ ಬಂದ್ರೆ ಆತ ಓವರ್‌ಟೇಕ್ ಮಾಡ್ತಾನಂತ ಭಾವಿಸಬಾರದು. ಅಂತಹವರಿಗೆ ಮುಂದೆ ಬರಲು ಬಿಡಬೇಕು, ಅವಕಾಶ ಕೊಡಬೇಕು. ನಾನು ಖಂಡಿತ ಹಾಗೆ ಮಾಡುತ್ತೇನೆ.

ಎಂಎಲ್ಸಿ ಚುನಾವಣೆಯಲ್ಲಿ ನಾನು ನನಗೇ ಟಿಕೆಟ್ ಕೊಡಿ ಎಂದು ಕೇಳಿದ್ದಿಲ್ಲ. ಹರಿಕೃಷ್ಣ ಬಂಟ್ವಾಳ್, ಭುಜಂಗ ಶೆಟ್ಟಿ ಮುಂತಾದವರಿಗೆ ಅವಕಾಶ ಕೊಡಿ ಎಂದು ಹೇಳಿದ್ದೆ. ಪ್ರತಾಪಚಂದ್ರ ಶೆಟ್ಟಿಯವರು ನಿರಾಸಕ್ತಿ ತೋರಿದ್ದರಿಂದ, ಅವರು ಸಭೆಗೆ ಬಾರದೇ ಇದ್ದಿದ್ದರಿಂದ ಹಾಜರಿರುವವರು ಅರ್ಜಿ ಹಾಕಬಹುದು ಎಂದು ಜಿಲ್ಲಾಧ್ಯಕ್ಷ ಗೋಪಾಲ ಪೂಜಾರಿಯವರು ಕರೆದ ಅಧಿಕೃತ ಸಭೆಯಲ್ಲಿ ಘೋಷಿಸಿದ ನಂತರವಷ್ಟೇ ನಾನು ಅರ್ಜಿ ಹಾಕಿದ್ದು. ಪ್ರತಾಪಚಂದ್ರ ಶೆಟ್ಟರು ನೂರಕ್ಕೆ ನೂರು ತಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ ನಂತರವೇ ಈ ಬೆಳವಣಿಗೆ ಆಗಿದ್ದು. ಅವರ ಮಾತನ್ನು ನಂಬಿ ನಾನು ಪ್ರಯತ್ನ ಮಾಡಿದ್ದಷ್ಟೆ.

ಡೊನಾಲ್ಡ್: ರಾಜಕೀಯದಲ್ಲಿ ತೀರ್ಮಾನಗಳು ಆಗುವುದು ದೊಡ್ಡವರಿಂದ, ಹೈಕಮಾಂಡ್ ಮಟ್ಟದಲ್ಲಿಯೇ ಅಲ್ಲವೆ?

ಜೆ.ಪಿ. ಹೆಗ್ಡೆ: ಇಲ್ಲ ಇಲ್ಲ. ಹಾಗಾಗುವುದಿಲ್ಲ. ನನಗೆ ಬೇಡ ಎಂದು ಹೇಳಿದವರಿಗೆ ಯಾಕೆ ಮತ್ತೆ ಟಿಕೆಟ್ ಕೊಡುವುದು? ಅದಷ್ಟೇ ನನ್ನ ನಿಲುವು. ಕನಿಷ್ಠ ನಮ್ಮನ್ನು ಕರೆದು ಮಾತನಾಡಿಸಬಹುದಿತ್ತು, ಹೀಗೀಗಿದೆ ಪರಿಸ್ಥಿತಿ ಎಂದು ಮನವರಿಕೆ ಮಾಡಿಸಬಹುದಿತ್ತು.

ಡೊನಾಲ್ಡ್: ಅಂದ್ರೆ, ಅವರಿಗೆ ನೀವು ಬೇಕಾಗಿರಲಿಲ್ಲ ಅಂತ ಅರ್ಥ!?

ಜೆ.ಪಿ. ಹೆಗ್ಡೆ: ಗೊತ್ತಿಲ್ಲ. ಆ ಬಗ್ಗೆ ನೀವು ಅವರ ಹತ್ತಿರವೇ ಸ್ಪಷ್ಟೀಕರಣ ಕೇಳಿದರೆ ಉತ್ತರ ಹೇಳಬಹುದು.

ಡೊನಾಲ್ಡ್: ನೀವು ಪ್ರತ್ಯೇಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದಿರಿ. ಅದು ನೇರ ಚುನಾವಣೆಯಾಗಿರಲಿಲ್ಲ. ಅದರ ಮತದಾರರು ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಕಾರ್ಯಕರ್ತರು, ಮುಖಂಡರೇ ಆಗಿದ್ದರು. ಅವರಿಂದ ನೀವು ಮತಗಳನ್ನು ನಿರೀಕ್ಷೆ ಮಾಡುವಂತಿರಲಿಲ್ಲ. ಆದರೂ…

ಜೆ.ಪಿ. ಹೆಗ್ಡೆ: ಹೌದು ಅದು ಜನರಿಂದ ನೇರ ಆಯ್ಕೆಯಾಗಿದ್ದಿದ್ದರೆ ಬೇರೆಯೇ ವಾತಾವರಣವಿರುತ್ತಿತ್ತು. ಅದು ಜನಪ್ರತಿನಿಧಿಗಳು ಆಯ್ಕೆ ಮಾಡುವ ವ್ಯವಸ್ಥೆ. ಆದರೂ ನನಗೆ ಅಷ್ಟು ಮತಗಳು ದೊರಕಿದ್ದು ಹೇಗೆಂದರೆ, ನಾನು ಹಿಂದಿನ ಪಂಚಾಯತ್ ಚುನಾವಣೆಗಳಲ್ಲಿ ಅವರಿಗಾಗಿ ದುಡಿದಿದ್ದೆ, ಸಹಾಯ ಮಾಡಿದ್ದೆ. ಬೇರೆ ಬೇರೆ ಚುನಾವಣೆಗಳಲ್ಲಿ ಅವರಿಗಾಗಿ ನಾನು ಕೆಲಸ ಮಾಡಿದ್ದೆ. ಪ್ರತಾಪ್‍ಚಂದ್ರ ಶೆಟ್ಟರು ಕೆಲಸ ಮಾಡಿರಲಿಲ್ಲ. ಹಾಗಾಗಿ ನನಗೆ ಅಷ್ಟೊಂದು ಮತಗಳು ದೊರಕಿದವು.

ಡೊನಾಲ್ಡ್: ನಿಮ್ಮನ್ನು ಹೊರಗೆ ಹಾಕಿದ್ದರ ಪರಿಣಾಮವಾಗಿ ಮೊನ್ನೆಯ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಉಡುಪಿಯಲ್ಲಿ ಕಾಂಗ್ರೆಸ್ ಪಕ್ಷವು ಗುಡಿಸಿ ಹೋಯಿತು…!?

ಜೆ.ಪಿ. ಹೆಗ್ಡೆ: ಹಾಗೆಯೇ ಆಗಿದೆ.

ಡೊನಾಲ್ಡ್: ಅಂದ್ರೆ, ಅಷ್ಟು ದೊಡ್ಡ ನಾಯಕರು, ಮಂತ್ರಿ ಮಹೋದಯರಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ಮತಗಳನ್ನು ತಂದು ಕೊಡುವ ತಾಕತ್ತು ಇಲ್ಲವೆಂದಾಯಿತು…!? ಆಸ್ಕರ್ ಫೆರ್ನಾಂಡಿಸ್ ಅವರಿಗೆ ತಮ್ಮ ಕ್ಷೇತ್ರದಲ್ಲಿಯೇ ತಮ್ಮ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಗೆಲ್ಲಿಸುವ ಸಾಮರ್ಥ್ಯವಿಲ್ಲ?

ಜೆ.ಪಿ. ಹೆಗ್ಡೆ: ಅವರಿಗೆ ಆಗ್ಲಿಲ್ಲ.

ಡೊನಾಲ್ಡ್: ನಿಮ್ಮ ಭವಿಷ್ಯದ ನಿರ್ಧಾರವೇನು?

ಜೆ.ಪಿ. ಹೆಗ್ಡೆ: ಅದಿನ್ನೂ ನಿರ್ಧಾರವಾಗಿಲ್ಲ. ತುರ್ತು ಏನೂ ಇಲ್ಲ. There is no urgency.

ಡೊನಾಲ್ಡ್: ಪ್ರಮೋದ್ ಮಧ್ವರಾಜ್ ಅವರಿಗೆ ಸಚಿವ ಸ್ಥಾನ ಅವರು ದೊಡ್ಡ ‘ಕಾಣಿಕೆ’ಯನ್ನು ಹಿರಿಯರಿಗೆ ಕೊಟ್ಟಿದ್ದರಿಂದಲೇ ಸಿಕ್ಕಿದ್ದು ಎಂದು ಕೆಲವರು ಮಾತನಾಡುತ್ತಾರೆ!

ಜೆ.ಪಿ. ಹೆಗ್ಡೆ: ಅದು ನನಗೆ ಗೊತ್ತಿಲ್ಲ. ಅವರತ್ರನೇ ಕೇಳ್ಬೇಕು.

Budkulo_Jaya Prakash Hegde_Interview (6) Budkulo_Jaya Prakash Hegde_Interview (2) Budkulo_Jaya Prakash Hegde_Interview

ಡೊನಾಲ್ಡ್: ಕರಾವಳಿಯ ರಾಜಕಾರಣಿಗಳು, ಮುಖಂಡರುಗಳೆಲ್ಲಾ ಹೈಕಮಾಂಡ್‍ನ ಮುಂದೆ ಶಿಸ್ತಿನ ಶಿಪಾಯಿಗಳು. ಬಾಯಿ ತೆರೆದು ಮಾತನಾಡಲೂ ಅವರಿಗೆ ಮೇಲಿನಿಂದ ಆಜ್ಞೆ ಬರಬೇಕು. ಯಾಕೆ ಹೀಗೆ?

ಜೆ.ಪಿ. ಹೆಗ್ಡೆ: ನಾನು ಎಂಪಿ ಆದ ಮೇಲೆ, ಅಡಿಕೆ, ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಡೆಲಿಗೇಶನನ್ನು ದೆಹಲಿಗೆ ಕರೆದುಕೊಂಡು ಹೋಗುವ ವ್ಯವಸ್ಥೆಯನ್ನು ನಾನೇ ಮಾಡುತ್ತಿದ್ದೆ. ಪ್ರಧಾನ ಮಂತ್ರಿ ಡಾ. ಮನ್‍ಮೋಹನ್ ಸಿಂಗ್ ಬಳಿ, ಕೃಷಿ ಸಚಿವ ಶರದ್ ಪವಾರ್ ಬಳಿ, ವಾಣಿಜ್ಯ ಮಂತ್ರಿ ಆನಂದ್ ಶರ್ಮ ಬಳಿ ಹೋಗಿ ಚರ್ಚೆ ಮಾಡಿಸಿದ್ದೆ. ಆನಂದ್ ಶರ್ಮ ಅವರು ನಮ್ಮನ್ನು ಶರದ್ ಪವಾರ್‍ರ ಕಚೇರಿಗೆ ಕರೆದುಕೊಂಡು ಹೋಗಿ, ಎಲ್ಲಾ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸಿದರು. ಹಣಕಾಸು ಸಚಿವರಾಗಿದ್ದ ಚಿದಂಬರಂ ಅವರಿಂದ ಹಣ ಬಿಡುಗಡೆ ಮಾಡಲು, ಸಾಲ ಮನ್ನಾ ಮಾಡಲು ಪ್ರಯತ್ನ ಮಾಡಿದ್ದೇನೆ. ನನಗೆ ಸಿಕ್ಕಿದ ಕಿರು ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ನಾನು ಹಾಗೆ ಮಾಡುವಾಗ ಎಲ್ಲ ಪಕ್ಷಗಳನ್ನು ಒಟ್ಟಿಗೆ ಕರೆದೊಯ್ದಿದ್ದೇನೆ. ಬಿಜೆಪಿಯವರನ್ನು ಜೊತೆಗೆ ಕರೆದುಕೊಂಡು ಹೋಗಿದ್ದೇನೆ. ಕೊನೆಯ ಗಳಿಗೆಯಲ್ಲಿ ಮೀನುಗಾರರನ್ನು ಶರದ್ ಪವಾರ್ ಬಳಿ ಕರೆದುಕೊಂಡು ಹೋಗಿ ಗಂಗೊಳ್ಳಿಗೆ ಬ್ರೇಕ್‍ವಾಟರ್ ಸ್ಯಾಂಕ್ಷನ್ ಮಾಡಿಸಿದ್ದೇನೆ.

ಡೊನಾಲ್ಡ್: ನಾನು ಯಾಕೆ ಹೇಳಿದ್ದೆಂದರೆ, ಕರಾವಳಿ ಜಿಲ್ಲೆಗಳಿಗೆ ಮಾರಕವಾಗುವ ಹಲವು ಯೋಜನೆಗಳು ಬರುತ್ತಿವೆ. ಆದರೆ ನಮ್ಮದೇ ರಾಜಕಾರಣಿಗಳು, ಜನಪ್ರತಿನಿಧಿಗಳು ತಮ್ಮ ಜನರಿಗೋಸ್ಕರ ಒಂದು ಮಾತು ಹೇಳಲೂ ಹಿಂಜರಿಯುತ್ತಿದ್ದಾರೆ. ಎತ್ತಿನಹೊಳೆ ಯೋಜನೆಯನ್ನೇ ತೆಗೆದುಕೊಳ್ಳಿ, ಇಲ್ಲಿನ ಜನರ ಬಗ್ಗೆ ಕಳಕಳಿಯನ್ನು ತೋರಿಸುವವರು ಕಾಣುತ್ತಿಲ್ಲ!

ಜೆ.ಪಿ. ಹೆಗ್ಡೆ: ಅದರ ಪ್ರಥಮ ಸಭೆ ವಿಧಾನಸೌಧದಲ್ಲಿ ಆಗಿದ್ದಾಗ, ನಾನಾಗ ಪಕ್ಷೇತರ ಶಾಸಕನಾಗಿದ್ದೆ, ನಾನು, ‘ನೀವು ಎತ್ತಿನಹೊಳೆಯಿಂದ ನೀರನ್ನು ತಿರುಗಿಸಿ ಆ ಕಡೆಗೆ ಕೊಂಡು ಹೋಗಬಹುದು. ಆದರೆ ನದಿಗಳಲ್ಲಿ ನೀರು ಬಂದು ಸಮುದ್ರಕ್ಕೆ ಸೇರುವುದರಿಂದ ಸಮುದ್ರದ ಉಪ್ಪು ನೀರು ಒಳಗೆ ಬರುವುದು ತಡೆಯಲ್ಪಡುತ್ತದೆ. ಒಂದು ವೇಳೆ ಘಟ್ಟ ಪ್ರದೇಶದಿಂದ ನೀರು ನದಿಗೆ ಹರಿಯದೇ ಇದ್ದಲ್ಲಿ ಉಪ್ಪು ನೀರು ಒಳ ಪ್ರದೇಶಗಳಿಗೆ ನುಗ್ಗುತ್ತದೆ, ಅದರಿಂದ ಹಾನಿಯಾಗುತ್ತದೆ’ ಎಂದು ಹೇಳಿದ್ದೆ. ಆ ಒಂದೇ ಸಭೆಗೆ ನನ್ನನ್ನು ಕರೆದದ್ದು. ರಾಜ್ಯದ ನೀರಿನ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದ್ದು ಸರ್ಕಾರದ ಕರ್ತವ್ಯ ಹೌದಾದರೂ, ಎತ್ತಿನಹೊಳೆಯಿಂದ ನೀರು ಆಚೆಗೆ ತಿರುಗಿಸುವಾಗ ಉದ್ಭವವಾಗುವ ಪರಿಣಾಮ, ಈ ಕಡೆಯ ಜನರಿಗೆ ಉಂಟಾಗಬಹುದಾದ ಸಮಸ್ಯೆಗಳನ್ನು ಪರಿಗಣಿಸಿ ಅದಕ್ಕೆ ಪರಿಹಾರಗಳನ್ನೂ ಕಂಡುಕೊಳ್ಳಬೇಕು.

ಡೊನಾಲ್ಡ್: ಆದರೆ ಅಲ್ಲಿ ಪಶ್ಚಿಮ ಘಟ್ಟದ ಸಂಹಾರ ಕಾರ್ಯ ನಡೆಯುತ್ತಿದೆ. ಊರಿನಲ್ಲಿ ಒಂದು ಗಿಡವನ್ನು ಕತ್ತರಿಸಲೂ ಅನುಮತಿ ಅಗತ್ಯವಿದೆ. ಆದರೆ ಅಲ್ಲಿ ಪ್ರಕೃತಿಯನ್ನೇ ನಾಶಗೊಳಿಸಲಾಗುತ್ತಿದೆ.

ಜೆ.ಪಿ. ಹೆಗ್ಡೆ: ಆ ರೀತಿ ಮಾಡುವುದಕ್ಕಿಂತ ನದಿ ಜೋಡಣೆ ಮಾಡುವುದರಿಂದಾಗಿ ಹೆಚ್ಚಿನ ಪರಿಹಾರ ಕಂಡುಕೊಳ್ಳಬಹುದು. ಅಲ್ಲದೆ ಅದಕ್ಕೆ ಖರ್ಚು ಕೂಡ ತುಂಬಾ ಕಡಿಮೆ ಸಾಕು. ಎಲ್ಲಾ ಕೆರೆಗಳಲ್ಲಿ ನೀರು ತುಂಬಿಸುವಂತಹ ಕೆಲಸ ಮಾಡಬೇಕು. ಆಗ ನೀರಿನ ಸಮಸ್ಯೆಗೆ ಬೇಗ ಪರಿಹಾರವೂ ದೊರೆಯುತ್ತಿತ್ತು.

ಡೊನಾಲ್ಡ್: ತುಳುನಾಡನ್ನು ಪ್ರತ್ಯೇಕ ರಾಜ್ಯ ಮಾಡಬೇಕೆಂಬ ಬೇಡಿಕೆ, ಕೂಗು ಹೆಚ್ಚುತ್ತಿದೆಯಲ್ಲಾ. ನೀವೇನಂತೀರಿ?

ಜೆ.ಪಿ. ಹೆಗ್ಡೆ: ಕರ್ನಾಟಕವನ್ನು ವಿಭಜನೆ ಮಾಡುವುದನ್ನು ನಾನು ಒಪ್ಪುವುದಿಲ್ಲ. ಅದಕ್ಕೆ ನಾನು ತಯಾರಿಲ್ಲ. ಹಾಗೆ ಮಾಡುವುದಾದರೆ, ತುಳುನಾಡು ಪ್ರತ್ಯೇಕವಾಗುವಾಗ, ಕುಂದಾಪುರದವರು ಕುಂದ ಕನ್ನಡಕ್ಕೊಂದು, ಕೊಡಗಿನವರು ತಮಗೊಂದು ರಾಜ್ಯ ಬೇಕು ಎಂದು ಬೇಡಿಕೆ ಇಡುತ್ತಾ ಹೋಗುತ್ತಾರೆ. ಅದು ಸರಿಯಾಗದು.

ಡೊನಾಲ್ಡ್: ಮುಂದೆ ಯಾವ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಿ? ಪಾರ್ಲಿಮೆಂಟಿಗೋ ಅಸೆಂಬ್ಲಿಗೋ?

ಜೆ.ಪಿ. ಹೆಗ್ಡೆ: ಇನ್ನೂ ಆಲೋಚನೆ ಮಾಡಿಲ್ಲ. ನೋಡುವ, ಬಹಳಷ್ಟು ಸಮಯವಿದೆ. ಅಷ್ಟರ ವರೆಗೆ ಜನರ ಕೆಲಸ ಮಾಡಿಕೊಂಡಿರುತ್ತೇನೆ.

ಡೊನಾಲ್ಡ್: ಯಾವುದಾದರೂ ಪಕ್ಷವನ್ನು ಸೇರುವ ಆಲೋಚನೆ ಇದೆಯೆ?

ಜೆ.ಪಿ. ಹೆಗ್ಡೆ: ಇಲ್ಲ, ಆ ಬಗ್ಗೆ ಇನ್ನೂ ಆಲೋಚನೆ ಮಾಡಿಲ್ಲ.

ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ನಮಗೆ ಕಳುಹಿಸಿ: budkuloepaper@gmail.com

Like our Facebook Page: www.facebook.com/budkulo.epaper

Subscribe Budkulo YouTube Channel

2 comments

  1. ನಿಮ್ಮ ಇಂಟರ್ವೀವ್ ಮಾನನಿಯ ಜಯಪ್ರಕಾಷರೊಡನೆ ಓದಿ ಖುಷಿ ಪತ್ತೆ.

  2. It’s a fantastic interview. Best questions by Donald and top answers from J. P. Hegde.

Leave a comment

Your email address will not be published. Required fields are marked *

Latest News